ನ್ಯೂಜ್ ಡೆಸ್ಕ್: ಕರ್ನಾಟಕ ರಾಜ್ಯ ಸೇರಿದಂತೆ ದೇಶಾದ್ಯಂತ ಹೊಸ ಸೋಂಕಿನ ಆರ್ಭಟ ಆರಂಬವಾಗಿದೆ. ಕೋವಿಡ್ ಯುಗ ಮುಕ್ತಾಯವಾಯ್ತು ಎಂದು ನಿಟ್ಟುಸಿರುಬಿಡುವ ಹೊತ್ತಿನಲ್ಲಿ H3N2 ಇನ್ಫ್ಲುಯೆಂಜಾ ಹಾವಳಿ ಶುರುವಾಗಿದೆ. ಕಳೆದ ಒಂದು ತಿಂಗಳಿಂದ ದೇಶಾದ್ಯಂತ ಸಾವಿರಾರು H3N2 ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲೂ ಸುಮಾರು 26 ಪ್ರಕರಣಗಳು ದಾಖಲಾಗಿವೆ. ಹಾಗಾದ್ರೆ ಏನಿದು H3N2? ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ ಈ ಹಿಂದೆ ದೇಶಾದ್ಯಂತ ಕಾಡಿದ್ದ H1N1 ವೈರಾಣುವಿನ ರೀತಿಯಲ್ಲೇ ರೂಪಾಂತರಿ ಸೋಂಕು ಆಗಿರಬಹುದಾ? ಈ ಕುರಿತ ಸಮಗ್ರ ವಿವರ ಇಲ್ಲಿದೆ.
ಏನಿದು H3N2 ಸೋಂಕು?
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹೇಳುವಂತೆ ಜ್ವರಕ್ಕೆ ಕಾರಣವಾಗುವಂತ ವೈರಾಣು.ಈ ವೈರಾಣುವಿನ ಒಂದು ಉಪ ರೂಪಾಂತರಿ ಅಪಾಯಕಾರಿಯಾಗಿದ್ದು, ರೋಗಿಯು ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ನಿರ್ಮಾಣ ಆಗುತ್ತೆ.
ಐಸಿಎಂಆರ್ ಪ್ರಕಾರ ಆಸ್ಪತ್ರೆಗೆ ದಾಖಲಾಗುವ ಪ್ರತಿ ನೂರು H3N2 ರೋಗಿಗಳ ಪೈಕಿ ಶೇ. 92 ಮಂದಿಗೆ ಜ್ವರ ಇರುತ್ತೆ. ಶೇ. 86ರಷ್ಟು ಮಂದಿಗೆ ಕಫದ ಸಮಸ್ಯೆ ಬರುತತದೆ ಶೇ. 27ರಷ್ಟು ಮಂದಿಗೆ ಉಸಿರಾಟದ ಸಮಸ್ಯೆ ಕಾಡಲಿದೆ ಹಾಗೂ ಶೇ. 16 ರಷ್ಟು ಮಂದಿಗೆ ಉಬ್ಬಸ ಸಮಸ್ಯೆ ಬರುತ್ತದೆ. ಇದಲ್ಲದೆ ಶೇ. 16 ರಷ್ಟು ರೋಗಿಗಳು ನ್ಯುಮೋನಿಯಾಗೆ ತುತ್ತಾಗುತ್ತಾರೆ. ಇನ್ನು ಶೇ. 6 ರಷ್ಟು ಮಂದಿಗೆ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳು ಎದುರಾಗಲಿದೆ ಎಂದು ಐಸಿಎಂಆರ್ ಅಧ್ಯಯನ ವರದಿ ಹೇಳಿದೆ.
H3N2 ಸೋಂಕಿತರ ಪೈಕಿ ಶೇ. 10ರಷ್ಟು ರೋಗಿಗಳಿಗೆ ಉಸಿರಾಟ ಸಂಬಂಧಿ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ. ಇವರಿಗೆ ಕೃತಕವಾಗಿ ಆಮ್ಲಜನಕ ನೀಡಬೇಕಾಗುತ್ತೆ. ಇನ್ನು ಶೇ. 7ರಷ್ಟು ರೋಗಿಗಳು ಐಸಿಯುನಲ್ಲಿ ದಾಖಲಾಗುವಷ್ಟು ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಾರೆ ಎಂದು ಐಸಿಎಂಆರ್ ಹೇಳಿದೆ.
