ಬೆಂಗಳೂರು:ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆಸಲ್ಲಿದ್ದ ಬಿ. ವೀರಪ್ಪನವರು ನಿವೃತ್ತರಾದ ಹಿನ್ನಲೆಯಲ್ಲಿ ಅವರನ್ನು ಬುಧವಾರ ಸಂಜೆ ಅವರನ್ನು ಬೆಂಗಳೂರು ವಕೀಲರ ಸಂಘ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಆತ್ಮೀಯತೆಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.ನ್ಯಾಯಮೂರ್ತಿ ಬಿ.ವೀರಪ್ಪ ಅವರಿಗೆ ಮೈಸೂರು ಪೇಟ ತೊಡಿಸಿ, ಕಂಚಿನ ವೆಂಕಟೇಶ್ವರ ಮೂರ್ತಿ ನೀಡಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸನ್ಮಾನಿಸಿದರು. ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಲೆ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಹಾಗು ಅಪಾರ ಸಂಖ್ಯೆಯಲ್ಲಿ ವಕೀಲರು ಪಾಲ್ಗೋಂಡಿದ್ದರು.
ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಮನುಷ್ಯನಿಗೆ ಉನ್ನತ ಅವಕಾಶಗಳು ಸಿಕ್ಕಾಗ ಆತ್ಮಸಾಕ್ಷಿಗೆ ತಕ್ಕಂತೆ ಕಾರ್ಯನಿರ್ವಹಿಸಿದಾಗ ಮಾತ್ರ ಬದುಕು ಸಾರ್ಥಕ ಆಗುತ್ತದೆ ಅದೆ ರಿತಿಯಲ್ಲಿ ಉತ್ತಮ ನ್ಯಾಯದಾನದ ಮೂಲಕ ನ್ಯಾಯಮೂರ್ತಿ ಬಿ.ವೀರಪ್ಪ ಅವರು ತಮ್ಮ ಬದುಕು ಮತ್ತು ವೃತ್ತಿಯನ್ನು ಸಾರ್ಥಕಗೊಳಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಬಿ.ವೀರಪ್ಪ ಅವರು ಮುಖ್ಯ ನ್ಯಾಯಮೂರ್ತಿ ಆಗುವಾಗಲೂ ನಾನೆ ಮುಖ್ಯಮಂತ್ರಿ ಆಗಿದ್ದೆ. ಈಗ ಅವರ ನಿವೃತ್ತಿ ಸಂದರ್ಭದಲ್ಲೂ ನಾನು ಮುಖ್ಯಮಂತ್ರಿ ಆಗಿರುವುದು ಇದೊಂದು ಸುಸಂದರ್ಭ ಎಂದರು.
ಜನರ ಸಂಕಷ್ಟಗಳನ್ನು ಹತ್ತಿರದಿಂದ ಬಲ್ಲವರು ಆ ಬಗ್ಗೆ ಸಹಾನುಭೂತಿ ಇದ್ದವರಿಗೆ ಮಾತ್ರ ಸಮಾಜಮುಖಿಯಾಗಿರಲು ಸಾಧ್ಯವಾಗುತ್ತದೆ ಅಂತಹವರ ಸಾಲಿನಲ್ಲಿ ನ್ಯಾಯಮೂರ್ತಿ ಬಿ.ವೀರಪ್ಪ ನಿಲ್ಲುತ್ತಾರೆ ಅವರ ದಕ್ಷತೆ, ಪ್ರಾಮಾಣಿಕತೆಗೆ ವಕೀಲ ಸಮೂಹದ ಪ್ರೀತಿಯನ್ನೂ ಗಳಿಸಿದ್ದರು ಎನ್ನುವುದಕ್ಕೆ ಇಲ್ಲಿ ಸೇರಿರುವ ಅಪಾರ ವಕೀಲ ಸಮೂಹವೇ ಸಾಕ್ಷಿ ಎಂದರು.
ಬಿ.ವೀರಪ್ಪ ಅವರು ಈ ದೃಷ್ಟಿಯಲ್ಲಿ ಮೌಲ್ಯಯುತವಾದ ತೀರ್ಪುಗಳನ್ನು ನೀಡಿದ್ದಾರೆ. ಬಡವರ ದುರ್ಬಲ ವರ್ಗದವರ ಬಗ್ಗೆ ನ್ಯಾಯಮೂರ್ತಿ ಬಿ.ವೀರಪ್ಪ ಇದ್ದ ಆದರ್ಶ ಕಿರಿಯ ವಕೀಲರಿಗೆ ಮಾದರಿ ಆಗಬೇಗಿದೆ ನಿವೃತ್ತಿಯ ನಂತರವೂ ಅವರು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿ,ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ವಕೀಲ ಸಮೂಹ ವಕೀಲ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟಿಸಿದ್ದರು. ಆ ಪ್ರತಿಭಟನೆಗೆ ನಾನೂ ಬೆಂಬಲ ಸೂಚಿಸಿ ವಿಧಾನಸಭೆಯಲ್ಲಿ ವಕೀಲ ಸಮೂಹದ ಪರವಾಗಿ ಧ್ವನಿ ಎತ್ತಿದ್ದೆ. ಈಗ ನಾವೇ ಅಧಿಕಾರಕ್ಕೆ ಬಂದಿದ್ದೇವೆ. ಈಗ ಈ ಕಾಯ್ದೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ನಾವು ಬದ್ಧವಾಗಿದ್ದೇವೆ.”ವಕೀಲರ ವಿಮೆ ಯೋಜನೆ”ಯನ್ನೂ ಜಾರಿಗೆ ತರುವ ಬಗ್ಗೆ ಸಮಗ್ರವಾಗಿ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನ್ಯಾಯಮೂರ್ತಿ ಬಿ.ವೀರಪ್ಪನವರು ನನ್ನ ಕರ್ತವ್ಯವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂಟು ಮುಖ್ಯಮಂತ್ರಿಗಳು, ಎಂಟು ಅಡ್ವೊಕೇಟ್ ಜನರಲ್ ಅವರಗಳ ಅಡಿ ಕೆಲಸ ಮಾಡಿದ್ದು, ಐವರು ಮುಖ್ಯ ನ್ಯಾಯಮೂರ್ತಿಗಳ ಮುಂದೆ ವಾದಿಸಿದ್ದೇನೆ,2021ರ ಅಕ್ಟೋಬರ್ 13 ರಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್ಎಲ್ಎಸ್ಎ) ಕಾರ್ಯಕಾರಿ ಅಧ್ಯಕ್ಷರಾಗಿ ಆರು ಲೋಕ ಅದಾಲತ್ ನಡೆಸಿ 1.08 ಕೋಟಿ ಪ್ರಕರಣಗಳನ್ನು ಇತ್ಯರ್ಥಪಡಿಸಿದ ಹೆಮ್ಮೆ ನನ್ನದು. ನ್ಯಾಯಾಂಗ ಸೇವೆಯಲ್ಲಿರುವ ಅಧಿಕಾರಿಗಳನ್ನು ನಾನು ಯಾವಾಗಲೂ ನ್ಯಾಯಾಂಗದ ಸೈನಿಕರು ಎಂದು ಸಂಭೋದಿಸುತ್ತೇನೆ. ಅವರ ಸಹಕಾರದಿಂದ ಈ ಕೆಲಸ ಸಾಧ್ಯವಾಗಿದೆ ಎಂದು ಬಿ.ವೀರಪ್ಪ ಸ್ಮರಿಸಿದರು. ನ್ಯಾಯಮೂರ್ತಿ ಆದಾಗ ಆದ ಖುಷಿಗಿಂತ ಈಗ ಹೆಚ್ಚು ಖುಷಿ ಆಗ್ತಿದೆ. ಚಿಕ್ಕವನಿದ್ದಾಗ ತಂಬೂರಿಯವನು ನಮ್ಮ ತಾಯಿ ಬಳಿ ಭವಿಷ್ಯ ಹೇಳಿದ್ದ. ನಿನ್ನ ಮಗ ಬಹಳ ತಲೆಹರಟೆ ಇದ್ದಾನೆ, ಮುಂದೆ ಕಷ್ಟ ಅಂತ ಹೇಳಿದ್ದ. ಆಗ ತಂಬೂರಿ ಮಾತು ಕೇಳಿ ನನ್ನ ತಾಯಿ ಕಣ್ಣೀರು ಹಾಕಿದ್ರು.ನಾನು ತಂಬೂರಿ ಒಡೆದು ಹಾಕಿದ್ದೆ. 40 ವರ್ಷದ ಹಿಂದೆ ಬೆಂಗಳೂರಿಗೆ ಬಂದಾಗ ನಾನು ಅಪರಿಚಿತ. ಇಂದು 7 ಕೋಟಿ ಕನ್ನಡಿಗರು ನನ್ನವರು ಎಂದು ಹೆಮ್ಮೆಯಿಂದ ಹೇಳಲು ಬಯಸುತ್ತೇನೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ ನ್ಯಾಯುಮೂರ್ತಿ ವೀರಪ್ಪ ಅವರು ಸುಮಾರು 20 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿ ದಾಖಲೆ ನಿರ್ಮಾಣ ಮಾಡಿದ್ದಾರೆ. ಅನೇಕ ಐತಿಹಾಸಿಕ ತೀರ್ಪುಗಳನ್ನು ನೀಡಿದ್ದಾರೆ.
