ಶ್ರೀನಿವಾಸಪುರದ ಲಿಂಗಾಪುರ ನಾಗರಾಜ್ ಮುಖ್ಯಸ್ಥರಾದ
ರಿಲೇಬಲ್ ಆರ್ಗಾನಿಕ್ ಸರ್ಟಿಫಿಕೇಷನ್ ಸಂಸ್ಥೆ(ರೊಕೊ)
ಸಂಸ್ಥೆ ವತಿಯಿಂದ ಕಲಿಕಾ ಸಾಮಗ್ರಿಗಳ ವಿತರಣೆ
ಶ್ರೀನಿವಾಸಪುರ : ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಗುರಿ ಸಾಧಿಸಲು ಗ್ರಾಮೀಣ ಶೈಕ್ಷಣಿಕ ವ್ಯವಸ್ಥೆಗೆ ಜೀವ ತುಂಬುವಂತ ಕೆಲಸವನ್ನು ಬೆಂಗಳೂರಿನ ರಿಲೇಬಲ್ ಆರ್ಗಾನಿಕ್ ಸರ್ಟಿಫಿಕೇಷನ್ ಸಂಸ್ಥೆ(ರೊಕೊ) ಮಾಡಿದೆ. ಸಂಸ್ಥೆ ವತಿಯಿಂದ ಶ್ರೀನಿವಾಸಪುರ ತಾಲೂಕಿನ ಕೆಲವೊಂದು ಸರ್ಕಾರಿ ಶಾಲೆಗಳಿಗೆ ಕಲಿಕಾ ಸಾಮಾಗ್ರಿಗಳು ಸೇರಿದಂತೆ ಸಲಕರಣೆಗಳನ್ನು ವಿತರಿಸಿದ್ದಾರೆ.
ಇದ್ಯಾವುದು ಹೇಳಿಕೆಗೆ ಅಥಾವ ಫೋಟೋ ಸೆಷನ್ ಗಾಗಿ ಕಾಟಾಚಾರಕ್ಕೆ ವಿತರಿಸಿದ ವಸ್ತುಗಳಲ್ಲ ಭರ್ಜರಿ ನಲವತ್ತಾರು ಲಕ್ಷ ಮೌಲ್ಯದ ನಲಿಕಲಿ ಟೇಬಲ್ಗಳು, ಚೇರುಗಳು, ಶಾಲಾ ಬ್ಯಾಗ್ಗಳು, ವಿಧ್ಯಾರ್ಥಿಗಳಿಗೆ ಟ್ರಾಕ್ ಸೂಟ್ ಹಾಗು ನೋಟ್ ಪುಸ್ತಕಗಳನ್ನು ವಿತರಿಸಲಾಗಿದೆ.
ರಿಲೇಬಲ್ ಆರ್ಗಾನಿಕ್ ಸರ್ಟಿಫಿಕೇಷನ್ (ರೊಕೊ) ಸಂಸ್ಥೆ ಮುಖ್ಯಸ್ಥ ನಾಗರಾಜ್ ಶ್ರೀನಿವಾಸಪುರ ತಾಲೂಕಿನ ಲಿಂಗಾಪುರ ಗ್ರಾಮದವರಾಗಿದ್ದು ಅವರು ತಾವು ಒದಿದ ಶಾಲೆಗಳಲ್ಲಿನ ಶೈಕ್ಷಣಿಕ ವ್ಯವಸ್ಥೆಯನ್ನು ಬಲ ಪಡಿಸುವ ಕೆಲಸ ಮಾಡಿದ್ದಾರೆ.
