ಬೆಂಗಳೂರು: ವೀಸಾ ಅವಧಿ ಮುಗಿದಿರುವ 600ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಬೆಂಗಳೂರಿನಲ್ಲಿ ಇರುವ ಬಗ್ಗೆ ಗುಪ್ತಚರ ಗುರುತಿಸಿದೆ.
ಅವರೆಲ್ಲರನ್ನೂ ಅವರವರ ದೇಶಗಳಿಗೆ ಕಳುಹಿಸಲು ಗೃಹ ಇಲಾಖೆ ಕಾರ್ಯೋನ್ಮುಖವಾಗಿದೆ. ಉತ್ತರ ಪ್ರದೇಶದ ಯುವಕನೊಂದಿಗೆ ಪಾಕಿಸ್ತಾನಿ ಯುವತಿ ವಿವಾಹವಾದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದ ನಂತರ ನಗರದ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು ಪಾಕಿಸ್ತಾನಿ ಯುವತಿಯನ್ನು ಅವರ ದೇಶಕ್ಕೆ ಕಳುಹಿಸಿದ ರೀತಿಯಲ್ಲಿಯೇ,ನಗರದಲ್ಲಿ ಸರಗಳ್ಳತನ ಇನ್ನಿತರೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಆಫ್ರಿಕಾ ದೇಶಗಳ ಜನರನ್ನು ವಾಪಸ್ ಕಳುಹಿಸುವ ಪ್ರಯತ್ನ ನಡೆದಿದೆ ಎಂದು ನಗರ ಪೊಲೀಸರು ಬಹಿರಂಗಪಡಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಬೆಂಗಳೂರಿನಲ್ಲಿ ಅಕ್ರಮವಾಗಿ ಇದ್ದ 400 ಕ್ಕೂ ಹೆಚ್ಚು ವಿದೇಶಿಯರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ, ಅವರಲ್ಲಿ ಕೆಲವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಮತ್ತು ಇತರರು ಜಾಮೀನಿನ ಮೇಲೆ ಇದ್ದಾರೆ.ಇದರಲ್ಲಿ 34 ಜನರನ್ನು ಅವರ ದೇಶಗಳಿಗೆ ವಾಪಸ್ ಕಳುಹಿಸಲಾಗಿದೆ..
ಪೊಲೀಸ್ ಮೂಲಗಳ ಪ್ರಕಾರ, ಆಫ್ರಿಕಾ,ನೈಜೀರಿಯಾ ಮತ್ತು ಬಾಂಗ್ಲಾದೇಶದ ಜನರು ಇದ್ದಾರೆ. ಇನ್ನೂ 50 ಜನರನ್ನು ಬಂಧಿಸಿ ಬೆಂಗಳೂರಿನ ಹೊರವಲಯದ ನೆಲಮಂಗಲ ಸೊಂಡೆಕೊಪ್ಪದ ಡಿಟೆನ್ಷನ್ ಸೆಂಟರ್ನಲ್ಲಿ ಇರಿಸಲಾಗಿದೆ. ಈಗಾಗಲೆ ಆಯಾ ದೇಶಗಳ ರಾಯಭಾರಿ ಕಚೇರಿಗಳಿಗೆ ಮಾಹಿತಿ ನೀಡಲಾಗಿದೆ. ಇನ್ನೊಂದು ತಿಂಗಳಲ್ಲಿ ಆ ಕಡೆಯಿಂದ ಗ್ರೀನ್ ಸಿಗ್ನಲ್ ಬಂದಾಗ ಅವರನ್ನು ವಾಪಸ್ ಕಳುಹಿಸುವ ನಿರೀಕ್ಷೆಯೂ ಇದೆ.
