ಕೋಲಾರ: ರಾಮನ ಮಂದಿರ ಕಟ್ಟಲು ಹೊರಟವರಿಗೆ, ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಸ್ಪೀಕರ್ ಹಾಗು ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಅವರು ಕೋಲಾರ ತಾಲ್ಲೂಕಿನ ಸುಗಟೂರು ಸೊಸೈಟಿ ಆಶ್ರಯದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ವತಿಯಿಂದ ರೈತರಿಗೆ 1.97 ಕೋಟಿ ರೂ ಶೂನ್ಯ ಬಡ್ಡಿಯ ಕೆಸಿಸಿ ಸಾಲ ವಿತರಿಸಿ ಮಾತನಾಡಿದರು.
ಉಪವಾಸ ಕೂತ ರೈತವರಿಗೆ ಊಟ ಕೊಡಲು ನೀಡಲು ಆಗದವರು ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದಾರೆ,ಅವರಿಗೆ ರೈತನ ಕಷ್ಟ ಕಾರ್ಪಣ್ಯಗಳು ಅರ್ಥ ಆಗಬೇಕಲ್ಲ, ರಾಮಮಂದಿರ ನಿರ್ಮಾಣ ಮಾಡಲು ಹೊರಟಿದ್ದಾರೆ.ಕೃಷಿಕರಿಗೆ ಬೇಕಿರುವುದು ರಾಮಮಂದಿರವಲ್ಲ.ಪ್ರತಿ ಹಳ್ಳಿಯಲ್ಲೂ ಈಗಾಗಲೇ ಹಿರಿಯರು ಕಟ್ಟಿರುವ ರಾಮಮಂದಿರಗಳು ಇವೆ ಜೊತೆಗೆ ಈ ನೆಲದ ದೇವತೆಗಳಾದ ಗಂಗಮ್ಮ, ಮಾರೆಮ್ಮ ದೇವಸ್ಥಾನಗಳು ಗ್ರಾಮ ಗ್ರಾಮಗಳಲ್ಲೂ ಇದ್ದಾವೆ ಎಂದ ಅವರು ಉಪವಾಸ ಇರೋವವನಿಗೆ ಊಟ ಬೇಡ, ಊರಿಗೊಂದು ಶಾಲೆ ಬೇಡ,ಕಾಯಿಲೆ ಬಂದೋನಿಗೆ ಔಷದಾನೂ ಬೇಡ ಕೇವಲ ರಾಮಮಂದಿರ ಕಟ್ಟಿದರೆ ಸಾಕು ಎನ್ನುವಂತವರಿಗೆ ದೇಶ ಆಳಲು ಬಿಟ್ಟಿದ್ದೇವೆ ರೈತರಿಗೆ ಗೌರವ ಮಾರ್ಯಾದೆ ನೀಡದಿರುವುದು ಒಂದು ದೇಶನಾ ಅದು ದೇಶಾನೇ ಅಲ್ಲಾ ಎಂದು ವಿಷಾದ ವ್ಯಕ್ತಪಡಿಸಿದರು.
ವಾಣಿಜ್ಯ ಬ್ಯಾಂಕಿಗೆ ರೈತರು ಸಾಲ ಕೇಳಲು ಹೋದರೆ ಅವರ ಹರಿದ ಪಂಚೆ, ನಿಕ್ಕರ್ ನೋಡಿ ಅಪಹಾಸ್ಯ ಮಾಡುವ ಬ್ಯಾಂಕಿನವರು ಚಿನ್ನ, ಭೂಮಿ ಅಡ ಇಡಬೇಕು ಅಂತಾರೆ. ಸಮಯಕ್ಕೆ ಸಾಲ ತೀರಿಸದಿದ್ದರೆ ಮನೆ ಮುಂದೆ ತಮಟೆ ಬಾರಿಸುತ್ತಾರೆ. ರೈತಾಪಿ ಜನ ಮಾನಕ್ಕೆ ಮರ್ಯಾದೆಗೆ ಅಂಜಿ ವಿಷ ಸೇವಿಸಿ ಸಾಯುತ್ತಾರೆ ಅಂತಹ ಪರಿಸ್ಥಿತಿ ನಿರ್ಮಿಸುತ್ತಾರೆ ಇಂದಿನ ವಾಣಿಜ್ಯ ಬ್ಯಾಂಕುಗಳ ನಡವಳಿಕೆ. ಅದರೇ ಡಿಸಿಸಿ ಬ್ಯಾಂಕಿನಲ್ಲಿ ಹಾಗಲ್ಲ ರೈತರನ್ನು ಮತ್ತು ಮಹಿಳೆಯರನ್ನು ಕರೆದು ಕೂರಿಸಿ ಬಡ್ಡಿರಹಿತ ಸಾಲ ನೀಡುವ ವ್ಯವಸ್ಥೆ ಡಿಸಿಸಿ ಬ್ಯಾಂಕಿನಲ್ಲಿದೆ ಇಂತಹ ಅನಕೂಲಗಳನ್ನು ಮಹಿಳೆಯರು,ರೈತರು ಬಳಸಿಕೊಂಡು ಸಾಮಾಜಿಕವಾಗಿ ಆರ್ಥಿಕವಾಗಿ ಅಭಿವೃದ್ಧಿಯಾಗಿ ಮತ್ತು ನಿಮ್ಮ ಉಳಿತಾಯದ ಖಾತೆ ಹಾಗು ಹಣ ಠೇವಣಿಯನ್ನು ಡಿಸಿಸಿ ಬ್ಯಾಂಕಿನಲ್ಲೇ ಇಟ್ಟು ಬ್ಯಾಂಕಿನ ಅಭಿವೃದ್ಧಿಗೂ ಸಹಕಾರ ನೀಡುವಂತೆ ಸಲಹೆ ಇತ್ತರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಬ್ಯಾಂಕಿನ ವಿಷಯದಲ್ಲಿ ಹೆಣ್ಣು ಮಕ್ಕಳಿಗಿರುವ ಬದ್ದತೆ ಪುರುಷರಿಗೆ ಇಲ್ಲವಾಗಿದೆ. ನಮ್ಮಿಂದ ಬಡ್ಡಿರಹಿತ ಸಾಲ ಪಡೆದು ಅದನ್ನು ವಾಣಿಜ್ಯ ಬ್ಯಾಂಕಿನಲ್ಲಿ ಠೇವಣಿ ಇಡೋದು ಪಾಪದ ಕೆಲಸ ಎಂದರು.
ಡಿಸಿಸಿ ಬ್ಯಾಂಕ್ ಬಡವರ ಸ್ವತ್ತು. ಅದು ನಮ್ಮ ಯಾರ ಆಸ್ತಿಯೂ ಅಲ್ಲ. ತಾಯಂದಿರಿಗೆ ಕಾಯಕ ಯೋಜನೆಯಡಿ ತಲಾ 1 ಲಕ್ಷ ಸಾಲ ನೀಡಲಾಗುವುದು. ಇನ್ನು ಮುಂದೆ ಸಂಘಗಳಿಂದ ಆದಾಯೋತ್ಪನ್ನ ಚಟುವಟಿಕೆಗಳು ಶುರುವಾಗಬೇಕು ಎಂದು ಹೇಳಿದರು.
ಸುಗಟೂರು ಸೊಸೈಟಿ ಅಧ್ಯಕ್ಷ ತಿಮ್ಮರಾಯಪ್ಪ ಮಾತನಾಡಿ, ಕೇವಲ ಪಡಿತರಕ್ಕೆ ಸೀಮಿತವಾಗಿದ್ದ ಸೊಸೈಟಿ ಇಂದು ಮಹಿಳೆಯರಿಗೆ 30 ಕೋಟಿ ಸಾಲ ನೀಡಿದೆ, ರೈತರಿಗೂ6.50 ಕೋಟಿವರೆಗೂ ಸಾಲ ಒದಗಿಸಿದೆ ಎಂದು ತಿಳಿಸಿದರು.
ಜಿ.ಪಂ ಮಾಜಿ ಅಧ್ಯಕ್ಷ ಜನ್ನಘಟ್ಟ ವಿ.ವೆಂಕಟಮುನಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಲ್.ಅನಿಲ್ ಕುಮಾರ್, ನಾಗನಾಳ ಸೋಮಣ್ಣ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಟಿ.ವಿ.ಕೃಷ್ಣಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶಶಿಧರ್, ಗ್ರಾ.ಪಂ ಸದಸ್ಯರಾದ ರವಿ, ಭೂಪತಿ ಗೌಡ, ಸೊಸೈಟಿ ಉಪಾಧ್ಯಕ್ಷೆ ರುಕ್ಕಮ್ಮ ಸಿಇಒ ಪುಟ್ಟರಾಜು ಇದ್ದರು.
ವರದಿ:ಚ.ಶ್ರೀನಿವಾಸಮೂರ್ತಿ