ಬೆಂಗಳೂರು:ಕುಟುಂಬದ ವ್ಯಾಮೋಹಕ್ಕೆ ಬಲಿಯಾಗಿ ರಾಜಕೀಯ ಜೀವನಕ್ಕೆ ಕುತ್ತು ತಂದುಕೊಳ್ಳಬೇಡಿ ನಿಮ್ಮ ಸುತ್ತ ಇರುವಂತ ಬ್ಯಾಂಡ್ ಸೆಟ್ ಬ್ಯಾಚ್ ಅನ್ನು ದೂರ ಇಡಿ ಹೀಗೆಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿಧಾನಸಭೆಯಲ್ಲಿ ನೇರವಾಗಿ ಸಲಹೆ ನೀಡುವ ಮೂಲಕ ಕುಟುಕಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ನಡೆಯುತ್ತಿರುವ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರಮೇಶ್ ಕುಮಾರ್, ಮುಖ್ಯಮಂತ್ರಿ ಯಡಿಯೂರಪ್ಪನವರ ಕುಟುಂಬ ರಾಜಕಾರಣದ ಬಗ್ಗೆ ಸಲಹೆ ನೀಡುತ್ತಲೆ ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿ ಸ್ಥಾನಕ್ಕೆ ಯಾರೇ ಬಂದರು ಅವರ ಸುತ್ತ ಒಂದಿಷ್ಟು ಜನ ಸೇರಿಕೊಂಡು ತಂಡ ಮಾಡಿಕೊಳ್ಳುತ್ತಾರೆ ಅಂತಹ ಜನರನ್ನು ಬ್ಯಾಂಡ್ ಸೆಟ್ ನವರು ಎಂದು ಕರೆಯುತ್ತಾರೆ. ಈ ಬ್ಯಾಂಡ್ ಸೆಟ್ ನವರು ಮುಖ್ಯಮಂತ್ರಿ ಅವರನ್ನು ಸುತ್ತುವರೆದು ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಾರೆ. ಈ ಹಂತದಲ್ಲಿ ಅತನ ನಿಜವಾದ ಕರ್ತವ್ಯ ಮರೆತುಹೋಗಲು ಕಾರಣಕರ್ತರಾಗುತ್ತಾರೆ ಎಂದರು.
ನೀವು ಹೋರಾಟದ ಮೂಲಕ ಸಾರ್ವಜನಿಕ ಜೀವನಕ್ಕೆ ಬಂದವರು, ಶಿಕಾರಿಪುರದ ಪುರಸಭೆ ಅಧ್ಯಕ್ಷ ಗಾದಿಯಿಂದ ಇಲ್ಲಿಯವರಿಗೂ ಬಂದಿರುವಿರಿ, ಇವತ್ತು ನಿಮ್ಮನ್ನು ಸುತ್ತುವರಿದಿರುವ ಬ್ಯಾಂಡ್ ಸೆಟ್ ಬ್ಯಾಚ್ ಅನ್ನು ದೂರ ಇಡಿ. ನಿಮ್ಮ ಕುಟುಂಬ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಕುಟುಂಬದ ವ್ಯಾಮೋಹ ನಿಮ್ಮನ್ನು ಬಲಿ ಪಡೆಯಬಾರದು. ಹೀಗಾಗಿ ಕುಟುಂಬವನ್ನು ಆಡಳಿತದಿಂದ ದೂರವಿಡಿ ಎಂದು ಸಲಹೆ ನೀಡುತ್ತಿದ್ದೇನೆ. ಯಾಕೆಂದರೆ ನೀವು ಸಾರ್ವಜನಿಕ ಆಸ್ತಿ. ಆಡಳಿತದಲ್ಲಿ ಕುಟುಂಬ ಮೂಗು ತೊರಿಸದಂತೆ ಎಚ್ಚರಿಕೆ ವಹಿಸಿ ಎಂದರು.ಈ ಮಾತನ್ನು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರಿಗೂ ಸಹ ಹೇಳಿದ್ದೆ. ಇದರಿಂದಾಗಿ ಅವರಿಂದ ನಿಷ್ಠುರಕ್ಕೂ ಒಳಗಾಗಿದ್ದೆ.ಅವರ ಹಿಂದೆ ಇದ್ದಂತಹ ಬ್ಯಾಂಡ್ ಸೆಟ್ ಬ್ಯಾಚ್ ಈಗ ಯಡಿಯೂರಪ್ಪನವರನ್ನು ಸುತ್ತುವರೆದಿದ್ದಾರೆ, ಯಡಿಯೂರಪ್ಪನವರೇ ನಿಮ್ಮ ಪಂಚೇಂದ್ರಿಯಗಳು ನೀವು ಹೇಳಿದಂತೆ ಕೇಳುವಂತಿರಲಿ ಎಂದರು.
