ನ್ಯೂಜ್ ಡೆಸ್ಕ್:ಬಹುತೇಕ ನಾಸ್ತಿಕರು ತಿರುಪತಿಗೆ ಹೋಗುತ್ತಾರೆ ತಿರುಮಲ ಬೆಟ್ಟಕ್ಕೆ ಹತ್ತಿಹೋಗುತ್ತಾರೆ ಇನ್ನು ಕೆಲವರು ಬಸ್ಸಿನಲ್ಲೊ ಅನಕೂಲವಂತರು ಕಾರಲ್ಲೋ ಹೋಗಿ ಶ್ರೀ ನಿಲಯದಲ್ಲಿ ಶ್ರೀ ವೆಂಕಟೇಶ್ವರನ ದರ್ಶನ ಮಾಡಿಕೊಂಡು ವಾಪಸ್ಸು ಆಗುವುದು ಸಾಮಾನ್ಯ ಆಗುತ್ತಿದೆ.ಒಂದು ಕಾಲದಲ್ಲಿ ಕಾಶಿ ಆಯೋದ್ಯ ರಾಮೇಶ್ವರಕ್ಕೆ ಯಾತ್ರೆಗೆ ಹೊಗುವಂತೆ ಮೂರನಾಲ್ಕು ದಿನಗಳ ತಿರುಪತಿ ಪುಣ್ಯಕ್ಷೇತ್ರಕ್ಕೆ ಹೋಗಿ ಶ್ರೀ ವೇಂಕಟೇಶ್ವರ ದರ್ಶನ ಮಾಡಿಕೊಂಡು ತಿರುಮಲ ಬೆಟ್ಟದ ಪ್ರಕೃತಿಯ ಹಸಿರು ಸೌಂದರ್ಯವನ್ನು ಸವಿದು ನಂತರ ತಿರುಪತಿ ಪಟ್ಟಣದಲ್ಲಿರುವ ಗೋವಿಂದರಾಜಸ್ವಾಮಿ ಅಲಮೇಲು ಮಂಗಾಪುರ ಸೇರಿದಂತೆ ವಿವಿಧ ದೇವಾಲಯಗಳ ದರ್ಶನ ಮಾಡಿಕೊಂಡು ಮೂರುನಾಲ್ಕು ದಿನಗಳ ಯಾತ್ರೆ ಮುಗಿಸಿ ಬರುತ್ತಿದ್ದ ಕಾಲವೊಂದಿತ್ತು ಈಗ ಎಲ್ಲವು ಬದಲಾಗಿದೆ ಬಿಝಿ ಲೈಫ್ ನಲ್ಲಿ ಕಾಲಕ್ಕೆ ತಕ್ಕಂತೆ ತಿರುಮಲ ಆನ್ ಲೈನ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ ತಿರುಮಲೇಶನ ದರ್ಶನ ಆಫಿಸ್ ವಿಸಿಟ್ ತರಹ ಆಗಿದೆ ಆನ್ ಲೈನ್ ಟಿಕೆಟ್ ಪಡೆದವರು ಅಪಾಯಿಂಟ್ ಮೆಂಟ್ ಪಡೆದವರಂತೆ ಟಿಕೆಟ್ ನಲ್ಲಿ ನೀಡಿದ ಸಮಯಕ್ಕೆ ಹೋಗಿ ದರ್ಶನ ಮುಗಿಸಿ ಆತುರ ಆತುರವಾಗಿ ತಮ್ಮ ಊರುಗಳಿಗೆ ದೇಶಗಳಿಗೆ ವಾಪಾಸ್ಸು ಆಗುತ್ತಿದ್ದಾರೆ ಇದರಿಂದ ತಿರುಮಲ ಬೆಟ್ಟ ಹಾಗು ತಿರುಪತಿ ನಗರದ ಬಹುತೇಕ ದೇವಾಲಯಗಳನ್ನು ಜನ ನೋಡುವುದನ್ನೆ ಬಿಟ್ಟಿದ್ದಾರೆ.
