ತುಮಕೂರು:ತುಮಕೂರು ಜಿಲ್ಲೆಯ ಪ್ರಭಾವಿ ಮುಖಂಡ ಸಂಘ ಪರಿವಾರ ಮೂಲದ ಕಳ್ಳಂ ಬೆಳ್ಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಬಿಜೆಪಿ ಪಕ್ಷಕ್ಕೆ ವಿದಾಯ ಹೇಳಿದ್ದಾರೆ.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುವ ಲೆಕ್ಕಾಚಾರದಲ್ಲಿ ಬಿಜೆಪಿ ತೊರೆದಿದ್ದಾರೆ.
ಆರ್ ಎಸ್ ಎಸ್ ಕಟ್ಟಾಳು ಕಳೆದ 30 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಜೊತೆ ಗುರುತಿಸಿಕೊಂಡು ಕಳ್ಳಂಬೆಳ್ಳ ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿ ಪ್ರಭಾವಿ ಕಾಂಗ್ರೆಸ್ ಮುಖಂಡ ಮಾಜಿ ಮಂತ್ರಿ ಟಿ.ಬಿ.ಜಯಚಂದ್ರ ಅವರ ಸೋಲಿಸಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದ ಕೆ.ಎಸ್.ಕಿರಣ್ಕುಮಾರ್ ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು ಬಿಜೆಪಿ ಸಖ್ಯ ತೊರೆಯುತ್ತಿರುವುದು ತುಮಕೂರು ಜಿಲ್ಲೆಯ ಬಿಜೆಪಿಗೆ ಮರ್ಮಾಘಾತದ ಸುದ್ದಿಯಾಗಿದೆ.
ಸಂಘಪರಿವಾರ ಮೂಲದ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಅವರು 2004 ರಲ್ಲಿ ಕಳ್ಳಂಬೆಳ್ಳ ವಿಧಾನ ಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿ ತಮ್ಮ ಪ್ರತಿ ಸ್ಪರ್ದಿ ನಾಲ್ಕು ಬಾರಿ ಶಾಸಕರಾಗಿ ಪ್ರಭಾವಿ ಮಂತ್ರಿಯಾಗಿದ್ದ ಟಿ.ಬಿ.ಜಯಚಂದ್ರ ಅವರನ್ನು 17 ಸಾವಿರ ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿದ್ದರು.
ಕ್ಷೇತ್ರ ಪುನರ್ ವಿಂಗಡನೆಯಾದಾಗ ಕಳ್ಳಂಬೆಳ್ಳ ಕ್ಷೇತ್ರ ಅಸ್ತಿತ್ವ ಕಳೆದಕೊಂಡ ಹಿನ್ನಲೆಯಲ್ಲಿ ಕೆ.ಎಸ್.ಕಿರಣ್ಕುಮಾರ್ ತಮ್ಮ ರಾಜಕೀಯ ಕಾರ್ಯಕ್ಷೇತ್ರವನ್ನು ಚಿಕ್ಕನಾಯಕನಹಳ್ಳಿಗೆ ಬದಲಿಸಿಕೊಂಡು ಭಾರತೀಯ ಜನತಾ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು 2008 ಚುನಾವಣೆಯಲ್ಲಿ ಜೆಡಿಎಸ್ ನ ಸುರೇಶ್ ಬಾಬು ಅವರಿಂದ ಸೋಲುಂಡರು ನಂತರ 2013 ಚುನಾವಣೆಯಲ್ಲಿ ತ್ರಿಕೋನ ಸ್ಪರ್ದೆಯಲ್ಲಿ ಜೆಡಿಎಸ್ ನ ಸುರೇಶ್ ಬಾಬು ಹಾಗು ಯಡಿಯೂರಪ್ಪನವರ ಕೆಜೆಪಿ ಪಕ್ಷದಿಂದ ಸ್ಪರ್ದಿಸಿದ್ದ ಬೊಮ್ಮಾಯಿ ಸರ್ಕಾರದಲ್ಲಿ ಹಾಲಿ ಕಾನೂನು ಮಂತ್ರಿಯಾಗಿರುವ ಜೆ.ಸಿ.ಮಾಧುಸ್ವಾಮಿ ನಡುವಿನ ಮದಗಜಗಳ ಕಾಳಗದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ.ಎಸ್.ಕಿರಣ್ಕುಮಾರ್ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟರು ನಂತರದ ಬೆಳವಣಿಗೆಯಲ್ಲಿ ಯಡಿಯೂರಪ್ಪನವರ ಕೆಜೆಪಿ ಪಕ್ಷ ಬಿಜೆಪಿಯಲ್ಲಿ ವಿಲೀನವಾದ ಮೇಲೆ 2018 ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೆ.ಎಸ್.ಕಿರಣ್ಕುಮಾರ್ ತಪ್ಪಿದ್ದು ಜೆ.ಸಿ.ಮಾಧುಸ್ವಾಮಿ ಬಿಜೆಪಿ ಅಭ್ಯರ್ಥಿಯಾಗಿ ಗೆಲವು ಸಾಧಿಸಿದರು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೆ.ಎಸ್.ಕಿರಣ್ಕುಮಾರ್ ಅವರನ್ನು ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ರನ್ನಾಗಿ ಮಾಡಿದ್ದರಾದರು ಕೆ.ಎಸ್.ಕಿರಣ್ಕುಮಾರ್ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕನಾಗಬೇಕೆಂಬ ಕನಸು ಹೊತ್ತಿರುವ ಅವರು ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜೀನಾಮೆ ಪತ್ರ ಬರೆದು ನನ್ನ ವೈಯಕ್ತಿಕ ಕಾರಣದಿಂದಾಗಿ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದು ಅದನ್ನು ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಕಿರಣ್ ಕುಮಾರ್ ಕೈ ಪಾಳಯಕ್ಕೆ ಸೇರ್ಪಡೆಯಾಗಲಿದ್ದಾರೆ.
ಚಿಕ್ಕನಾಯಕನಹಳ್ಳಿ ಬಿಜೆಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ತುಂಬಲಾರದ ನಷ್ಟ ಉಂಟಾದರೆ ಕಳೆದ ಎರಡು ದಶಕಗಳಿಂದ ನಾಯಕತ್ವದ ಕೊರತೆಯಿಂದ ನಲುಗುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ನಾಯಕತ್ವ ಸಿಕ್ಕಂತಾಯಿತು ಎನ್ನುತ್ತಾರೆ ರಾಜಕೀಯ ಪಂಡಿತರು.