ಪತ್ರಿಕೊದ್ಯದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ಇಳಿ ವಯಸ್ಸಿನಲ್ಲಿರುವ ಹಿರಿಯ ಚೆತನಗಳನ್ನು ಅವರ ಮನೆಯಂಗಳಗಳದಲ್ಲಿ ಅವರನ್ನು ಗೌರವಿಸುವಂತ ಆಂದೋಲನಕ್ಕೆ KUWJಮುಂದಾಗಿದ್ದು ಜಿಲ್ಲಾ ಮಟ್ಟದಲ್ಲಿ ತಾಲೂಕುಮಟ್ಟದಲ್ಲಿ 75 ವರ್ಷಗಳನ್ನು ಪೊರೈಸಿರುವಂತವರನ್ನು ಗುರುತಿಸಿ ಗೌರವಿಸಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ
ನ್ಯೂಜ್ ಡೆಸ್ಕ್: ಮುದ್ರಣ ಮಾಧ್ಯಮ ಅತ್ಯಂತ ಶ್ರೇಷ್ಠವಾದದ್ದು. ಅದರ ಮೌಲ್ಯ ಕುಸಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಇಂದಿನ ಪೀಳಿಗೆಯ ಪತ್ರಕರ್ತರ ಮೇಲಿದೆ ಎಂದು ಹಿರಿಯ ಪತ್ರಕರ್ತರ ಹಾಗು ಜನಪ್ರಗತಿ’ಯ ಸಂಪಾದಕರಾಗಿದ್ದ ಕಲ್ಲೆ ಶಿವೋತ್ತಮರಾವ್ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಸ್ವಾತಂತ್ರ್ಯೋತ್ಸವದ ಅಮೃತೋತ್ಸವದ ಅಂಗವಾಗಿ ಪತ್ರಿಕೋದ್ಯಮದ ಹಿರಿಯರ ಮನೆಯ ಅಂಗಳದಲ್ಲೇ ಅವರನ್ನು ಗೌರವಿಸುವಂತ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಸರಣಿಯ ಮೊದಲ ಕಾರ್ಯಕ್ರಮವಾಗಿ ಕಲ್ಲೆ ಶಿವೋತ್ತಮ ರಾವ್ ಅವರನ್ನು ಬೆಂಗಳೂರಿನ ಅವರ ಯಲಹಂಕ ನಿವಾಸದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲೆ ಶಿವೋತ್ತಮ ರಾವ್ ಮುದ್ರಣವಾಗುವುದು ಒಂದು ದಾಖಲೆಯಿದ್ದಂತೆ. ಹಾಗಾಗಿ ಓದುಗರಿಗೆ ಅದರ ಮೇಲೆ ನಂಬಿಕೆ ಹೆಚ್ಚು.ಆ ನಂಬಿಕೆಯನ್ನು ಉಳಿಸಿಕೊಳ್ಳಲು ಇಂದಿನ ಪತ್ರಿಕೋದ್ಯಮ ಶ್ರಮಿಸಬೇಕಾಗಿದೆ.ನಾನು ನನ್ನ ಇಡೀ ಬದುಕಿನಲ್ಲಿ ನುಡಿದಂತೆ ನಡೆದಿದ್ದೇನೆ. ದಲಿತರು, ಹಿಂದುಳಿದವರಿಗೆ, ದುರ್ಬಲರಿಗೆ ದನಿಯಾಗಿ ಶ್ರಮಿಸಿದ್ದೇನೆ. ಇದು ನನಗೆ ಧನ್ಯತೆಯನ್ನು ನೀಡಿದೆ. ಬದುಕು ಸಿದ್ಧಾಂತ ಎರಡನ್ನೂ ಒಟ್ಟಿಗೆ ಕೊಂಡೊಯ್ದಿದ್ದೇನೆ ಎಂಬ ಹೆಮ್ಮೆಯೂ ಇದೆ ಎಂದರು.
ಲೋಹಿಯಾ, ಗೋಪಾಲಗೌಡ, ದೇವರಾಜ ಅರಸು, ಎಸ್.ಎಂ.ಕೃಷ್ಣ ಅವರ ಜೊತೆಗೆ ಒಡನಾಡಿಯಾದ ನನಗೆ ಪತ್ರಿಕೋದ್ಯಮ ಎನ್ನುವುದು ಜನ ಸಮುದಾಯಕ್ಕೆ ಸಮಾನತೆಯನ್ನು ತಂದುಕೊಡುವ ಒಂದು ಸೇತುವೆಯಾಗಿತ್ತು. ಹಾಗಾಗಿ ನನ್ನ ಪತ್ರಿಕೆಯ ಮೂಲಕ ಅದನ್ನು ಮಾಡಲು ಶ್ರಮಿಸಿದ್ದೇನೆ ಎಂದರು.