ತಿರುಪತಿ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀ ಕೋದಂಡ ರಾಮಾಲಯವು ವಿಶಾಲವಾದ ಪ್ರಾಂಗಣದಲ್ಲಿ ಆಕರ್ಷಕ ನಿರ್ಮಾಣವಾಗಿದೆ. ಈ ದೇವಸ್ಥಾನದ ಎದುರುಗಡೆ ಶ್ರೀ ಭಕ್ತಾಂಜನೇಯಸ್ವಾಮಿ ದೇವಸ್ಥಾನವಿದೆ. ಶ್ರೀರಾಮನು ಸೀತೆಯ ಹುಡುಕಾಟದಲ್ಲಿ ಯಶಸ್ವಿಯಾಗಲು ಶ್ರೀವಾರಿಯ ಪುಷ್ಕರಿಣಿಯಲ್ಲಿ ಸ್ನಾನ ಮಾಡಿದನೆಂದು ಮತ್ತು ರಾವಣಾಸುರನನ್ನು ಸಂಹರಿಸಿದ ನಂತರ ಶ್ರೀರಾಮಚಂದ್ರ ಅಯೋಧ್ಯೆಗೆ ಹೋಗದೆ ತನ್ನ ಪರಿವಾರದೊಂದಿಗೆ ತಿರುಪತಿಯನ್ನು ತಲುಪಿ ಇಲ್ಲಿ ವಿಶ್ರಾಂತಿ ಪಡೆದು ಇಲ್ಲಿನ ಪುಷ್ಕರಿಣಿಯಲ್ಲಿ ಸ್ನಾನ ಮಾಡಿದನೆಂದು ಸ್ಥಳಪುರಾಣ ಹೇಳುತ್ತದೆ.
ಶ್ರೀ ಕೋದಂಡರಾಮರ ದೇವಸ್ಥಾನದ ಆವರಣದಲ್ಲಿ ಸೀತಮ್ಮ ಕುಳಿತು ವಿಶ್ರಮಿಸಿದ ಅಶ್ವಥ ವೃಕ್ಷವನ್ನು ನಾವು ಇಂದಿಗೂ ಕಾಣಬಹುದು. ಅದಕ್ಕೆ ಸಾಕ್ಷಿಯಾಗಿ ಈ ದೇವಾಲಯದಲ್ಲಿ ಜಾಂಬವಂತ ವಿಗ್ರಹಗಳನ್ನು ಸ್ಥಾಪಿಸಿದ ಎಂಬುದಾಗಿ ನಂಬುತ್ತಾರೆ. ಪರೀಕ್ಷಿತ್ಮಹಾರಾಜರ ಸಾವಿಗೆ ಕಾರಣವಾದ ಸರ್ಪವನ್ನು ಸಂಪೂರ್ಣವಾಗಿ ಸಂಹಾರ ಮಾಡಬೇಕೆಂದುಕೊಂಡ ಜನಮೇಜಯ, ಆ ಪಾಪಕ್ಕೆ ಪ್ರಾಯಶ್ಚಿತ್ತವಾಗಿ 108 ಶಿವಾಲಯಗಳು ಮತ್ತು 108 ವೈಷ್ಣದೇವಾಲಯಗಳನ್ನು ನಿರ್ಮಿಸಿ ಸರ್ಪ ಬಲಿದಾನ ಮಾಡಿದನೆಂಬ ಪ್ರತೀತಿ ಇದೆ. ಈ ವೈಷ್ಣವ ದೇವಾಲಯಗಳಲ್ಲಿ ತಿರುಪತಿಯ ಶ್ರೀ ಕೋದಂಡರಾಮಾಲಯ ಒಂದು ಎಂದು ಹೇಳುತ್ತಾರೆ ಗರ್ಭಗುಡಿಯಲ್ಲಿ ಶ್ರೀರಾಮಚಂದ್ರಮೂರ್ತಿ ಶ್ರೀಕೋದಂಡರಾಮನಾಗಿ ಕೈಯಲ್ಲಿ ಖಡ್ಗ ಮತ್ತು ಬಾಣದೊಂದಿಗೆ ಕಾಣಿಸಿಕೊಳ್ಳುತ್ತಾರೆ ಸ್ವಾಮಿಯ ಎರಡೂ ಬದಿಯಲ್ಲಿ ಶ್ರೀ ಸೀತಾದೇವಿ ಮತ್ತು ಶ್ರೀ ಲಕ್ಷ್ಮಣದೇವರು ಇದ್ದು ಲಕ್ಷ್ಮಣ ಸಾಮಾನ್ಯವಾಗಿ ಶ್ರೀರಾಮನ ಬಲಭಾಗದಲ್ಲಿರುತ್ತಾರೆ ಮತ್ತು ಸೀತಾದೇವಿಯು ಎಡಭಾಗದಲ್ಲಿರುತ್ತಾರೆ. ಆದರೆ ಈ ದೇವಾಲಯದಲ್ಲಿ ಶ್ರೀ ಕೋದಂಡರಾಮ ಸ್ವಾಮಿ, ದಕ್ಷಿಣ ಭಾಗದಲ್ಲಿ ಸೀತಮ್ಮ ಮತ್ತು ಎಡಭಾಗದಲ್ಲಿ ಲಕ್ಷ್ಮಣದೇವರನ್ನು ಕಾಣಬಹುದಾಗಿದೆ.ವೈಖಾನಸ ಆಗಮಶಾಸ್ತ್ರದ ನಿಯಮದಂತೆ ಬಲಭಾಗದಲ್ಲಿನ ಸೀತಮ್ಮನ ದರ್ಶನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಪ್ರಾಚೀನ ಕಾಲದ ನಂಬಿಕೆ. ಬಹುತೇಕ ಶ್ರೀರಾಮರ ದೇವಾಲಯಗಳಲ್ಲಿ ಶ್ರೀರಾಮ ಪರಿವಾರ ಅಂದರೆ ಶ್ರೀರಾಮ ಸೀತಮ್ಮ ಲಕ್ಷ್ಮಣ ಶ್ರೀ ಅಂಜನೇಯ ಆದರೆ ಶ್ರೀ ಕೋದಂಡರಾಮನ ದೇವಸ್ಥಾನದಲ್ಲಿ ಆಂಜನೇಯನ ವಿಗ್ರಹ ಇಲ್ಲ ಅದಕ್ಕೂ ಒಂದು ಪುರಾಣ ಇದೆ ಎನ್ನುತ್ತಾರೆ ಲಂಕೆಯಲ್ಲಿ ರಾವಣನ ಸಂಹಾರದ ನಂತರ ಸೀತಾ ಲಕ್ಷ್ಮಣನ ವಾನರ ಸೇನೆಯೊಂದಿಗೆ ಶ್ರೀರಾಮನು ಇಲ್ಲಿಗೆ ಬಂದನು ಎಂಬುದು ಸ್ಥಳೀಯ ಐತಿಹ್ಯ ಅಗ ಶ್ರೀರಾಮರ ಜೊತೆ ಆಂಜನೇಯ ಇಲ್ಲಿಗೆ ಬಂದಿರಲಿಲ್ಲ.
ಶ್ರೀರಾಮಚಂದ್ರನು ಆಂಜನೇಯನಿಗೆ ಅಯೋಧ್ಯೆಯಲ್ಲಿರುವ ಭರತನಿಗೆ ತಾನು ರಾವಣಾಸುರನ ಮರಣದ ನಂತರ ಅಯೋಧ್ಯೆಗೆ ಹಿಂತಿರುಗುತ್ತಿರುವುದನ್ನು ತಿಳಿಸಲು ಆಜ್ಞಾಪಿಸಿದ್ದು ಶ್ರೀ ರಾಮನ ಆಜ್ಞೆಯಂತೆ ಆಂಜನೇಯನು ಲಂಕೆಯಿಂದ ನೇರವಾಗಿ ಅಯೋಧ್ಯೆಗೆ ಹೋಗಿದ್ದರಿಂದ ಆಂಜನೇಯನು ಶ್ರೀರಾಮ ಮತ್ತು ವಾನರ ಸೈನ್ಯದೊಂದಿಗೆ ಈ ಸ್ಥಳಕ್ಕೆ ಬರಲಿಲ್ಲವಾದ್ದರಿಂದ ಜಾಂಬವಂತ ಶ್ರೀರಾಮ, ಸೀತಾ ಮತ್ತು ಲಕ್ಷ್ಮಣನ ವಿಗ್ರಹಗಳನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿದ ಎನ್ನಲಾಗುತ್ತಿದೆ.
