1988ರಲ್ಲಿ ಅನಿರೀಕ್ಷಿತವಾಗಿ ನಾನು ಪತ್ರಕರ್ತನಾಗಿ ಕೆಲಸ ಆರಂಭಿಸಿದೆ. ಪತ್ರಕರ್ತನಾಗಿ ಅಂಬೆಗಾಲು ಇಟ್ಟವನು ಮುಖ್ಯ ಉಪಸಂಪಾದಕನಾಗಿ ಹೊರಹೊಮ್ಮಿದೆ. ಕೋಲಾರ ಜಿಲ್ಲೆ ನನಗೆ ಹೊಸದೇನಲ್ಲ ಉಪನ್ಯಾಸಕನಾಗಿ ಸರ್ಕಾರಿ ಬದುಕನ್ನು ಇಲ್ಲೆ ಆರಂಭಿಸಿದೆ ಈಗ ಜಿಲ್ಲಾಧಿಕಾರಿ ಆಗಿ ಬಂದಿದ್ದೇನೆ. ವಿವಿಧ ಇಲಾಖೆಗಳಲ್ಲಿ 18 ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದೇನೆ. ಕೋಲಾರ ಜಿಲ್ಲೆ ಅನ್ನ ಹಾಕಿದೆ. 32 ವರ್ಷಗಳ ಬಳಿಕ ಈಗ ಮತ್ತೆ ಇಲ್ಲಿಗೆ ಬಂದಿದ್ದೇನೆ. ಮುಕ್ತ ಮನಸ್ಸಿನಿಂದ ಬಂದಿದ್ದೇನೆ ಎಂದು ನೂತನ ಜಿಲ್ಲಾಧಿಕಾರಿ ಎಂ.ಆರ್. ರವಿ ಹೇಳಿದರು.
ಕೋಲಾರ:ವ್ಯವಸ್ಥೆಯಲ್ಲಿ ಸಮಸ್ಯೆ, ಸವಾಲುಗಳು, ಒತ್ತಡ ಇರುವುದು ಸಾಮಾನ್ಯ ಇವೆಲ್ಲವನ್ನು ನಿವಾರಿಸಿ ಕೋಲಾರ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿರುವುದಾಗಿ ಜಿಲ್ಲಾಧಿಕಾರಿ ಎಂ.ಆರ್. ರವಿ ತಿಳಿಸಿದರು ಅವರು ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಗೆ ಸಂಬಂಧಿಸಿದಂತೆ ಸಾಧಕ ಬಾಧಕಗಳ ಸ್ವಾಟ್ ಅನಾಲಿಸಿಸ್ ಮಾಡಿರುತ್ತೇನೆ ಶಕ್ತಿ, ದೌರ್ಬಲ್ಯ, ಅವಕಾಶಗಳು ಹಾಗೂ ಅಡೆತಡೆ, ಆತಂಕಗಳ ಪಟ್ಟಿ ಮಾಡಿಕೊಂಡಿದ್ದೇನೆ. ನನಗೆ ಯಾವುದೇ ಭ್ರಮೆ ಇಲ್ಲ. ಮಾತಿಗಿಂತ ನನ್ನ ಕೆಲಸ ಮಾತನಾಡಿದರೆ ಮಾತ್ರ ನಾನು ಒಬ್ಬ ಅಧಿಕಾರಿಯಾಗಿ ಗೆದ್ದಂತೆ. ಜನಪರ ಕೆಲಸ ಮಾಡುವ ಅಧಿಕಾರಿಗಳಿಗೆ ಜನಪ್ರಿಯತೆ ಅಗತ್ಯವಿಲ್ಲ ಎಂದರು.
