ಕೊರೋನಾ ರುದ್ರತಾಂಡವ ತಪ್ಪಿಸಲು ಕಟ್ಟು ನಿಟ್ಟಿನ ಕ್ರಮ ಅಗತ್ಯ
ಬೆಂಗಳೂರು: ಸರ್ಕಾರದ ಸಮಾರಂಬಗಳು, ಜಾತ್ರೆಗಳು, ಮದುವೆ, ಇನ್ನಿತರೆ ಸಮಾರಂಭಗಳಿಗೆ ಸರ್ಕಾರ ಬ್ರೇಕ್ ಹಾಕದೇ ಹೋದರೆ ಮುಂಬರುವ ದಿನಗಳಲ್ಲಿ ಅಪಾಯ ಗ್ಯಾರಂಟಿ ಎಂದು ಆರೋಗ್ಯ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ ಮಂಜುನಾಥ್ ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ನಿಯಂತ್ರಣ ಸಂಬಂಧ ಸರ್ಕಾರ ಕರೆದ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಕೊರೊನಾ ಎರಡನೆ ಅಲೆ ಆರಂಭವಾಗಿದೆ.ಈಗಲೇ ಇದಕ್ಕೆ ನಿಯಂತ್ರಣ ಹೇರದೇ ಇದ್ದರೆ ಮುಂದೆ ದೊಡ್ದ ಮಟ್ಟದ ಅಪಾಯ ಇರುವ ಸಾಧ್ಯತೆಯಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಈಗ ದಿನಕ್ಕೆ 5 ಸಾವಿರ ಪ್ರಕರಣಗಳು ವರದಿಯಾಗುತ್ತಿದೆ. ನಿರ್ಲಕ್ಷ್ಯ ಮುಂದುವರಿದರೇ ಮೇ 15ರ ಹೊತ್ತಿಗೆ ಇದರ ಸಂಖ್ಯೆ ದಿನಕ್ಕೆ 15 ಸಾವಿರಕ್ಕೆ ತಲುಪಬಹುದು. ಜನತೆ ಐಸ್ ಕ್ರೀಂ ಪಾರ್ಲರ್, ಪಾನಿಪೂರಿ ಚಾಟ್ ಫುಡ್ ಮಾಲ್ ಗಳು, ಅಂಗಡಿಗಳಲ್ಲಿ ಗುಂಪು ಸೇರುತ್ತಾರೆ. ಕನಿಷ್ಠ ಗಾಳಿಯಾಡದ ಸ್ಥಳಗಳಲ್ಲಿ ಗುಂಪು ಗುಂಪಾಗಿ ಸೇರುವುದರಿಂದ ಸಾಮಾಜಿಕ ಅಂತರವನ್ನು ಕಾಪಾಡುತ್ತಿಲ್ಲ. ಮದುವೆ, ಸಮಾರಂಭಗಳಿಗೆ ಮಿತಿ ಹೇರಬೇಕು ಮತ್ತು ಜನರು ಇದನ್ನು ಅರ್ಥಮಾಡಿಕೊಂಡು ಕೋವಿಡ್ ನಿಯಮಾವಳಿಗಳನ್ನು ಸರಿಯಾಗಿ ಪಾಲನೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಕೊರೊನಾ ನಿಯಂತ್ರಣ ಮಾಡಬೇಕಾದರೆ ವಿಶೇಷವಾಗಿ ಗುಂಪು ಸೇರುವುದನ್ನು ಕಡಿಮೆ ಮಾಡಲೇಬೇಕು. 144 ಸೆಕ್ಷನ್ ಅನ್ನು ಸರ್ಕಾರ ಕಠಿಣವಾಗಿ ಜಾರಿಗೆ ತರಬೇಕು. ಇದು ನಗರ,ಪಟ್ಟಣಗಳಲ್ಲಷ್ಟೆ ಅಲ್ಲ ಹಳ್ಳಿಯಲ್ಲೂ ಜಾರಿ ಆಗಬೇಕಿದೆ ಎಂದು ತಿಳಿಸಿದರು.