ನ್ಯೂಜ್ ಡೆಸ್ಕ್:ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗು ತೆಲಗು ದೇಶಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರನ್ನು ಆಂಧ್ರ ಪ್ರದೇಶ ಸಿಐಡಿ ಪೊಲೀಸರು ಶನಿವಾರ ಬೆಳ್ಳಂ ಬೆಳಗ್ಗೆ ಬಂಧಿಸಿದ್ದಾರೆ.
ರಾಯಲಸೀಮಾ ಪ್ರಾಂತ್ಯದಲ್ಲಿ ರಾಜಕೀಯ ಸಭೆ ನಡೆಸುತ್ತಿದ್ದ ಚಂದ್ರಬಾಬು ನಾಯ್ಡು ಶುಕ್ರವಾರ ರಾತ್ರಿ ನಂದ್ಯಾಲ ಪಟ್ಟಣದ ಆರ್ಕೆ ಫಂಕ್ಷನ್ ಹಾಲ್ನಲ್ಲಿ ತಂಗಿದ್ದು ಅವರು ಪ್ರತ್ಯಕ ಕ್ಯಾರ್ ವಾನ್ ವಾಹನದಲ್ಲಿ ನಿದ್ರೆಮಾಡುತಿದ್ದ ಸಂದರ್ಭದಲ್ಲಿ ಶನಿವಾರ ಮುಂಜಾನೆ ಸುಮಾರು 3 ಗಂಟೆ ಹೊತ್ತಿಗೆ ನಂದ್ಯಾಲ್ ರೇಂಜ್ ಡಿಐಜಿ ರಘುರಾಮಿ ರೆಡ್ಡಿ ಮತ್ತು ಅಪರಾಧ ತನಿಖಾ ದಳ (ಸಿಐಡಿ) ನೇತೃತ್ವದ ಪೊಲೀಸರ ತಂಡ ನಾಯ್ಡು ಅವರನ್ನು ವಶಕ್ಕೆ ಪಡೆದಿರುತ್ತಾರೆ.
ಆಂಧ್ರಪ್ರದೇಶ ಸರ್ಕಾರ ಆರೋಪಿಸಿರುವಂತೆ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ಆಂಧ್ರಪ್ರದೇಶ ಸ್ಕಿಲ್ ಡೆವಲಪ್ಮೆಂಟ್ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡದಿದೆ ಎಂದು ಆರೋಪಿಸಲಾಗಿದೆ.
ಟಿ.ಡಿ.ಪಿ ಕಾರ್ಯಕರ್ತರ ತೀವ್ರ ವಿರೋಧ
ಚಂದ್ರಬಾಬು ಆರೆಸ್ಟ್ ವಿಚಾರ ಹೊರ ಬಿಳುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಟಿಡಿಪಿ ಕಾರ್ಯಕರ್ತರು ಪೊಲೀಸರಿಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಬೆಳಿಗ್ಗೆ 5.30 ರವರೆಗೆ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲು ಬಿಡಲಿಲ್ಲ. ಕೊನೆಗೆ ಬೆಳಗ್ಗೆ 6 ಗಂಟೆ ಸುಮಾರಿಗೆ ಪೊಲೀಸರು ನಾಯ್ಡು ವಾಹನದಿಂದ ಅವರನ್ನು ಕೆಳಗಿಳಿಸಿ ಬಂಧಿಸಿ ನಂತರ ಚಂದ್ರಬಾಬು ನಾಯ್ಡು ವಾಹನದಲ್ಲಿಯೇ ರಸ್ತೆ ಮಾರ್ಗವಾಗಿ ವಿಜಯವಾಡಕ್ಕೆ ಕರೆದೊಯಿದಿರುತ್ತಾರೆ.
