ನ್ಯೂಜ್ ಡೆಸ್ಕ್:-ಗೇರುಬೀಜ ಅಥಾವ ಗೋಡಂಬಿ ಒಣ ಫಲಗಳಲ್ಲಿ ಅತ್ಯುತ್ತಮವಾದ ಫಲವಾಗಿದೆ. ಇದರಲ್ಲಿ ನಮ್ಮ ಆರೋಗ್ಯವನ್ನು ವೃದ್ಧಿಸುವ ಹಲವಾರು ರೀತಿಯ ಗುಣಗಳು ಇದೆ ಹೇರಳವಾಗಿ ಕೊಬ್ಬಿನಂಶ, ಪ್ರೋಟೀನ್, ವಿಟಮಿನ್-ಇ, ಸೋಡಿಯಂ, ಮೆಗ್ನೆಶಿಯಂ, ಪೊಟ್ಯಾಷಿಯಂ, ಪೋಷಕ ಸತ್ವಗಳು ಅಡಕವಾಗಿವೆ. ಇದರಿಂದಾಗಿ ಹೃದಯ ಆರೋಗ್ಯ, ಗಟ್ಟಿಮುಟ್ಟಾದ ಎಲುಬು, ನರಮಂಡಲ ಮತ್ತು ಕ್ಯಾನ್ಸರ್ ನಂತಹ ರೋಗಗಳಿಂದ ರಕ್ಷಣೆ ನೀಡುತ್ತದೆ.
ಹೃದಯದ ಆರೋಗ್ಯ: ಹೃದಯದ ಆರೋಗ್ಯಕ್ಕೆ ಗೋಡಂಬಿ ತುಂಬಾನೇ ಸಹಾಯಕಾರಿ. ಗೋಡಂಬಿಯಲ್ಲಿ ದೇಹಕ್ಕೆ ಅಗತ್ಯವಿರುವ ಉತ್ತಮ ಕೊಬ್ಬು ಅಡಕವಾಗಿದೆ. ಇದರಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಅಂಶಗಳನ್ನು ಕಡಿಮೆ ಮಾಡಿ ಹೃದಯ ಕಾಯಿಲೆಗಳನ್ನು ತಡೆಯುತ್ತದೆ. ಇದರ ಸೇವನೆಯಿಂದಾಗಿ ಹೃದಯದ ಸ್ನಾಯುಗಳು ಬಲಗೊಳ್ಳುತ್ತದೆ. ಪ್ರತಿದಿನ 3-4 ಗೋಡಂಬಿ ಸೇವನೆ ಉತ್ತಮ ಆರೋಗ್ಯಕ್ಕೆ ಅಡಿಪಾಯ.
ಮೂಳೆ ಆರೋಗ್ಯ: ಗೋಡಂಬಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಗ್ನೆಶಿಯಂ ಅಂಶವು ಇರುವುದರಿಂದ ಮೂಳೆಗಳ ಆರೋಗ್ಯಕ್ಕೆ ಉತ್ತಮವಾಗಿದೆ. ದೇಹಕ್ಕೆ ಅಗತ್ಯವಿರುವ ಮೆಗ್ನೆಶಿಯಂ, ಪೊಟ್ಯಾಷಿಯಂ ಒದಗಿಸಿ, ಗಟ್ಟಿಮುಟ್ಟಾದ ಎಲುಬಿನ ಬೆಳವಣಿಗೆಗೆ ಸಹಕಾರಿಯಾಗಿದೆ.
ನರಗಳ ಶಕ್ತಿ ವರ್ಧಕ: ನರಗಳಲ್ಲಿ ಕ್ಯಾಲ್ಸಿಯಂನ ಅಧಿಕ ಪ್ರಮಾಣದಲ್ಲಿ ಹರಿವನ್ನು ತಡೆಹಿಡಿದು, ಅಗತ್ಯವಿರುವಷ್ಟನ್ನು ಪೂರೈಕೆ ಮಾಡಲು ಸಹಾಯಕವಾಗುತ್ತದೆ. ಇದರಲ್ಲಿರುವ ಮೆಗ್ನೆಶಿಯಂನಿಂದಾಗಿ ದೇಹದ ನರಗಳು ಸುಸ್ಥಿತಿಯಲ್ಲಿರುತ್ತವೆ. ಅಲ್ಲದೆ ಇದರ ನಿಯಮಿತವಾದ ಸೇವನೆಯಿಂದ ಮೆದುಳಿನ ನರಗಳು ಶಕ್ತಿಯುತವಾಗಿ ಕೆಲಸ ನಿರ್ವಹಿಸುವಂತಾಗುತ್ತವೆ.