ರಸ್ತೆ ಉಬ್ಬುಗಳ ಪ್ರಸ್ತಾಪನೆ
ಅವೈಙ್ಝಾನಿಕ ರಸ್ತೆ ಉಬ್ಬುಗಳ ಕುರಿತಾಗಿ ಮಾತನಾಡಿದ ರಮೇಶ್ ಕುಮಾರ್ ಈ ಕುರಿತು ಅಸಮಧಾನ ವ್ಯಕ್ತಪಡಿಸಿದರು. ಯಾವ ರಸ್ತೆಯಲ್ಲಿ ಎಷ್ಟು ಹಂಪ್ ಹಾಕಬೇಕು ಎಂಬ ಅರಿವು ಅಧಿಕಾರಿಗಳಿಗೆ ಇಲ್ಲ, ಚಿಂತಾಮಣಿಯ ಮಾಡಕೇರಿ ಕ್ರಾಸ್ ನಿಂದ ಹೊಸಕೋಟೆಯವರಿಗೂ ಇರುವ ಐವತ್ತು ಕಿ.ಮಿ ರಸ್ತೆಯಲ್ಲಿ ಎಷ್ಟು ರಸ್ತೆ ಉಬ್ಬುಗಳು ಇರಬಹುದು ಹೇಳಿ ಅಧ್ಯಕ್ಷರೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗ್ಗಡೆಯವರನ್ನೆ ಕೇಳಿದರು ಇದಕ್ಕೆ ಅವರಿಂದ ಬಂದ ಉತ್ತರಕ್ಕೆ ಪ್ರತಿಕ್ರಿಯೆ ನೀಡಿದ ರಮೇಶ್ ಕುಮಾರ್ ಐವತ್ತು ಕಿ.ಮಿ ರಸ್ತೆಯಲ್ಲಿ 47 ರಸ್ತೆ ಉಬ್ಬುಗಳು ಇದೆ ಎಂದು ಸಧನದಲ್ಲಿ ಹೇಳಿದರು ಈ ಬಗ್ಗೆ ಗಮನಹರಿಸುವರು ಯಾರು ಎಂದು ಪ್ರಶ್ನಿಸಿದರು. ಸರ್ಕಾರ ನಡೆಸುವವರ ಪಂಚೇಂದ್ರೀಯಗಳು ಸದಾಕಾಲ ಎಚ್ಚರಿಕೆಯಿಂದ ಇರಬೇಕು. ರಾಜ್ಯದ ಆಡಳಿತ ಜವಾಬ್ದಾರಿ ಹೊತ್ತವರು ನೀತಿ ರೂಪಿಸುತ್ತಾರೆ. ಕಾರ್ಯಾಂಗ ಅದನ್ನು ಕಾರ್ಯರೂಪಕ್ಕೆ ತರುತ್ತದೆ. ಆದರೆ ಜನರ ಕಷ್ಟಗಳನ್ನು ಬಗೆಹರಿಸಲು ಆದ್ಯತೆ ನೀಡಬೇಕು ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಗಳಿಗೆ ಬಡವರು ಹೊಗುತ್ತಾರೆ. ಅವರಿಗೆ ಎಲ್ಲ ಸೌಲಭ್ಯ ಒದಗಿಸಬೇಕು. ಆದರೆ ಆಸ್ಪತ್ರೆಯಲ್ಲಿ ಸತ್ತರೆ, ಬಾಕಿ ಹಣ ಪಾವತಿಸಬೇಕಿದ್ದರೆ ಹೆಣ ಕೊಡುವುದಿಲ್ಲ. ಇದು ಮಾನವಿಯತೆಯೇ?. ಈ ಕುರಿತು ಯಾವ ಕಾನೂನು ರೂಪಿಸುತ್ತೀರಿ ಎಂದು ಪ್ರಶ್ನಿಸಿದರು.
ವಿರೋಧ ಪಕ್ಷ ಜವಾಬ್ದಾರಿಯಿಂದ ವರ್ತಿಸಬೇಕು,ಲೋಹಿಯಾ ಮಾದರಿ
ಆಡಳಿತ ಪಕ್ಷವೇ ಅಲ್ಲ ಪ್ರತಿಪಕ್ಷಗಳ ಕುರಿತಾಗಿ ಮಾತನಾಡಿದ ರಮೇಶ್ ಕುಮಾರ್, ವಿರೋಧ ಪಕ್ಷಗಳು ಜನರ ಧ್ವನಿಯಾಗಬೇಕು. ಆಡಳಿತದಲ್ಲಿ ಅವಕಾಶ ಸಿಕ್ಕಿಲ್ಲ ಅಂತ ನಿಷ್ಕ್ರೀಯ ವಿರೋಧ ಪಕ್ಷವಾಗಬಾರದು. ಹಾಗು ಎಲ್ಲವನ್ನೂ ವಿರೋಧಿಸುವುದು ವಿರೋಧ ಪಕ್ಷದ ಕೆಲಸವಾಗಬಾರದು. ಜನರು ಸಮಸ್ಯೆ ಅಧಾರದ ಮೇಲೆ ಧ್ವನಿ ಎತ್ತಬೇಕು ಎಂದು ಹೇಳಿದರು. ಪ್ರತಿಪಕ್ಷವಾಗಿ ಲೋಹಿಯಾ ಅವರ ಹೋರಾಟದ ಬಗ್ಗೆ ಉದಾಹರಣೆ ನೀಡಿದ ಅವರು ಲೋಹಿಯಾ ಸದನಕ್ಕೆ ಬಂದಾಗ ಹಲವಾರು ಜನರು ಮಾತನಾಡಿಕೊಂಡರು ಇಲ್ಲಿಯೂ ಅವರು ಹೋರಾಟ ಮಾಡಿ ಸದನ ನಡೆಯಲು ಬಿಡುವುದಿಲ್ಲ ಎಂದು.ಆದರೆ ಅವರು ಜನರ ಧ್ವನಿಯಾಗಿ ಕೆಲಸ ಮಾಡಿದರು ಎಂದರು.
ಚ.ಶ್ರೀನಿವಾಸಮೂರ್ತಿ