ಶ್ರೀನಿವಾಸಪುರ:-ಕೊರೋನಾ ಸೋಂಕು ಹರಡುವುದನ್ನು ತಡೆಯಲು ಸರ್ಕಾರ ಜಾರಿಮಾಡಿರುವ ಲಾಕ್ ಡೌನ್ ಗೆ ಶ್ರೀನಿವಾಸಪುರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಜನತೆ ಉತ್ತಮವಾಗಿ ಸ್ಪಂದಿಸಿದರು.ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ತಾಲೂಕಾದ್ಯಂತ ಜನಸಂಚಾರ ಮತ್ತು ವಾಹನ ಸಂಚಾರ ಕಡಿಮೆಯಾಗಿತ್ತು. ಬೆಳಗ್ಗೆ ಹತ್ತು ಗಂಟೆಗೆ ಕರ್ಫ್ಯೂ ಕಟ್ಟು ನಿಟ್ಟಾಗಿ ಜಾರಿಗೆ ಬರುವ ಹಿನ್ನೆಲೆಯಲ್ಲಿ ದಿನಸಿ ಹಣ್ಣು ತರಕಾರಿ ವ್ಯಾಪಾರಿಗಳು ಸಣ್ಣ ಪುಟ್ಟ ಹೋಟೆಲ್ ಗಳು ತೆರದಿದ್ದವು.ಗ್ರಾಮೀಣ ಜನತೆ ತಮ್ಮ ಅವಶ್ಯ ವಸ್ತುಗಳನ್ನು ಕೊಳ್ಳಲು ಬೆಳಗ್ಗೆ ಪಟ್ಟಣದ ಅಂಗಡಿಗಳಿಗೆ ಬಂದು ವಹಿವಾಟು ಮಾಡಿಕೊಂಡು ಹೋದ ನಂತರ ಜನ ಸಂಚಾರ ಇಲ್ಲದೇ ರಸ್ತೆಗಳು ಬಿಕೋ ಎನ್ನುತಿತ್ತು. ಗ್ರಾಹಕರಿಂದ ಒಂದಷ್ಟು ವ್ಯಾಪಾರ ನಿರೀಕ್ಷಿಸಿದ್ದ ಮಾರಾಟಗಾರರು ನಿರಾಸೆ ಅನುಭವಿಸಿದರು. ಸೊಪ್ಪು ತರಕಾರಿ ಹಣ್ಣು ಹಂಪಲು ಇತ್ಯಾದಿ ವಸ್ತುಗಳು ಮಾರಾಟವಾಗದೇ ಉಳಿದವು.ಹತ್ತು ಗಂಟೆ ಹೊತ್ತಿಗೆ ಪೊಲೀಸರು ಮತ್ತು ಪುರಸಭೆ ಸಿಬ್ಬಂದಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಜನತೆಯನ್ನು ಮನೆಗಳಿಗೆ ಹೋಗುವಂತೆ ಸೂಚಿಸಿದರು.
ಪೋಲಿಸ್ ಬ್ಯಾರಿಕೇಡ್ ರಸ್ತೆ ಬಂದ್
ಹತ್ತು ಗಂಟೆಯ ನಂತರ ಮುಳಬಾಗಿಲು ವೃತ್ತ ಹಾಗು ಕಾಂಗ್ರೆಸ್ ಕಚೇರಿ ಬಳಿ ಬ್ಯಾರಿಕೇಡ್ ಗಳನ್ನು ಹಾಕಿ ಕಾವಲು ಕಾದ ಪೋಲಿಸರು ಬರುತ್ತಿದ್ದ ವಾಹನಗಳನ್ನ ತಪಾಸಣೆ ಮಾಡಿ, ಅನಗತ್ಯವಾಗಿ ಸಂಚಾರ ಮಾಡಿದವರ ವಿರುದ್ದ ಲಾಠಿ ಬೀಸಿದ ಪರಿಣಾಮ ವಾಹನಗಳ ಸಂಚಾರ ಬಹುತೇಕ ಸ್ಥಬ್ದವಾಯಿತು ಮಾಸ್ಕ್ ಧರಿಸದೇ ಬಂದವರಿಗೆ ದಂಡದ ಜೊತೆಗೆ ಲಾಠಿ ರುಚಿ ತೋರಿಸುತ್ತಿದ್ದರು.
ಕೆ.ಎಸ್.ಆರ್.ಟಿ.ಸಿ ಸಂಚಾರ ಇತ್ತು ಜನ ಇಲ್ಲ
ವಾರಂತ್ಯದ ಕರ್ಫ್ಯೂಗೆ ಜನರು ಸ್ವಯಿಚ್ಛೆಯಿಂದ ಸ್ಪಂದಿಸಿದ್ದು ಬೆಳಗಿನಿಂದಲೂ ನಿಗದಿತ ಮಾರ್ಗಗಳಲ್ಲಿ ಓಡಾಡುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಜನರೇ ಇಲ್ಲದೆ ಕಾಲಿ ಬಸ್ಸುಗಳ ಒಡಾಟ ಸಾಗಿತ್ತು. ಕೆ.ಎಸ್.ಆರ್.ಟಿ.ಸಿ ನಿಲ್ದಾಣದಲ್ಲೂ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.ಇನ್ನೂ ಖಾಸಗಿ ವಾಹನಗಳ ಪತ್ತೆಯೇ ಇಲ್ಲ.
ತಾಲೂಕಿನ ಪ್ರಮುಖ ಹೋಬಳಿ ಕೇಂದ್ರಗಳಾದ ಯಲ್ದೂರು,ರಾಯಲ್ಪಾಡು,ಗೌನಿಪಲ್ಲಿ ಲಕ್ಷ್ಮೀಪುರಗಳಲ್ಲೂ ಜನತೆ ಸರ್ಕಾರಿ ಲಾಕ್ ಡೌನ್ ಗೆ ಸ್ಪಂದಿಸಿದ್ದು ವಿಶೇಷ.ಬೆಂಗಳೂರು ನಗರದಲ್ಲಿ ಕಟ್ಟುನಿಟ್ಟಿನ ಕರ್ಫ್ಯೂ ಸೋಮವಾರ ಬೆಳಗ್ಗೆಯವರೆಗೂ ಇರುವ ಕಾರಣ ತಾಲೂಕಿನ ಬಹುತೇಕ ಬೆಂಗಳೂರಿನಲ್ಲಿದ್ದ ಯುವಕರು ಶುಕ್ರವಾರ ಸಂಜೆಗೆ ಸ್ವಗ್ರಾಮಗಳಿಗೆ ಕುಟುಂಬ ಸಮೇತ ಬಂದಿಳಿದಿದ್ದಾರೆ.