ಕೋಲಾರ:ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹುದ್ದೆಯನ್ನು ರಾಜ್ಯದ ಪತ್ರಿಕೋದ್ಯಮ ಮತ್ತು ಪತ್ರಕರ್ತರ ಒಳಿತಿಗಾಗಿ ಶ್ರಮಿಸುವ ಅವಕಾಶ ಎಂದು ಭಾವಿಸಿ ಕಾರ್ಯನಿರ್ವಹಿಸುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ನುಡಿದರು.
ಬೆಂಗಳೂರಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು, ಪತ್ರಕರ್ತರು ಯಾವುದೇ ಸಂದರ್ಭದಲ್ಲಿ ವೃತ್ತಿಯ ಮೌಲ್ಯಗಳಿಗೆ ಕಳಂಕ ಬಾರದಂತೆ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದರು.
ಮುಖ್ಯಮಂತ್ರಿಗಳಿಗೆ ರಾಜಕೀಯ ಸಲಹೆಗಾರ ಸೇರಿದಂತೆ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿಯಾಗುವ ಅವಕಾಶ ಇದ್ದರೂ ಯಾವುದೆ ಅಧಿಕಾರದ ಆಸೆಗೆ ಒಳಪಡದೆ ತಮಗೆ ವೃತಿ ಬದುಕಿನ ಆಸರೆಯಾಗಿ ಇದುವರಿಗೂ ಸಾಕಿ, ಸಲುಹಿದ ಪತ್ರಿಕೋದ್ಯಮದ ವೃತ್ತಿಗೆ ಸಂಬಂಧಿಸಿದ ಅವಕಾಶವನ್ನು ಬಳಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ಮಾಧ್ಯಮ ಸಲಹೆಗಾರ ಜವಾಬ್ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದ ಅವರು ಪತ್ರಿಕೋದ್ಯಮದ ಜೀವನದ ಸಂದರ್ಭದಲ್ಲಿ ನನ್ನ ಬೆಳವಣಿಗೆಗೆ ಕಾರಣರಾದ ಕೋಲಾರದ ಹಿರಿಯ ಪತ್ರಕರ್ತರಾದ ದಿವಂಗತ ಬಿ.ವಿ.ನರಸಿಂಹಮೂರ್ತಿ, ಎಂ.ಮಲ್ಲೇಶ್ ಹಾಗೂ ಬಿ.ಎನ್.ಗುರುಪ್ರಸಾದ್, ಹಿರಿಯ ಪತ್ರಕರ್ತರಾದ ಕೆ.ಪ್ರಹ್ಲಾದರಾವ್, ಬಿ.ವಿ.ಗೋಪಿನಾಥ್, ಎಂ.ವಾಸುದೇವಹೊಳ್ಳ ಅವರುಗಳನ್ನು ಪ್ರಭಾಕರ್ ಇದೇ ವೇಳೆ ಸ್ಮರಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಭಾಕರ್ ತಮಗೆ ಸಿಕ್ಕಿದ ಅವಕಾಶಗಳನ್ನು ಬಳಸಿಕೊಂಡು ಪತ್ರಕರ್ತರು ಮತ್ತು ಪತ್ರಿಕೋದ್ಯಮದ ನೆರವಿಗೆ ಸಹಕಾರ ನೀಡಿದ್ದಾರೆ ಪತ್ರಿಕೋದ್ಯಮದ ಅಭಿವೃದ್ಧಿಗೆ ಅವರ ಸಹಾಯ ಸಹಕಾರ ಈಗಲೂ ಮುಂದುವರಿದಿರುವುದು ಹೆಮ್ಮೆ ಎಂದರು.
ಕೆಯುಡಬ್ಲ್ಯೂಜೆ ಖಜಾಂಚಿ ಎಂ.ವಾಸುದೇವಹೊಳ್ಳ ಮಾತನಾಡಿ, ಮೊದಲಿನಿಂದಲೂ ಪ್ರಭಾಕರ್ ಮುನ್ನುಗ್ಗುವ ಸ್ವಭಾವ ಹೊಂದಿದ್ದು, ಅದು ಅವರ ಯಶಸ್ಸಿನ ಸೋಪಾನವಾಗಿದೆ ಎಂದು ನುಡಿದರು. ಹಿರಿಯ ಪತ್ರಕರ್ತರಾದ ಜಿ.ಎನ್.ಮೋಹನ್, ಕಂ.ಕ ಮೂರ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಪ್ರಭಾಕರ್ ಅವರನ್ನು ಅಭಿನಂದಿಸಿ ಮಾತನಾಡಿದರು.
ಕೋಲಾರ ಪತ್ರಕರ್ತರಿಂದ ಅಭಿನಂದನೆ
ಪ್ರಭಾಕರ್ ಅವರ ಹುಟ್ಟೂರು ಕೋಲಾರ ಹಾಗಾಗಿ ಅವರನ್ನು ಅಭಿನಂದಿಸಲು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಪ್ರಭಾಕರ್ ಅವರು ಸ್ವಂತ ಕೃಷಿ ಮತ್ತು ಕಠಿಣ ಪರಿಶ್ರಮದಿಂದ ಉನ್ನತ ಸ್ಥಾನಕ್ಕೆ ಏರಿದ್ದಾರೆ ಅವರ ಶ್ರಮ ಇಂದು ಅತ್ಯಂತ ಜವಾಬ್ದಾರಿಯುತ ಹುದ್ದೆಯಾದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹುದ್ದೆ ದೊರೆತಿದೆ ಇದನ್ನು ಅವರು ಯಶಸ್ವಿಯಾಗಿ ನಿರ್ವಹಿಸಲಿ ಎಂದು ಶುಭಹಾರೈಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪರವಾಗಿ ಕೆ.ವಿ.ಪ್ರಭಾಕರ್ ಅವರನ್ನು ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು, ಕೋಲಾರವಾಣಿ ಸಂಪಾದಕ ಬಿ.ಎನ್.ಮುರಳಿಪ್ರಸಾದ್, ಕೃಷ್ಣಾಪುರ ದೇವರಾಜ್, ಬಂಗಾರಪೇಟೆ ನಾಗಮಣಿ, ಮುಂತಾದವರು ಅಭಿನಂದಿಸಿದರು.