ಶ್ರೀನಿವಾಸಪುರ: ಸಾಹಿತ್ಯದಿಂದ ಸಮಾಜದಲ್ಲಿ ಸೌಹಾರ್ದತೆ ಮಾನವೀಯತೆ ಬೆಳೆಯಲು ಸಹಕಾರಿಯಾಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲಗೌಡ ಹೇಳಿದರು.ಅವರು ಸುಗಟೂರಿನ ಧರ್ಮೇಶ್ ಗೆಳೆಯರ ಬಳಗದ ವತಿಯಿಂದ ಸಾಹಿತಿ ಪನಸಮಾಕನಹಳ್ಳಿ ಚೌಡರೆಡ್ದಿಯವರಿಗೆ ಏರ್ಪಡಿಸಿದ್ದ ಧರ್ಮೇಶ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಸಾಹಿತಿ ತನ್ನ ಬದುಕು ಮತ್ತು ಬರಹದ ನಡುವೆ ಸಮನ್ವಯತೆ ಸಾಧಿಸಬೇಕು. ಸಾಹಿತ್ಯದಲ್ಲಿ ಬರೆದುಕೊಂಡಂತೆ ಜೀವನ ಮಾಡಿದಾಗ ಸಾಮಾಜಿಕ ಮನ್ನಣೆ ದೊರೆಯುತ್ತದೆ. ಅಂತಹ ಮೆಲ್ಪಂಕ್ತಿ ಹಾಕಿಕೊಂಡು ಸಾಹಿತಿ ಪನಸಮಾಕನಹಳ್ಳಿ ಚೌಡರೆಡ್ಡಿ ಸಾಗುತ್ತಿದ್ದಾರೆ.ಅವರ ಬರಹಗಳು ಸಮಾಜ ಮುಖಿಯಾಗಿ ಜೀವನೋತ್ಸಾಹ ಉಂಟುಮಾಡುತ್ತವೆ. ಅವರ ಕೃತಿಗಳಲ್ಲಿ ಮಾನವೀಯ ಮೌಲ್ಯಗಳು ಪರಿಸರ ಪ್ರೇಮ ಪ್ರಧಾನ ಅಂಶವಾಗಿ ಕಂಡುಬರುತ್ತದೆ ಎಂದರು.ಅವರ ನಾಲ್ಕು ದಶಕಗಳ ಸಾಹಿತ್ಯ,ಶಿಕ್ಷಣ ಹಾಗೂ ಪತ್ರಿಕಾ ಕ್ಷೇತ್ರದ ಸೇವೆಯನ್ನು ಗುರುತಿಸಿ ಇಂದು ಪ್ರಶಸ್ತಿ ನೀಡಲಾಗಿದೆ.ಇದೊಂದು ಬಹುದೊಡ್ದ ಸಾಧನೆಯಾಗಿದೆ ಮತ್ತು ಅರ್ಹ ವ್ಯಕ್ತಿತ್ವಕ್ಕೆ ಸಂದ ಗೌರವವಾಗಿದೆ. ಗೆಳೆಯರ ಬಳಗದ ಪ್ರಥಮ ಪ್ರಶಸ್ತಿ ತಾಲ್ಲೂಕಿಗೆ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗು ಸಮಾಜಮುಖಿ ವೈದ್ಯ ವೆಂಕಟಾಚಲ ಮಾತನಾಡಿ, ಸರ್ಕಾರಿ ಶಾಲೆ ಶಿಕ್ಷಕರಾಗಿರುವ ಧರ್ಮೇಶ್ ತಮ್ಮ ತಿಂಗಳ ಸಂಬಳದಲ್ಲಿ ಪ್ರತಿ ತಿಂಗಳು 10 ಸಾವಿರ ಉಳಿಸಿ,ಧರ್ಮೇಶ್ ಗೆಳೆಯರ ಬಳಗ ಅಂತ ಕಟ್ಟಿಕೊಂಡು ವಿವಿಧ ಭಾಗಗಳ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಸಮಾಜ ಸೇವೆಗೆ ನೀಡುತ್ತಿರುವ ಅವರ ಸೇವೆ ಅನನ್ಯ,ಗೆಳೆಯರ ಜೊತೆಗೆ ಪ್ರಶಸ್ತಿ ಸ್ಥಾಪಿಸಿರುವುದು ಶ್ಲಾಘನೀಯ ಸಂಗತಿಯಾಗಿದೆ. ಅದನ್ನು ಅರ್ಹ ವ್ಯಕ್ತಿಗೆ ನೀಡಿರುವುದು ಮತ್ತಷ್ಟು ಸಂತೋಷದ ವಿಚಾರ ಎಂದು ಹೇಳಿದರು.