ಜಿಲ್ಲೆಯಲ್ಲಿ ಹೊಸ ಪರ್ವ, ಪರಿವರ್ತನೆಗೆ ಮುನ್ನುಡಿ ಇಡೋಣ ಇದಕ್ಕಾಗಿ ಜಿಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು, ಪತ್ರಕರ್ತರು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ ಇದೆ. ಪ್ರತಿ ಜಿಲ್ಲೆಗೆ ತನ್ನದೇ ಆದ ವೈವಿಧ್ಯತೆ ಇರುತ್ತದೆ. ಅದನ್ನು ಗಮನಿಸಿಕೊಂಡು ಅಗತ್ಯತೆಗೆ ತಕ್ಕಂತೆ ಕೆಲಸ ಮಾಡಬೇಕು. ಒಳನೋಟ, ಮುನ್ನೋಟಗಳು ಅಗತ್ಯವಿರುತ್ತದೆ. ಯಾವುದೇ ವಿಚಾರವನ್ನು ಆಳಕ್ಕೆ, ಮೂಲಕ್ಕೆ ಹೋಗಿ ನೋಡಬೇಕು.ಕೋಲಾರ ಜಿಲ್ಲೆ ಭವಿಷ್ಯದಲ್ಲಿ 5 ರಿಂದ 10 ವರ್ಷಗಳಲ್ಲಿ ಗಮನಾರ್ಹವಾಗಿ ಬದಲಾಗುವಂತ ಜಿಲ್ಲೆಯಾಗಿದ್ದು ಅಭಿವೃದ್ಧಿ ದೃಷ್ಟಿಕೊನದಿಂದ ಪರಿವರ್ತನೆಯ ಹಾದಿಯಲ್ಲಿ ಎಚ್ಚರ ತಪ್ಪಬಾರದು. ಆಡಳಿತ ಚುರುಕುಗೊಳಿಸಬೇಕಾದ ಅಗತ್ಯವಿದೆ ಎಂದರು.
ಭೂಗಳ್ಳರಿಗೆ ಉಳಿಗಾಲವಿಲ್ಲ
ಸರ್ಕಾರಿ ಭೂಮಿ ಕಬಳಿಸುವ ಭೂಗಳ್ಳರಿಗೆ ಇನ್ನು ಮುಂದೆ ಜಿಲ್ಲೆಯಲ್ಲಿ ಉಳಿಗಾಲವಿಲ್ಲ. ಅಧಿಕಾರಿಗಳು ಕಾನೂನು ಪ್ರಕಾರ ಕಾರ್ಯನಿರ್ವಹಿಸಬೇಕು ಚುರುಕಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಕರ್ತವ್ಯ ಹಾಗೂ ಜವಾಬ್ದಾರಿ ಪದದ ನಡುವೆ ವ್ಯತ್ಯಾಸವಿದ್ದು ಪತ್ರಕರ್ತರು ಹಾಗೂ ಅಧಿಕಾರಿಗಳು ಸಮಾಜದ ವೈದ್ಯರಿದ್ದಂತೆ ಅಧಿಕಾರದ ಮದ ಅಧಿಕಾರಿಯ ತಲೆಗೆ ಹತ್ತಿದರೆ ಆತ ಸತ್ತಂತೆ ಯಾವುದೇ ಕೆಲಸದಲ್ಲಿ ಒತ್ತಡ ಸಹಜ. ಅದು ಎಲ್ಲಾ ಕಡೆ ಇದ್ದದ್ದೇ. ನಾನು 18 ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದೇನೆ. ಒತ್ತಡ ನಿರ್ವಹಣೆ ಕಲಿಯಬೇಕಾಗುತ್ತದೆ. ಕುಟುಂಬ ನಿರ್ವಹಣೆ ಮಾಡುವ ತಾಯಿ ಅದೆಷ್ಟು ಒತ್ತಡದಲ್ಲಿ ಇರುತ್ತಾರೆ ಅಲ್ಲವೇ, ಆಕೆ ತನಗೆ ಎದುರಾಗುವ ಒತ್ತಡವನ್ನು ನಿವಾರಿಸಿಕೊಂಡು ಕುಟುಂಬ ನಡೆಸುವ ಪರಿ ಇದಿಯಲ್ವಾ ಅದು ಅದ್ಭುತ ಎಂದು ಹೇಳಿದರು.