ಪೊಲೀಸರು ನೀಡಿದ ನೋಟಿಸ್ ಪ್ರಕಾರ, ಪೊಲೀಸರು ಚಂದ್ರಬಾಬುನಾಯ್ಡು ಅವರ ವಿರುದ್ದ ಐಪಿಸಿ ಸೆಕ್ಷನ್ 120 (8), 166, 167, 418, 420, 465, 468, 471, 409, 201, 34 & 37 ಹಾಗೂ ಭ್ರಷ್ಟಾಚಾರ ತಡೆ ಕಾಯಿದೆ, 1988 ಇತರ ವಿಭಾಗಗಳಡಿ ದೂರುದಾಖಲಿಸಲಾಗಿದೆ.ಅಲ್ಲದೇ ನೋಟಿಸ್ನಲ್ಲಿ ಜಾಮೀನು ರಹಿತ ಅಪರಾಧ, ಜಾಮೀನಿನ ಮೇಲೆ ಬಿಡುಗಡೆಯಾಗುವಂತಿಲ್ಲ ಎಂದು ತಿಳಿಸಲಾಗಿದೆ. ಆದರೆ ” ನ್ಯಾಯಾಲಯದ ಮೂಲಕ ಮಾತ್ರ ಜಾಮೀನು ಪಡೆಯಬಹುದು” ಎಂದು ಸಿಐಡಿ ಉಪ ಪೊಲೀಸ್ ವರಿಷ್ಠಾಧಿಕಾರಿ ಎಂ ಧನುಂಜಯುಡು ತಿಳಿಸಿದ್ದಾರೆ.
ಚಂದ್ರಬಾಬು ನಾಯ್ಡು ಟ್ವೀಟ್
ಅರೆಸ್ಟ್ ಆಗುವ ಕೆಲವೇ ಕ್ಷಣಗಳ ಮೊದಲು ಟ್ವೀಟ್ ಮಾಡಿರುವ ಚಂದ್ರಬಾಬು ನಾಯ್ಡು, “ಕಳೆದ 45 ವರ್ಷಗಳಿಂದ ನಿಸ್ವಾರ್ಥವಾಗಿ ತೆಲುಗು ಜನರ ಸೇವೆ ಮಾಡಿದ್ದೇನೆ. ತೆಲುಗು ಜನರ ಹಿತಾಸಕ್ತಿ ಕಾಪಾಡಲು ನನ್ನ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧನಿದ್ದೇನೆ. ತೆಲುಗು ಜನರಿಗೆ, ನನ್ನ ಆಂಧ್ರಪ್ರದೇಶಕ್ಕೆ ಮತ್ತು ನನ್ನ ಮಾತೃಭೂಮಿಗೆ ಸೇವೆ ಸಲ್ಲಿಸುವುದನ್ನು ಭೂಮಿಯ ಮೇಲಿನ ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ.
ನಟ ಬಾಲಕೃಷ್ಣ ತೀವ್ರ ಆಕ್ರೋಶ,ರಾಜಕೀಯ ಪಕ್ಷದ ಷಡ್ಯಂತ್ರ
ಟಿಡಿಪಿ ಮುಖ್ಯಸ್ಥ ಚಂದ್ರಬಾಬು ಬಂಧನವನ್ನು ತೆಲಗು ಖ್ಯಾತ ನಟ ಹಾಗು ಚಂದ್ರಬಾಬು ನಾಯ್ಡು ಭಾವಮೈದ ಬಾಲಕೃಷ್ಣ ಮುಖ್ಯಮಂತ್ರಿ ಜಗನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಇದೊಂದು ಸೇಡಿನ ಕೃತ್ಯವಾಗಿದ್ದು ಜನಹಿತ ಮರೆತು ಆಡಳಿತ ನಡೆಸುವ ಮುಖ್ಯಮಂತ್ರಿ ಇರುವುದು ಆಂಧ್ರಪ್ರದೇಶ ಜನತೆಯ ದೌರ್ಭಾಗ್ಯ ಎಂದಿರುತ್ತಾರೆ. 16 ತಿಂಗಳು ಕಾಲ ಜೈಲಿನಲ್ಲಿದ್ದ ಜಗನ್ ಅವರು, ಚಂದ್ರಬಾಬು ನಾಯ್ಡು ಅವರನ್ನು 16 ನಿಮಿಷವಾದರೂ ಜೈಲಿನಲ್ಲಿಡ ಬೇಕು ಎಂಬ ಗುರಿಯಾಗಿಸಿಕೊಂಡು ರಾಜಕೀಯ ಷಡ್ಯಂತ್ರದಿಂದ ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿರುತ್ತಾರೆ, ಇದೊಂದು ಅಪಪ್ರಚಾರವೇ ಹೊರತು ಯಾವುದೆ ಸತ್ಯಾಂಶವಿಲ್ಲ ಎಂದಿರುತ್ತಾರೆ.
