- ಶ್ರೀನಿವಾಸಪುರ ತಾ.ಯದರೂರು
- ಕಂದಾಯ ವೃತ್ತದಲ್ಲಿ ಉದ್ದೇಶಿತ
- ಕೈಗಾರಿಕೆ ಬೆರೆಡೆಗೆ ವರ್ಗಾಯಿಸಿ
- ಬೇಟಪ್ಪ ನೇತೃತ್ವದ ರೈತರ ಅಗ್ರಹ
ಕೋಲಾರ:ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕಾ ವಲಯವನ್ನು ಬೇರೆ ಕಡೆಗೆ ವರ್ಗಾಯಿಸುವಂತೆ ಒತ್ತಾಯಿಸಿ, ಯದರೂರು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಯದರೂರು ಭಾಗದ ರೈತರು ಗ್ರಾಮಸ್ಥರು ಜಿಲ್ಲಾಧಿಕಾರಿ ಆಕ್ರಂಪಾಷರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ ಬ್ಯಾಟಪ್ಪ ಮಾತನಾಡಿ, ಶ್ರೀನಿವಾಸಪುರ ತಾಲೂಕಿನ ಎದರೂರು ಗ್ರಾಮಗಳ ಸರ್ವೆ ನಂಬರ್ ಸುಮಾರು ಒಂದು ಸಾವಿರದ 273 ಎಕರೆ 24ವರೆ ಗುಂಟೆಯ ಜಮೀನಿನ ಮಾಲೀಕರು ಕುಟುಂಬದವರ ಹಲವಾರು ದಶಕಗಳಿಂದ ಕೃಷಿ ವಲಯವನ್ನು ನಂಬಿಕೊಂಡು ಜೀವನ ಮಾಡುತ್ತಿದ್ದಾರೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿ, ರೈತರ ಹೆಸರಿನ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಭಾಗದ ರೈತರು ಜಮೀನುಗಳಲ್ಲಿ ರೇಷ್ಮೆ ಟೊಮೆಟೊ, ಹೈನುಗಾರಿಕೆ ತೋಟಗಾರಿಕೆ ಮತ್ತು ಪುಷ್ಪಕೃಷಿ ಮಾಡುತ್ತ ಇದ್ದು ಇಂತಹ ಫಲವತ್ತಾದ ಜಮೀನುಗಳನ್ನು ಕೈಗಾರಿಕೆ ನೀಡಲು ಉದ್ದೇಶಿಸಿರುವುದು ರೈತರಿಗೆ ಮಾರಕ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಅಧಿಸೂಚನೆಯಲ್ಲಿ ಪ್ರಸ್ತಾಪಿಸಿರುವಂತೆ ಇಡೀ ಗ್ರಾಮದ ಎಲ್ಲಾ ದಿಕ್ಕುಗಳಲ್ಲೂ ಕೈಗಾರಿಕಾ ಸ್ಥಾಪನೆಗೆ ಉದ್ದೇಶಿಸಿದ್ದು, ಹಲವಾರು ಜಮೀನುಗಳಲ್ಲಿ ವಾಸಿಸಲು ಮನೆಗಳನ್ನು ಕಟ್ಟಿಕೊಂಡಿದ್ದು, ಸುಮಾರು 150ಕ್ಕೂ ಅಧಿಕ ಮನೆಗಳು ಸಹ ಕೈಗಾರಿಕ ವಲಯದ ವ್ಯಾಪ್ತಿಗೆ ಒಳಪಡುತ್ತದೆ ಎಂದರು.
ಕಳೆದ ಜುಲೈ 30 ರಂದು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ, ತಾಲೂಕು ತಹಸಿಲ್ದಾರ್ಗೆ ಹಾಗೂ ಉಪ ನೊಂದಣಾಧಿಕಾರಿಗಳಿಗೆ 1044 ಎಕರೆ ಜಮೀನುಗಳನ್ನು ಯಾವುದೇ ರೀತಿಯಾದ ದಾಸ್ತಾವೇಜುಗಳನ್ನು ನೊಂದಾಯಿಸಬಾರದೆಂದು ಆದೇಶಿಸಿದೆ.
ಇದರಿಂದ ರೈತರು ತಮ್ಮ ಅವಶ್ಯಕತೆಗಳಿಗೆ ಮತ್ತು ಕೃಷಿ ಅಭಿವೃದ್ಧಿಗೆ ಪಹಣಿ ಆಧಾರದ ಸಾಲ ಪಡೆಯಲು ಸಾಧ್ಯವಾಗುವುದಿಲ್ಲ ಇದಕ್ಕೆ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಅವಕಾಶವಿರುವುದಿಲ್ಲ ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಈ ಕೂಡಲೇ ಈ ಆದೇಶವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಚರ್ಚೆಸುವುದಾಗಿ ಹೇಳಿದ ಜಿಲ್ಲಾಧಿಕಾರಿ
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅಕ್ರಂಪಾಷ ಮಾತನಾಡಿ ಕೈಗಾರಿಕಾ ವಲಯಕ್ಕೆ ಭೂಸ್ವಾಧೀನಪಡಿಸಿಕೊಂಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಸಭೆ ನಡೆಸಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ರೈತರ ನಿಯೋಗದಲ್ಲಿ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಎಸ್.ವಿ.ಸುಧಾಕರ್,ಮಾಜಿ ಸದಸ್ಯ ಕೆ.ಕೆ.ಮಂಜು, ಗ್ರಾಮಸ್ಥರಾದ ಸುರೇಶ್ ಬಾಬು, ಹನುಮೇಗೌಡ, ಆದಿನಾರಾಯಣ, ವೆಂಕಟರವಣ, ಯದರೂರು ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ಕುಮಾರ್, ಶ್ರೀರಾಮರೆಡ್ಡಿ ಇತರರು ಇದ್ದರು.