ಜನಸಂಪರ್ಕ ಸಭೆ ಮಾಡುತ್ತೇನೆ
ಜನರ ಸಮಸ್ಯೆ ಅರಿಯಲು ಜನಸಂಪರ್ಕ ಸಭೆಯ ಅಗತ್ಯ ಇದೆ ಫೋನ್ ಇನ್ ಕಾರ್ಯಕ್ರಮ ಸಹ ಮಾಡಬೇಕು. ಇದರಿಂದ ಜನರ ಭಾವನೆ ಏನೆಂಬುದು ಅರ್ಥವಾಗುತ್ತದೆ. ಈ ನಿಟ್ಟಿನಲ್ಲಿ ತಿಂಗಳಿಗೊಮ್ಮೆ ಜನಸಂಪರ್ಕ ನಡೆಸುವ ಮೂಲಕ ಪೋಡಿ ಮುಕ್ತ ಗ್ರಾಮ ಮಾಡುವ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕಸ ವಿಂಗಡನೆ ಮನೆಯಿಂದಲೆ ಆಗಬೇಕು
ಕಸ ವಿಲೇವಾರಿ ವೈಜ್ಞಾನಿಕವಾಗಿ ಅಗಬೇಕು ಅದು ಮನೆಯಿಂದಲೇ ಕಸ ವಿಂಗಡನೆಯಾಗಬೇಕು. ಈ ಸಂಬಂಧ ಸಭೆ ನಡೆಸಿ ನಗರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚನೆ ನೀಡುವುದಾಗಿ ಮತ್ತು ಬೀದಿನಾಯಿಗಳ ಸಮಸ್ಯೆ ನಿವಾಹರಣೆಗೆ ಕ್ರಮ ವಹಿಸುಸುವುದಾಗಿ ಹೇಳಿದರು.
ಪ್ರವಾಸೋದ್ಯಮಕ್ಕೆ ಆದ್ಯತೆ
ಬೆಂಗಳೂರಿನಿಂದ ತಿರುಪತಿಗೆ ಹೋಗುವ ಪ್ರವಾಸಿಗರ ಸಂಖ್ಯೆ ಬಹಳಷ್ಟಿದೆ. ಆದರೆ ಅವರ್ಯಾರು ಕೋಲಾರಕ್ಕೆ ಬರುವುದಿಲ್ಲ ಇದಕ್ಕಾಗಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಇಲ್ಲೂ ಅನೇಕ ಪ್ರವಾಸಿ ತಾಣಗಳು ಇವೆ. ಪ್ರಸಿದ್ಧ ದೇಗುಲಗಳಿವೆ. ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿದರೆ ಪ್ರವಾಸಿ ತಾಣಗಳಿಗೆ ಜನಬರುವಂತಾಗುತ್ತಾರೆ.
ಕೈಗಾರಿಕೆಗಳು ಬಾರದಿದ್ದರೆ ಕೋಲಾರ ಹಳ್ಳಿಯಂತಿರುತಿತ್ತು ಗೋಪಿನಾಥ್
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೈಗಾರಿಕೆಗಳು ಬಾರದಿದ್ದರೆ ಕೋಲಾರ ಒಂದು ಹಳ್ಳಿ ಉಳಿಯುತಿತ್ತು. ಈಗಲೂ ಕೆಲ ಬಡಾವಣೆಗಳ ರಸ್ತೆಗಳು ಗ್ರಾಮೀಣ ಭಾಗದಂತೆ ಇವೆ. ಆಬಿವೃದ್ಧಿಯಲ್ಲಿ ತುಂಬಾ ಹಿಂದುಳಿದಿದ್ದು ರಾಜಕಾರಣಿಗಳ ನಡುವೆ ಹೊಂದಾಣಿಕೆ ಇಲ್ಲ. ಅಧಿಕಾರಿಗಳನ್ನು ಎಚ್ಚರಿಸಿ ಕೆಲಸ ಮಾಡಿಸಿದರೆ ಅಭಿವೃದ್ಧಿ ಸಾಧ್ಯ ಅಗಲಿದೆ ಎಂದು ಸಲಹೆ ನೀಡಿದರು.
ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ವಿ.ಮುನಿರಾಜು, ಕೆ.ಎಸ್.ಗಣೇಶ್ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸ್ವಾಗತಿಸಿದರು. ಸಂಘದ ಖಜಾಂಚಿ ಎ.ಜಿ.ಸುರೇಶ್ ಕುಮಾರ್ ನಿರೂಪಿಸಿದರು. ವಾರ್ತಾ ಇಲಾಖೆಯ ಮಂಜೇಶ್, ಹಿರಿಯ ಪತ್ರಕರ್ತರಾದ ಪಾ.ಶ್ರೀ ಅನಂತರಾಮು, ಬಿ.ಸುರೇಶ್,ಸ್ಕಂದಕುಮಾರ್ ಹಾಗೂ ಇನ್ನೂ ಹಲವಾರು ಪತ್ರಕರ್ತರು ಇದ್ದರು.