ಶ್ರೀನಿವಾಸಪುರ: ಮಾತೃ ಭಾಷೆ ಹೃದಯದ ಭಾಷೆಯಾಗಿದ್ದು, ಯಾವುದೇ ಸಂದರ್ಭದಲ್ಲಿ ಅದನ್ನು ಮರೆಯಲು ಸಾಧ್ಯವಿಲ್ಲ. ಆಡುವ ಭಾಷೆ ಸಾಮಾನ್ಯ ವ್ಯಕ್ತಿಗೆ ತಲುಪಬೇಕಾಗುತ್ತದೆ ಅಕ್ಷರ ಬಳಕೆ ಇಲ್ಲದ ಕಾಲದಲ್ಲೂ ಸರಳವಾದ ಜನಪದ ಸಾಹಿತ್ಯ ಜನರ ಮನಸ್ಸಿಗೆ ಮುದ ನೀಡಿತ್ತು ಎಂದು ಶಾಸಕ ರಮೇಶಕುಮಾರ್ ಹೇಳಿದರು.
ಅವರು ತಾಲ್ಲೂಕಿನ ಹೋಬಳಿ ಕೇಂದ್ರವಾದ ರೋಣೂರಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಶ್ರೀನಿವಾಸಪುರ ತಾಲ್ಲೂಕು ೧೧ ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಡಳಿತದಲ್ಲಿ ಸರಳವಾದ ಕನ್ನಡ ಬಳಕೆಯಾಗಬೇಕು. ಅಗತ್ಯ ಇರುವ ಕಡೆ ಇಂಗ್ಲೀಷ್ ಪದ ಬಳಕೆ ತಪ್ಪಲ್ಲ ಎಂದ ಅವರು ಭಾಷೆ ಮನುಕುಲದ ವಿಶಿಷ್ಟ ಕೊಡುಗೆಯಾಗಿದೆ, ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದೆ ನಿಜವಾದ ಭಾಷೆ, ಭಾಷೆಯ ಮೂಲ ಸ್ಥಾನ ತಾಯಿ, ತಾಯಿ ಭಾಷೆ ಕಲಿಸುತ್ತಾಳೆ, ಅದುವೆ ಮಾತೃಭಾಷೆ ಬದಲಾದ ವ್ಯವಸ್ಥೆಯಲ್ಲಿ ತಾಲ್ಲೂಕಿನಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇಲ್ಲಿನ ಜನರ ಆಡುಭಾಷೆಯಾಗಿದ್ದ ತೆಲುಗು ಭಾಷೆಯ ಪ್ರಭಾವ ಕ್ರಮೇಣ ಕಡಿಮೆಯಾಗುತ್ತಿದೆ. ಈ ಭಾಗದಲ್ಲಿ ಕನ್ನಡ ಇನ್ನಷ್ಟು ಬೆಳೆಯಬೇಕು ಇದಕ್ಕೆ ಪೂರಕ ವಾತವರಣ ನಿರ್ಮಾಣವಾಗಬೇಕಿದೆ ಎಂದರು.
