ನ್ಯೂಜ್ ಡೆಸ್ಕ್: ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಮುನಿಯಪ್ಪ ಕಾಂಗ್ರೆಸ್ ಗೆ ಗುಡ್ ಬೈ ಹೇಳುವ ವದಂತಿ ಪುಂಕಾನು ಪುಂಕವಾಗಿ ಹರಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಪಕ್ಷ ಅವರ ಮನವೊಲಿಕೆ ಕಸರತ್ತು ನಡೆಸುತ್ತಿದೆ ಇದರ ಆರಂಭ ಎನ್ನುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಕೆಎಚ್ ಮುನಿಯಪ್ಪ ಅವರನ್ನು ಅವರ ಸಂಜಯ್ ನಗರದ ಮನೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಬಿಬಿಎಂಪಿ ಚುನಾವಣೆ ನೆಪದಲ್ಲಿ ಬೆಂಗಳೂರಿಗೆ ಆಗಮಿಸಿರುವ ಸುರ್ಜೇವಾಲಾ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬಿಬಿಎಂಪಿ ಚುನಾವಣಾ ಪ್ರಣಾಳಿಕೆ ಸಭೆಯ ನಂತರ ನೇರವಾಗಿ ಮುನಿಯಪ್ಪ ಅವರ ನಿವಾಸಕ್ಕೆ ತೆರಳಿದರು.
ತೀರಾ ಇತ್ತಿಚಿಗಷ್ಟೆ ಮುನಿಯಪ್ಪ ಅವರು ಕರ್ನಾಟಕ ಸರ್ಕಾರದ ಪ್ರಭಾವಿ ಸಚಿವ ಡಾ.ಸುಧಾಕರ್ ಅವರ ಜೊತೆಗೂಡಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾದ ಹಿನ್ನಲೆಯಲ್ಲಿ ಮಾಜಿ ಕೇಂದ್ರ ಸಚಿವರು ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹಗಳು ಕೇಳಿ ಬರುತ್ತಿದೆ ಈ ಹಿನ್ನಲೆಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲಾ ಮುನಿಯಪ್ಪ ಮನೆಗೆ ತೆರಳಿದ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದು,ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ಪರಿಗಣಿಸುತ್ತಿಲ್ಲ. ರಾಜ್ಯ ನಾಯಕರದ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ತಮ್ಮನ್ನು ವಿಶ್ವಾಸಕ್ಕೆ ತಗೆದುಕೊಳ್ಳದೆ ಕೋಲಾರ ಲೋಕಸಭೆ ವ್ಯಾಪ್ತಿಯ ಕೆಲವು ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಹಾಗೂ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರನ್ನು ಪಕ್ಷ ಸೇರ್ಪಡೆ ಸಂದರ್ಭದಲ್ಲಿ ತಮ್ಮನ್ನು ಪರಿಗಣಿಸಲೇ ಇಲ್ಲ ಎಂದು ಮುನಿಯಪ್ಪ ಮುನಿಸಿಕೊಂಡು ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡ ಹಿನ್ನಲೆಯಲ್ಲಿ ಅವರ ಮುನಿಸು ಕಡಿಮೆಗೊಳಿಸುವ ಉದ್ದೇಶದಿಂದ ಸುರ್ಜೇವಾಲಾ ಭೇಟಿ ನೀಡಿ ಚರ್ಚಿಸಿದ್ದಾರೆ ಎನ್ನಲಾಗಿದೆ.
ಮುಜುಗರ ತಪ್ಪಿಸಲು ಮನೆ ನೋಡುವ ಹೆಸರಲ್ಲಿ ದಿಢೀರ್ ಭೇಟಿ
ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಗುವ ‘ಭಾರತ್ ಜೋಡೋ ಯಾತ್ರೆ’ 148 ದಿನಗಳ ಕಾಲ ನಡೆಯುವ ಪಾದಯಾತ್ರೆ ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ. ಐದು ತಿಂಗಳ ಯಾತ್ರೆ 3,500 ಕಿಲೋಮೀಟರ್ ಮತ್ತು 12 ಕ್ಕೂ ಹೆಚ್ಚು ರಾಜ್ಯಗಳನ್ನು ಬಳಸಿ ಸಾಗುವ ಯಾತ್ರೆಯಲ್ಲಿ ಪ್ರತಿದಿನ 25 ಕಿ.ಮೀ ಕ್ರಯಿಸಲಿದೆ ರಾಹುಲ್ ಗಾಂಧಿ ಅವರ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿರುವ ಭಾರತ ಜೋಡೋ ಪಾದಯಾತ್ರೆಯೂದ್ದಕ್ಕೂ ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳನ್ನು ಆಯೋಜಿಸಿದ್ದು ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಿರಿಯ ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ.