ಅವರು ತಾಲೂಕಿನ ಚೆನ್ನಯ್ಯಗಾರಿಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಯಲ್ಲಿ ಸಲಕರಣೆಗಳನ್ನು ವಿತರಿಸಿ ಮಾತನಾಡಿ ತಮ್ಮ ಬಾಲ್ಯದಲ್ಲಿ ಗ್ರಾಮೀಣಭಾಗದಲ್ಲಿ ತಾವು ಕಷ್ಟಪಟ್ಟು ವಿದ್ಯಾಭ್ಯಾಸವನ್ನು ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಾಡಿದ್ದು, ತಾಲೂಕಿನ ಕೋಟಬಲ್ಲಪಲ್ಲಿ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಸೋಮಯಾಜಲಹಳ್ಳಿಯಲ್ಲಿ ಪ್ರೌಡಶಿಕ್ಷಣ ಶ್ರೀನಿವಾಸಪುರದ ಸರ್ಕಾರಿ ಪಿಯು ಕಾಲೇಜು ನಂತರ, ಚಿಂತಾಮಣಿಯ ಕುರುಬೂರು ಸರ್ಕಾರಿ ಕೃಷಿ ಕಾಲೇಜಿನಲ್ಲಿ ಪದವಿ ಪಡೆದು ಬೆಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಎಂ.ಎಸ್.ಸಿ ಪಡೆದ ಬಗ್ಗೆ ವಿವರಿಸಿದ ಅವರು ಹಲವಾರು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಇಂದು ನನ್ನದೆ ಆದಂತ ಸಂಸ್ಥೆ ಸ್ಥಾಪಿಸಿರುತ್ತೇನೆ, ಸರ್ಕಾರಿ ಶಾಲೆಯಲ್ಲಿ ಓದುವಂತ ಬಹುತೇಕ ಮಕ್ಕಳು ಸಾಮಾನ್ಯ ಕುಟುಂಬದಿಂದ ಬಂದವರಾಗಿ ಆರ್ಥಿಕವಾಗಿ ಹಿಂದುಳಿದಿರುತ್ತಾರೆ ಅಂತಹ ಮಕ್ಕಳಿಗೆ ಅರ್ಥಿಕವಾಗಿ ಸಹಾಯ ಮಾಡಿದಾಗ ಅವರು ಸಾಮಜಿಕವಾಗಿ ಸದೃಡರಾಗಿ ಕಾನ್ವೆಂಟ್ ಮಕ್ಕಳಿಗೆ ಕಡಿಮೆ ಇಲ್ಲದಂತೆ ಗುಣಾತ್ಮಕವಾದ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ ವಿದ್ಯಾರ್ಥಿಗಳು ಈ ಉದ್ದೇಶದಿಂದ ಇಲ್ಲಿನ ಶಿಕ್ಷಕರ ಸಲಹೆ ಸಹಕಾರ ಪಡೆದು ಕಲಿಕಾ ಸಾಮಾಗ್ರಿಗಳನ್ನು ವಿತರಿಸುತ್ತಿರುವುದಾಗಿ ಹೇಳಿದರು.
ಇದುವರಿಗೂ 55 ಶಾಲೆಗಳಿಗೆ ನಲಿಕಲಿ ಟೇಬಲ್ ಮತ್ತು ಚೇರುಗಳು, 1250 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ಗಳು, ಟ್ರ್ಯಾಕ್ ಸೂಟ್ ಹಾಗು ನೋಟ್ ಪುಸ್ತಕಗಳು ಸೇರಿದಂತೆ 46 ಲಕ್ಷ ಮೌಲ್ಯದ ಸಲಕರಣೆಗಳನ್ನು ವಿತರಿಸಿದ್ದು ಅವಶ್ಯಕತೆ ಇದ್ದರೆ ಇನ್ನೂ ಸೌಲಭ್ಯ ಒದಗಿಸುವುದಾಗಿ ತಿಳಿಸಿದರು.ವಿದ್ಯಾರ್ಥಿಗಳು ಇಷ್ಟ ಪಟ್ಟು ವಿಧ್ಯಾಭ್ಯಾಸ ಮಾಡುವ ಮೂಲಕ ಉನ್ನತ ಮಟ್ಟದ ಪದವಿಗಳನ್ನು ಪಡೆದು ಸಮಾಜದಲ್ಲಿ ಉನ್ನತ ಸ್ಥಾನ ಪಡೆದು ನಿಮ್ಮನ್ನೆ ನಂಬಿರುವ ಪೋಷಕರನ್ನು ಚೆನ್ನಾಗಿ ನೋಡಿಕೊಂಡು ಜೊತೆಗೆ ಸಾಮಜಿಕ ಕಳಕಳಿ ಇಟ್ಟುಕೊಂಡು ಸಮಾಜ ಮುಖಿಯಾಗಿ ಜೀವನ ಮಾಡುವಂತೆ ಸಲಹೆ ಇತ್ತರು.
