ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮಹಾನಗರದ ಅಷ್ಟ ದಿಕ್ಕುಗಳಿಗೂ ಸಂಪರ್ಕ ಕಲ್ಪಿಸುವುದೆ ಅಲ್ಲ ಭಾರತದಾದ್ಯಂತ ಇರುವ ಪ್ರಖ್ಯಾತ ನಗರಗಳಿಗೆ ತೆರೆಳಲು ಖಾಸಗಿ ಬಸ್ ಗಳ ಪ್ರದೇಶ ಎಂದಿರುವ ಕಲಾಸಿಪಾಳ್ಯ ಬಸ್ ನಿಲ್ದಾಣದ ಬಸ್ ಟರ್ಮಿನಲ್ ನವನವೀನವಾಗಿ ನಿರ್ಮಾಣ ಗೊಂಡಿದ್ದರು ಇದುವರಿಗೂ ಸಾರ್ವಜನಿಕರ ಸೇವೆಗೆ ಸಿಕ್ಕಿಲ್ಲ.
ಕಳೆದ ಆರು ವರ್ಷಗಳ ಹಿಂದೆ ಕಲಾಸಿಪಾಳ್ಯದ ಬಸ್ ನಿಲ್ದಾಣ ನಿರ್ಮಾಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು 2016ರ ಆ. 18ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. 4.13 ಎಕರೆ ವಿಸ್ತೀರ್ಣದಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣ ನಿರ್ಮಾಣ ಪೂರ್ಣವಾಗಿದೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ -ಬಿಎಂಟಿಸಿ (Bangalore Metropolitan Transport Corporation -BMTC) ನಿರ್ಮಿಸಿರುವ ಬಹುಕಾಲದಿಂದ ಬಾಕಿ ಉಳಿದಿದ್ದ ಕಲಾಸಿಪಾಳ್ಯ ಬಸ್ ಟರ್ಮಿನಲ್ (Kalasipalya bus terminal) ನಿರ್ಮಾಣ ಯೋಜನೆಯು 2018ರ ಡಿಸೆಂಬರ್ನಲ್ಲಿಯೇ ಪೂರ್ಣಗೊಳ್ಳಬೇಕಿತ್ತು. ತಡವಾಗಿ ಕೊನೆಗೂ 4 ವರ್ಷದ ಬಳಿಕ ಸಿದ್ಧವಾಗಿದೆ. ಆದರೆ ಕಳೆದ ಮೂರು ತಿಂಗಳಿಂದ ಅದಕ್ಕೆ ಬೀಗ ಹಾಕಲಾಗಿದೆ. ಇದರಿಂದ ಬಿಎಂಟಿಸಿ, ಕೆಎಸ್ಆರ್ಟಿಸಿ, ಅಂತಾರಾಜ್ಯ ಸರ್ಕಾರಿ ಹಾಗೂ ಖಾಸಗಿ ಬಸ್ಗಳು ಪಕ್ಕದ ರಸ್ತೆಗಳಲ್ಲಿ ನಿಲುಗಡೆ ಮಾಡುತ್ತಿದ್ದು, ಬಸ್ ಪ್ರಯಾಣಿಕರು (Bus Passengers) ಮತ್ತಷ್ಟು ಪರದಾಡುವಂತಾಗಿದೆ.
BBMP BMTC ಇಲಾಖಾ ಅಧಿಕಾರಿಗಳ ನಡುವಿನ ಸಮನ್ವಯತೆ ಸೌಹಾರ್ದತೆ ಕೊರತೆಯಿಂದಾಗಿ ಕಾಮಗಾರಿ ವಿಳಂಬಕ್ಕೊಂದು ಕಾರಣ ಎನ್ನಲಾಗಿದೆ.
60 ಕೋಟಿ ರೂ.ಪೈಕಿ ಕೇಂದ್ರ ಸರ್ಕಾರದ ನಗರ ಭೂಸಾರಿಗೆ ನಿರ್ದೇಶನಾಲಯವು 25 ಕೋಟಿ ರೂ.ಗಳನ್ನು ನಿಲ್ದಾಣ ನಿರ್ಮಾಣಕ್ಕೆ ನೀಡಿದೆ. ಉಳಿದ ಹಣವನ್ನು ಬಿಎಂಟಿಸಿ ಭರಿಸಿದೆ.
