ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ
ನ್ಯೂಜ್ ಡೆಸ್ಕ್:-ಅನೇಕ ಧರ್ಮಗಳ,ಹಲವು ಭಾಷೆಗಳ ಆಗರ.ಭರತಭೂಮಿ ಭಾರತ ಆಧ್ಯಾತ್ಮದ ತವರು ಈ ಭೂಮಿಯಲ್ಲಿ ನಡೆಯುವ ಪ್ರತಿಯೊಂದು ಹಬ್ಬಕ್ಕೂ ಇಲ್ಲಿಯದೇ ಮಹತ್ವ,ವೈಶಿಷ್ಟತೆ. ಆಚರಣೆ ಇದೆ, ವೈವಿದ್ಯಮಯ ವಿಧಾನಗಳಿವೆ ಹಾಗೂ ಆಧ್ಯಾತ್ಮಿಕತೆಯ ಹಿನ್ನೆಲೆ ಇದೆ.
ಶಿವರಾತ್ರಿಯ ಹಬ್ಬದ ಪರಿಚಯವನ್ನು ನಮಗೆ ತಿಳಿಸುತ್ತಾ ಶಿವರಾತ್ರಿಯ ಅರ್ಥವನ್ನು ತಿಳಿದುಕೊಳ್ಳುವ ಮುನ್ನ ನಾವು ಶಿವ ಪರಮಾತ್ಮನ ಸತ್ಯ ಪರಿಚಯವನ್ನು ಸ್ವಲ್ಪ ಮಾಡಿಕೊಳ್ಳೋಣ.
ಜಗತ್ತಿನಲ್ಲಿ ಪರಮಾತ್ಮ ಎಂಬ ಶಬ್ದವನ್ನು ಕೇಳದವರು ಬಹುಶ: ಯಾರೂ ಇರಲಿಕ್ಕಿಲ್ಲ. ಆದರೆ ಪರಮಾತ್ಮ ಶಿವನ ಸತ್ಯ ಪರಿಚಯ ಅಥವಾ ಯಥಾರ್ಥ ಜ್ಞಾನವನ್ನು ಅರಿಯದಿರುವವರು ಬಹಳಷ್ಟು ಜನರಿದ್ದಾರೆ.
ಪ್ರತಿಯೊಬ್ಬ ಮನುಷ್ಯನು ತನ್ನ ಶಾರೀರಿಕ ತಂದೆಯ ನಾಮ, ರೂಪ ಮತ್ತು ಕರ್ತವ್ಯ ಇತ್ಯಾದಿಯನ್ನು ಅರಿತಿದ್ದಾನೆ, ಆದರೆ ವಿಶ್ವಾಧಿಪತಿ, ಸದಾಶಿವ ಅಥಾವ ವಿಶ್ವನಾಥನ ಪರಿಚಯವನ್ನು ಯಾರೂ ಅರಿತಿಲ್ಲ.
ಪರಮಾತ್ಮ ಶಿವನ ನಿಜವಾದ ಸ್ವರೂಪ
ಯಾವುದೇ ಒಂದು ವಸ್ತುವಿನ ರೂಪವು ನಮಗೆ ಕಾಣಿಸದೇ ಇರಬಹುದು, ಆದರೆ ಅದರ ಅಸ್ತಿತ್ವವನ್ನು ನಿರೂಪಿಸುವಂತಹ ಗುಣ, ಶಕ್ತಿಯ ಅನುಭವ ನಮಗೆ ಆದಾಗ ಮಾತ್ರ ನಾವು ನಂಬುತ್ತೇವೆ. ಇದೇ ರೀತಿ ಪರಮಾತ್ಮನ ಆಕಾರವು ಅಥವಾ ರೂಪವು ನಮಗೆ ಕಾಣದೇ ಇರಬಹುದು, ಆದರೆ ಗುಣ-ಶಕ್ತಿಗಳಿಂದ ನಾವು ಭಗವಂತನ ಅಸ್ತಿತ್ವವನ್ನು ನಂಬುತ್ತಲೇ ಬಂದಿದ್ದೇವೆ.
