ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದಲ್ಲಿ ಗಣೇಶೋತ್ಸವ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ,ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಭವ್ಯ ಮಂಟಪಗಳನ್ನು ನಿರ್ಮಿಸಿ ತಳಿರು-ತೋರಣ, ಕೇಸರಿ ವಸ್ತ್ರ ಸೇರಿದಂತೆ ವಿವಿಧ ಪುಷ್ಪಗಳಿಂದ ಸಿಂಗರಿಸಿ ಅದರೊಳಗೆ ಗಣಪತಿಗಳನ್ನು ಕೂರಿಸಿರುವ ಆ ಭಾಗದ ಯುವಕರು ಗಣಪತಿ ಮೂರ್ತಿಯನ್ನು ವೈಭವವಾಗಿ ಸಾರ್ವತ್ರಿಕವಾಗಿ ಪೂಜಿಸುವ ಮೂಲಕ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಭಾವೈಕ್ಯತೆಯಿಂದ ಗಣೇಶೋತ್ಸವ ಆಚರಿಸಿ ಭಕ್ತಿಭಾವ ಮೆರೆದಿದ್ದಾರೆ.
ವೆಂಕಟೇಶ್ವರ ಬಡಾವಣೆಯ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ 26 ವರ್ಷದ ವಾರ್ಷಿಕೊತ್ಸವದ ಅಂಗವಾಗಿ ಗಣೇಶ ಬಾಲಗೋಪಾಲನೊಂದಿಗೆ ಕುಳಿತ ಭಂಗಿಯ ಬೃಹದಾಕಾರದ ಗಣೇಶನನ್ನು ಕೂರಿಸಿ ಸಂಭ್ರಮದ ಗಣೇಶೋತ್ಸವ ಆಚರಿಸಿದರು.
ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಪಟ್ಟಣದಲ್ಲಿ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿರುವ ರಾಮಕೃಷ್ಣಾ ಬಡಾವಣೆಯ ವಿನಾಯಕ ಗೆಳೆಯರ ಬಳಗದವರು ಚೈತ್ರ ಮಿಲ್ ಮುಂಬಾಗದಲ್ಲಿ ನಿರ್ಮಿಸಿರುವ ಪೆಂಡಾಲನಲ್ಲಿ ಮೂಷಿಕವಾಹನ ಗಣಪತಿ ಮೂರ್ತಿಯನ್ನು ಪ್ರತಿಷ್ಟಾಪಿಸಿ ಭಕ್ತಿ ಭಾವದಿಂದ ಪೂಜಿಸಿರುತ್ತಾರೆ.
ವಿಜಯಲಕ್ಷ್ಮಿ ರಸ್ತೆಯಲ್ಲಿ ಭಜರಂಗಿ ಯೂತ್ಸ್ ಯುವಕರು ಅತ್ಯಂತ ಸಂಭ್ರಮದಿಂದ ಈ ವರ್ಷ ಗಣೇಶೋತ್ಸವ ಆಚರಣೆ ಮಾಡಿದ್ದು ಮೂರು ದೊಡ್ಡಗಾತ್ರದ ಗಣೇಶ ಮೂರ್ತಿಗಳನ್ನು ಸ್ಥಾಪಿಸಿದ್ದಾರೆ ಮೂಲಗಣಪತಿ ಎತ್ತರವಾಗಿದ್ದರೆ ಮತ್ತೊಂದು ಮೂಷಿಕಾಸುರನ ಸಂಹಾರ ಮಾಡುತ್ತಿರುವ ಗಣಪತಿಯಾದರೆ ಮತ್ತೊಂದು ಗಣಪತಿ ಮೂರ್ತಿಯೊಂದಿಗೆ ಶ್ರೀ ರಾಮ ಚಂದ್ರ ಮೂರ್ತಿ ಜೊತೆಯಾಗಿರುವ ವಿಗ್ರಹ ಆಕರ್ಷಣಿಯವಾಗಿದೆ.
ಮಹಾತ್ಮಗಾಂಧಿ ರಸ್ತೆಯಲ್ಲಿನ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಶ್ರೀ ಆರ್ಯವೈಶ್ಯ ಯುವಕ ಸಂಘದ ಸಹಕಾರದೊಂದಿಗೆ ವಿಧ್ಯಾರ್ಥಿ ಗಣೇಶೋತ್ಸವ ಆಚರಿಸಿದ್ದು ಸುಂದರವಾದ ಮಣ್ಣಿನ ಮೂರ್ತಿ ಗಣೇಶನನ್ನು ಪ್ರಕೃತಿಯ ಅಡಿಯಲ್ಲಿ ಪ್ರತಿಷ್ಟಾಪಿಸಿ ಆರ್ಯ ವೈಶ್ಯ ಮಂಡಳಿ ಯುವಕರು ಪರಿಸರ ಸಂರಕ್ಷಣೆ ಸಂದೇಶ ರವಾನಿಸಿದ್ದಾರೆ.