ಬೇಸಿಗೆಗೆ ಕಾಲಿಡುತ್ತಿದ್ದೇವೆ. ಫೆಬ್ರವರಿ ಇಂದ ತಾಪಮಾನ ಹೆಚ್ಚಾಗಿದೆ. ಬಿಸಿಲಿನ ತಾಪಮಾನಕ್ಕೆ ಜನ ಬಳಲುತ್ತಿದ್ದಾರೆ,
ಬಿಸಿಗಾಳಿಗೆ ಸಾಕಷ್ಟು ಜನರು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಿಸಿಲಿನಲ್ಲಿ ಅನಗತ್ಯ ಓಡಾಟ ಕಡಿಮೆ ಮಾಡುವುದು ಉತ್ತಮ.ಬೆಳಗ್ಗೆ 11 ರಿಂದ 3 ಗಂಟೆಯ ಸಂದರ್ಭದಲ್ಲಿ ಬಿಸಿಲು ಹೆಚ್ಚಾಗಿರುವ ಹಿನ್ನಲೆಯಲ್ಲಿ ಓಡಾಟಕ್ಕೆ ನಿರ್ಬಂದ ಹೇರಿಕೊಂಡು ಹೆಚ್ಚು ನೀರನ್ನು ಪ್ರತಿನಿತ್ಯ ಕುಡಿಯಬೇಕು.ಮಜ್ಜಿಗೆ, ಶರಬತ್ ಹೆಚ್ಚಾಗಿ ಕುಡಿಯಬೇಕು.ಕನಿಷ್ಠ 2-3 ಲೀಟರ್ ನಿರು ಸೇವಿಸಬೇಕು, ಎಳನೀರು, ಮಜ್ಜಿಗೆ ಸೇವಿಸುವುದು ಉತ್ತಮ.ಎಚ್3ಎನ್2 ಇದು ಅಪಾಯಕಾರಿ ಅಲ್ಲ, ಆದರೆ ಕೋವಿಡ್ ಬಂದವರಿಗೆ ಸ್ವಲ್ಪ ದೀರ್ಘ ಕಾಲದ ಕೆಮ್ಮು ಇರುತ್ತದೆ ಎನ್ನಲಾಗಿದೆ.
H3N2 ಸೋಂಕಿನ ಲಕ್ಷಣಗಳೇನು?
ಜ್ವರ,ಚಳಿ,ಕೆಮ್ಮು,ಕಫ,ವಾಂತಿ,ಭೇದಿ,ಗಂಟಲು ಕೆರೆತ,ಮೈ ಕೈ ನೋವು,ಮಾಂಸ ಖಂಡಗಳಲ್ಲಿ ನೋವು,
ವಾಕರಿಕೆ ಬರುವಂತೆ ಆಗುತ್ತೆ,ವಿಪರೀತ ನೆಗಡಿ,ಸೀನು
H3N2 ಸೋಂಕಿನಿಂದ ಪಾರಾಗಲು ಪರಿಹಾರ ಏನು?
ಶುಚಿತ್ವಕ್ಕೆ ಹೆಚ್ಚು ಮಹತ್ವ ಕೊಡಬೇಕು,ಆಗಾಗ ನಿಯಮಿತವಾಗಿ ನಿಮ್ಮ ಕೈಗಳನ್ನು ಸೋಪು ಹಾಗೂ ನೀರು ಬಳಸಿ ತೊಳೆದುಕೊಳ್ಳಿ
ಜನಜಂಗುಳಿ ಇರುವ ಪ್ರದೇಶಗಳಲ್ಲಿ ಸಂಚಾರ ಮಾಡಬೇಡಿ,ಮಾಸ್ಕ್ ಧರಿಸೋದನ್ನು ಮರೆಯಬೇಡಿ,ನಿಮ್ಮ ಕೈಗಳಿಂದ ಮುಖ ಹಾಗೂ ಮೂಗು ಮುಟ್ಟಿಕೊಳ್ಳುತ್ತಿರಬೇಡಿ,ಸೀನುವಾಗ ಹಾಗೂ ಕೆಮ್ಮುವಾಗ ನಿಮ್ಮ ಬಾಯಿ ಹಾಗೂ ಮೂಗನ್ನು ಬಟ್ಟೆಯಿಂದ ಮುಚ್ಚಿಕೊಳ್ಳಿ, ನೀರು ಹಾಗೂ ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಿರಬೇಕು.
ಏನು ಮಾಡಬಾರದು?
ಶುಭಾಶಯ ಕೋರುವ ವೇಳೆ ಕೈ ಕುಲುಕುವುದು ಹಾಗೂ ಇನ್ನಿತರ ದೈಹಿಕ ಸಂಪರ್ಕದಿಂದ ದೂರ ಇರಿ
ಸಾರ್ವಜನಿಕವಾಗಿ ಎಲ್ಲಂದರಲ್ಲಿ ಉಗುಳಬೇಡಿ, ಜ್ವರ ಹಾಗೂ ಮೈ ಕೈ ನೋವಿದ್ದಾಗ ಸ್ವಯಂ ವೈದ್ಯ ಚಿಕಿತ್ಸೆ ಮಾಡಿಕೊಳ್ಳಬೇಡಿ
ಒತ್ತಾಗಿ ಅಕ್ಕಪಕ್ಕ ಕುಳಿತು ಆಹಾರ ಸೇವಿಸಬೇಡಿ, ಜನಜಂಗುಳಿ ಇರುವ ಪ್ರದೇಶದಲ್ಲಿ ಊಟ ಮಾಡಬೇಡಿ
ಯಾವುದೇ ಕಾರಣಕ್ಕೂ ಪ್ಯಾರಾಸಿಟಮಾಲ್ ಸೇರಿದಂತೆ ಆಂಟಿಬಯೋಟಿಕ್ ಮಾತ್ರೆ ಔಷಧಿಗಳನ್ನು ವೈದ್ಯರ ಸಲಹೆ ಇಲ್ಲದೆ ಸೇವಿಸಬೇಡಿ.