ಪರಮಾತ್ಮ ದಿವ್ಯ ರೂಪವನ್ನು ಹೊಂದಿದ್ದಾನೆ. ಆ ರೂಪವು ಈ ಸ್ಥೂಲ ಕಣ್ಣುಗಳಿಗೆ ಕಾಣುವುದಿಲ್ಲ, ಆದ್ದರಿಂದಲೇ ಭಕ್ತರು ಅವನನ್ನು ನಿರಾಕಾರ, ನಿರ್ವಿಕಾರ ಮತ್ತು ನಿರಂಹಕಾರ ಎಂದು ಹಾಡಿ ಹೊಗಳಿದ್ದಾರೆ. ಆ ಸ್ವರೂಪವನ್ನು ನೋಡಲು ಜ್ಞಾನ-ಚಕ್ಷುಗಳ ಅವಶ್ಯಕತೆ ಇದೆ.
ನಿರಾಕಾರ ಎಂಬ ಶಬ್ದವು ಸಾಪೇಕ್ಷವಾಗಿದೆ
ಅನ್ಯ ಆತ್ಮರುಗಳ ದೈಹಿಕ ರೂಪದ ಹೋಲಿಕೆಯಲ್ಲಿ ಈ ಶಬ್ದವನ್ನು ಬಳಸಲಾಗುತ್ತದೆ. ಆತ್ಮರು ಸ್ಥೂಲ ಅಥವಾ ಸೂಕ್ಷ್ಮ ಶರೀರವನ್ನು ಧರಿಸುತ್ತಾರೆ, ಆದರೆ ಪರಮಾತ್ಮನು ಜನ್ಮ-ಮರಣದಿಂದ ದೂರವಿದ್ದಾನೆ. ಪರಮಾತ್ಮನಿಗೆ ತನ್ನದೇ ಆದ ಯಾವ ಶರೀರವೂ ಇಲ್ಲ. ಹಾಗಾಗಿ ಅವನನ್ನು ನಿರಾಕಾರಿ ಎಂದು ಕರೆಯುತ್ತಾರೆ. ನಿರಾಕಾರನೆಂದರೆ ಅಕಾಯ, ಅವ್ಯಕ್ತ, ಅಶರೀರಿ. ಪರಮಾತ್ಮನು ರೂಪದಿಂದ ದೂರವಿಲ್ಲ, ಅವನ ರೂಪವಾಗಿದೆ ‘ಜ್ಯೋತಿರ್ಬಿಂದು ಸ್ವರೂಪ’ ಅಂದರೆ ಅವನು ಜ್ಯೋತಿ ಆಕಾರದಲ್ಲಿದ್ದಾನೆ.
ಪರಮಾತ್ಮನ ನಾಮಕ್ಕೆ ಅಸ್ತಿತ್ವಕ್ಕೆ ಅಳಿವಿಲ್ಲ
ಜಗತ್ತಿನಲ್ಲಿರುವ ದೇಹಧಾರಿ ಮನುಷ್ಯಾತ್ಮರ ದೇಹಗಳಿಗೆ ಹೆಸರನ್ನು ಇಡಲಾಗುತ್ತದೆ. ಪ್ರತಿಯೊಂದು ಜನ್ಮದಲ್ಲಿಯೂ ವಿಭಿನ್ನ ನಾಮ-ರೂಪಗಳನ್ನು ಹೊಂದುತ್ತಾರೆ. ಎಲ್ಲಾ ಮನುಷ್ಯರ ನಾಮಗಳು ವಿನಾಶಿಯಾಗಿವೆ, ದೇಹಗಳೂ ಸಹ ವಿನಾಶಿಯಾಗಿವೆ. ಆದರೆ ಪರಮಾತ್ಮನು ಅಶರೀರಿಯಾಗಿದ್ದಾನೆ. ಪುನರ್ಜನ್ಮದ ಚಕ್ರದಲ್ಲಿ ಬರದೇ ಅವಿನಾಶಿ, ಅಪರಿವರ್ತನೀಯ ಮತ್ತು ದಿವ್ಯನಾಗಿದ್ದಾನೆ. ಪರಮಾತ್ಮನ ದಿವ್ಯನಾಮವಾಗಿದೆ ‘ಶಿವ’. ಶಿವ ಎಂಬುದು ಒಂದು ಸಂಸ್ಕೃತ ಶಬ್ದವಾಗಿದ್ದು, ಅದರ ಅರ್ಥವಾಗಿದೆ ‘ಕಲ್ಯಾಣಕಾರಿ, ಮಂಗಳಕಾರಿ, ಶುಭಕಾರಿ, ಬೀಜ-ರೂಪ, ಬಿಂದು.