ಈ ಮಧ್ಯೆ, ಬಿಎಂಟಿಸಿ ಅಧಿಕಾರಿಗಳು ಟರ್ಮಿನಲ್ ತೆರೆಯಲು ಡಿಸೆಂಬರ್ 2022 ರ ಗಡುವಿಗೆ ಬದ್ಧವಾಗಿರುತ್ತಾರೆ ಮತ್ತು ಮುಂದಿನ ತಿಂಗಳು ಟರ್ಮಿನಲ್ ಅನ್ನು ತೆರೆಯುತ್ತಾರೆ ಎಂದು ಸ್ಥಳಿಯ ಬಸ್ ಅಧಿಕಾರಿಗಳು ಹೇಳುತ್ತಾರೆ. ಒಟ್ಟಿಗೇ ಇದು 18 ಬಿಎಂಟಿಸಿ ಬಸ್ಗಳಿಗೆ ಅವಕಾಶ ಕಲ್ಪಿಸುತ್ತದೆ. ಜೊತೆಗೆ, ಒಂದೇ ಬಾರಿಗೆ 10 ಕೆಎಸ್ಆರ್ಟಿಸಿ ಬಸ್ಗಳು ಮತ್ತು ಎಂಟು ಅಂತರರಾಜ್ಯ ಸರ್ಕಾರಿ ಬಸ್ಗಳು, ಖಾಸಗಿ ಬಸ್ಗಳಿಗೆ ಇಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.
ಕಲಾಸಿಪಾಳ್ಯ ನಿಲ್ದಾಣದ ಮೂಲಕ ಪ್ರತಿದಿನ ಲಕ್ಷಾಂತರ ಮಂದಿ ಪ್ರಯಾಣ ಮಾಡುತ್ತಾರೆ. ನಗರದ ಹೊರವಲಯದ ರೈತರು ಹೂವು, ಹಣ್ಣು, ತರಕಾರಿಯನ್ನು ಬಸ್ಗಳಲ್ಲೇ ಮಾರುಕಟ್ಟೆಗೆ ತಂದು ಮಾರಾಟ ಮಾಡಿ ಹೋಗುತ್ತಾರೆ. ಅಲ್ಲದೆ, ಚಿಲ್ಲರೆ ಅಂಗಡಿಗಳ ವ್ಯಾಪಾರಿಗಳು, ಹೂವಿನ ವ್ಯಾಪಾರಿಗಳು ಖರೀದಿಗಾಗಿ ಮಾರುಕಟ್ಟೆಗೆ ಬರುತ್ತಾರೆ. ಇದಲ್ಲದೆ, ವಾಣಿವಿಲಾಸ ಆಸ್ಪತ್ರೆ ಮತ್ತು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾವಿರಾರು ರೋಗಿಗಳು ಹೊರ ರಾಜ್ಯದಿಂದ ಹೋರ ಜಿಲ್ಲೆಗಳಿಂದ ಬಂದು ಹೋಗುತ್ತಾರೆ.
ಕಲಾಸಿಪಾಳ್ಯದ ಕೋಟೆ ರಸ್ತೆಯಿಂದ ಕನಕಪುರ ರಸ್ತೆ, ಮಾಗಡಿ ರಸ್ತೆ ಮಾರ್ಗವಾಗಿ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳು ಕಾರ್ಯಾಚರಣೆಗೊಳ್ಳುತ್ತವೆ. ಬನ್ನೇರುಘಟ್ಟ, ಜಿಗಣಿ, ಹೊಸೂರು, ಆನೇಕಲ್ಗೆ ತೆರಳುವ ಬಸ್ಗಳು ಕಲಾಸಿಪಾಳ್ಯ ಮುಖ್ಯರಸ್ತೆಯಿಂದ ಹೊರಡುತ್ತವೆ. ಜಾಮೀಯಾ ಮಸೀದಿ ಬಳಿಯ ನಿಲ್ದಾಣದಿಂದ ಕೆ.ಆರ್.ಪುರ, ಹೊಸಕೋಟೆ, ಯಲಹಂಕ, ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ,ಕೋಲಾರ,ಚಿಂತಾಮಣಿ ಶ್ರೀನಿವಾಸಪುರದ ಕಡೆ ಬಸ್ಗಳು ಸಂಚರಿಸುತ್ತವೆ. ನಿಲ್ದಾಣ ಸಾರ್ವಜನಿಕರಿಗೆ ಬಳಕೆಯಾಗದ ಹಿನ್ನಲೆಯಲ್ಲಿ ಪ್ರತಿದಿನ ಸಾಗುತ್ತಿರುವ ಸಾವಿರಾರು ಬಸ್ಗಳನ್ನು ರಸ್ತೆಗಳಲ್ಲೇ ನಿಲುಗಡೆ ಮಾಡುತ್ತಿರುವುದರಿಂದ ಟ್ರಾಫಿಕ್ಜಾಮ್ ಉಂಟಾಗುತ್ತಿದೆ.