ಯಾರಿಗೆ ಹೆಚ್ಚು ಅಪಾಯ?
15 ವರ್ಷಕ್ಕಿಂತಾ ಚಿಕ್ಕವರು ಹಾಗೂ 50 ವರ್ಷ ಮೇಲ್ಪಟ್ಟವರಿಗೆ H3N2 ವೈರಾಣುವಿನಿಂದ ಹೆಚ್ಚಿನ ಅಪಾಯವಿದೆ. ಅದರಲ್ಲೂ ವಾಯು ಮಾಲಿನ್ಯದಿಂದ ಈ ಸೋಂಕು ಹೆಚ್ಚಳ ಆಗುತ್ತದೆ. ಉಸಿರಾಟ ಸಂಬಂಧಿ ಆರೋಗ್ಯ ಸಮಸ್ಯೆ ಇರುವವರು ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ, ಮಧುಮೇಹ, ಬಿಪಿ, ಹೃದ್ರೋಗ, ಕಿಡ್ನಿ ಸಮಸ್ಯೆ, ಲಿವರ್ ಸಮಸ್ಯೆ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆ ಇರುವವರು ಹೆಚ್ಚಿನ ಕಾಳಜಿ ವಹಿಸಬೇಕು. ಮಾರ್ಚ್ ಅಂತ್ಯಕ್ಕೆ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ವಾತಾವರಣದಲ್ಲಿ ಬಿಸಿ ಹೆಚ್ಚಾದಂತೆ ಈ ವೈರಸ್ ಹಾವಳಿ ಕೂಡಾ ಅಂತ್ಯವಾಗುವ ನಿರೀಕ್ಷೆ ಇದೆ.
ವೈದ್ಯರು ಏನಂತಾರೆ?
ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಜ್ವರ ಬಂದರೆ ಹೊರಗಡೆ ಹೋಗದಿರುವುದು ಉತ್ತಮ ಸರ್ಕಾರ ಕೂಡಾ ಮಾಸ್ಕ್ ಹೊರತಾಗಿ ಬೇರೆ ಯಾವುದೇ ನಿರ್ಬಂಧ ಹೇರುವ ಅಗತ್ಯ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ಧಾರೆ.
H3N2 ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರತ್ಯೇಕ ಮಾರ್ಗಸೂಚಿಯನ್ನು ಹೊರಡಿಸಲಾಗುತ್ತದೆ. ಹೊರಾಂಗಣ ಸಭೆ ಸಮಾರಂಭಗಳಿಗೆ ನಿರ್ಬಂಧ ಹೇರುವ ಅಗತ್ಯ ಇಲ್ಲ ಎಂದು ತಜ್ಞರು ಹೇಳಿದ್ದಾರೆ. H3N2 ಟೆಸ್ಟ್ ಕಿಟ್ ಹಾಗೂ ಲ್ಯಾಬ್ ಇವೆ. ಒಂದು ವೇಳೆ ಅಗತ್ಯಬಿದ್ದರೆ ವೈದ್ಯರು ಪರೀಕ್ಷೆ ಮಾಡಿ ಸ್ವ್ಯಾಬ್ ಟೆಸ್ಟ್ ಮಾಡುತ್ತಾರೆ ಎಂದು ಡಾ. ಸುದರ್ಶನ್ ಹೇಳಿದ್ದಾರೆ.
ಆರೋಗ್ಯ ಸಚಿವ ಡಾ.ಸುಧಾಕರ್ ಸಲಹೆ ಏನು?
H3N2 ಸೋಂಕು ಅಪಾಯಕಾರಿ ಅಲ್ಲ. ಕರ್ನಾಟಕದಲ್ಲಿ ಈವರೆಗೆ 26 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. H3N2 ಸೋಂಕು ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಜನ ಗಾಬರಿಯಾಗಿದ್ದಾರೆ. ಆದರೆ ಕರ್ನಾಟಕದ ಮಟ್ಟಿಗೆ ಗಾಬರಿ ಪಡುವ ಯಾವುದೇ ಪರಿಸ್ಥಿತಿ ಇಲ್ಲ,ರಾಜ್ಯದಲ್ಲಿ ಇದು ಕೈ ಮೀರು ವಂಥ ಹಂತಕ್ಕೆ ತಲುಪಿಲ್ಲ. ಆರೋಗ್ಯ ಇಲಾಖೆ ಸಂಪೂರ್ಣವಾಗಿ ನಿಗಾ ಇಟ್ಟಿದೆ ಮುಂಜಾಗ್ರತಾ ಕ್ರಮ ತಗೆದುಕೊಂಡಿರುವುದಾಗಿ ತಿಳಿಸಿದರು.