ಪುರಸ್ಕಾರಕ್ಕಾಗಿ ಶಿಫಾರಸ್ಸು ರಾಜಕಾರಣ
ಭಾಷೆಗೆ ಭವ್ಯತೆ ತಂದುಕೊಡುವವರು ಸಾಹಿತಿಗಳು. ಸಾಹಿತ್ಯ ಕ್ಷೇತ್ರದಲ್ಲಿ ಯೋಗ್ಯರಿಗೆ ಸ್ಥಾನಮಾನ ಸಿಗುವಂತಾಗಬೇಕು ಆದರೆ ಸ್ಥಾನಮಾನ ಪಡೆಯಲು ರಾಜಕೀಯ ಮುಖಂಡರ ಮನೆ ಬಾಗಿಲು ಬಡಿಯುವ ಹಾಗೂ ಅವರೊಟ್ಟಿಗೆ ಕುಳಿತು ಲಾಬಿ ಮಾಡುವ ಸಾಹಿತಿಗಳನ್ನು ದೂರವಿಡಬೇಕು. ರಾಜ್ಯೋತ್ಸವ ಪ್ರಶಸ್ತಿಗಾಗಿ ರಾಜಕಾರಣಿಗಳ ಶಿಫಾರಸ್ಸು ಕೇಳುವ ಕಾಲ ಬಂದಿರುವುದು ದುರದೃಷ್ಟಕರ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಜಿ.ಎನ್. ಕುಬೇರಗೌಡ ತಮಗಾದ ಅಡ್ಡಿ ಆತಂಕಗಳ ನೋವನ್ನು ವ್ಯಕ್ತಪಡಿಸಿದಾಗ ಉತ್ತರಿಸಿ ಮಾತನಾಡಿದ ಶಾಸಕರು, ಸಮಾಜದಲ್ಲಿ ಯಾವುದೇ ಒಳ್ಳೆಯ ಕೆಲಸ ಮಾಡುವಾಗ ಆಡೆ ತಡೆಗಳು ಬರುವುದು ಸಾಮಾನ್ಯ ಇವುಗಳನೆಲ್ಲ ಎದುರಿಸಿ ನಿಲ್ಲುವುದೆ ಜೀವನ, ಅಡ್ಡಿ ಆತಂಕಗಳು ಜನಸಾಮಾನ್ಯರನಲ್ಲ ನಮ್ಮಂತ ರಾಜಕಾರಣಿಗಳನ್ನು ಬಿಡುವುದಿಲ್ಲ ಯಾವುದಕ್ಕೂ ಕಿವಿ ಗೊಡದೆ ಗ್ರಾಮೀಣ ಪ್ರದೇಶದಲ್ಲಿ ಕನ್ನಡವನ್ನು ಕಟ್ಟುವ ಕೆಲಸವನ್ನು ನಿಮ್ಮ ತಂಡದವರು ಮಾಡುತ್ತಿದ್ದೀರಾ ಮುಂದು ವರಿಸಿ ನಮ್ಮ ಸಹಕಾರ ಸದಾಕಾಲ ಇರುತ್ತದೆ ಎಂದರು.
ಸಮ್ಮೇಳನದ ಅಧ್ಯಕ್ಷ ಕೆ.ವಿ. ನಾಗರಾಜ್ ಮಾತನಾಡಿ, ಶ್ರೀನಿವಾಸಪುರ ತಾಲ್ಲೂಕು ಶೈಕ್ಷಣಿಕವಾಗಿ ಧಾರ್ಮಿಕವಾಗಿ ಹಾಗು ಸಾಂಸೃತಿಕವಾಗಿ ಖ್ಯಾತಿಯಾಗಿದೆ ೭೮೦ರಲ್ಲಿ ತಾಲ್ಲೂಕಿನ ಅರಳಕುಂಟೆಯಲ್ಲಿ ಮನಸೂರ ಪ್ರಭುವಾದ ವಿದ್ಯಾದರರು, ಪಲ್ಲವರ ವಿರುದ್ದ ಹೋರಾಡಿ ವೀರ ಮರಣ ಹೊಂದಿದ ಹಿನ್ನೆಲೆ ಅನೇಕ ವರ್ಷಗಳ ಆಳ್ವಿಕೆಯ ದಿಗ್ವಿಜಯಗಳು, ಹೆಬ್ಬಟ ಗ್ರಾಮದಲ್ಲಿ ದೊರೆತಿರುವ ಶಾಸನವು ಗಂಗರ ಮನೆತನಕ್ಕೆ ಸೇರಿದ್ದು, ಗಂಗರ ಆಳ್ವಿಕೆಯ ಗತ ವೈಭವ ನೆಲವಾಗಿದ್ದು ಅವರು ವಾಸ್ತುಶಿಲ್ಪಕ್ಕೆ ನೀಡಿರುವ ಹಿರಿಮೆಯ ಬಹಳ ದೊಡ್ಡದು ಎಂದರು.
