ಶ್ರೀನಿವಾಸಪುರ:ಕೋಲ್ಕತಾದ ಕೀರಿಯ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಪೈಶಾಚಿಕವಾಗಿ ಹತ್ಯೆ ಮಾಡಿದ ರಾಕ್ಷಸೀಯ ಘಟನೆ ಖಂಡಿಸಿ ಇಂದು ಶ್ರೀನಿವಾಸಪುರದ ವೈದ್ಯರು ಪ್ರತಿಭಟನೆ ನಡೆಸಿದರು.
ಪಶ್ಚಿಮ ಬಂಗಾಳದ ಕೋಲ್ಕತಾ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿರುವ ಟ್ರೈನಿ ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಬರ್ಬರ ಕೊಲೆಯನ್ನು ಖಂಡಿಸಿ ಇಂದು ತಾಲೂಕು ಭಾರತೀಯ ವೈದ್ಯಕೀಯ ಸಂಘ ಮುಷ್ಕರ ನಡೆಸಿತು ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆವರೆಗೆ 24 ಗಂಟೆಗಳ ಕಾಲ ತುರ್ತು ವೈದ್ಯಕೀಯ ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಬಂದ್ ಮಾಡಿದ ಶ್ರೀನಿವಾಸಪುರ ತಾಲೂಕಿನ ಖಾಸಗಿ ಹಾಗು ಸರ್ಕಾರಿ ಆಸ್ಪತ್ರೆಗಳವರು ಆರೋಗ್ಯಸಿಬ್ಬಂದಿ ಮತ್ತು ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೋಂಡಿದ್ದರು.
ಈ ಸಂದರ್ಬದಲ್ಲಿ ತಾಲೂಕು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ವೆಂಕಟಾಚಲ ಮಾತನಾಡಿ ಕೊಲ್ಕತ್ತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಹತ್ಯೆಮಾಡಿರುವುದು ಅತ್ಯಂತ ಹೇಯ ಕೃತ್ಯ ಮುಂದಿನ ದಿನಗಳಲ್ಲಿ ಆಸ್ಪತ್ರೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಬೇಕು,ವೈದ್ಯಕೀಯ ಕ್ಷೇತ್ರದಲ್ಲೂ ರಕ್ಷಣೆ ಇಲ್ಲದೆ ಕೆಲಸ ಮಾಡುವುದು ಸಾಧ್ಯವಾಗುವುದಿಲ್ಲ ವೈದ್ಯರ ಹಾಗು ವೈದ್ಯಕೀಯ ಸಿಬ್ಬಂದಿಗೆ ಸಮಾಜ ಭದ್ರತೆ ನೀಡುವ ಬಗ್ಗೆ ಭರವಸೆ ನೀಡಬೇಕಿದೆ ಎಂದು ಹೇಳಿದರು.
ಕಾರ್ಯದರ್ಶಿ ಡಾ.ವೆಣುಗೋಪಾಲ್ ಮಾತನಾಡಿ ಆರ್ಜಿ ಕರ್ ಆಸ್ಪತ್ರೆಯ ಆವರಣದಲ್ಲಿ ನಡೆದ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಶೀಘ್ರವಾಗಿ ಗುರುತಿಸಿ ಕಠಿಣ ಶಿಕ್ಷೆ ನೀಡಬೇಕು. ನಿರ್ದಿಷ್ಟ ಕಾಲಾವಧಿಯಲ್ಲಿ ನ್ಯಾಯೋಜಿತವಾದ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಲ್ಲ ಆಸ್ಪತ್ರೆಗಳಲ್ಲೂ ಭದ್ರತೆ ನೀಡಬೇಕು ಆಸ್ಪತ್ರೆಗಳನ್ನು ಸುರಕ್ಷಿತ ವಲಯ ಎಂದು ಘೋಷಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಕಟ್ಟುನಿಟ್ಟಾಗಿ ಸಿಸಿಟಿವಿ ಕ್ಯಾಮೆರಾಗಳು, ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಪಟ್ಟಣದಾದ್ಯಂತ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿ ಧರಣಿ ನಡೆಸಿ ತಾಲ್ಲೂಕು ದಂಡಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ವೈದ್ಯರಿಂದ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಡಾ.ದೇವಕುಮಾರ್, ತಾ.ವೈದ್ಯಾಧಿಕಾರಿ ಡಾ.ಷರೀಫ್, ಡಾ.ಚಂದ್ರಕಳಾ ,ಡಾ.ಮಂಜು, ಡಾ.ಕಿರಣ್, ಡಾ.ನಂದೀಶ್ ಸೇರಿದಂತೆ ಹಲವಾರು ವೈದ್ಯರು ಬಾಗಿಯಾಗಿದ್ದರು.