ಕೋಲಾರ:RSS ಪಥ ಸಂಚಲನ ಕೋಲಾರ ನಗರದ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿರುವ ಕ್ಲಾಕ್ ಟವರ್ ವೃತ್ತದಲ್ಲಿ ಸಾಗಿ ಬಂದಿತು.ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಸ್ಥಾಪನೆಯಾಗಿ ಶತಮಾನ ಪೂರೈಸಿದ ಹಿನ್ನಲೆಯಲ್ಲಿ ಕೋಲಾರ ವಿಭಾಗದ ವತಿಯಿಂದ ಸುಮಾರು 16 ಕಿಮೀ ದೀಘ್ರ ಪಥ ಸಂಚಲನ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಂಡಿದ್ದು ಕೋಲಾರ ತಾಲೂಕಿನ ವಕ್ಕಲೇರಿಯಿಂದ ಪ್ರಾರಂಭವಾದ ಪಥ ಸಂಚಲನಕ್ಕೆ ದಕ್ಷಿಣ ಪ್ರಾಂತ ಪ್ರಚಾರಕ್ ಗುರುಪ್ರಸಾದ್, ವಿಭಾಗೀಯ ಸಂಚಾಲಕ್ ಡಾ.ಶಂಕರ್ ನಾಯಕ್ ಚಾಲನೆ ನೀಡಿದರು. ಯಾತ್ರೆಯಲ್ಲಿ ಸುಮಾರು 2000 ಕ್ಕೂ ಹೆಚ್ಚು ಸಂಘದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಹೂ ಚಲ್ಲಿ ಸ್ವಾಗತಿಸಿದ ಜನತೆ
ಗಣವೇಶ ತೊಟ್ಟ ಸ್ವಯಂ ಸೇವಕರು ದಂಡ ಹಿಡಿದು ಹೆಜ್ಜೆ ಹಾಕುತ್ತಿದ್ದರೆ ದಾರಿಯಲ್ಲಿ ಸಿಗುವ ಗ್ರಾಮಗಳಲ್ಲಿನ ಯುವಕರು ಅವರ ಮೇಲೆ ಹೂಚಲ್ಲಿ ಭಾರತ ಮಾತೆಗೆ ನಮಸ್ಕರಿಸಿ ಸ್ವಾಗತ ಕೋರಿದರು.
ಮಾರ್ಗದ ಮಧ್ಯದಲ್ಲಿ ಮೂರು ಕಡೆ ವಿಶ್ರಾಂತಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು ಸಂಘಪರಿವಾರದ ಅಭಿಮಾನಿಗಳು ಹಿತೈಶಿಗಳು ಗಣವೇಶಧಾರಿ ಸ್ವಯಂ ಸೇವಕರಿಗೆ ನೀರು ಕೊಟ್ಟು ಆರೈಸಿದರು ಮೊದಲಿಗೆ ಬೆಟ್ಟಬೆಣಜೇನಹಳ್ಳಿಯಲ್ಲಿ ನೀರು, ಸೌತೆಕಾಯಿ ನೀಡಿದರೆ ಮಂಗಸಂದ್ರ ವಿಶ್ವವಿದ್ಯಾನಿಲಯದ ಆವರಣದಲ್ಲಿ ಬನ್ನು,ಬಿಸ್ಕತ್ ನೀರು ಕೊಟ್ಟು ಸಂತೈಸಿದರು ನಂತರ ಅಮ್ಮೇರಹಳ್ಳಿ ಸಿಎಂಆರ್ ಕಲ್ಯಾಣ ಮಂಟಪದ ಆವರಣದಲ್ಲಿ ಬರುವಷ್ಟರಲ್ಲಿ ಮುಸ್ಸಂಜೆ ಅಗಿದ್ದು ಅಲ್ಲಿ ಬಾಳೆ ಹಣ್ಣು, ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆರೋಗ್ಯ ಸಮಸ್ಯೆ ಎದುರಿಸಿದಂತ ಸ್ವಯಂ ಸೇವಕರಿಗೆ ಸ್ಥಳದಲ್ಲಿದ್ದ ವೈದ್ಯ ತಂಡ ತುರ್ತು ಚಿಕಿತ್ಸೆ ನೀಡಿ ಸಲುಹಿದರು.