ಕ್ಯಾನ್ಸರ್ ತಡೆಹಿಡಿಯುತ್ತವೆ: ಗೋಡಂಬಿಯಲ್ಲಿ ಉತ್ಕರ್ಷಣ ನಿರೋಧಕ ಶಕ್ತಿಯು ಅಧಿಕವಾಗಿದೆ. ಇದರಿಂದಾಗಿ ಕ್ಯಾನ್ಸರ್ ನಂತಹ ಕಾಯಿಲೆಗಳು ನಿಯಂತ್ರಿಸಲ್ಪಡುತ್ತವೆ. ಇದರಲ್ಲಿರುವ ವಿಟಮಿನ್-ಇ ಅಂಶದಿಂದಾಗಿ ರೋಗನಿರೋಧಕ ಶಕ್ತಿಯು ಬಲಗೊಳ್ಳುತ್ತದೆ. ಸಣ್ಣ ಪುಟ್ಟ ಕಾಯಿಲೆಗಳಿಂದ ಹಿಡಿದು ಹಲವಾರು ರೋಗಗಳು ನಿಯತ್ರಿಸಲ್ಪಡುತ್ತವೆ. ಮಹಿಳೆಯರು ನಿಯಮಿತವಾಗಿ ಗೋಡಂಬಿ ಸೇವಿಸುವುದರಿಂದ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.
ತೂಕ ಇಳಿಕೆಗೆ ಸಹಾಯಕ: ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನಂಶವಿದ್ದರೂ ಮಿತವಾಗಿ ಸೇವಿಸಿದಾಗ ತೂಕ ಕಡಿಮೆಯಾಗುತ್ತದೆ. ಗೋಡಂಬಿಯಲ್ಲಿರುವ ಉತ್ತಮ ಕೊಬ್ಬಿನಂಶದಿಂದಾಗಿ ಬೊಜ್ಜು ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಗಳಿಂದ ದೂರವಿರಿಸುತ್ತದೆ. ಅಲ್ಲದೇ ಇದರ ಸೇವನೆಯಿಂದ ಅತಿಯಾಗಿ ತಿನ್ನುವ ಬಯಕೆಯು ದೂರವಾಗುತ್ತದೆ.
ರಕ್ತಹೀನತೆಯನ್ನು ತಡೆಯುತ್ತದೆ: ಗೋಡಂಬಿ ಬೀಜಗಳಲ್ಲಿ ಕಬ್ಬಿಣ ಮತ್ತು ತಾಮ್ರ ಎರಡೂ ಹೇರಳವಾಗಿದೆ. ಇದರಿಂದಾಗಿ ರಕ್ತದ ಉತ್ಪತ್ತಿ ಮತ್ತು ಪರಿಚಲನೆಯು ಸರಾಗವಾಗಿ ಸಾಗುತ್ತದೆ. ಕಬ್ಬಿಣಾಂಶದ ಕೊರತೆಯು ಪ್ರಮುಖವಾಗಿ ರಕ್ತಹೀನತೆಗೆ ಕಾರಣವಾಗಿದೆ. ನಿಮ್ಮ ದೈನಂದಿನ ಆಹಾರದ ಜೊತೆಯಲ್ಲಿ ಇದನ್ನೂ ಸೇವನೆ ಮಾಡುವುದರಿಂದ ರಕ್ತಹೀನತೆಯಿಂದ ಬಚಾವಾಗಬಹುದು.
ಗೋಡಂಬಿಯನ್ನು ವಿವಿಧ ರೀತಿಯ ಅಡುಗೆಯಲ್ಲೂ ಬಳಸುತ್ತಾರೆ
ವರದಿ:ಚ.ಶ್ರೀನಿವಾಸಮೂರ್ತಿ