ಇಷ್ಟೆಲ್ಲಾ ಮಾಡಿದ ನನ್ನನ್ನು ಇಂದಿನ ಪೀಳಿಗೆ ನೆನಪಿಟ್ಟುಕೊಂಡಿಲ್ಲವೇನೋ ಎಂದುಕೊಳ್ಳುತ್ತಿರುವಾಗ ಕಾರ್ಯ ನಿರತ ಪತ್ರಕರ್ತರ ಸಂಘ ಮನೆಗೇ ಬಂದು ನನಗೆ ಗೌರವಿಸಿದ್ದು ನನಗೆ ಮನದುಂಬಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಮಾತನಾಡಿ, 1932ರಲ್ಲಿ ಡಿವಿಜಿ ಅವರು ಹುಟ್ಟುಹಾಕಿದ ಪತ್ರಕರ್ತರ ಸಂಘ ಮುನ್ನಡೆಯಲು ಅನೇಕ ಹಿರಿಯರು ಕಾರಣರಾಗಿದ್ದಾರೆ. ಹಾಗೆಯೇ ನಮ್ಮ ಪತ್ರಿಕೋದ್ಯಮಕ್ಕೆ ಘನತೆಯನ್ನು ತಂದುಕೊಟ್ಟ ಮಹತ್ವದ ಹಿರಿಯರಿದ್ದಾರೆ.ಅಂತಹವರಲ್ಲಿ ಕಲ್ಲೆ ಶಿವೋತ್ತಮ ರಾವ್ ಅವರು ಮುಖ್ಯರು. ಹಾಗಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಮ್ಮ ಹಿರಿಯರನ್ನು ಭೇಟಿ ಮಾಡುವ, ಅವರ ಅನುಭವಗಳಿಗೆ ಕಿವಿಯಾಗಲು ಅದನ್ನು ಇಂದಿನ ಪತ್ರಿಕೋದ್ಯಮದಲ್ಲಿ ಅಳವಡಿಸಿಕೊಳ್ಳಲು ‘ಮನೆಯಂಗಳದಲ್ಲಿ ಮನದುಂಬಿ ಗೌರವ’ ಎನ್ನುವ ಈ ಯೋಜನೆ ರೂಪಿಸಲಾಯಿತು ಎಂದರು.
ಹಿರಿಯ ಪತ್ರಕರ್ತರಾದ ಜಿ ಎನ್ ಮೋಹನ್, ಕಂಕಮೂರ್ತಿ, ಪುತ್ರ ಅಜಿತ್ ಅಶುತೋಷ್ ಕಲ್ಲೆ ಈ ಸಂದರ್ಭದಲ್ಲಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ ಸ್ವಾಗತಿಸಿದರು.
ಬೆಂಗಳೂರು ನಗರ ಘಟಕದ ಸೋಮಶೇಖರ್ ಗಾಂಧಿ, ಕೆ.ವಿ.ಪರಮೇಶ್, ದೇವರಾಜ್ ಹಾಜರಿದ್ದರು.
ವೆಂಕಟೇಶ ಭಟ್ (ಪಾಟಣಕರ್)ಗೆ ಗೌರವ
ಸ್ವಾತಂತ್ರ್ಯೊತ್ಸವದ ಅಮೃತೋತ್ಸವದ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಹಮ್ಮಿಕೊಂಡಿರುವ ಹಿರಿಯ ಪತ್ರಕರ್ತರಿಗೆ ಮನೆಯಂಗಳದಿ ಗೌರವ ಸಮರ್ಪಣೆ ಸರಣಿ ಕಾರ್ಯಕ್ರಮದಿ ಹಿರಿಯ ಪತ್ರಕರ್ತ, ಎಂಬತ್ತೆಂಟು ವಸಂತ ತುಂಬಿರುವ ವೆಂಕಟೇಶ ಭಟ್ (ಪಾಟಣಕರ್) ಅವರನ್ನು ಜೆ ಪಿ ನಗರದ ಅವರ ಮನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಶಾಲು ಹೊದಿಸಿ, ಹಾರ ಹಾಕಿ ಗೌರವಿಸಿದರು.
ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿ ಮೂರೂವರೆ ದಶಕಗಳ ಕಾಲ ಒಂದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಅವರದು ಶೃಂಗೇರಿ ಮೂಲದ ವೆಂಕಟೇಶ ಭಟ್ ಅವರು 1992 ರಲ್ಲಿ ನಿವೃತ್ತಿ ಹೊಂದಿದರೂ ಅವರ ವೃತ್ತಿ ಬದುಕನ್ನು ಮುಂದುವರಿಸಿದ್ದು ಇಳಿವಯಸ್ಸಿನಲ್ಲೂ ಪ್ರೂಫ್ ರೀಡ್ ಮಾಡಿಕೊಡುವುದನ್ನು ಮಾತ್ರ ನಿಲ್ಲಿಸಿಲ್ಲ.
ಮೊದಲ ಶಾಲು ಇದು!
ಕೆಯುಡಬ್ಲ್ಯೂಜೆ ಗೌರವ ಸ್ವೀಕರಿಸಿದ ವೆಂಕಟೇಶ ಭಟ್ ಅವರು ನನ್ನ ವೃತ್ತಿ ಜೀವನದಲ್ಲಿ ನನಗೆ ಸಿಕ್ಕ ಮೊದಲ ಶಾಲು ಇದು ಎಂದು ಭಾವುಕರಾದರು. ನಾನು ಎಂದು ಯಾರನ್ನೂ ಬೇಡಿದವನಲ್ಲ. ಸ್ವಾಭಿಮಾನ ಬದುಕು ಬದುಕಿದವನು. ಕೆಯುಡಬ್ಲ್ಯೂಜೆ ಅಧ್ಯಕ್ಷರು, ಮನೆಗೆ ಬಂದು ನನ್ನ ಗೌರವಿಸಿರುವುದು ರಾಜ್ಯೋತ್ಸವ ಪ್ರಶಸ್ತಿ ಬಂದಷ್ಟು ಸಂತಸ ತಂದಿದೆ ಎಂದು ತಮ್ಮ ಮನದಿಂಗಿತವನ್ನು ಹಂಚಿಕೊಂಡರು.
ಈ ಸಾರ್ಥಕ ಕ್ಷಣಕ್ಕೆ ಅವರ ಪತ್ನಿ, ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಇಡೀ ಕುಟುಂಬ ಸಾಕ್ಷಿಯಾಗಿತ್ತು.
ಬೆಂಗಳೂರು ನಗರ ಘಟಕದ ಸೋಮಶೇಖರ್ ಗಾಂಧಿ, ದೇವರಾಜು ಹಾಜರಿದ್ದರು.