- ಲಿಮ್ಕಾ ದಾಖಲೆ ಮಾಡುವಷ್ಟು ದೊಡ್ಡದಾದ ರಾಷ್ಟ್ರಧ್ವಜ
- ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹಾರಟ
- ಪ್ರತಿ ತಾಲೂಕಿನಲ್ಲೂ ಬೈಕ್ ರ್ಯಾಲಿ
- ದೇವರಾಯಸಮುದ್ರ ಬೆಟ್ಟಕ್ಕೆ ಲೇಸರ್ ಲೈಟ್
ಕೋಲಾರ: ಕೋಲಾರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ದೇಶದಲ್ಲಿಯೇ ಅತಿ ದೊಡ್ಡ ವಿಸ್ತಿರ್ಣದ ತ್ರಿವರ್ಣ ಧ್ವಜವನ್ನು ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ಹಾರಿಸುವ ಮೂಲಕ ಲಿಮ್ಕಾ ದಾಖಲೆ ನಿರ್ಮಿಸಲಾಗುವುದು ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು
ನಗರದ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಆಗಿರುವ ಹಿನ್ನಲೆಯಲ್ಲಿ ಅದ್ದೂರಿಯಿಂದ ಆಗಸ್ಟ್ 15 ಸ್ವಾತಂತ್ರ್ಯೊತ್ಸವ ಆಚರಣೆಗೆ ಸಿದ್ಧತೆ ನಡೆಸಲಾಗಿದೆ ಕ್ರೀಡಾಂಗಣದಲ್ಲಿ ಶಾಲಾ ಮಕ್ಕಳು ಸೇರಿದಂತೆ 2 ಸಾವಿರ ಜನರಿಂದ ಈ ಬೃಹತ್ ಧ್ವಜ ಹಾರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ನರಸಾಪುರ ಕೈಗಾರಿಕಾ ಕೇಂದ್ರದಲ್ಲಿ 200 ×600 ಅಡಿ ವಿಸ್ತೀರ್ಣದ ಧ್ವಜ ತಯಾರಿಸಲಾಗುತ್ತಿದ್ದು ಧ್ವಜ 1.2 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದ್ದು, 12,800 ಮೀಟರ್ ಬಟ್ಟೆ ಬಳಸಲಾಗಿದೆ ಇಡೀ ಕ್ರೀಡಾಂಗಣದಗಲಕ್ಕೆ ಧ್ವಜ ಇರುತ್ತದೆ ಎಂದರು.
ಕ್ರೀಡಾಂಗಣಕ್ಕೆ ಬರುವ 15 ಸಾವಿರ ಶಾಲಾ ಮಕ್ಕಳಿಗೆ ತ್ರಿವರ್ಣ ಧ್ವಜ ವಿತರಿಸಲಾಗುವುದು.
ಅಂದು ಬೆಳಿಗ್ಗೆ 7 ಗಂಟೆಗೆ ಕ್ಲಾಕ್ ಟವರ್ ನಲ್ಲಿ ಜಿಲ್ಲಾಡಳಿತದ ವತಿಯಿಂದ ಧ್ಚಜಾರೋಹಣ ಮಾಡಲಾಗುವುದು. ನಾನೂ ಸೇರಿದಂತೆ ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತೇವೆ ನಂತರ ಕ್ಲಾಕ್ ಟವರ್ ನಿಂದ ನಗರದಾದ್ಯಂತ ಮೆರವಣಿಗೆ ನಡೆಸಲಾಗುವುದು
ಜಿಲ್ಲಾದ್ಯಂತ ಬೈಕ್ ರ್ಯಾಲಿ
ಆಗಸ್ಟ್ 15 ರಂದು ಬೆಳಿಗ್ಗೆ 8 ಕ್ಕೆ ಎಲ್ಲಾ ತಾಲ್ಲೂಕುಗಳಲ್ಲೂ ಧ್ವಜ ಹಿಡಿದು ಬೈಕ್ ರ್ಯಾಲಿ ನಡೆಸಲಾಗುವುದು ಮತ್ತು ಸ್ವಾತಂತ್ರ್ಯ ಹೋರಾಟಗಾರರು ಅಥವಾ ಅವರ ಕುಟುಂಬದವರನ್ನು ಸನ್ಮಾನಿಸಿ ಗೌರವಿಸಲಾಗುವುದು 14 ರಂದು ತಿರಂಗ ಯಾತ್ರೆ ನಡೆಯಲಿದೆ. ಯಾರೂ ಬೇಕಾದರೂ ಜೊತೆಗೂಡಬಹುದು. 14ರಂದು ದೇಶ ವಿಭಜನೆಯ ಕರಾಳಾ ದಿನವನ್ನಾಗಿ ಆಚರಿಸುವ ಮೂಲಕ ಮಕ್ಕಳಿಗೆ ದೇಶದ ಧ್ವಜ ಹಾರಿಸುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವವನ್ನು ಇಡೀ ದೇಶ ಮನೆ ಮನೆಗಳ ಹಬ್ಬದಂತೆ ಆಚರಿಸಲಾಗುತ್ತದೆ. 20 ಕೋಟಿ ಮನೆಗಳ ಮೇಲೆ ಧ್ವಜ ಹಾರಿಸಲಾಗುತ್ತಿದೆ. ತ್ಯಾಗ ಬಲಿದಾನದ ಸ್ವಾತಂತ್ರ್ಯೊತ್ಸವವನ್ನು ನೆನಪಿಸಿಕೊಂಡು ಪ್ರತಿ ತಾಲ್ಲೂಕಿನಲ್ಲಿ 35 ಸಾವಿರ ಮನೆಗಳ ಧ್ವಜ ಹಾರಾಟ ಮಾಡಲಾಗುತ್ತದೆ ಎಂದು ವಿವರಿಸಿದರು.
ಜಿಲ್ಲೆಯ ಪ್ರಸಿದ್ಧ ಸ್ಥಳಗಳಲ್ಲಿ ತ್ರಿವರ್ಣ ಅಲಂಕಾರ ಮಾಡಲಾಗುವುದು. ಪ್ರಸಿದ್ಧ ದೇವರಾಯ ಸಮುದ್ರದ ಬೆಟ್ಟದಲ್ಲಿ ಸಂಜೆ ಬೃಹತ್ ಧ್ಚಜ ಹಾರಿಸಿ ಬೆಟ್ಟದಲ್ಲಿ ಲೇಸರ್ ಲೈಟ್ ಪ್ರದರ್ಶನ ಆಯೋಜಿಸಲಾಗುದು ಎಂದರು
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ.ವೇಣುಗೋಪಾಲ್, ಸ್ವಾತಂತ್ರ್ಯ ಅಮೃತಮಹೋತ್ಸಾಹ ಜಿಲ್ಲಾ ಸಂಚಾಲಕ ಓಂಶಕ್ತಿ ಚಲಪತಿ ಮುಖಂಡರಾದ ರಾಜೇಶ್ ಸಿಂಗ್, ಮಂಜುನಾಥ್ ಕೆಂಬೋಡಿ ನಾರಾಯಣಸ್ವಾಮಿ ಇದ್ದರು.
ಸುದ್ದಿ: ಚ.ಶ್ರೀನಿವಾಸಮೂರ್ತಿ