ಶ್ರೀನಿವಾಸಪುರ:ಅರಣ್ಯ ಒತ್ತುವರಿ ವಿಚಾರವಾಗಿ ಶನಿವಾರ ಸಂಸದ ಮುನಿಸ್ವಾಮಿ ಪ್ರಚೋದನೆ ಮಾತುಗಳ ಪರಿಣಾಮ ಶನಿವಾರ ರಾತ್ರಿ ಹಲವರ ಬಂಧನಕ್ಕೆ ಕಾರಣವಾದರೆ,ಇನ್ನೊಂದಡೆ ರಾಜ್ಯ ಬಿಜೆಪಿ ಮುಖಂಡರು ಶ್ರೀನಿವಾಸಪುರಕ್ಕೆ ಆಗಮಿಸುತ್ತಾರೆ ಎಂಬೆಲ್ಲಾ ಉಹಾಪೋಹಗಳಿಂದ ಇಂದು ಭಾನುವಾರ ಇಡಿ ದಿನ ರಾಜಕೀಯ ಹೈಡ್ರಾಮಕ್ಕೆ ಕಾರಣವಾಯಿತು. ತಾಲೂಕಿನಲ್ಲಿ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ಅರಣ್ಯ ಭೂಮಿ ಒತ್ತುವರಿ ವಿಚಾರವಾಗಿ ಸಂಸದ ಮುನಿಸ್ವಾಮಿ ಧೀಡಿರ್ ಶನಿವಾರ ಶ್ರೀನಿವಾಸಪುರಕ್ಕೆ ಆಗಮಿಸಿ ಒತ್ತುವರಿ ತೆರವು ದಾರರ ಪರವಾಗಿ ಮಾತನಾಡಿದಲ್ಲದೆ ಸಾರ್ವಜನಿಕವಾಗಿ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಚರಣೆ ವಿರುದ್ದ ಪ್ರಚೋದಾತ್ಮಕ ಭಾಷಣ ಮಾಡಿ ಜನರು ರೊಚ್ಚಿಗೆದ್ದು ತೆರವು ಕಾರ್ಯದಲ್ಲಿದ್ದ ಅರಣ್ಯ ಇಲಾಖೆ ಜೆಸಿಬಿಗಳ ಮೇಲೆ ಕಲ್ಲೂ ತೂರಾಟ ನಡೆಸಿದ್ದು ಸ್ಥಳದಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣವಾಗಿ ಪೋಲಿಸರು ಆಗಮಿಸಿ ಪರಿಸ್ಥಿತಿ ತಹಬಂದಿಗೆ ತಂದಿದ್ದರು, ಇದರ ಅಧಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಜೆಸಿಬಿಗಳ ಮೇಲೆ ಕಲ್ಲು ತೂರಾಟ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಶನಿವಾರ ತಡ ರಾತ್ರಿ ಹಲವರನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದಲ್ಲದೆ ಜನರಿಗೆ ಪ್ರಚೋದನೆ ನೀಡಿದರು ಹಾಗು ಅವಲಕುಪ್ಪ ಅರಣ್ಯ ಪ್ರದೇಶದಲ್ಲಿರುವ ಅರಣ್ಯ ಇಲಾಖೆ ಸಸ್ಯಕ್ಷೇತ್ರದ ಮೇಲೆ ಜನರೊಂದಿಗೆ ತೆರಳಿ ದಾಂದಲೆ ಮಾಡಿದರು ಎಂದು ಸಂಸದ ಮುನಿಸ್ವಾಮಿ ವಿರುದ್ದವೂ ಪ್ರಕರಣ ದಾಖಲಾಗಿದೆ ಎಂದು ಎಸ್.ಪಿ ನಾರಯಣ್ ತಿಳಿಸಿದ್ದು ಇದುವರಿಗೂ ಸುಮಾರು ಹದಿನೈದು ಜನರನ್ನು ವಶಕ್ಕೆ ಪಡೆದುಕೊಂಡಿದ್ದು ಇನ್ನೂ ಹಲವರು ತಲೆ ಮರೆಸಿಕೊಂಡಿದ್ದು ಅವರನ್ನು ಸಹ ಶೀಘ್ರದಲ್ಲಿ ಬಂಧಿಸಲಾಗುವುದು ಎಂದಿರುತ್ತಾರೆ.