ಬೆಂಗಳೂರು ನಗರದೊಳಗಿನ ಮತ್ತು ಅಂತರ-ನಗರದ ಅನೇಕ ಬಸ್ ಬಳಕೆದಾರರು ಬಿಸಿಲು ಮತ್ತು ಮಳೆ ಭೀತಿಯ ಸಮ್ಮುಖದಲ್ಲಿ ಕಾಯಬೇಕಾದ ಅನಿವಾರ್ಯತೆ ಇದೆ.ಪ್ರಯಾಣಿಕರು ಮತ್ತು ಸಾರಿಗೆ ಸಿಬ್ಬಂದಿಗೆ ತಾತ್ಕಾಲಿಕವಾಗಿ ಕನಿಷ್ಠ ಮೂಲಸೌಕರ್ಯಗಳನ್ನೂ ಕಲ್ಪಿಸಿಲ್ಲ. ಬೀದಿ ದೀಪಗಳಿಲ್ಲ. ಕುಳಿತು ದಣಿವಾರಿಸಿಕೊಳ್ಳಲು ಕುರ್ಚಿಗಳಿಲ್ಲ. ಶೌಚಾಲಯಗಳಿದ್ದರೂ, ಬಳಕೆಗೆ ಯೋಗ್ಯವಾಗಿಲ್ಲ. ಶೌಚಾಲಯದ ಕೊಳಚೆಯು ರಸ್ತೆ, ಫುಟ್ಪಾತ್ಗಳಲ್ಲಿ ಹರಿಯುತ್ತಿದ್ದು, ದುರ್ವಾಸನೆ ಸಹಿಸಲಾಗುತ್ತಿಲ್ಲ.
ಬಿಎಂಟಿಸಿಯು ಮೊದಲಿಗೆ 143 ಕೋಟಿ ರೂ. ವೆಚ್ಚದಲ್ಲಿ 5 ಮಹಡಿಯ ಕಟ್ಟಡ ಕಟ್ಟಿ ಕೆಎಸ್ಆರ್ಟಿಸಿ, ಬಿಎಂಟಿಸಿ, ಖಾಸಗಿ ಬಸ್ಗಳನ್ನು ಒಂದೇ ನಿಲ್ದಾಣಕ್ಕೆ ತರುವ ರೂಪುರೇಷೆ ಸಿದ್ಧಪಡಿಸಿತ್ತು. ನಗರದ 10 ಕಡೆ ಇರುವ ಟಿಟಿಎಂಸಿ ನಿಲ್ದಾಣಗಳಿಂದ ನಿರೀಕ್ಷಿತ ಆದಾಯ ಬರುತ್ತಿಲ್ಲ. ಹೀಗಾಗಿ ಆ ಯೋಜನೆ ಕೈ ಬಿಟ್ಟು 60 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣ ನಿರ್ಮಿಸಲು ಮುಂದಾಯಿತು.
ಜನಪ್ರತಿನಿಧಿಗಳ ಕಿತ್ತಾಟದಿಂದ ವಿಳಂಬವಾಯಿತ!
ಕಲಾಸಿಪಾಳ್ಯ ನಿಲ್ದಾಣ ಕಾಮಗಾರಿ ತಡವಾಗಿ ಆರಂಭವಾಗಿದ್ದು ಇದಕ್ಕೆ ಸಾರಿಗೆ ಇಲಾಖೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಮತ್ತು ಮಾಜಿ ಶಾಸಕ ಆರ್.ವಿ.ದೇವರಾಜ್ ಅವರ ನಡುವಿನ ಭಿನ್ನಾಭಿಪ್ರಾಯವೇ ಕಾರಣ ಎಂಬ ಆರೋಪವಿದೆ. ‘ಸ್ಥಳೀಯ ಶಾಸಕ ಆರ್.ವಿ.ದೇವರಾಜ್ ಅವರಿಂದಾಗಿ ಯೋಜನೆ ವಿಳಂಬವಾಯಿತು’ ಎಂದು ರಾಮಲಿಂಗಾರೆಡ್ಡಿ ದೂರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಆರ್.ವಿ.ದೇವರಾಜ್, ‘209 ಕೋಟಿ ರೂ.ಗಳ ಯೋಜನೆ ಕೈಬಿಟ್ಟು, 60 ಕೋಟಿ ರೂ. ವೆಚ್ಚದಲ್ಲಿ ಮರು ಯೋಜನೆ ರೂಪಿಸಿದ್ದರಿಂದ ತಡವಾಯಿತು. ನಿಲ್ದಾಣ ನಿರ್ಮಾಣಕ್ಕೆ ಒತ್ತಾಯಿಸಿ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದಿದ್ದೆ. ಆದರೆ, ಲಿಖಿತ ಉತ್ತರ ನೀಡಿ ಮೌನಕ್ಕೆ ಶರಣಾಗಿದ್ದರು,” ಎಂದು ಆರೋಪಿಸಿದ್ದರು. ಈ ಮದ್ಯೆ ನಿಲ್ದಾಣ ನಿರ್ಮಾಣಕ್ಕೆ ಪಾಯ ತೆಗೆಯುವಾಗ ಬಂಡೆ ಕಲ್ಲುಗಳು ಸಿಕ್ಕಿದ್ದರಿಂದ ಕಾಮಗಾರಿ ವಿಳಂಬವಾಯಿತು ಎನ್ನಲಾಗಿದೆ
ಎರಡು ಬಾರಿ ಭೂಮಿ ಪೂಜೆ!
