ಶ್ರೀನಿವಾಸಪುರ:ಪಟ್ಟಣದಲ್ಲಿ ನೆಲೆಸಿರುವ ಶ್ರೀ ಗಣೇಶ ಹಾಗು ಶ್ರೀ ಸತ್ಯನಾರಯಣಸ್ವಾಮಿ ಸಮೇತ ಶ್ರೀವರದ ಬಾಲಂಜನೇಯ ದೇವಾಲಯದ ಬ್ರಹ್ಮರಥೋತ್ಸವವು ಸೋಮವಾರ ಕಾಮನಹುಣ್ಣಿಮೆ ಅಥಾವ ಹೋಳಿಹುಣ್ಣಿಮೆಯಂದು ಭಕ್ತ ಸಾಗರದ ನಡುವೆ ಸಂಭ್ರಮ ಸಡಗರದಿಂದ ನೇರವೇರಿತು.
ಪ್ರತಿ ವರ್ಷ ಪಾಲ್ಗುಣ ಮಾಸದ ಹೋಳಿಹುಣ್ಣಿಮೆಯಂದು ಬ್ರಹ್ಮರಥೋತ್ಸವ ನಡೆಯುತ್ತದೆ. ಅದರಂತೆ ಸೋಮವಾರ ನಡೆದ ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಕ್ತಿ ಶ್ರದ್ದೆಯಿಂದ ಹನುಮಂತ ದೇವರಿಗೆ ಜೈಕಾರ ಹಾಕುತ್ತ ಗೋವಿಂದ ನಾಮಗಳನ್ನು ಹೇಳುತ್ತ,ಪರಂಪರೆಯಂತೆ ಬಾಳೆಹಣ್ಣು,ಧವನವನ್ನು ರಥಕ್ಕೆ ಎಸೆದು ರಥೋತ್ಸವದ ಮೆರಗನ್ನ ಹೆಚ್ಚಿಸಿ,ರಥವನ್ನು ಎಳೆದು ಧನ್ಯರಾದರು.ನಂತರದಲ್ಲಿ ಭಕ್ತರು ತೇರಿನ ಚಕ್ರಕ್ಕೆ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು.
ಮುಂಜಾನೆಯೆ ದೇವರ ಕೈಂಕರ್ಯ ಆರಂಭ
ಮುಂಜಾನೆಯೆ ದೇವಾಲಯದಲ್ಲಿ ಕಳಶ ಸ್ಥಾಪಿಸಿ ವೇದ ಮಂತ್ರ ಪಾರಾಯಣ ಮಾಡಿ ಮೂಲ ವಿಗ್ರಹಗಳಿಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕಾಧಿಗಳನ್ನು ನೇರವೇರಿಸಿ,ಕುಂಕುಮಾರ್ಚನೆ,ವಿಶೇಷ ಹೂವಿನ ಅಲಂಕಾರ ಹಾಗೂ ಆಭರಣ ಅಲಂಕಾರ ಮಾಡಲಾಗಿದ್ದು ಸರತಿ ಸಾಲಿನಲ್ಲಿ ಬಂದಂತ ಭಕ್ತರಿಗೆ ದೇವರ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.
ಭಾನುವಾರ ಸಂಜೆ ದೇವಾಲಯದ ಆವರಣದಲ್ಲಿ ನಡೆದ ಶ್ರೀ ಸೀತಾರಾಮರ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲೂ ಜನರು ಭಕ್ತಿಯಿಂದ ಪಾಲ್ಗೊಂಡಿದ್ದರು.ರಥಕ್ಕೆ ನೂತನ ವಸ್ತ್ರಗಳಿಂದ ಹಾಗೂ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರಿಗೆ ನೇತಾಜಿ ಚಾರಿಟಬಲ್ ಟ್ರಸ್ಟ್ ಬಳಗದಿಂದ ಸುಮಾರು ಇಪ್ಪತೈದು ಸಾವಿರ ಜನರಿಗೆ ಮೈಸೂರು ಪಾಕ್ ಉಚಿತವಾಗಿ ಹಂಚಿದರು.ಕೊಳ್ಳೂರು ಗ್ರಾಮಸ್ಥರು ಸರ್ವಜನಿರಿಗೆ ಊಟ ಹಾಗು ಮಜ್ಜಿಗೆ ವ್ಯವಸ್ಥೆ ಮಾಡಿದ್ದರು.
ಶಾಸಕ ವೆಂಕಟಶಿವಾರೆಡ್ಡಿ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ದೇವಾಲಯದ ಪ್ರಧಾನ ಅರ್ಚಕ ಅಶ್ವಥನಾರಯಣ ಶಾಸ್ತ್ರಿ ಹೂಮಾಲೆ ಹಾಕಿ ಸತ್ಕರಿಸಿದರು.
ಭರ್ಜರಿ ಪರಿಷೆ ವ್ಯಾಪಾರ
ರಥೋತ್ಸವದ ಅಂಗವಾಗಿ ನಡೆಯುವ ಜನ ಜಾತ್ರೆಯ ಪರಿಷೆಯಲ್ಲಿ ವಿವಿಧ ರಿತಿಯ ಅಂಗಡಿ ತೆರದಿದ್ದವು, ಹೂವು ಹಣ್ಣು ಸಿರಿತಿಂಡಿಗಳು ಸಿಹಿ ಅಂಗಡಿಗಳು ಪಾನಿಪುರಿ.ಜ್ಯೂಸ್, ಐಸ್ ಕ್ಯಾಂಡಿ ಮಳಿಗೆಗಳು ಸೇರಿದಂತೆ ಮಕ್ಕಳ ಅಟಿಕೆ ಅಂಗಡಿಗಳ ವ್ಯಾಪರಿಗಳಿಗೆ ಬಿರುಬಿಸಲಿನಲ್ಲೂ ಭರ್ಜರಿ ವ್ಯಾಪಾರ ನಡೆಯಿತು,