ಪರಮಾತ್ಮನ ಸ್ಮರಣ-ಚಿಹ್ನೆ ಶಿವಲಿಂಗವಾಗಿದೆ
ಎಲ್ಲಾ ಮಹಾನ್ ವ್ಯಕ್ತಿಗಳ ಸ್ಮೃತಿಗಾಗಿ ಅವರ ಸ್ಮಾರಕಗಳನ್ನು, ಚಿಹ್ನೆಗಳನ್ನು, ಮೂರ್ತಿಗಳನ್ನು ಮತ್ತು ಮಂದಿರಗಳನ್ನು ನಿರ್ಮಿಸುತ್ತಾರೆ. ಆದರೆ ಜಗತ್ತಿನಲ್ಲಿ ಅತೀ ಹೆಚ್ಚು ಪೂಜೆ ಸಾಮಾನ್ಯವಾಗಿ ಶಿವಲಿಂಗಕ್ಕೆ ಆಗುತ್ತದೆ. ವಿಶ್ವದಲ್ಲಿ ಶಿವಲಿಂಗದ ಪೂಜೆ ನಡೆಯದ ಯಾವುದೇ ದೇಶವಿಲ್ಲ. ಶಿವ ಎಂಬ ಶಬ್ದದ ಅರ್ಥವಾಗಿದೆ `ಕಲ್ಯಾಣಕಾರಿ’ ಮತ್ತು ‘ಲಿಂಗ’ದ ಅರ್ಥವಾಗಿದೆ ‘ಪ್ರತಿಮೆ.’ ಆದ್ದರಿಂದ ಶಿವಲಿಂಗದ ಅರ್ಥವಾಗಿದೆ ‘ಪರಮಾತ್ಮ ಶಿವನ ಪ್ರತಿಮೆ.’
ಕೊಹಿನೂರ್ನಿಂದ ನಿರ್ಮಿಸಿದ ಶಿವಲಿಂಗ
ಪ್ರಾಚೀನ ಕಾಲದಲ್ಲಿ ಶಿವಲಿಂಗಗಳನ್ನು ವಜ್ರಗಳಿಂದ ಮಾಡಲಾಗುತ್ತಿತ್ತು. ಏಕೆಂದರೆ ಪರಮಾತ್ಮನ ರೂಪ ಜ್ಯೋತಿರ್ಬಿಂದು ಆಗಿದೆ. ಪ್ರಸಿದ್ಧ ಸೋಮನಾಥ ಮಂದಿರದಲ್ಲಿ ಪ್ರಪ್ರಥಮವಾಗಿ ಜಗತ್ತಿನಲ್ಲಿಯೇ ಸರ್ವೋತ್ತಮ ವಜ್ರವಾದ ಕೊಹಿನೂರ್ನಿಂದ ನಿರ್ಮಿಸಿದ ಶಿವಲಿಂಗದ ಸ್ಥಾಪನೆಯಾಗಿತ್ತು. ವಿಭಿನ್ನ ಧರ್ಮಗಳಲ್ಲಿಯೂ ಸಹ ಪರಮಾತ್ಮನನ್ನು ಈ ಆಕಾರದಿಂದಲೇ ಪ್ರಾರ್ಥಿಸುತ್ತಾರೆ.
ಶಿವನ 12 ಅತಿ ಪ್ರಸಿದ್ಧ ಜ್ಯೋತಿರ್ಲಿಂಗಗಳು
ಜ್ಯೋತಿ ಸ್ವರೂಪ ಪರಮಾತ್ಮನ ಪ್ರತೀಕವಾಗಿ ಮನೆಗಳಲ್ಲಿ, ಧಾರ್ಮಿಕ ಸ್ಥಳಗಳಲ್ಲಿ, ಮಂದಿರಗಳಲ್ಲಿ ಮತ್ತು ಗುರುದ್ವಾರಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಜ್ಯೋತಿಯನ್ನು ಬೆಳಗಿಸುತ್ತಾರೆ. ಭಾರತದಲ್ಲಿ ಶಿವನ 12 ಅತಿ ಪ್ರಸಿದ್ಧ ಜ್ಯೋತಿರ್ಲಿಂಗಗಳಿವೆ. ಇವುಗಳಲ್ಲಿ ಹಿಮಾಲಯದಲ್ಲಿರುವ ಕೇದಾರೇಶ್ವರ ಮತ್ತು ಸೌರಾಷ್ಟ್ರದ ಸೋಮನಾಥ ಮತ್ತು ಮಧ್ಯಪ್ರದೇಶದ ಉಜ್ಜೈನಿ ನಗರದಲ್ಲಿರುವ ಮಹಾಕಾಲೇಶ್ವರ ಮಂದಿರವು ಅತಿ ಪ್ರಸಿದ್ಧವಾಗಿವೆ.
