ಶೈಲೇಂದ್ರ ವಿದ್ಯಾಮಂದಿರದ ವಾರ್ಷಿಕೋತ್ಸವ ಕಾರ್ಯಕ್ರಮ ಶಾಲ ಆವರಣದಲ್ಲಿ ಭವ್ಯವಾದ ವರ್ಣರಂಜಿತ ವೇದಿಕೆಯಲ್ಲಿ ನಡೆಯಿತು ಇದರಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ ಎಸ್.ಹೊಸಮನಿ,ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಕೋಲಾರದ ಖ್ಯಾತ ನೇತ್ರ ತಜ್ಞ ಹಾಗು ವಿವೇಕ ನೇತ್ರಾಲದ ಮುಖ್ಯಸ್ಥ ಡಾ.ಹೆಚ್.ಆರ್.ಮಂಜುನಾಥ್ ಪ್ರೆಸಿಡೆನ್ಸಿ ಕಾಲೇಜಿನ ಡೀನ್ ಡಾ.ಜಿ.ಎಂ.ಮಮತಾ ಸೇರಿದಂತೆ ಹಲವು ಸಾಧಕರು ಭಾಗವಹಿಸಿದ್ದರು.
ಕೋಲಾರ:ಶಿಕ್ಷಣದೊಂದಿಗೆ ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ಮಾತ್ರ ಅವರ ಬದುಕು ಉಜ್ವಲವಾಗುತ್ತದೆ, ಧ್ಯಾನದಿಂದ ಏಕಾಗ್ರತೆ ವೃದ್ದಿಯಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ ಎಸ್.ಹೊಸಮನಿ ಹೇಳಿದರು ಅವರು ಕೋಲಾರ ತಾಲ್ಲೂಕಿನ ಹೋಳೂರಿನಲ್ಲಿನ ಖ್ಯಾತ ವಿದ್ಯಾಸಂಸ್ಥೆ ಶ್ರೀಶೈಲೇಂದ್ರ ವಿದ್ಯಾಮಂದಿರದ 44ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆಧುನಿಕ ಜೀವನ ಶೈಲಿಯಲ್ಲಿ ಮಾದಕ ವಸ್ತುಗಳಂತ ಸಮಾಜದ ಅಕ್ರಮ ಚಟುವಟಿಕೆಗಳು ಯುವಕರನ್ನು ದಾರಿ ತಪ್ಪಿಸುತ್ತಿವೆ ಇದರ ಜೊತೆಗೆ ಮೊಬೈಲ್ ಗೀಳು ಮಕ್ಕಳ ಜೀವನಕ್ಕೆ ಮುಳುವಾಗಿದ್ದು, ಮುಂದೊಂದು ದಿನ ಮೊಬೈಲ್ನಿಂದಾಗುವ ಅನಾಹುತ ತಪ್ಪಿಸಲು ಪುನರ್ವಸತಿ ಕೇಂದ್ರಗಳನ್ನು ತೆರೆಯಬೇಕಾದ ಅನಿವಾರ್ಯತೆ ಏರ್ಪಡಬಹುದು ಎಂದು ಎಚ್ಚರಿಸಿದರು.
ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದೊಂದಿಗೆ ರಂಗರಾಜಪ್ಪನವರು ಶಾಲೆ ನಿರ್ಮಿಸಿ ಕಳೆದ 44 ವರ್ಷಗಳಿಂದ ಈ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ಹರಡಿದ್ದಾರೆ ಇದರ ಫಲ ಹೈಕೋರ್ಟ್ ನ್ಯಾಯಮೂರ್ತಿಗಳಾದ ಅರವಿಂದ್,ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಡೀನ್ ಡಾ.ಜಿ.ಎಂ.ಮಮತಾ ಸೇರಿದಂತೆ ಅನೇಕ ಸಾಧಕರು ಇಲ್ಲೇ ವಿದ್ಯಾಭ್ಯಾಸ ಮಾಡಿದ್ದು ಅನ್ನುವುದು ವಿಶೇಷ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ ನೈತಿಕತೆಗಿಂತ ದೊಡ್ಡ ಪದವಿ ಇನ್ನೊಂದಿಲ್ಲ ಮಕ್ಕಳಿಗೆ ಕೇಳಿದ್ದೆಲ್ಲ ಕೊಡುತ್ತಿದ್ದೇವೆ ಆದರೆ ಸಂಸ್ಕಾರ ಕೊಡುವಲ್ಲಿ ವಿಫಲರಾಗಿದ್ದಿವಿ ಎನ್ನುವುದು ದುರಂತ ಸಿನಿಮಾ ನಟರೋ ಅಥಾವ ಇನ್ಯಾರೊ ಮಕ್ಕಳಿಗೆ ಆದರ್ಶ ಆಗಬಾರದು ಹೆತ್ತ ತಾಯಿ-ತಂದೆ ಮಕ್ಕಳಿಗೆ ಹೀರೋ ಹಾಗು ಆದರ್ಶ ಆಗಬೇಕು ಹಾಗೆ ಮಕ್ಕಳು ಹೆತ್ತವರನ್ನು ಕಣ್ಣೀರು ಹಾಕಿಸಿದರೆ ಮಕ್ಕಳು ಬದುಕಿದ್ದು ಸತ್ತಂತೆ ಎಂದರು ಸಮಾಜದ ಸ್ವಾಸ್ಥ್ಯ ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾತ್ರ ಅತಿ ಮುಖ್ಯವಾಗಿದೆ ಎಂದು ತಿಳಿಸಿದರು.
ಶೈಲೇಂದ್ರ ವಿದ್ಯಾಮಂದಿರದಲ್ಲಿ ಓದಿ ವೈದ್ಯಕೀಯ ಪದವಿ ಮಾಡುತ್ತಿರುವ ಸಾಧಕ ವಿದ್ಯಾರ್ಥಿಗಳಾದ ಭುವನ್, ಸುಮಂತ್ರನ್ನು ಸನ್ಮಾನಿಸಿ ಮಾತನಾಡಿದ ಪ್ರೆಸಿಡೆನ್ಸಿ ಕಾಲೇಜಿನ ಡೀನ್ ಡಾ.ಜಿ.ಎಂ.ಮಮತಾರವರು ಹಳ್ಳಿಗಾಡಿನಲ್ಲಿ 44 ವರ್ಷಗಳ ಹಿಂದೆ ಇಂಗ್ಲೀಷ್ ಶಾಲೆ ತೆರದು ಶಿಕ್ಷಣ ನೀಡುತ್ತಿರುವ ರಂಗರಾಜಪ್ಪ ಅವರಿಗೆ ಧನ್ಯವಾದ ತಿಳಿಸಿದರು.
ಶಾಲೆಯ ಆವರಣದಲ್ಲಿ ನಿರ್ಮಿಸಲಾದ ಅತ್ಯದ್ಭುತವಾದ ವೇದಿಕೆಯಲ್ಲಿ ಶಾಲಾ ಮಕ್ಕಳಿಂದ ಸುಮಾರು 3 ಗಂಟೆಗಳ ಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಅಥಿತಿಗಳ ಮನಸೂರೆಗೊಂಡವು.
ಕಾರ್ಯಕ್ರಮದಲ್ಲಿ ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಹೆಚ್.ಎಂ.ಬಸವರಾಜಪ್ಪ,ನಿರ್ದೇಶಕರಾದ ಡಾ.ಶಿವರಾಮಕೃಷ್ಣ, ನೇತ್ರ ತಜ್ಞರೂ ಆದ ಡಾ.ಹೆಚ್.ಆರ್.ಮಂಜುನಾಥ್, ನಿರ್ದೇಶಕರಾದ ಚಂದ್ರಬಾಬು, ವಿನಯ್ ಇದ್ದರು.ಮುಖ್ಯಶಿಕ್ಷಕ ಸೋಮಶೇಖರ್ ಸೇರಿದಂತೆ ಮುಂತಾದವರು ಇದ್ದರು.