ನ್ಯೂಜ್ ಡೆಸ್ಕ್:ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅನಾಥ ಹೆಣ್ಣುಮಕ್ಕಳಿಬ್ಬರಿಗೆ ಮದುವೆ ಮಾಡಿಸಿ ಅಪರೂಪದ ಕೆಲಸ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಉಡುಪಿಯಲ್ಲಿ 1976 ರಲ್ಲಿ ಆರಂಭವಾಗಿದ್ದ ಸರ್ಕಾರಿ ಮಹಿಳಾ ನಿಲಯದಲ್ಲಿ ಬೆಳೆದಂತ ಅನಾಥ ಹೆಣ್ಣುಮಕ್ಕಳಿಬ್ಬರಿಗೆ ಮದುವೆ ಮಾಡಿಸಿದ ಜಿಲ್ಲಾಧಿಕಾರಿಯವರ ಸಾಮಾಜಿಕ ಕಳಕಳಿಗೆ ಸಾರ್ವಜನಿಕವಾಗಿ ಸರ್ವತ ಮೆಚ್ಚುಗೆ ವ್ಯಕ್ತವಾಗಿದೆ.
ಹೆತ್ತವರು ಯಾರು ಎಂಬುದನ್ನು ಅರಿಯದ ತುಮಕೂರು ಮೂಲದ ಶೀಲಾ (32) 2019 ರಲ್ಲಿ ಹಾಗು ಭದ್ರಾವತಿ ಮೂಲದ ಕುಮಾರಿ (21) 2020 ರಲ್ಲಿ ಇಬ್ಬರು ನಿಟ್ಟೂರಿನ ರಾಜ್ಯ ಸರಕಾರಿ ಮಹಿಳಾ ನಿಲಯಕ್ಕೆ ಬಂದು ಆಶ್ರಯ ಪಡೆದಿದ್ದರು.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬೇಳಂಜೆ ದೇವಸ್ಥಾನದ ಅರ್ಚಕ ಸತ್ಯನಾರಾಯಣ ಶ್ರೀಧರ ಭಟ್ ಎಂಬವರು ಕುಮಾರಿ ಅವರನ್ನು ಮದುವೆಯಾಗಿ ಮನೆ ತುಂಬಿಸಿಕೊಂಡರೆ,ಶಿಲಾ ಅವರನ್ನು ಮೊಳಹಳ್ಳಿಯ ಕೃಷಿಕ ಗಣೇಶ ಶಾಸ್ತ್ರಿ ಅವರು ಮದುವೆ ಮಾಡಿಕೊಂಡು ಹೊಸ ಬಾಳಿಗೆ ಜೊತೆಯಾಗಿದ್ದಾರೆ.
ಅನಾಥಾಶ್ರಮದ ಹೆಣ್ಣುಮಕ್ಕಳನ್ನು ಮದುವೆಯಾಗುವ ಮೂಲಕ ಹೆಣ್ಣು ಸಿಕ್ಕಿಲ್ಲವೆಂದು ಮಾನಸಿಕ ಖಿನ್ನತೆಗೆ ಒಳಗಾಗುವ ಯುವಕರಿಗೆ ಈ ಮದುವೆ ಉತ್ತಮ ಸಂದೇಶ ಸಿಗಲಿದೆ ಯುವಕರ ಮದುವೆ ಸಮಾಜಕ್ಕೆ ಆದರ್ಶವಾಗಲಿದೆ ಎನ್ನುತ್ತಾರೆ.
ಉಡುಪಿಯಲ್ಲಿ ನಡೆದ ಈ ವಿಶೇಷ ಮದುವೆಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ,ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ,ಎಸ್ಪಿ ಡಾ.ಅರುಣ್ ಕುಮಾರ್,ಸರ್ಕಾರಿ ಮಹಿಳಾ ನಿಲಯದ ಪುಷ್ಪಾರಾಣಿ, ಜಿಲ್ಲಾ ಹಿರಿಯ ನ್ಯಾಯಾಧೀಶರಾದ ಶರ್ಮಿಲಾ,ಜಿಲ್ಲಾ ಪಂಚಾಯಿತಿ ಸಿಇಒ ಪ್ರಸನ್ನ,ಉಡಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ರಶ್ಮಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಮತ್ತು ಗಣ್ಯರು ಸಾಕ್ಷಿಯಾದರು.
