ನ್ಯೂಜ್ ಡೆಸ್ಕ್: ಬಹುನಿರೀಕ್ಷಿತ ಬಹು ಭಾಷ ಹಾಗು ಮಲ್ಟಿ ಸ್ಟಾರರ್ ಸಿನಿಮಾ ‘ಆರ್ಆರ್ಆರ್’ RRR ವಿಶ್ವಾದ್ಯಂತ ಅದ್ದೂರಿಯಾಗಿ ರಿಲೀಸ್ ಮಾಡಲು ದಿನಗಣನೆ ಶುರುವಾಗಿದೆ. ಈ ಸಿನಿಮಾ ಪ್ರೀ-ರಿಲಿಜ್ ಕಾರ್ಯಕ್ರಮವನ್ನು ಈ ತಿಂಗಳ 19 ರಂದು ಶನಿವಾರ ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ನಡೆಸಲು ಸಿನಿಮಾ ತಂಡ ತಯಾರಿ ನಡೆಸಿದೆ.
ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ನೂರು ಎಕರೆ ಪ್ರದೇಶದಲ್ಲಿ ಎಲ್ಲಾ ತಯಾರಿಗಳು ನಡೆದಿದ್ದು 25 ಸಾವಿರ ಚದರ ಅಡಿಯ ಬೃಹತ್ ಎಲ್ಇಡಿ ಸ್ಕ್ರೀನ್ ಮತ್ತು 45 ಬೃಹತ್ ಲೇಸರ್ ಲೈಟ್ಗಳ ದೊಡ್ಡ ವೇದಿಕೆ ಸಿದ್ಧವಾಗುತ್ತಿದೆ. ಕನ್ನಡದಲ್ಲಿ ಅನುಶ್ರೀ, ತೆಲಗಿನಲ್ಲಿ ಸುಮಾ ಹಾಗು ಅಕುಲ್ ಬಾಲಾಜಿ, ಅವರುಗಳು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ.ಬಾಹುಬಲಿ ಸಿನಿಮಾ ನಿರ್ದೇಶನ ಮಾಡಿದ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ ಈಗಾಗಲೇ ಭಾರತೀಯ ಸಿನಿಮಾ ರಂಗದಲ್ಲಿ ದೊಡ್ಡ ಟ್ರೆಂಡ್ ಸೃಷ್ಟಿಮಾಡಿದೆ. ಅಂದಹಾಗೆ ಇಡಿ ಕಾರ್ಯಕ್ರಮವನ್ನು ಕನ್ನಡ ಅಪ್ಪು ಪುನಿತ್ ರಾಜಕುಮಾರ್ ಅವರಿಗೆ ಅರ್ಪಣೆ ಮಾಡಲಿರುವುದಾಗಿ ಹೇಳಲಾಗಿದೆ.
ಕಾರ್ಯಕ್ರಮದ ವೇದಿಕೆಯಲ್ಲಿ ವಿಶೇಷವಾಗಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಗ್ಯ ಸಚಿವ ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್, ‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್, ರಾಮ್ ಚರಣ್, ಆಲಿಯಾ ಭಟ್, ಜ್ಯೂ. ಎನ್ಟಿಆರ್, ಅಜಯ್ ದೇವಗನ್ ಸೇರಿದಂತೆ ಅನೇಕ ಕಲಾವಿದರು ಈ ಇವೆಂಟ್ನಲ್ಲಿ ಭಾಗವಹಿಸಲಿದ್ದಾರೆ.ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರು ಲೈವ್ ಕಾರ್ಯಕ್ರಮ ನೀಡಲಿದ್ದು ಕನ್ನಡ ತೆಲುಗು ಸೇರಿದಂತೆ ವಿವಿಧ ಭಾಷೆಯ ಪ್ರಖ್ಯಾತ ನಟ ನಟಿಯರು ತಂತ್ರಙ್ಞರು ವಿತರಕರು ಕಾಣಿಸಿಕೂಳ್ಳಲಿದ್ದಾರೆ.
ಎಲ್ಲಿ ಸಿಗಲಿದೆ ಪಾಸ್?