ನಟ ಪವನ್ ಕಲ್ಯಾಣ್ ಖಂಡನೆ
ಚಂದ್ರಬಾಬು ಬಂಧನವನ್ನು ಜನಸೇನ ಪಕ್ಷ ಸಂಪೂರ್ಣವಾಗಿ ಖಂಡಿಸುತ್ತದೆ ಎಂದು ಜನಸೇನ ಪಕ್ಷದ ಅಧ್ಯಕ್ಷ ಹಾಗು ನಟ ಪವನ್ ಕಲ್ಯಾಣ ಹೇಳಿದ್ದಾರೆ. ರಾಜಕೀಯ ಹಾಗು ಆಡಳಿತಾತ್ಮಕವಾಗಿ ಸಾಕಷ್ಟು ಅನುಭವ ಇರುವ ಮಾಜಿ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಅವರನ್ನು ಆಂಧ್ರಪ್ರದೇಶ ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ,ಇತ್ತೀಚೆಗೆ ಚಂದ್ರಬಾಬು ಚಿತ್ತೂರು ಜಿಲ್ಲೆಗೆ ಭೇಟಿ ಸಂದರ್ಭದಲ್ಲಿ ನಡೆದ ಘಟನೆಯನ್ನು ನೋಡಿದ ಮೇಲೆ ಆಂಧ್ರ ಸರ್ಕಾರವೇ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಸ್ಪಷ್ಟವಾಗಿದೆ,ಆಂಧ್ರದಲ್ಲಿ ವೈಸಿಪಿ ಸರ್ಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ,ಚಂದ್ರಬಾಬು ಅವರು ಆರೋಪದಿಂದ ಬೇಗ ಹೊರಬರಬೇಕು, ಅವರಿಗೆ ನನ್ನ ಸಂಪೂರ್ಣ ಬೆಂಬಲ ಘೋಷಿಸುತ್ತೇನೆ ಎಂದಿರುತ್ತಾರೆ.
ಆಂಧ್ರ ಬಿಜೆಪಿ ಅಧ್ಯಕ್ಷೆ ಪುರಂದೇಶ್ವರಿ ಪ್ರತಿಕ್ರಿಯೆ
ಚಂದ್ರಬಾಬು ಬಂಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷೆ ಹಾಗು ಚಂದ್ರಬಾಬು ನಾಯ್ಡು ಅವರಿಗೆ ವರಸೆಯಲ್ಲಿ ಅತ್ತಿಗೆಯಾಗುವ ಪುರಂದೇಶ್ವರಿ ಪ್ರತಿಕ್ರಿಯೆ ನೀಡಿದ್ದು ಚಂದ್ರಬಾಬು ನಾಯ್ಡು ಅವರನ್ನು ಸೂಕ್ತ ನೋಟಿಸ್ ನೀಡದೆ, ಎಫ್ಐಆರ್ನಲ್ಲಿ ಅವರ ಹೆಸರು ಪ್ರಸ್ತಾಪಿಸದೆ ವಿವರಣೆಯನ್ನು ತೆಗೆದುಕೊಳ್ಳದೆ, ಪ್ರೋಸಿಜರ್ ಪಾಲಿಸದೆ ಬಂಧಿಸಿರುವುದು ಸರಿಯಾದ ಕ್ರಮವಲ್ಲ ಇದನ್ನು ಬಿಜೆಪಿ ಖಂಡಿಸುತ್ತದೆ…” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಯಾವುದೆ ರಾಜಕೀಯ ದುರುದ್ದೇಶ ಇಲ್ಲ ಸಜ್ಜಲ ರಾಮಕೃಷ್ಣ ರೆಡ್ಡಿ