ಕೊತ್ತಗಡ್ಡ ಸರ್ಕಾರಿ ಶಾಲೆ ಶಿಕ್ಷಕ ಎಂ.ಮೂರ್ತಿ ಮಾತನಾಡಿ ಲಿಂಗಾಪುರ ನಾಗರಾಜ್ ಸಾಮನ್ಯ ಕುಟುಂಬದಿಂದ ಬಂದವರಾಗಿದ್ದು ಅವರು ತಮ್ಮದೆ ಆದಂತ ಸಂಸ್ಥೆ ಸ್ಥಾಪಿಸಿ ಸಭ್ಯ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿದ್ದಾರೆ, ವಿಶೇಷವಾಗಿ ತಾವು ಅಭ್ಯಾಸ ಮಾಡಿದ ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿ ಅಲ್ಲಿ ಒಡುತ್ತಿರುವ ಮಕ್ಕಳು ತಮ್ಮಂತೆ ಉನ್ನತ ಪದವಿ ಪಡೆಯಲಿ ಎಂಬ ಸದುದ್ದೇಶದಿಂದ ತಾಲೂಕಿನ ಪುಲಗೂರಕೋಟೆ, ಸೋಮಯಾಜಲಹಳ್ಳಿ, ಹಾಗು ಮುತ್ತಕಪಲ್ಲಿ ಕ್ಲಸ್ಟರ್ಗಳ ವ್ಯಾಪ್ತಿಯಲ್ಲಿರುವ ಶಾಲೆಗಳಿಗೆ ಶೈಕ್ಷಣಿಕ ಸಲಕರಣೆಗಳನ್ನು ವಿತರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.ಈ ಸಂದರ್ಭದಲ್ಲಿ ಪುಲಗೂರಕೋಟೆ ಕ್ಲಸ್ಟರ್ನ ಸಿಆರ್ಪಿ ಶಿವರಾಘವರೆಡ್ಡಿ,ಲಿಂಗಾಪುರ ಗ್ರಾಮದ ಮುಖಂಡರಾದ ಭದ್ರಪ್ಪ,ತೇಜ್ವನಿ ನಾಗರಾಜ್, ಶಾಲೆಯ ಮುಖ್ಯ ಶಿಕ್ಷಕ ಆನಂದ್ಕುಮಾರ್, ಶಿಕ್ಷಕರಾದ ಕೋದಂಡರಾಮಯ್ಯ ಮುಂತಾದವರು ಇದ್ದರು.
ಏನಿದು ರಿಲೇಬಲ್ ಆರ್ಗಾನಿಕ್ ಸರ್ಟಿಫಿಕೇಷನ್ ಸಂಸ್ಥೆ.
ರಿಲೇಬಲ್ ಆರ್ಗಾನಿಕ್ ಸರ್ಟಿಫಿಕೇಷನ್ ಸಂಸ್ಥೆ ರೈತಾಪಿ ಜನರೊಂದಿಗೆ ಕಾರ್ಯ ನಿರ್ವಹಿಸುವ ಸಂಸ್ಥೆಯಾಗಿದ್ದು ಭಾರತದ ಪ್ರಾಚೀನ ಕೃಷಿ ವ್ಯವಸ್ಥೆಯಾದ ಸಾವಯವ ಕೃಷಿಯನ್ನು ಪ್ರೊತ್ಸಾಹಿಸುವ ಸಂಸ್ಥೆಯಾಗಿ ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ.ಸಮರ್ಥ ಪ್ರಮಾಣೀಕರಣ ಸೇವೆಗಳ ಮೂಲಕ ಭೂಮಾತೆ ಪ್ರಕೃತಿಯನ್ನು ಸಂರಕ್ಷಿಸಲು ಬದ್ಧವಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ಪಾದಕರು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವಂತ ಕೆಲಸ ಮಾಡುತ್ತಿದೆ.