ರಾತ್ರಿ 8 ಕ್ಕೆ ನಗರ ಪ್ರವೇಶಿಸಿತು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಆಗಮಿಸಿದ್ದ ಗಣವೇಶಧಾರಿ ಸ್ವಯಂ ಸೇವಕರು ಪಥ ಸಂಚಲನದಲ್ಲಿ ಶಿಸ್ತಿನಿಂದ ಘೋಶ್ ಸದ್ದಿಗೆ ಹೆಜ್ಜೆ ಹಾಕಿಕೊಂಡು ರಾತ್ರಿ ಸುಮಾರು 8 ಗಂಟೆಗೆ ಕೋಲಾರ ನಗರವನ್ನು ಪ್ರವೇಶಮಾಡಿದರು ಮಾಲೂರು ರಸ್ತೆಯ ಮೂಲಕ ಕೋಲಾರಕ್ಕೆ ಬಂದ ಪಥ ಸಂಚಲನ ವಿನಯ ಸಭಾಂಗಣದ ಮುಂದೆ ಸಾಗಿ ರೈಲ್ವೆ ಬ್ರಿಡ್ಜ್ ಹತ್ತಿ ಕ್ಲಾಕ್ ಟವರ್ ವೃತ್ತದಲ್ಲಿ ಸಾಗಿ ಶಾರದ ಚಿತ್ರಮಂದಿರದ ವೃತ್ತದ ಮೂಲಕ ದೊಡ್ದಪೇಟೆಯಲ್ಲಿ ಸಾಗಿ ಕಾಲೇಜು ಮೈದಾನಕ್ಕೆ ಸೇರಿಕೊಂಡಿತು.
ಪಥ ಸಂಚಲನದಲ್ಲಿ ಕೆ.ಅರ್.ಪುರಂ ಮಾಜಿ ಶಾಸಕ ನಂದೀಶ್ ರೆಡ್ಡಿ, ದೊಡ್ಡಬಳ್ಳಾಪುರ ಶಾಸಕ ಮುನಿರಾಜು, ಮಾಜಿ ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ಪ್ರಮುಖರು ಗಣವೇಶಧರಿಸಿ ಸಾಮಾನ್ಯ ಕಾರ್ಯಕರ್ತರಂತೆ ಹೆಜ್ಜೆಹಾಕಿದರು.
ಕೋರ್ಟ್ ಆದೇಶದಂತೆ ಕ್ಲಾಕ್ ಟವರ್ ವೃತ್ತದಲ್ಲಿ ಸಾಗಿದ ಪಥ ಸಂಚಲನ
RSS ಪಥ ಸಂಚಲನ ನಗರದ ಕ್ಲಾಕ್ ಟವರ್ ಸೂಕ್ಷ್ಮ ಪ್ರದೇಶ ಎಂದು ಆ ಮಾರ್ಗದಲ್ಲಿ ಸಾಗಲು ಜಿಲ್ಲಾಡಳಿತ ಅನಮತಿಸಿರಲಿಲ್ಲ ಇದಕ್ಕಾಗಿ ಕಾರ್ಯಕ್ರಮದ ಆಯೋಜಕರು ನ್ಯಾಯಾಲಯವನ್ನು ಆಶ್ರಯಿಸಿದ್ದು ಅಲ್ಲಿ ಪಥ ಸಂಚಲನ ಕ್ಲಾಕ್ ಟವರ್ ಮೂಲಕ ತೆರಳಲು ಸೂಚಿಸಿದ ಹಿನ್ನಲೆಯಲ್ಲಿ ಕೇಂದ್ರವಲಯದ ಐಜಿಪಿ ಲಾಬುರಾಮ್ ಖುದ್ದು ಹಾಜರಿದ್ದು ಕೋಲಾರ ಎಸ್ಪಿ ಬಿ.ನಿಖಿಲ್ ಸೇರಿದಂತೆ ನಾಲ್ಕು ಜನ ಎಸ್.ಪಿ ಗಳು ಡಿವೈಎಸ್ಪಿ, ವೃತ್ತ ನಿರೀಕ್ಷರು ಸೇರಿದಂತೆ ಸುಮಾರು 1800 ಪೋಲಿಸರನ್ನು ನಿಯೋಜಿಸಿ ಕ್ಲಾಕ್ ಟವರ್ ಪ್ರದೇಶವನ್ನು ಸಂಪೂರ್ಣವಾಗಿ ಪೋಲಿಸರು ತಮ್ಮ ತೆಕ್ಕೆಗೆ ತಗೆದುಕೊಂಡು ಅಲ್ಲಿದ್ದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿ ಕೆಲವೊಂದು ನಿರ್ಭಂದ ಹೇರಿ RSS ಪಥ ಸಂಚಲನ ಸಾಗಲು ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.
ಪ್ರತ್ಯಕ್ಷ ವರದಿ ಚ.ಶ್ರೀನಿವಾಸಮೂರ್ತಿ