ಆಗಿನ ಸಿಎಂ ಸಿದ್ದರಾಮಯ್ಯ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ 4 ತಿಂಗಳ ಬಳಿಕ ಆರ್.ವಿ.ದೇವರಾಜ್ ಅವರು 2016ರ ಡಿ. 15ರಂದು ಮತ್ತೊಮ್ಮೆ ಭೂಮಿ ಪೂಜೆ ನೆರವೇರಿಸಿದ್ದರು.
ಕಲಾಸಿಪಾಳ್ಯಕ್ಕೆ ಒಂದು ಅಚ್ಚುಕಟ್ಟಾದ ಟರ್ಮಿನಲ್ ನಿರ್ಮಿಸಿಕೊಡಬೇಕೆಂಬ ಪ್ರಸ್ತಾವನೆ ಮತ್ತು ನಿರ್ಮಾಣಕ್ಕೆ ಹಲವು ದಶಕಗಳೇ ಬೇಕಾಯಿತು. ಈಗ ಕಾಮಗಾರಿ ಮುಗಿದರೂ ಇನ್ನೂ ಪ್ರಯಾಣಿಕರಿಗೆ ಮುಕ್ತವಾಗಿಲ್ಲ. ಈ ಭಾಗದಲ್ಲಿ ಚೈನ್ ಸ್ನ್ಯಾಚಿಂಗ್, ಜೇಬುಗಳ್ಳತನ, ಮಾದಕ ದ್ರವ್ಯ ದಂಧೆ, ಅದರಲ್ಲೂ ರಾತ್ರಿ ವೇಳೆ ಹಲವಾರ ಇನ್ನಿತರೆ ಅಪರಾಧ, ಅನೈತಿಕ ಚಟುವಟುಕೆ ಪ್ರಕರಣಗಳು ನಡೆಯುತ್ತಿವೆ. ಟರ್ಮಿನಲ್ ವ್ಯವಸ್ಥಿತವಾಗಿ ತೆರೆದರೆ ಅಗತ್ಯ ಶೌಚಾಲಯಗಳು ಮತ್ತು ಸಿಸಿಟಿವಿ ಸೌಲಭ್ಯಗಳೊಂದಿಗೆ ಮಹಿಳಾ ಪ್ರಯಾಣಿಕರು ಸುರಕ್ಷಿತವಾಗಿರುತ್ತಾರೆ ಎಂಬುದು ಪ್ರಯಾಣಿಕ ರಾಜ್ ಕುಮಾರ್ ಅವರ ಅನಿಸಿಕೆ.
ಮೆಟ್ರೋ ನಿಲ್ದಾಣಕ್ಕೆ ಕನೆಕ್ಟಿಂಗ್ ಸಬ್ವೇ ಇರುತ್ತದ ಇಲ್ವಾ?
ನಮ್ಮ ಮೆಟ್ರೋ ಗ್ರೀನ್ ಲೈನ್ ರೈಲು ಸಮೀಪದಲ್ಲಿಯೇ ಹಾದುಹೋಗಿದೆ ಬಸ್ ಟರ್ಮಿನಲ್ ಮತ್ತು ಕೆಆರ್ ಮಾರ್ಕೆಟ್ ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸಲು ಸುರಂಗಮಾರ್ಗ ನಿರ್ಮಿಸುವ ಪ್ರಸ್ತಾವನೆ ಮುಂದಿಡಲಾಗಿತ್ತು. ಆದರೆ ಅದಿನ್ನೂ ಟೇಕ್ ಆಫ್ ಆಗಿಲ್ಲ. ಗಮನಾರ್ಹಯವೆಂದರೆ ಟರ್ಮಿನಲ್ನಿಂದ ಸುರಂಗ ಮಾರ್ಗ ನಿರ್ಮಿಸಲು ಅವಕಾಶವಿದೆ ಎಂದು ಬಿಎಂಟಿಸಿ ಹೇಳಿಕೊಂಡಿದೆ.