ಬೆಂಗಳೂರಿನ ಪೂರ್ವ ಭಾಗದ ಪ್ರದೇಶಗಳಾದ ಬಾಣಸವಾಡಿ, ರಾಮಮೂರ್ತಿನಗರ ಮತ್ತು ಹೆಣ್ಣೂರುಗಳಲ್ಲಿ ಆಫ್ರಿಕನ್ ದೇಶಗಳಿಂದ ಬಂದಿರುವವರು ಹೆಚ್ಚಿನ ಸಂಖ್ಯೆಯ ಜನರು ವಾಸಿಸುತ್ತಿದ್ದಾರೆ. ಈ ಪೈಕಿ 40 ಮಂದಿ ವೀಸಾ ಅವಧಿ ಮುಗಿದರೂ ಸರಗಳ್ಳತನ ಇನ್ನಿತರೆ ಅಕ್ರಮ ಚಟುವಟಿಕೆ ನಡೆಸಿರುವುದು ಪತ್ತೆಯಾಗಿದ್ದು, ಈಶಾನ್ಯ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ವಿದೇಶಿಗರ ಗಡಿಪಾರು ಸವಾಲು
ಅಕ್ರಮವಗಿರುವಂತ ವಿದೇಶಿಯರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಅತ್ಯಂತ ಸುದೀರ್ಘವಾಗಿದೆ. ಅವರ ದೇಶದ ರಾಯಭಾರ ಕಚೇರಿ ಮೂಲಕ ಪತ್ರ ವ್ಯವಹಾರ ನಡೆಸಬೇಕು.ಅವರನ್ನು ಅವರ ತವರು ದೇಶಗಳು ವಾಪಸ್ ಕರೆಸಿಕೊಳ್ಳಲು ಸಿದ್ಧವಿರಬೇಕು. ಕ್ರಿಮಿನಲ್ ಪ್ರಕರಣಗಳು ಇತ್ಯರ್ಥಗೊಂಡಿರಬೇಕು. ಜತೆಗೆ,ಅವರನ್ನು ವಿಮಾನದಲ್ಲಿಕಳುಹಿಸಿ ಕೊಡುವ ವ್ಯವಸ್ಥೆಯಾಗಬೇಕು. ಪ್ರತಿ ಪ್ರಕ್ರಿಯೆಯೂ ಎರಡೂ ದೇಶಗಳ ರಾಜತಾಂತ್ರಿಕ ವ್ಯವಹಾರದಡಿ ನಡೆಯಬೇಕು. ಹೀಗಾಗಿ, ವಿದೇಶಿಯರ ಗಡಿಪಾರು ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಪೋಲಿಸ್ ಅಧಿಕಾರಿಗಳು ಹೇಳುತ್ತಾರೆ
ತುಮಕೂರಿನಲ್ಲಿ ಮತ್ತು ಬೆಂಗಳೂರಿನಲ್ಲಿ ಮತ್ತೊಂದು ಬಂಧನ ಕೇಂದ್ರವನ್ನು ಸ್ಥಾಪಿಸಲು ರಾಜ್ಯ ಗೃಹ ಇಲಾಖೆಯ ವಿದೇಶಿಯರ ನೋಂದಣಿ ಕಚೇರಿ (ಎಫ್ಆರ್ಒ) ಅನುಮತಿ ಕೋರಿದೆಯಂತೆ. ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ವೀಸಾ ಅವಧಿ ಮುಗಿದಿರುವ ವಿದೇಶಿಗರ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿದ್ದು. ಅದರಲ್ಲೂ ಅಕ್ರಮವಾಗಿ ನೆಲೆಸಿರುವ ಕೆಲವರು ಡ್ರಗ್ಸ್ ದಂಧೆ ಹಾಗೂ ವೇಶ್ಯಾವಾಟಿಕೆ ಚಟುವಟಿಕೆಗಳಲ್ಲಿ ತೊಡಗಿರುವುದು ಪತ್ತೆಯಾಗಿದೆ. ವಿದೇಶಿಗರನ್ನು ಗಡಿಪಾರು ಮಾಡಲು ಮೊದಲು ಆ ದೇಶದ ರಾಯಭಾರಿ ಕಚೇರಿಗಳ ಜತೆ ಚರ್ಚಿಸಿ, ಈ ಮಧ್ಯೆ ನಮ್ಮ ದೇಶದಲ್ಲಿ ಅವರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ತೆರವುಗೊಳಿಸಬೇಕಾಗುತ್ತದೆ ಎಂದು ಶರಣಪ್ಪ ವಿವರಿಸಿದರು. ಇದಲ್ಲದೆ, ಅಕ್ರಮ ವಿದೇಶಿಯರನ್ನು ಹಿಂದಕ್ಕೆ ತೆಗೆದುಕೊಳ್ಳಲು ಮತ್ತು ಅವರ ಪ್ರಯಾಣ ವೆಚ್ಚವನ್ನು ಭರಿಸಲು ಆಯಾ ದೇಶಗಳು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ವಿವರಿಸಲಾಗಿದೆ. ಈ ಪ್ರಮುಖ ಕಾರಣಗಳಿಂದಲೇ ವಿದೇಶಿಗರು ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡಿದರೂ ಅವರ ವಿರುದ್ಧ ಸಂಪೂರ್ಣ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.