ಯಾತ್ರೆ ಯೋಜನೆ ಪ್ರಕಟವಾಗುತ್ತಿದ್ದಂತೆ ಹಿರಿಯ ಕಾಂಗ್ರೆಸ್ಸಿಗ ಗುಲಾಂ ನಭಿ ಆಜಾದ್ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ತೊರೆದಿದ್ದು ಕಾಂಗ್ರೆಸ್ ಗೆ ಮುಜುಗರ ತಂದಿದೆ.ಈ ನಿಟ್ಟಿನಲ್ಲಿ ಕೋಲಾರದ ಮಾಜಿ ಸಂಸದ ಮುನಿಯಪ್ಪ ಯಾತ್ರೆ ಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆಯಾದರೆ ಕಾಂಗ್ರೆಸ್ ದೊಡ್ಡಮಟ್ಟದ ಅವಮಾನವನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಅವಕಾಶ ನೀಡದೆ ಎದುರಾಗಬಹುದಾದ ಮುಜುಗರವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಸುರ್ಜೆವಾಲಾ ಮುಂಚಿತವಾಗಿಯೇ ಮುನಿಯಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.
ಮುನಿಯಪ್ಪ ಟ್ರಬಲ್ಗೆ ಟ್ರಬಲ್ ಕೊಡುವಂತ ನಾಯಕ
ಇನ್ನು ಭೇಟಿ ಬಳಿಕ ಮಾತನಾಡಿದ ಸುರ್ಜೆವಾಲಾ, ಮುನಿಯಪ್ಪ ಅವರು ನನ್ನ ಹಿರಿಯ ಸಹೋದರ ಇದ್ದಂತೆ. ಅವರ ಮನೆ ನೋಡಬೇಕು ಅಂತ ಆಸೆಪಟ್ಟಿದ್ದೆ. ಆ ಪ್ರಕಾರ ಬಂದು ಮನೆ ನೋಡಿದ್ದೇನೆ. ಹಾಗೆ ಸಹಜವಾಗಿ ಮಾತುಕತೆ ನಡೆಸಿದ್ದೇವೆ. ಮುನಿಯಪ್ಪಗೆ ಯಾವುದೇ ಟ್ರಬಲ್ ಇಲ್ಲ. ಅವರು ಟ್ರಬಲ್ಗೆ ಟ್ರಬಲ್ ಕೊಡುವಂತ ನಾಯಕ. ಎಐಸಿಸಿ ಸೂಚನೆ ಪ್ರಕಾರ ನಾನು ಇಲ್ಲಿ ಬಂದಿಲ್ಲ. ಅವರ ಕುಟುಂಬ ಸದಸ್ಯನಾಗಿ ಬಂದಿದ್ದೇನೆ ಅಷ್ಟೇ ಮೇನಿಜಿಂಗ್ ಮಾತುಗಳನ್ನಾಡಿದ ಸುರ್ಜೆವಾಲ ಮುನಿಯಪ್ಪನವರು ಹಿರಿಯರು ನನ್ನ ತಂದೆಯ ಕಾಲದಿಂದಲೂ ಅವರು ನನಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದರು.
ಪಕ್ಷ ಸಂಘಟನೆ ಕುರಿತು ಚರ್ಚೆ ಅಷ್ಟೆ!
ಬಳಿಕ ಮಾತನಾಡಿದ ಮುನಿಯಪ್ಪ, ಸುರ್ಜೆವಾಲ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿ ಬಂದಿಲ್ಲ. ಕುಟುಂಬ ಸದಸ್ಯರಾಗಿ ಬಂದಿದ್ದರು. ಪಕ್ಷ ಸಂಘಟನೆ ಸಂಬಂದ ಚರ್ಚೆ ಮಾಡಿದ್ದೇವೆ. ಇದೇನು ಹೊಸದಲ್ಲ, ಅವರ ತಂದೆಯ ಕಾಲದಿಂದಲೂ ನಮ್ಮ ನಡುವೆ ಆತ್ಮೀಯತೆ ಇದೆ.ನನ್ನ ಎಲ್ಲ ವಿಚಾರಗಳನ್ನು ಹೈಕಮಾಂಡ್ಗೆ ನಾನು ತಿಳಿಸಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ, ಮುಂದೇಯೂ ಇರ್ತೇನೆ. ಇದರ ಹೊರತಾಗಿ ಯಾವುದೇ ಡಿಸ್ಕಷನ್ ನಡಿಲಿಲ್ಲ ಎಂದಿರುತ್ತಾರೆ.
ಮಾಜಿ ಸಂಸದ ಮುನಿಯಪ್ಪ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಸುರ್ಜೇವಾಲರ ಭೇಟಿಯಾಗಿರುವ ಕುರಿತಾಗಿ It was a pleasure meeting you @rssurjewala at my residence in Bengaluru. ಎಂದು ಹಂಚಿಕೊಂಡಿರುವ ಅವರು ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಬೀಸೇಗೌಡ,ಮುಳಬಾಗಿಲು ರಾಮಪ್ರಸಾದ್ ಮುಂತಾದವರು ಇರುವ ಫೋಟೋ ಸಹ ಹಂಚಿಕೊಂಡಿದ್ದಾರೆ.
ಸಂಗ್ರಹ ಬರಹ: ಚ.ಶ್ರೀನಿವಾಸಮೂರ್ತಿ