ಈ ದೇವಾಲಯವನ್ನು 10 ನೇ ಶತಮಾನದಲ್ಲಿ ಚೋಳರ ಅವಧಿಯಲ್ಲಿ ನಿರ್ಮಿಸಲಾಗಿದ್ದು ನಂತರ 1481 ನಲ್ಲಿ ಆಗಮ ಶಾಸ್ತ್ರದ ಪ್ರಕಾರ ನಿರ್ಮಿಸಿದ್ದು ತಿರುಮಲ ಶ್ರೀವೇಂಕಟೇಶ್ವರ ದೇವಾಲಯವನ್ನು ಹೋಲುತ್ತದೆ. ದೇವಾಲಯದ ವಾಸ್ತುಶೈಲಿಯನ್ನು ವಿಜಯನಗರ ಕಾಲದಲ್ಲಿ ಅಭಿವೃದ್ಧಿ ಮಾಡಲಾಗಿದ್ದು ಪ್ರತಿ ಕಂಬದ ಮೇಲೆ ಭಾಗವತ, ರಾಮಾಯಣ ಮತ್ತು ದೇವಾನು ದೇವತೆಗಳ ದೃಶ್ಯಗಳನ್ನು ಕೆತ್ತಲಾಗಿದೆ. ಕೋದಂಡ ರಾಮ ಸ್ವಾಮಿಯ ದೇವಸ್ಥಾನದ ರಾಜ ಗೋಪುರ ,ಗರ್ಭಗುಡಿಯ ದ್ವಾರಗಳು ಸ್ವರ್ಣ ಲೇಪಿತವಾಗಿದ್ದು, ಮೊದಲು ಜಯವಿಜಯರನ್ನು ದ್ವಾರಪಾಲಕರ ವಿಗ್ರಹಗಳು ಮತ್ತು ಪಂಚಬೇರಮೂರ್ತಿಗಳಿವೆ. ಈ ದೇವಾಲಯದ ಮುಖ್ಯ ಗೋಪುರದ ಎದುರು ಸ್ವಲ್ಪ ದೂರದಲ್ಲಿ ಶ್ರೀ ಆಂಜನೇಯ ಸ್ವಾಮಿಯ ಚಿಕ್ಕ ದೇವಾಲಯವಿದೆ. ಅದರ ಎದುರು ಆಂಜನೇಯ ಸ್ವಾಮಿಯ ಕಂಬವಿದೆ.
ಇಲ್ಲಿನ ವಿಶೇಷ ದಿನಗಳು
ಶ್ರೀ ರಾಮನವಮಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ ಅಂದು ನಡೆಯುವ ಹನುಮಂತ ವಾಹನ ಸೇವೆ ವಿಜೃಂಬಣೆಯಿಂದ ಕೂದಿರುತ್ತದೆ ನಂತರ ದಶಮಿಯಂದು ಶ್ರೀ ಸೀತಾ ರಾಮ ಕಲ್ಯಾಣಂ ಮತ್ತು ಏಕಾದಶಿಯಂದು ಶ್ರೀ ರಾಮರ ಪಟ್ಟಾಭಿಷೇಕ ಮಹೋತ್ಸವಗಳು ಪ್ರತಿ ವರ್ಷ ಮಾರ್ಚ್ ಅಥಾವ ಏಪ್ರಿಲ್ ತಿಂಗಳುಗಳಲ್ಲಿ ಒಂಬತ್ತು ದಿನಗಳ ಕಾಲ ವಾರ್ಷಿಕ ಬ್ರಹ್ಮೋತ್ಸವಗಳು ನಡೆಯುತ್ತದೆ ವಿಶೇಷವಾಗಿ ಶ್ರೀರಾಮ ಸೀತಾ ಮತ್ತು ಲಕ್ಷ್ಮಣರ ಮೂರ್ತಿಗಳನ್ನು ಇಟ್ಟು ಮೂರು ದಿನಗಳ ಕಾಲ ತೆಪ್ಪೋತ್ಸವಗಳು (ತೆಪ್ಪೋತ್ಸವ) ಸೇವೆ ನಡೆಸಲಾಗುತ್ತದೆ
ದೇವಾಲಯ ದರ್ಶನ ಸಮಯ
ತಿರುಪತಿ ಶ್ರೀ ಕೋದಂಡರಾಮ ಸ್ವಾಮಿ ದೇವಸ್ಥಾನವು ಬೆಳಿಗ್ಗೆ 5:00 ರಿಂದ ಮಧ್ಯಾಹ್ನ 12:00 ರವರೆಗೆ ಮತ್ತು ಸಂಜೆ 4:00 ರಿಂದ ರಾತ್ರಿ 9:00 ರವರೆಗೆ ತೆರೆದಿರುತ್ತದೆ.ಕೋದಂಡರಾಮ ಸ್ವಾಮಿ ದೇವಸ್ಥಾನವನ್ನು ಮಧ್ಯಾಹ್ನ 12:00 ರಿಂದ ಸಂಜೆ 4:00 ರವರೆಗೆ ಮುಚ್ಚಲಾಗುತ್ತದೆ.