ಶ್ರದ್ಧೆ, ಕೃತಿ, ಆತ್ಮಸಾಕ್ಷಿ ಹಾಗೂ ಅನುಭವದ ಗುಣಗಳನ್ನು ವೀರಪ್ಪ ಅವರು ಹೊಂದಿದ್ದಾರೆ. ಅನುಭವದ ಜತೆಗೆ ಆತ್ಮಸಾಕ್ಷಿಯಿಂದ ತೀರ್ಪು ನೀಡಿ ಸಮಾಜದ ಹೃದಯ ಗೆದ್ದಿದ್ದಾರೆ.
ನ್ಯಾ.ವೀರಪ್ಪ ಅವರು ಜೈಲುಗಳಿಗೆ ಹೋಗಿ ಖೈದಿಗಳ ಜೊತೆ ಊಟ ಮಾಡಿ ಅವರ ಮನಃ ಪರಿವರ್ತನೆ ಮಾಡಿದ್ದನ್ನೂ ನೋಡಿದ್ದೇವೆ. ಜತೆಗೆ ಅಲ್ಲಿ ಖೈದಿಗಳ ಬಳಿ ‘ನಿಮ್ಮನ್ನು ನೋಡಿ ವಿಧಾನಸೌಧದಲ್ಲಿರುವವರು ಕಲಿಯುವುದಿದೆ’ ಎಂದು ಹೇಳಿದ್ದನ್ನು ನೋಡಿದ್ದೇವೆ.
ನಾವು ಜೀವನದಲ್ಲಿ ಯಶಸ್ಸು ಕಾಣಬೇಕಾದರೆ, ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಅರ್ಜುನನ ಗುರಿ, ಭೀಮನ ಬಲ, ವಿಧುರನ ನೀತಿ ಹಾಗೂ ಕೃಷ್ಣನ ತಂತ್ರ ಇರಬೇಕು. ಇದೆಲ್ಲವೂ ನ್ಯಾ.ವೀರಪ್ಪ ಅವರಲ್ಲಿದೆ. ಅದಕ್ಕೆ ಅವರು ಯಶಸ್ಸು ಸಾಧಿಸಿದ್ದಾರೆ.
ನ್ಯಾ.ವೀರಪ್ಪ ಅವರು ತಮ್ಮ ಜೀವನದಲ್ಲಿ ಕೊಟ್ಟಿರುವ ತೀರ್ಪುಗಳು ಸಮಾಜದಲ್ಲಿ ಹಲವರ ಬಾಳಿನಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ ಎಂದರು.
ಸಮಾರಂಬದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು,ನ್ಯಾಯಮೂರ್ತಿ ಬಿ.ವೀರಪ್ಪಕುಟುಂಬದ ಸದಸ್ಯರು ಇತರೆ ಗಣ್ಯರು ಹಾಜರಿದ್ದರು.
ಯಾರು ಈ ನ್ಯಾಯಮೂರ್ತಿ ಬಿ.ವೀರಪ್ಪ?
ನ್ಯಾಯಮೂರ್ತಿ ಬಿ.ವೀರಪ್ಪ ಶ್ರೀನಿವಾಸಪುರದ ಹೆಮ್ಮೆಯ ಪುತ್ರ,ತಾಲೂಕಿನ ನಾಗದೇನಹಳ್ಳಿಯ ಸಾಮಾನ್ಯ ರೈತಾಪಿ ಕುಟುಂಬದ ದಿವಂಗತ ಬೈರೆಡ್ಡಿ ಅವರ ಪುತ್ರ,ಅವಿಭಕ್ತ ಕುಟುಂಬದ ಹಿರಿಯ ಮಗನಾಗಿ ಜೂನ್ 1, 1961 ರಂದು ಜನಿಸಿದ ಅವರು ಶ್ರೀನಿವಾಸಪುರದ ನಾಗದೇನಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಶ್ರೀನಿವಾಸಪುರ ಪಟ್ಟಣದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(PWD ಕಚೇರಿ ಪಕ್ಕದಲ್ಲಿರುವ)ಯಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣ ನಂತರ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿ.ಯು ಶಿಕ್ಷಣ,ಮುಗಿಸಿ ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಪದವಿ ಮತ್ತು ಬೆಂಗಳೂರಿನ ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಎಲ್.ಎಲ್.ಬಿ. ಮಾಡುತ್ತಾರೆ ನಂತರದಲ್ಲಿ ಕುಟುಂಬದ ಹಿರಿಯ ಮಗನಾಗಿ ಒಟ್ಟು ಕುಟುಂಬದ ಜವಾಬ್ದಾರಿ ಹೊತ್ತು 1988 ರಲ್ಲಿ ಬೆಂಗಳೂರಿನ ಹಿರಿಯ ವಕೀಲರಾದ ಪ್ರೊ.ಎಂ.ಎಸ್.ಗೋಪಾಲ್ ಅವರ ಬಳಿ ಸಹಾಯಕನಾಗಿ ವಕೀಲಿ ಜೀವನ ಶುರುಮಾಡಿದ ಅವರು ತಮ್ಮ ಕಠಿಣ ಪರಿಶ್ರಮದಿಂದ 27 ವರ್ಷಗಳ ಕಾಲ ವಕೀಲರಾಗಿ ದುಡಿಯುತ್ತಾರೆ, ಆನಂತರ 01.07.1995 ರಂದು ಸರ್ಕಾರಿ ಪ್ಲೀಡರ್ ಆಗಿ ನೇಮಕ ಮತ್ತು 15.09.2000 ರವರೆಗೆ ಮತ್ತು 25.05.2005 ರಂದು ಹೆಚ್ಚುವರಿ ಸರ್ಕಾರಿ ವಕೀಲರಾಗಿ ಕಾರ್ಯನಿರ್ವಹಿಸುತ್ತಾರೆ. ಆನಂತರದಲ್ಲಿ ಕರ್ನಾಟಕದ ಹೈಕೊರ್ಟ್ ನ್ಯಾಯಮೂರ್ತಿಯಾಗಿ ಬಿ.ವೀರಪ್ಪನವರು ಸತತ 8 ವರ್ಷ 5 ತಿಂಗಳ ಕಾಲ ಸೇವೆ ಸಲ್ಲಿಸಿದ್ದಾರೆ.ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ರದ್ದು ಮಾಡಿ ಭ್ರಷ್ಟಾಚಾರ ನಿಗ್ರಹ ದಳವನ್ನು ಜಾರಿಗೆ ತಂದಿದ್ದರು ಅದನ್ನು ಕಳೆದ ವರ್ಷ ರದ್ದುಗೊಳಿಸಿದ ನ್ಯಾಯಮೂರ್ತಿ ಬಿ.ವೀರಪ್ಪನವರು ಮತ್ತೆ ಲೋಕಾಯುಕ್ತ ಸಂಸ್ಥೆಯನ್ನು ಪುನರ್ ಪ್ರತಿಷ್ಟಾಪನೆ ಮಾಡಿರುತ್ತಾರೆ.ನ್ಯಾಯಮೂರ್ತಿಯಾಗಿ ಬಿ.ವೀರಪ್ಪನವರ ಕಾರ್ಯಶೈಲಿ ಕರ್ನಾಟಕದ ನ್ಯಾಯಂಗ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣವಾಗಿದ್ದರೆ ಅವರ ಪ್ರೇರಣಾತ್ಮಕ ಮಾತುಗಳು ಜೈಲಲ್ಲಿ ಇರುವಂತ ಖೈದಿಗಳ ಮನಃ ಪರಿವರ್ತನೆಗೆ ಕಾರಣವಾಗಿದೆ ಜೈಲಿನ ಆಡಳಿತ ಶೈಲಿ ಬದಲಾವಣಗೆ ನಾಂದಿ ಹಾಡಿದ್ದಾರೆ. ಅವರ ಕಾರ್ಯ ಶೈಲಿಯಿಂದ ಕರ್ನಾಟಕದ ಜನರು ಮೆಚ್ಚುವಂತೆ ಮನೆ ಮಾತಾಗಿದ್ದಾರೆ.