ಕ್ರಿಶ್ಚಿಯನ್ನರು, ಮುಸಲ್ಮಾನರಿಂದಲೂ ಪೂಜೆ ಭಾರತದ ಹೊರಗೂ ಸಹ ಅನ್ಯ ಧರ್ಮೀಯರೂ ಶಿವಲಿಂಗಕ್ಕೆ ಬಹಳ ಗೌರವವನ್ನು ನೀಡುತ್ತಿದ್ದಾರೆ. ಕ್ರಿಶ್ಚಿಯನ್ನರು, ಮುಸಲ್ಮಾನರು, ಬೌದ್ಧರು ಮತ್ತು ಅನ್ಯ ಧರ್ಮೀಯರೂ ಕೂಡ ಪರಮಾತ್ಮನನ್ನು ಜ್ಯೋತಿರ್ಬಿಂದು ಸ್ವರೂಪನೆಂದು ಒಪ್ಪುತ್ತಾರೆ. ಉದಾಹರಣೆಗಾಗಿ ಕ್ರಿಶ್ಚಿಯನ್ ಧರ್ಮದ ರೋಮನ್ ಕ್ಯಾಥೋಲಿಕ್ನವರು ಅಂಡಾಕಾರದ ಕಲ್ಲನ್ನು ಇಂದಿಗೂ ಪೂಜಿಸುತ್ತಾರೆ. ಇದೇ ಆಕಾರದ ಕಲ್ಲನ್ನು ಸಂಗ್-ಏ-ಅಸ್ವದ್ ಅಥವಾ ಮಕ್ಕೇಶ್ವರ ಎಂದು ಕರೆಯಲಾಗುತ್ತದೆ. ಜಪಾನ್ನಲ್ಲಿಯೂ ಬೌದ್ಧ ಧರ್ಮದ ಅನುಯಾಯಿಗಳು ಆಧ್ಯಾತ್ಮಿಕ ಸಾಧನೆಯನ್ನು ಮಾಡುವಾಗ ತಮ್ಮ ಎದುರಿಗೆ ಶಿವಲಿಂಗದ ಆಕಾರವುಳ್ಳ ಒಂದು ಕಲ್ಲನ್ನು 3 ಅಡಿ ದೂರ ಮತ್ತು ಎತ್ತರದಲ್ಲಿ ಇಟ್ಟು ಧ್ಯಾನವನ್ನು ಮಾಡುತ್ತಾರೆ. ಇಸ್ರೈಲ್ ಮತ್ತು ಯಹೂದಿಗಳ ದೇಶಗಳಲ್ಲಿಯೂ ಯಹೂದಿಗಳು ಶಪಥಗೈಯುವಾಗ ಇಂತಹ ಕಲ್ಲನ್ನು ಸ್ಪರ್ಶಿಸುತ್ತಾರೆ.
ವಿದೇಶದಲ್ಲೂ ಶಿವನಾಮ ಸ್ಮರಣೆಃ
ಸುಮಾತ್ರ ಮತ್ತು ಜಾವ ದ್ವೀಪಗಳಲ್ಲಿ ಇದಲ್ಲದೇ ಪ್ರಾಚೀನ ಮತ್ತು ಪ್ರಸಿದ್ಧ ದೇಶವಾದ ಈಜಿಪ್ಟ್ನ ಫನೇಶಿಯಾ ನಗರದಲ್ಲಿ, ಇರಾನ್ನ ಸಿರಿಯಾ ನಗರದಲ್ಲಿ, ಹ್ಯಾತಿ ದ್ವೀಪದಲ್ಲಿ, ಸುಮಾತ್ರ ಮತ್ತು ಜಾವ ದ್ವೀಪಗಳಲ್ಲಿ ಶಿವನ ಈ ಸ್ಥೂಲ ಸ್ಮಾರಕಗಳು ಕಂಡು ಬರುತ್ತವೆ. ಇಷ್ಟೇ ಅಲ್ಲದೇ ಸ್ಕಾಟ್ಲ್ಯಾಂಡ್ನ ಪ್ರಮುಖ ನಗರವಾದ ಗ್ಲಾಸಗೋದಲ್ಲಿ, ಟರ್ಕಿಯ ಟಾಸ್ಕಂಟ್ನಲ್ಲಿ, ವೆಸ್ಟ್ಇಂಡೀಸ್ನ ಗಿಯಾನಾದಲ್ಲಿ ಮತ್ತು ಶ್ರೀಲಂಕಾ ಮತ್ತು ಮಾರಿಷಿಯಸ್ ಮತ್ತು ಮಡಗಾಸ್ಕರ್ನಲ್ಲಿ ಶಿವಲಿಂಗದ ಪೂಜೆಯಾಗುತ್ತದೆ.