ಉಪನ್ಯಾಸಕ ಹಾಗೂ ಸಾಹಿತಿ ಗಾಂಡ್ಲಹಳ್ಳಿ ಶಂಕರೇಗೌಡ ಪ್ರಾಸ್ತಾವಿಕ ಮಾತುಗಳನ್ನಾಡಿ ಪನಸಮಾಕನಹಳ್ಳಿಚೌಡರೆಡ್ಡಿ ಅವರ ಬದುಕು, ಸಾಹಿತ್ಯದ ಕುರಿತು ಹೇಳಿದರು.
ಪ್ರಶಸ್ತಿ ಪುರಸೃತ ಪನಸಮಾಕನಹಳ್ಳಿಚೌಡರೆಡ್ಡಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ನನ್ನ ಸಾಹಿತ್ಯ ಸಾಧನೆಯನ್ನು ಗುರುತಿಸಿ ನನಗೆ ಪ್ರಶಸ್ತಿ ನೀಡಿರುವ ಧರ್ಮೇಶ್ ಗೆಳೆಯರ ಬಳಗಕ್ಕೆ ಗೌರವ ಪುರಕ ವಂದನೆಗಳು ಹಾಗು ತಾಲೂಕಿಗೆ ಹೆಮ್ಮೆಯ ವಿಚಾರವಾಗಿದೆ ಎಂದರು.ಸಾಹಿತಿ ಪನಸಮಾಕನಹಳ್ಳಿಚೌಡರೆಡ್ಡಿ-ಸುಗುಣ ದಂಪತಿಯನ್ನು ಸನ್ಮಾನಿಸಲಾಯಿತು.ಪ್ರಶಸ್ತಿ ಪತ್ರ,ಸ್ಮರಣಿಕೆ ಹಾಗೂ40 ಸಾವಿರ ನಗದು ಒಳಗೊಂಡ, ಧರ್ಮೇಶ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪಿ.ಎಸ್.ಮಂಜುಳ, ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಮಾಯಾ ಬಾಲಚಂದ್ರ, ಧರ್ಮೇಶ್ ಗೆಳೆಯರ ಬಳಗದ ಕಾರ್ಯದರ್ಶಿ ವಿ.ರಾಮಪ್ಪ ಮಾತನಾಡಿದರು.
ತಾಲ್ಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ರಾಮಕೃಷ್ಣೇಗೌಡ, ಸಿ.ಆರ್.ಪಿ ನಟರಾಜ್,ಉಪನ್ಯಾಸಕರಾದ ಸಿತರೆಡ್ಡಿ,ಆರತಿ, ಶಿಕ್ಷಕ ನಾರಾಯಣಸ್ವಾಮಿ,ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಸೀನಪ್ಪ,ಹಿರಿಯ ಛಾಯಗ್ರಾಹಕ ವಿಶ್ವನಾಥಸಿಂಗ್,ಮುಂತಾದವರು ಇದ್ದರು.
ಇದೇ ಸಂದರ್ಬದಲ್ಲಿ ವೈದ್ಯ ವೆಂಕಟಾಚಲ ಹಾಗು ಮೂಳೆ ತಙ್ಞ ವೈದ್ಯ ನರೇಂದ್ರ ಪ್ರಾಯೋಜಿಸಿರುವ ಗದಗ್ ಮೂಲದ ಲಡಾಯ್ ಸಂಸ್ಥೆಯ ಹೊರತಂದಿರುವ ಸಂವಿಧಾನದ ಮಾಹಿಯುಳ್ಳ ಅಂಬೇಡ್ಕರ್ ದಿನಚರಿ೨೦೨೩ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಮಾಡಲಾಯಿತು.