ಶ್ರೀನಿವಾಸಪುರ:ನೂತನ ಸಂವತ್ಸರದ ಯುಗಾದಿ ಹೊಸವರ್ಷದ ಅಂಗವಾಗಿ ಪಟ್ಟಣದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಸಮೇತ ಊರ ದೇವರುಗಳ ಜನಜಾತ್ರೆ ಉತ್ಸವ ಅದ್ದೂರಿಯಾಗಿ ನಡೆಸಲಾಯಿತು.
ಇದರ ಅಂಗವಾಗಿ ಎರಡನೇ ವರ್ಷದ ಹೂವಿನ ಕರಗ ಮಹೋತ್ಸವ ಸಹ ಆಯೋಜಿಸಲಾಗಿತ್ತು. ಪಟ್ಟಣದ ಗ್ರಾಮದೇವತೆ ಶ್ರೀ ಚೌಡೇಶ್ವರಿ,ಶ್ರೀ ಲಕ್ಷ್ಮೀನೃಸಿಂಹ, ಶ್ರೀ ಉಗ್ರ ನೃಸಿಂಹ, ಶ್ರೀ ನಗರೇಶ್ವರ,ಶ್ರೀ ವಾಸವಿ ಕನ್ಯಾಕಾ ಪರಮೇಶ್ವರಿ,ಶ್ರೀ ತಿರುಮಲರಾಯ,ಶ್ರೀ ಗಂಗಮ್ಮ,ಗಟ್ಟಹಳ್ಳಿ ಶ್ರೀ ನಡೀರಮ್ಮ,ಗುಂಡಮನತ್ತ ಶ್ರೀ ಅಷ್ಟಮೂರ್ತಮ್ಮ, ಶ್ರೀ ರೇಣುಕಾಎಲ್ಲಮ್ಮ, ಶ್ರೀಪೀಲೇಕಮ್ಮ,ಶ್ರೀ ಸಪ್ತಮಾತೃಕೇಯರ ದೇವರುಗಳ ಹೂವಿನಿಂದ ಅಲಂಕೃತಗೊಂಡ ವಿವಿಧ ವಿನ್ಯಾಸಗಳ ಆಕರ್ಷಕ ಪಲ್ಲಕ್ಕಿ ರಥಗಳಲ್ಲಿ ದೇವರುಗಳನ್ನು ಕೂರಿಸಿ ಪ್ರಾರಂಬವಾದ ಶೋಭಾ ಯಾತ್ರೆ ಯುಗಾದಿಯ ಸಂಜೆಯಿಂದ ಪಟ್ಟಣದಾದ್ಯಂತ ಸಂಚರಿಸಿ ಮಾರನೆ ದಿನ ಬೆಳಗಿನ ಜಾವದವರಿಗೂ ನಡೆಯಿತು.
ಪ್ರತಿ ಮನೆಯಿಂದಲೂ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವರಿಗೆ ಹೂವು ಕಾಯಿ ಕೊಟ್ಟು ಪೂಜೆ ಮಾಡಿಸಿದರು ಮುತೈದೆಯರು ಚೌಡೇಶ್ವರಿ ದೇವಿಗೆ ಅರಿಷಿಣ, ಕುಂಕುಮ, ಬಳೆ,ಸಿರೆ ಕುಪುಸ ಇಟ್ಟು ಮಡಿಲಕ್ಕಿ ಕಟ್ಟಿ ಆರತಿ ಬೆಳಗಿದರು.ಹತ್ತಾರು ದೇವರ ಪಲ್ಲಕ್ಕಿಗಳು ಜಗಮಗಿಸುವ ಬಣ್ಣ-ಬಣ್ಣದ ಸಿರಿಯಲ್ ಸೆಟ್ ಹಾಕಿಕೊಂಡು ಒಟ್ಟಾರೆಯಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಿದ್ದು ಜನರ ಮನ ಸೆಳೆಯಿತು ಬಹುತೇಕರು ಪಲ್ಲಕ್ಕಿ ಉತ್ಸವದ ದೃಶ್ಯವನ್ನು ಮೊಬೈಲ್ಗಳಲ್ಲಿ ಸೆರೆಹಿಡಿದರು.
ಜನಾಕರ್ಷಿಸಿದ ಕರಗೋತ್ಸವ
ಉತ್ಸವಗಳ ಜೊತೆಗೆ ವಿಶೇಷ ಆಕರ್ಷಣೆಯಾಗಿ ಹೊಳೂರಿನಲ್ಲಿ ಹೊರುವ ಕರಗದ ಪೂಜಾರಿ ವೆಂಕಟೇಶ್ ರವರು ಕರಗ ಹೊತ್ತು ತಮಟೆಯ ವಾದಕ್ಕೆ ತಕ್ಕಂತೆ ಆಕರ್ಷಕ ನೃತ್ಯ ಮಾಡುವ ಮೂಲಕ ಜನರನ್ನು ವಿಶೇಷವಾಗಿ ಆಕರ್ಷಿಸಿತು.
ಪಟ್ಟಣದ ಕಟ್ಟೆಕೆಳಗಿನ ಪಾಳ್ಯ,ಸುಭಾಷ್ ರಸ್ತೆಯ ಭಜನೆಮನೆ ವೃತ್ತದಲ್ಲಿ ವಿಶೇಷವಾಗಿ ನಿರ್ಮಿಸಿದ್ದ ವೇದಿಕೆಯಲ್ಲಿ ಕರಗದ ನೃತ್ಯ ನಡೆಸಿಕೊಟ್ಟರು.
ರಾಯಲ್ಪಾಡು ಬಳಿಯಿರುವ ಆಂಧ್ರದ ಮೊಟಕು ಗ್ರಾಮದ ಪಿಳ್ಳಂಗೋವಿ ಪಂಡರಿ ಭಜನೆ ತಂಡದವರು ನಡೆಸಿದ ಜಾನಪದ ನೃತ್ಯ ಜನಮನ ಸೂರೆಗೊಂಡಿತು.