ಶಿವನು ಸರ್ವ ಆತ್ಮರ ಪರಮಪಿತ ಅನೇಕ ಧರ್ಮಗಳಲ್ಲಿ ಉಂಟಾದ ಮತಭೇದದ ಕಾರಣ ಇಂದು ಶಿವಲಿಂಗದ ಪೂಜೆಯು ಅನ್ಯ ದೇಶಗಳಲ್ಲಿ ಆಗದೇ ಇರಬಹುದು. ಆದರೆ ಭಾರತದಲ್ಲಿ ಶಿವನ ಪೂಜೆಯು ಅತಿಪ್ರಿಯವಾಗಿದೆ. ಶ್ರೀರಾಮಚಂದ್ರನು ರಾಮೇಶ್ವರದಲ್ಲಿ, ಶ್ರೀಕೃಷ್ಣನು ಗೋಪೇಶ್ವರದಲ್ಲಿ ಮತ್ತು ಅನ್ಯ ದೇವಿ-ದೇವತೆಗಳು ಪರಮಪೂಜ್ಯ ಈಶ್ವರ-ಶಿವನನ್ನು ಆರಾಧಿಸಿದ್ದಾರೆ. ಆದ್ದರಿಂದ ಪರಮಾತ್ಮ ಶಿವನು ಸರ್ವ ಆತ್ಮರ ಪರಮಪಿತನಾಗಿದ್ದು, ಜ್ಯೋತಿರ್ಬಿಂದು ಸ್ವರೂಪನಾಗಿದ್ದಾನೆ.
ಶಿವರಾತ್ರಿ ಆಚರಣೆ
ಮಹಾ ಶಿವರಾತ್ರಿ, ರುದ್ರನ ಮಂಗಳಕರ ರಾತ್ರಿ
ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರವಾಗುವ ಶುಭ ದಿನ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದರೆ, ತಾವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಮದುವೆಯಾಗದ ಹೆಣ್ಣುಮಕ್ಕಳು ಶಿವಗುಣರೂಪಿಯಾದ ಅನುರೂಪ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ, ಸುಖ, ಶಾಂತಿ, ಸಮೃದ್ಧಿ ದೊರೆಯುವುದೆಂಬ ನಂಬಿಕೆ ಆಸ್ತಿಕರದು.
ಶಿವನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯ ಶಿವ ಭಕ್ತರಿಂದ ಬಯಸುವುದು ಸಹ ನಿಶ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವ ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿ ಯಂದು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ.