ತಾಲ್ಲೂಕಿನಲ್ಲಿ ಜನಪ್ರತಿನಿದಿಗಳು ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಕಾಳಜಿ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಆಂಗ್ಲಭಾಷಾ ವ್ಯಾಮೋಹದ ಪ್ರಭಾವದಿಂದ ಪ್ರಾಥಮಿಕ ಹಂತದಲ್ಲಿ ಕನ್ನಡ ಭಾಷೆ ದೂರ ಸರಿಯುತ್ತಿದೆ. ಇದಕ್ಕೆ ಪೂರಕವಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿತ್ತಿರುವುದು ದುರಂತ ಎಂದ ಅವರು. ಕನ್ನಡಾಸಕ್ತರು ಪೋಷಕರ ಮನವೊಲಿಸುವ ಅಗತ್ಯ ಇದೆ ಎಂದ ಅವರು, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ಯೋಗಗಳಲ್ಲಿ ಹೆಚ್ಚು ಮೀಸಲಾಯಿತಿಯನ್ನು ನೀಡುವ ಅಗತ್ಯ ಇದೆ ಇದರಿಂದ ಮಾತೃ ಭಾಷೆಯಾದ ಕನ್ನಡವನ್ನು ಉಳಿಸಿ ಬೆಳೆಸಿದಂತಾಗುತ್ತದೆ. ನಾವೆಲ್ಲರೂ ಒಗ್ಗಟ್ಟಾಗಿ ಜಾತಿ ಬೇದ ತೊರೆದು ರಾಜಕೀಯ ಹಾಗು ವೈಯುಕ್ತಿಕ ಭಿನಾಬಿಪ್ರಾಯಗಳನ್ನು ಬದಿಗೊತ್ತಿ, ಕನ್ನಡ ನಾಡಿನ ಕಲ್ಯಾಣಕ್ಕಾಗಿ ದುಡಿಯೋಣ, ಕನ್ನಡ ಭಾಷೆ ನೆಲ, ಜಲ, ಉಳಿಸೋಣ, ಕನ್ನಡತಾಯಿಯ ಭುವನೇಶ್ವರಿ ಈ ನಾಡಿನ ಶ್ರೇಯಸ್ಸಿಗೆ ಆಶೀರ್ವಾದ ಮಾಡಲಿ ಎಂದರು.
ತಾಲ್ಲೂಕು ಅಧ್ಯಕ್ಷ ಕುಬೇರಗೌಡ ಮಾತನಾಡಿ, ಸತತ ೪ ವರ್ಷಗಳಿಂದ ಸಮ್ಮೇಳನದ ಕಾರ್ಯಕ್ರಮಗಳು ಯಶಸ್ವಿಯಾಗಲು ಸಹಕರಿಸಿದ ತಾಲ್ಲೂಕಿನ ಶಾಸಕರು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಸಹಕಾರ, ಈ ಭಾಗದ ಜನ ಪ್ರತಿ ನಿದಿಗಳು, ಸಂಘ ಸಂಸ್ಥೆಗಳ ಸಹಕಾರವನ್ನು ಸ್ಮರಿಸಿ ನಿಸ್ವಾರ್ಥತೆಯಿಂದ ಸರ್ಕಾರಿ ಅಧಿಕಾರಿಗಳ ಬಳಿ ಕೈ ಚಾಚದೆ ಸಾಧಕ ಭಾಧಕಗಳ ತಮ್ಮ ತಂಡದಲ್ಲಿ ಚರ್ಚಿಸಿ ಕೆಲವು ದಾನಿಗಳ ಜೊತೆಗೆ ಶಿಕ್ಷಣ ಸಂಸ್ಥೆಗಳಿಂದ ಅಲ್ಪ ಸ್ವಲ್ಪ ನೆರವನ್ನು ಪಡೆದುಕೊಂಡು ಈ ಸಮ್ಮೇಳನವನ್ನು ಯಶಸ್ವಿ ಮಾಡುತ್ತಿದ್ದೇವೆ, ಕನ್ನಡ ಉಳಿವಿಗಾಗಿ ಗ್ರಾಮೀಣ ಪ್ರದೇಶದಲ್ಲಿ ಕನ್ನಡವನ್ನು ಕಟ್ಟಲು ಹಗಲಿರುಳು ಶ್ರಮಿಸಿದ ತೃಪ್ತಿ ನನಗಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಾಗಾನಂದ ಕೆಂಪರಾಜ್ ಮಾತನಾಡಿ, ಕನ್ನಡ ಕಟ್ಟುವ ಸಂದರ್ಭದಲ್ಲಿ ವಿಷ ಬಿತ್ತುವ ಜನರ ಬಗ್ಗೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾದ ಅಗತ್ಯ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮ್ಮೇಳನದಅಧ್ಯಕ್ಷ ಕೆ.ವಿ. ನಾಗರಾಜ್ ಬರೆದಿರುವ “ಕಡಲಲ್ಲಿ” ಕವನ ಸಂಕಲನ ಬಿಡುಗಡೆ ಮಾಡಲಾಯಿತು.