ಸಾರ್ವಜನಿಕರ ಹಣ ದುರುಪಯೋಗ ಪ್ರಕರಣದಲ್ಲಿ ಚಂದ್ರಬಾಬು ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ ಎಂದು ವೈಎಸ್ಆರ್ಸಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಆಂಧ್ರ ಪ್ರದೇಶ ಸರ್ಕಾರದ ಸಲಹೆಗಾರ ಸಜ್ಜಲ ರಾಮಕೃಷ್ಣ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ತಾಡೇಪಲ್ಲಿಯ ತಮ್ಮ ಪಕ್ಷದ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಅವರು ಹಗರಣದ ವಿವರಗಳನ್ನು ಬಹಿರಂಗಪಡಿಸಿದ್ದಾರೆ,ಆರ್ಥಿಕ ಅಪರಾಧ ಸ್ವತಂತ್ರ ಭಾರತದಲ್ಲಿ ಅತ್ಯಂತ ಹೇಯವಾದುದು ಟೀಕಿಸಿದ ಅವರು. ಕೌಶಲಾಭಿವೃದ್ಧಿ ಹಗರಣದಲ್ಲಿ ಎಪಿ ವಿಪಕ್ಷ ನಾಯಕ ಚಂದ್ರಬಾಬು ಅವರನ್ನು ಬಂಧಿಸಿದ ನಂತರ ಅವರನ್ನು ರಾಜಕೀಯ ದುರುದ್ದೇಶದಿಂದ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.ಚಂದ್ರಬಾಬು ಬಂಧನದ ನೈಜ ವಿಚಾರವನ್ನು ಬದಿಗೊತ್ತಿ ಟಿಡಿಪಿ ನಾಯಕರು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ,ಚಂದ್ರಬಾಬು ಬಂಧನದಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ, ಬಲವಾದ ಸಾಕ್ಷ್ಯಾಧಾರಗಳೊಂದಿಗೆ ಎಸ್ಐಟಿ ದಾಖಲಿಸಲಾಗಿದೆ. ಸರ್ಕಾರ ತುಂಬಾ ಸಂಯಮದಿಂದ ವರ್ತಿಸಿದ್ದು, ತನಿಖಾ ಸಂಸ್ಥೆಗಳು ಅತ್ಯಂತ ಮುಕ್ತವಾಗಿ ತನಿಖೆ ನಡೆಸುತ್ತಿವೆ ಎಂದಿರುತ್ತಾರೆ.
ಆಂಧ್ರ ಬಂದ್
ಚಂದ್ರಬಾಬು ನಾಯ್ಡು ಬಂಧನದ ಹಿನ್ನಲೆಯಲ್ಲಿ ತೆಲಗುದೇಶಂ ಪಕ್ಷ ಆಂಧ್ರ ಬಂದ್ ಗೆ ಕರೆ ಕೊಟ್ಟಿದ್ದು ಆಂಧ್ರದಲ್ಲಿ ಬಹುತೇಕ ಸರ್ಕಾರಿ ಯಂತ್ರಾಂಗ ಸ್ಥಬ್ದಗೊಂಡಿದೆ,ರಾಜ್ಯದ್ಯಂತ ತೆಲಗುದೇಶಂ ಪಕ್ಷದ ಮುಖಂಡರನ್ನು ಮತ್ತು ಕಾರ್ಯಕರ್ತರನ್ನು ಹೌಸ್ ಅರೆಸ್ಟ್ ಮಾಡಲಾಗಿದ್ದು ಬಹುತೇಕ ಆಂಧ್ರ ಸರ್ಕಾರಿ ಸಾರಿಗೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.ಮದನಪಲ್ಲೆ ಸೇರಿದಂತೆ ಬಹುತೇಕ ಕಡೆ ಸಾರಿಗೆ ವಾಹನಗಳನ್ನು ಡಿಪೊಗಳಲ್ಲಿ ನಿಲ್ಲಿಸಿಕೊಂಡಿರುತ್ತಾರೆ.ಹಲವಾರು ಊರುಗಳಲ್ಲಿ ತೆಲಗುದೇಶಂ ಕಾರ್ಯಕರ್ತರು ಪ್ರತಿಭಟನೆ ಧರಣಿ ನಡೆಸುತ್ತಿದ್ದಾರೆ.