ಶಿವರಾತ್ರಿಯ ಮಹಿಮೆ:
ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಹೇಳಿರುತ್ತಾನೆ ಎನ್ನುವ ಮಾತಿದೆ. ಶಿವಪುರಾಣ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ,ವಿವಾಹವಾದಳೆಂಬುದು ಪ್ರತೀತಿ. ಶಿವ ರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ. ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಹಾಗಾಗಿ, ಭಕ್ತರು ಇಡೀ ರಾತ್ರಿ ಎಚ್ಚರವಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ. ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಲಿಂಗಪುರಾಣದ ಪ್ರಕಾರ, ಲಿಂಗ ರೂಪಿಯಾಗಿ ಭಕ್ತರಿಗೆ ಅನುಗ್ರಹ ನೀಡಿದ ದಿನವಿದು. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ. ಇದು ಸ್ಕಂದ ಪುರಾಣ ಒಂದು ಭಾಗ
ಮಹಾಶಿವರಾತ್ರಿಯ ಉಪವಾಸ ಮತ್ತು ಜಾಗರಣೆಯ ಮಹತ್ವ
೧. ಶಿವನನ್ನು ಪೂಜಿಸುವುದರಿಂದ ಕರುಣಾಮಯಿಯಾದ ಶಿವನು ಸರ್ವರನ್ನು ಅನುಗ್ರಹಿಸುತ್ತಾನೆ ಎಂಬ ಪ್ರತೀತಿ ಇದೆ.. ಬೇಡರ ಕಣ್ಣಪ್ಪನು ಶಿವನನ್ನು ಪೂಜಿಸಿದ್ದರಿಂದ ಅವನನ್ನು ನುಗ್ರಹಿಸಿ ಮುಕ್ತಿ ಮಾರ್ಗ ತೋರಿಸಿದನು.. ‘ ಸ್ಕಂದ ಪುರಾಣ ‘ದ ಪ್ರಕಾರ ಬೇಡ ಚಂದನನಿಗೂ ಶಿವನು ಅನುಗ್ರ ನೀಡಿದ್ದಾನೆ… ‘ ಗರುಡ ಮತ್ತು ಅಗ್ನಿ ಪುರಾಣ ‘ ಗಳಲ್ಲಿ ಉಲ್ಲೇಖವಿರುವಂತೆ, ಬೇಡ ಸುಂದರ ಸೇನನಿಗೂ ಶಿವನು ಆಶೀರ್ವಾದಿಸಿದ್ದಾನೆ.. ಹೀಗಾಗಿ ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ, ಬಿಲ್ವ ಪತ್ರೆಗಳನ್ನು ಅರ್ಪಿಸುವುದರಿಂದ ಎಲ್ಲರಿಗೂ ಸದ್ಗತಿ ಪ್ರಾಪ್ತವಾಯಿತು.
೨. ಪ್ರತಿ ವರ್ಷದ ಶಿವರಾತ್ರಿಯ ಸಮಯದಲ್ಲಿ ಶಿವನು, ಪಾರ್ವತಿಯ ಜೊತೆಯಲ್ಲಿ ಭೂಮಿಗೆ ಆಗಮಿಸುತ್ತಾನೆ.. ಭೂ-ಸಂಚಾರ ಮಾಡುತ್ತಾನೆ.. ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ.. ಹೀಗಾಗಿ ಶಿವರಾತ್ರಿಯ ಶಿವನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿ ಇದೆ.
೩. ಮದುವೆಯಾಗದ ಹೆಣ್ಣುಮಕ್ಕಳು ಶಿವಗುಣರೂಪಿಯಾದ ಅನುರೂಪ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ, ಸುಖ, ಶಾಂತಿ, ಸಮೃದ್ಧಿ ದೊರೆಯುವುದೆಂಬ ನಂಬಿಕೆ ಆಸ್ತಿಕರದು.
೪. ಕರುಣಾಮಯಿಯಾದ ಶಿವನನ್ನು ಭಕ್ತಿ ಪೂರಕವಾಗಿ ಯಾರೇ ಪೂಜಿಸಿದರೂ ಅವರನ್ನು ಅನುಗ್ರಹಿಸುತ್ತಾನೆ.. ಹಿಂದು ಮುಂದು ನೋಡದೇ ಅವರಿಗೆ ಬೇಡಿದ ವರಗಳನ್ನು ನೀಡುತ್ತಾನೆ.. ಭಕ್ತಿಗೆ ಮರುಳಾಗುವ ಶಿವನು ಹೀಗೆ ತನ್ನ ಭಕ್ತರಿಗೆ ಬೇಡಿದ ವರವನ್ನು ನೀಡುವುದರ ಮೂಲಕ ಎಷ್ಟೋ ಸಲ ಸಂಕಷ್ಟಕ್ಕೆ ಸಿಲುಕಿದ್ದೂ ಇದೆ.. ಏನಾದರೂ ಭಕ್ತರಿಗೆ ಅತಿ ಬೇಗನೆ ಶಿವ ಒಲಿಯುತ್ತಾನಂತೆ.