ಸಮ್ಮೇಳನದಲ್ಲಿ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ದಿಂಬಾಲಅಶೋಕ್, ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದಸ್ವಾಮಿ, ಬೈರವೇಶ್ವರ ವಿಧ್ಯಾನಿಕೇತನ ಕಾರ್ಯದರ್ಶಿ ಶ್ರೀರಾಮರೆಡ್ಡಿ, ಸಾಹಿತಿ ಆರ್. ಚೌಡರೆಡ್ಡಿ, ತಾ.ಪಂ ಮಾಜಿ ಸದಸ್ಯ ಕೆ.ಕೆ. ಮಂಜುನಾಥ್, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಆರ್.ಎನ್. ಚಂದ್ರಶೇಖರ್, ರೋಣೂರು ಹೋಬಳಿ ಉಪ ತಹಸೀಲ್ದಾರ್ ಮುನಿವೆಂಕಟಪ್ಪ, ನೌಕರರ ಸಂಘದ ನಿರ್ದೇಶಕ ಬೈರೇಗೌಡ, ವೇಣು ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಗೋಪಾಲಗೌಡ, ಮುರಳೀ ಬಾಬು,ರೈತ ಮುಖಂಡ ಬೈಚೇಗೌಡ, ಬೂರಗನಹಳ್ಳಿ ವೆಂಕಟಾಚಲಪತಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌ. ಕಾರ್ಯದರ್ಶಿ ಚಲಪತಿ, ಕೋಶೋಧ್ಯಕ್ಷೆ ಮಂಜುಳ, ಇತತೆ ಪದಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.
ಉಪನ್ಯಾಸ: ಸಮ್ಮೇಳನಾಧ್ಯಕ್ಷರ ಬದುಕು ಸಾಧನೆ ಕುರಿತು ನಿವೃತ್ತ ಮುಖ್ಯ ಶಿಕ್ಷಕ ಎ.ವೆಂಕಟರೆಡ್ಡಿ ಮಂಡಿಸಿದರು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ವೆಂ.ರವಿಕುಮಾರ್ ಸರ್ವಜ್ಞನ ವಚನಗಳನ್ನು ಕುರಿತು ಉಪನ್ಯಾಸ ನೀಡಿದರು.
ಕವಿಗೋಷ್ಠಿ: ಕವಿ ಎಸ್.ಅನೀಫ್ಸಾಬ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸಾಹಿತಿ ಪಾತಮುತ್ತಕಪಲ್ಲಿ ಚಲಪತಿಗೌಡ ಆಶಯ ಭಾಷಣ ಮಾಡಿದರು. ಕವಿಗಳಾದ ಎನ್.ಶಾರದಮ್ಮ, ಜಿ.ವಿ.ಪದ್ಮಾವತಮ್ಮ, ಮಮತಾ ರಾಣಿ, ಶ್ರೀಧರ್, ಎನ್.ಗೋಪಾಲನ್, ಕೆ.ಸಿ.ಗೋಪಾಲಕೃಷ್ಣ, ಶ್ರೀರಾಮೇಗೌಡ, ಶಂಕರೇಗೌಡ, ವಿ.ರಾಧಾಕೃಷ್ಣ, ಚಲಪತಿ, ಎಲ್.ಐ.ಸಿ.ಕುಲಕರ್ಣಿ ಕಾವ್ಯ ವಾಚನ ಮಾಡಿದರು.
ಧ್ವಜಾರೋಹಣ: ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ನಾಗಾನಂದ ಕೆಂಪರಾಜ್, ತಾಲ್ಲೂಕು ಕಸಾಪ ಅಧ್ಯಕ್ಷ ಜಿ.ಎನ್.ಕುಬೇರಗೌಡ ಕ್ರಮವಾಗಿ ರಾಷ್ಟ್ರಧ್ವಜ, ನಾಡಧ್ವಜ ಹಾಗೂ ಪರಿಷತ್ ಧ್ವಜಾರೋಹಣ ಮಾಡಿದರು. ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾ ಕಸಾಪ ಖಜಾಂಚಿ ರತ್ನಪ್ಪ ಮೇಲಾಗಣಿ, ಇದ್ದರು.
ವರದಿ:ಚ.ಶ್ರೀನಿವಾಸಮೂರ್ತಿ