ನ್ಯೂಜ್ ಡೆಸ್ಕ್ : ಗೋವಾದಲ್ಲಿ ಇಂದು ಪ್ರಾರಂಭವಾದ ಅಂತಾರಾಷ್ಟ್ರೀಯ ಚಿತ್ರೋತ್ಸವ ಕಾರ್ಯಕ್ರಮವನ್ನು ಕಿಚ್ಚ ಸುದೀಪ್ ಉದ್ಘಾಟಿಸಿ ಕನ್ನಡದಲ್ಲಿ ಮಾತು ಆರಂಭಿಸುವ ಮೂಲಕ ಅಪರೂಪದಲ್ಲಿ ಅಪರೂಪದ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಪ್ರಮುಖ ಅಂಶಗಳು
ಗೋವಾ ಚಿತ್ರೋತ್ಸವಕ್ಕೆ ಮುಖ್ಯ ಅತಿಥಿ ಕರುನಾಡ ಚರ್ಕವರ್ತಿ
ಪಣಜಿಯಲ್ಲಿ ನಡೆದ ಉದ್ಘಾಟನಾ ಸಮಾರಂಭ
ಕನ್ನಡದಲ್ಲೇ ಮಾತು ಆರಂಭಿಸಿದ ಕಿಚ್ಚ ಸುದೀಪ್
ಜ.16ರಿಂದ ಜ.24ರವರೆಗೆ ನಡೆಯುವ ಚಿತ್ರೋತ್ಸವ
ಪ್ರತಿಷ್ಠಿತ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ (IFFI) 51ನೇಯದು ಜ.16ರಿಂದ ಆರಂಭವಾಗಿದ್ದು, ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಕನ್ನಡದ ಹೆಮ್ಮೆಯ ನಟ ಕಿಚ್ಚ ಸುದೀಪ್ ಭಾಗವಹಿಸಿದ್ದಾರೆ. ಹಲವು ದೇಶ, ಭಾಷೆಗಳ ಸಿನಿಮಾಸಕ್ತರು ನೆರೆದಿದ್ದ ಆ ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡಲ್ಲಿ ಮಾತು ಪ್ರಾರಂಭಿಸುವ ಮೂಲಕ ವಿಶೇಷ ಗಮನ ಸೇಳದಿದ್ದಾರೆ
ಪ್ರತಿಯೊಬ್ಬರಿಗೂ ಕನ್ನಡ ಚಿತ್ರರಂಗದ ಪರವಾಗಿ ಹಾಗೂ ಕರ್ನಾಟಕದ ಪರವಾಗಿ ಈ ಕಿಚ್ಚನಿಂದ ನಮಸ್ತೆ’ ಎಂದು ಕನ್ನಡದಲ್ಲಿಯೇ ಹೇಳುವ ಮೂಲಕ ಸುದೀಪ್ ಮಾತು ಆರಂಭಿಸಿದರು. ಆ ಮೂಲಕ ಅವರು ಮಾತೃಭಾಷೆ ಮೇಲೆ ತಮಗೆ ಇರುವ ಅಭಿಮಾನವನ್ನು ಮೆರೆದಿದ್ದಾರೆ. ಚಿಕ್ಕದಾಗಿ ಚೊಕ್ಕದಾಗಿ ತಮ್ಮ ಮಾತುಗಳನ್ನು ಹಂಚಿಕೊಂಡ ಅವರು ಎಲ್ಲರಲ್ಲೂ ಭರವಸೆ ತುಂಬುವ ಪ್ರಯತ್ನ ಮಾಡಿದ್ದಾರೆ.’ಸಿನಿಮಾ ಮತ್ತು ಕ್ರೀಡೆ ಎಂಬುದು ನಮ್ಮೆಲ್ಲರನ್ನೂ ಬೆಸೆದಿದೆ. ಆ ಕಾರಣಕ್ಕಾಗಿಯೇ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಸಿನಿಮಾ ಎಂಬುದು ಈ ಬಾರಿ ಎಲ್ಲೆಲ್ಲೂ ಹಬ್ಬಲಿ. ದೇಶ ಸುತ್ತು, ಕೋಶ ಓದು ಎಂಬ ಮಾತನ್ನು ನಾನು ಕೇಳಿದ್ದೇನೆ. ಈ ಎರಡನ್ನೂ ಸಿನಿಮಾ ಒದಗಿಸುತ್ತದೆ. ನನಗೆ ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು’ ಎಂದಿದ್ದಾರೆ ಸುದೀಪ್. ಈ ಪ್ರತಿಷ್ಠಿತ ಚಿತ್ರೋತ್ಸವವನ್ನು ಉದ್ಘಾಟಿಸುವ ಅವಕಾಶ ಪಡೆದ ಕನ್ನಡದ ಏಕೈಕ ನಟ ಎಂಬ ಖ್ಯಾತಿಗೆ ಸುದೀಪ್ ಪಾತ್ರರಾಗಿದ್ದಾರೆ.
ಸಮಾರಂಭವು ಗೋವಾ ರಾಜ್ಯದ ಪಣಜಿ ನಗರದಲ್ಲಿರುವ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಸುದೀಪ್ ಜೊತೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಕೂಡ ವೇದಿಕೆಯಲ್ಲಿದ್ದರು. ಜ.16ರಿಂದ ಜ.24ರವರೆಗೆ ನಡೆಯುವ ಚಿತ್ರೋತ್ಸವ (IFFI) ದಲ್ಲಿ, 119 ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಕೆಲವು ಸಿನಿಮಾಗಳು ದೊಡ್ಡ ಪರದೆಯಲ್ಲಿ ಪ್ರದರ್ಶನ ಕಂಡರೆ, ಮತ್ತೆ ಕೆಲವು ಆನ್ಲೈನ್ನಲ್ಲಿ ಪ್ರದರ್ಶನವಾಗಲಿವೆ.
ವರದಿ: ಚ.ಶ್ರೀನಿವಾಸಮೂರ್ತಿ