ಮಲ್ಟಿ ಸ್ಟಾರರ್ ಸಿನಿಮಾ ಕಾರ್ಯಕ್ರಮಕ್ಕೆ ನಟರ ಅಭಿಮಾನಿಗಳಿಗೂ ಮುಕ್ತ ಆಹ್ವಾನ ನೀಡಲಾಗಿದೆ. ಕೆವಿಎನ್ ಸಂಸ್ಥೆಯ www.kvnproductions.co.in ವೆಬ್ ಸೈಟ್ ಮೂಲಕ ಪಾಸ್ಗಳನ್ನು ಉಚಿತವಾಗಿ ಪಡೆಯಬಹುದು. ಈ ಇವೆಂಟ್ ನಡೆಸಿಕೊಡುವ ಜವಾಬ್ದಾರಿಯನ್ನು ಜೆ ಮೀಡಿಯಾ ಸಂಸ್ಥೆ ವಹಿಸಿಕೊಂಡಿದೆ. ಇಡೀ ಕಾರ್ಯಕ್ರಮವೇ ಒಂದು ವಿಶ್ಯುವಲ್ ಟ್ರೀಟ್ ಆಗಿರಲಿದೆ ಎಂದು ಕಾರ್ಯಕ್ರಮದ ಜವಾಬ್ದಾರಿ ಹೊತ್ತಿರುವ ವೆಂಕಟ್ ಕೊಣಂಕಿ ಅವರು ತಿಳಿಸಿದ್ದಾರೆ
ಮುಖ್ಯಮಂತ್ರಿ ನಿಷೇಧಾಜ್ಞೆ ಉಲ್ಲಂಘಿಸುತ್ತಾರ!
ಹಿಜಾಬ್ ಕುರಿತಂತೆ ಹೈಕೋರ್ಟ್ ತೀರ್ಪು ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ನಿಷೇಧಾಜ್ಞೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಉಲ್ಲಂಘನೆ ಮಾಡಲಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕವಾಗಿ ಕೇಳಿಬರುತ್ತಿದೆ.
ಹಿಜಾಬ್ ವಿವಾದ ಕುರಿತು ಹೈಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ತೀರ್ಪಿಗೂ ಮುನ್ನ ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಬಹುತೇಕ ಕರ್ನಾಟಕದಾದ್ಯಂತ ಮಾ. 20ರ ವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹಿಜಾಬ್ ತೀರ್ಪಿನ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ವಿಧಿಸಲಾಗಿದೆ.
ಮಾ. 15 ರಿಂದ 20 ರ ವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಅವರು ಆದೇಶ ಹೊರಡಿಸಿದ್ದಾರೆ. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಯಾವುದೇ ಸಭೆ ಸಮಾರಂಭ ಮಾಡುವಂತಿಲ್ಲ. ಐದು ಮಂದಿಗೂ ಅಧಿಕ ಮಂದಿ ಒಂದಡೆ ಸೇರವಂತಿಲ್ಲ. ಒಂದು ವೇಳೆ ಸೇರಿದಂತೆ ಅಂತವರ ವಿರುದ್ಧ ಕಾನೂನು ಪ್ರಕಾರ ಕೇಸು ದಾಖಲಿಸಲಾಗುತ್ತದೆ. ಬಹುಮುಖ್ಯವಾಗಿ ಈ ಸಮಾರಂಭಕ್ಕೆ ಅವಕಾಶವೇ ಮಾಡಿಕೊಡಲ್ಲ. ಹೀಗಾಗಿ RRR ಸಿನಿಮಾ ಫ್ರೀ ರಿಲೀಸ್ ಇವೆಂಟ್ ನಡೆಯುವುದರ ಬಗ್ಗೆ ದೊಡ್ಡ ಗೊಂದಲ ಏರ್ಪಟ್ಟಿದೆ. ನಿಷೇಧಾಜ್ಞೆ ನಡುವೆಯೂ ಕಾರ್ಯಕ್ರಮ ಆಯೋಜಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡರೆ, ಸರ್ಕಾರದ ಆದೇಶವನ್ನು ಅವರೇ ಉಲ್ಲಂಘನೆ ಮಾಡಿದಂತಾಗುತ್ತದೆ ಎಂಬ ವಾದ ಎಲ್ಲೆಡೆ ಕೇಳಿ ಬರುತ್ತಿದೆ.