ನ್ಯೂಜ್ ಡೆಸ್ಕ್:ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆಗೂ ಮುನ್ನ ಅಲ್ಲಿ ದಿನೆದಿನೆ ಉಗ್ರರ ಚಟುವಟಿಕೆ ಹೆಚ್ಚುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಭಯೋತ್ಪಾದಕರು ಮತ್ತು ಭಾರತೀಯ ಸೇನಾ ಯೋಧರ ನಡುವೆ ಎನ್ಕೌಂಟರ್ ನಡೆಯುತ್ತಿದೆ,ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಮೊದಲ ಹಂತದ ಚುನಾವಣೆ ಇದೇ ತಿಂಗಳ 18ರಂದು ಆರಂಭವಾಗಲಿದೆ. 2019 ರಲ್ಲಿ ಕೇಂದ್ರ ಸರ್ಕಾರವು 370 ನೇ ವಿಧಿಯನ್ನು ರದ್ದುಗೊಳಿದ ನಂತರದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆಯಾಗಿದ್ದು ಕೆಲವು ತಿಂಗಳುಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ಮತ್ತು ಎನ್ಕೌಂಟರ್ಗಳ ಸರಣಿಗಳು ನಡೆಯುತ್ತಿದೆ.
ಇತ್ತೀಚೆಗೆ ಕಥುವಾ ಮತ್ತು ಕಿಶ್ತ್ವಾರ್ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಇಬ್ಬರು ಸೇನಾ ಯೋಧರು ಹತರಾಗಿದ್ದರು. ಇನ್ನೂ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂವರು ಉಗ್ರರು ಹತರಾಗಿದ್ದಾರೆ. ಗುಪ್ತಚರ ಮೂಲಗಳಿಂದ ಲಭಿಸಿದ ಮಾಹಿತಿಯೊಂದಿಗೆ ಖಾಯಂ ಪ್ರವೇಶಿಸಿದ ಭಾರತೀಯ ಸೇನೆ, ಉಗ್ರರನ್ನು ಸುತ್ತುವರಿದು ಸದೆಬಡಿದು ಜಮ್ಮು ಮತ್ತು ಕಾಶ್ಮೀರದ ಕಥುವಾ ಮತ್ತು ಕಿಶ್ತ್ವಾರ್ ಜಿಲ್ಲೆಗಳಲ್ಲಿ ಶುಕ್ರವಾರ ಎರಡು ಎನ್ಕೌಂಟರ್ಗಳು ನಡೆದಿವೆ. ಕಥುವಾ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಭಾರತೀಯ ಸೇನೆ ಮೂವರು ಉಗ್ರರನ್ನು ಹತ್ಯೆ ಮಾಡಿದೆ. ಕಿಶ್ತ್ವಾರ್ ಜಿಲ್ಲೆಯಲ್ಲಿ ಭಯೋತ್ಪಾದಕರು ಓಡಾಡುತ್ತಿದ್ದಾರೆ ಎಂದು ಗುಪ್ತಚರ ಅಧಿಕಾರಿಗಳು ಭಾರತೀಯ ಸೇನೆಗೆ ಮಾಹಿತಿ ನೀಡಿದ್ದು ಇದರಿಂದ ಎಚ್ಚೆತ್ತ ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ವಿಶೇಷ ಕಾರ್ಯಾಚರಣೆ ನಡೆಸಿದೆ. ಶುಕ್ರವಾರ ಮಧ್ಯಾಹ್ನ ಸೇನೆ ಮತ್ತು ಪೊಲೀಸರು ಭಯೋತ್ಪಾದಕರು ಇರುವ ಪ್ರದೇಶವನ್ನು ಗುರುತಿಸಿ ಸುತ್ತುವರಿದಿದ್ದಾರೆ. ಇದನ್ನು ತಿಳಿದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ತಕ್ಷಣವೇ ಪ್ರತ್ಯುತ್ತರ ನೀಡಿದ ಸೇನೆ ಮತ್ತು ಪೊಲೀಸರು ಅವರ ಮೇಲೆ ಗುಂಡು ಹಾರಿಸಿದ್ದು ದಾಳಿ ಪ್ರತಿದಾಳಿಯಲ್ಲಿ ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಗಾಯಗೊಂಡ ಸೈನಿಕರನ್ನು ಚಿಕಿತ್ಸೆಗಾಗಿ ಹತ್ತಿರದ ಕಮಾಂಡ್ ಸೆಂಟರ್ಗೆ ಕರೆದೊಯ್ಯಲಾಯಿತು. ಇವರಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬಳಿಕ ಆ ಪ್ರದೇಶದಲ್ಲಿ ಉಗ್ರರಿಗಾಗಿ ಹುಡುಕಾಟ ಆರಂಭಿಸಿದ್ದರು. ಜುಲೈ ತಿಂಗಳಲ್ಲಿ ದೋಡಾ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಈ ಭಯೋತ್ಪಾದಕರು ಭಾಗಿಯಾಗಿದ್ದಾರೆ ಎಂದು ಸೇನೆ ಶಂಕಿಸಿದೆ. ಈ ಘಟನೆಯಲ್ಲಿ ನಾಲ್ವರು ಯೋಧರು ಪ್ರಾಣ ಕಳೆದುಕೊಂಡಿದ್ದರು.
ಚೆನಾಬ್ ಕಣಿವೆಯ ದೋಡಾ, ಕಿಶ್ತ್ವಾರ್ ಮತ್ತು ರಾಂಬನ್ ಜಿಲ್ಲೆಗಳಲ್ಲಿ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇಂತಹ ಹೊತ್ತಿನಲ್ಲಿ ಆ ಪ್ರದೇಶಗಳಲ್ಲಿ ಸತತ ಎನ್ಕೌಂಟರ್ಗಳು ನಡೆಯುತ್ತಿರುವುದರಿಂದ ಸ್ಥಳೀಯ ಜನರು ಭಯಭೀತರಾಗಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತನಾಗ್, ಪುಲ್ವಾಮಾ, ಶೋಪಿಯಾನ್ ಮತ್ತು ಕುಲ್ಗಾಮ್ ಜಿಲ್ಲೆಗಳ 16 ವಿಧಾನಸಭಾ ಕ್ಷೇತ್ರಗಳಿಗೆ ಇದೇ ತಿಂಗಳ 18 ರಂದು ಮೊದಲ ಹಂತದ ವಿಧಾನಸಭಾ ಚುನಾವಣೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ 3 ಹಂತಗಳಲ್ಲಿ ನಡೆಯಲಿದೆ.