ವಿಷ ಸೇವಿಸಿದ ಮಹಿಳೆಯರು
ಅರಣ್ಯ ಭೂಮಿ ಒತ್ತುವರಿ ತೆರವು ಹಿನ್ನಲೆ ಹಾಗು ತಮ್ಮ ಪತಿಯಂದರ ವಿರುದ್ದ ಪೋಲಿಸ್ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಇಬ್ಬರು ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ನಡೆದಿದ್ದು,ತಾಲೂಕಿನ ಪಾಳ್ಯ ಗ್ರಾಮದ ಕಾಂಗ್ರೆಸ್ ಮುಖಂಡ ಗೋಪಾಲರೆಡ್ಡಿಯವರ ಪತ್ನಿ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷೆ ಶ್ಯಾಮಲ ಹಾಗು ರೋಣೂರು ಹೋಬಳಿಯ ನಾರಮಾಕಲಹಳ್ಳಿ ಗ್ರಾಮದ ಪಾರ್ವತಮ್ಮ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿ ಪ್ರಾಣಪಯದಿಂದ ಬದುಕುಳಿದು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಪೋಲಿಸ್ ಠಾಣೆಗೆ ಪೋಲಿಸ್ ಸರ್ಪಗಾವಲು
ಅರಣ್ಯ ಭೂಮಿ ತೆರವು ಸಂತ್ರಸ್ತರನ್ನು ಸಂತೈಸಲು ರಾಜ್ಯ ಬಿಜೆಪಿ ಮುಖಂಡರು ಮಾಜಿ ಸಚಿವರು ಶ್ರೀನಿವಾಸಪುರಕ್ಕೆ ಆಗಮಿಸುತ್ತಾರೆ ಹಾಗು ಸಂಸದ ಮುನಿಸ್ವಾಮಿ ವಿರುದ್ದ ಪೋಲಿಸ್ ಇಲಾಖೆಯಲ್ಲಿ ದಾಖಲಾಗಿರುವ ಪ್ರಕರಣದ ವಿರುದ್ದ ಸಂಸದರ ಅಭಿಮಾನಿಗಳು ಹಾಗು ಅರಣ್ಯ ಭೂಮಿ ತೆರವು ಸಂತ್ರಸ್ತರು ಪೋಲಿಸ್ ಠಾಣೆಗೆ ಮುತ್ತಿಗೆ ಹಾಕುತ್ತಾರೆ ಎಂಬ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೋಲಿಸ್ ಇಲಾಖೆ ನೂರಾರು ಸಂಖ್ಯೆಯಲ್ಲಿ ರಾಜ್ಯ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಜಿಲ್ಲೆಯ ವಿವದಡೆ ಕಾರ್ಯನಿರ್ವಹಿಸುತ್ತಿರುವ ಸಿವಿಲ್ ಪೋಲಿಸರನ್ನು ಬಂದೋ ಬಸ್ತ್ ಡ್ಯೂಟಿಗೆ ನಿಯೋಜಿಸುವ ಮೂಲಕ ಪೋಲಿಸ್ ಠಾಣೆಗೆ ಪೋಲಿಸ್ ಸರ್ಪಗಾವಲು ಹಾಕಲಾಗಿತ್ತು. ಖುದ್ದು ಜಿಲ್ಲಾ ಎಸ್.ಪಿ ನಾರಯಣ್ ಶ್ರೀನಿವಾಸಪುರದಲ್ಲಿ ಮೊಕ್ಕಾಂ ಹೂಡಿ ಬಂದೋ ಬಸ್ತ್ ಉಸ್ತುವಾರಿ ವಹಿಸಿಕೊಂಡಿದ್ದರು.
ಪಟ್ಟಣದಲ್ಲಿ ಪೋಲಿಸ್ ಪರೇಡ್
ಸಂಜೆ ಶ್ರೀನಿವಾಸಪುರ ಪಟ್ಟಣದಲ್ಲಿ ಎಸ್.ಪಿ.ನಾರಯಣ್ ಪೋಲಿಸ್ ಪರೇಡ್ ನಡೆಸುವ ಮೂಲಕ ಯಾವುದೆ ಅಹಿತಕರ ಘಟನೆಗೆ ಪೋಲಿಸರು ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಸಾರ್ವಜನಿಕವಾಗಿ ರವಾನಿಸಿದರು.