ಶಿವರಾತ್ರಿ, ಈ ದಿನದಂದು ಕೈಲಾಸ ವಾಸ ಪರಶಿವನನ್ನು ಕೋಟಿ ಕೋಟಿ ಜನರು ಭಜಿಸಿ ಪೂಜಿಸುತ್ತಾರೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿ ಯಂದು ಬರುವ ಶಿವರಾತ್ರಿಯ ದಿನ ಭಕ್ತಾದಿಗಳು ಶಂಭೋ ಶಂಕರನನ್ನು ನೆನೆದು, ಪುನೀತರಾಗುತ್ತಾರೆ.
ಶಿವರಾತ್ರಿಯಂದು ದೇಶಾದ್ಯಂತ ವಿಶೇಷ ಪೂಜೆಗಳು ನೆರವೇರುತ್ತವೆ. ಇಡೀ ಭಾರತದಾದ್ಯಂತ ಬಹುತೇಕ ಎಲ್ಲಾ ಭಾಗಗಳಲ್ಲೂ ಆಚರಿಸುವ ಹಬ್ಬ ಇದು. ಈ ಹಬ್ಬದಂದು ದಿನವಿಡೀ ಪೂಜೆ, ಉಪವಾಸ ಮಾಡಿ, ರಾತ್ರಿಯಿಡೀ ಜಾಗರಣೆ ಮಾಡಿ ಶಿವನನ್ನು ಆರಾಧಿಸುವ ಸಂಪ್ರದಾಯವಿದೆ.
ಮುಳಬಾಗಿಲು ವಿರೂಪಾಕ್ಷಿ ಶ್ರೀವಿರುಪಾಕ್ಷ, ಆವನಿಯ ಶ್ರೀ ರಾಮಲಿಂಗೇಶ್ವರ ಸೇರಿದಂತೆ ಪಂಚ ಲಿಂಗ ಕ್ಷೇತ್ರ,ಶ್ರೀ ಸೋಮೇಶ್ವರ,ಕುರುಡುಮಲೆ ಶ್ರೀ ಸೋಮೇಶ್ವರ,
ಬೆತಮಂಗಲದ ಶ್ರೀ ಕೋಟಿಲಿಂಗೇಶ್ವರ
ಕೋಲಾರದ ಶ್ರೀ ಸೋಮೇಶ್ವರ,ಅಂತರಗಂಗೆಯ ಶ್ರೀ ಕಾಶಿ ವಿಶ್ವನಾಥ,
ಶ್ರೀನಿವಾಸಪುರ ಅರಿಕೆರಿ ಶ್ರೀ ನಾಗನಾಥೇಶ್ವರ,ದಿಂಬಾಲ ಶ್ರೀ ಸೋಮನಾಥೇಶ್ವರ,ಕಲ್ಲೂರು ಶ್ರೀ ಸಹಮಾನೇಶ್ವರ,ಶ್ರೀ ನಗರೇಶ್ವರ ಸ್ವಾಮಿ,ಯಲ್ದೂರಿನ ಶ್ರೀ ಶಂಕರನಾರಯಣ.
ಚಿಕ್ಕಬಳ್ಳಾಪುರದ ನಂದಿಯ ಶ್ರೀಭೊಗಾನಂದೀಶ್ವರ ಮತ್ತು ಶ್ರೀ ಅರುನಾಚಲೇಶ್ವರ,ನಂದಿಬೆಟ್ಟ ಶ್ರೀ ಯೋಗಾನಂದಿಶ್ವರ,
ಚಿಂತಾಮಣಿಯ ಮುರಗಮಲ್ಲಾ ಶ್ರೀ ಮುಕ್ತೇಶ್ವರ,ಕೈವಾರದ ಶ್ರೀ ಭಿಮಲಿಂಗೇಶ್ವರ,ಕೈಲಾಸಗಿರಿಯ ಶ್ರೀ ಗವಿ ಗಂಗಾದರೇಶ್ವರ.ಶ್ರೀ ನಾಗನಾಥೇಶ್ವರ,ಅಜಾದ್ ಚೌಕ ಶ್ರೀ ಹರಿಹರೇಶ್ವರ,ದೊಡ್ಡಬೊಮ್ಮನಹಳ್ಳಿ ಶ್ರೀ ವಿರಬದ್ರ ದೇವಾಲಯ,ಶ್ರೀ ಕಾಡು ಮಲ್ಲೇಶ್ವರ ಸ್ವಾಮಿ,
ಚ.ಶ್ರೀನಿವಾಸಮೂರ್ತಿ