ವರ ಕವಿ ದ.ರಾ.ಬೇಂದ್ರೆಯವರ ಯುಗಾದಿ ಕುರಿತಾಗಿ ಬರೆದಂತ ಕವಿತೆ ಸುಪ್ರಸಿದ್ಧವಾದುದು.
“ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತ್ತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ
ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ
ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ
“||ಯುಗ ಯುಗಾದಿ ಕಳೆದರು||”
ಯುಗಾದಿ ಆಚರಣೆ 01 ಏಪ್ರಿಲ್ 2022 ರಂದು ಬೆಳಿಗ್ಗೆ 11:53 ಕ್ಕೆ ಪ್ರಾರಂಭವಾಗಿ. ಏಪ್ರಿಲ್ 02, 2022 ರಂದು ಬೆಳಿಗ್ಗೆ 11:58 ಕ್ಕೆ ಮುಕ್ತಾಯವಾಗಲಿದೆ.
ಮರಗಿಡಗಳ ಹೊಸ ಚಿಗುರು. ಎಲ್ಲೆಡೆ ಹಸಿರು. ಮೊದಲ ಮಳೆ. ಹೊಸದು ಹೊಸತನ, ಹೊಸ ಜೀವನ. ಹೀಗೆ ಎಲ್ಲರದರ ಪ್ರತೀಕ ಯುಗಾದಿ ಹಬ್ಬ. ಕಳೆದ ಎರಡು ವರ್ಷಗಳಿಗಿಂತ ಈ ಬಾರಿ ಯಾವುದೇ ಆನಾರೋಗ್ಯ ಹಾಗೆ ಸೋಂಕಿನ ಆತಂಕ ಇಲ್ಲದೆ ಎರಡು ವರ್ಷಗಳ ಕಷ್ಟಗಳೆಲ್ಲಾ ಕಳೆದು ಜನ ಸಹಜ ಜೀವನದತ್ತ ಸಾಗುತ್ತಿದ್ದಾರೆ. ಹೀಗಾಗಿ ಈ ಬಾರಿ ಆಚರಿಸಲ್ಪಡು ಯುಗಾದಿ ಹಬ್ಬ ಹೊಸ ಉಲ್ಲಾಸ ಉತ್ಸಾಹವನ್ನು ತರುತ್ತದೆ ಎಂದು ಜನರ ಆಶಯ.
ಯುಗಾದಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲು ಜನತೆ ಸಜ್ಜಾಗಿದ್ದಾರೆ. ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ಜನರು ಯುಗಾದಿಯನ್ನು ವರ್ಷದ ಮೊದಲ ಹಬ್ಬವಾಗಿ ಆಚರಿಸುತ್ತಾರೆ. ಯುಗಾದಿಯಂದು ಹೊಸ ಸಂವತ್ಸರ ಪ್ರಾರಂಭವಾಗುತ್ತದೆ. ಹಾಗಾದರೆ 2022ರ ಯುಗಾದಿ ಹಬ್ಬದ ದಿನಾಂಕ ಮತ್ತು ದಿನ, ಹಾಗೆಯೇ ಯುಗಾದಿಯ ಇತಿಹಾಸ, ಆಚರಣೆಗಳು ಮತ್ತು ಮಹತ್ವವನ್ನು ತಿಳಿಯೋಣ
ಭಾರತೀಯರಿಗೆ ಯುಗಾದಿಯಿಂದ ಹೊಸ ವರ್ಷ ಆರಂಭವಾಗುವುದು ಎನ್ನುವ ನಂಬಿಕೆಯಿದೆ. ಯುಗಾದಿಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಿಂದ ಆಚರಿಸುವರು. ಅದೇ ನಮ್ಮ ರಾಜ್ಯದಲ್ಲಿ ಕೂಡ ಯುಗಾದಿಯು ಆಚರಣೆಯಾಗುವುದು. ಒಂದು ಚಾಂದ್ರಮಾನ ಯುಗಾದಿ ಮತ್ತೊಂದು ಸೂರ್ಯಮಾನ ಯುಗಾದಿ ಎಂದು ಎರಡು ವಿಧವಾಗಿ ಆಯಾ ಪ್ರದೇಶದ ಅಣತಿಯಂತೆ ಆಚರಿಸುತ್ತಾರೆ. ಚಾಂದ್ರಮಾನ ಯುಗಾದಿಯು ಚೈತ್ರ ಮಾಸದ ಮೊದಲ ದಿನ ಈ ವರ್ಷ 2022 ರ ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಎಪ್ರಿಲ್ 2ಕ್ಕೆ ಬಂದಿದೆ.
ಎಪ್ರಿಲ್ 2 ರಂದು ಯುಗಾದಿಯನ್ನು ದಕ್ಷಿಣ ಭಾರತೀಯ ಶೈಲಿಯಲ್ಲಿ ಹಿಂದೂ ಪಂಚಾಂಗದ ರಿತ್ಯ ನೂತನ ಸಂವತ್ಸರ ಅಥಾವ ಹೊಸ ವರ್ಷ ಎಂದು ಆಚರಿಸಲಾಗುತ್ತದೆ ಮತ್ತು ಇದು ದಕ್ಷಿಣ ಭಾರತದ ರಾಜ್ಯಗಳಾಗಿರುವಂತಹ ಕರ್ನಾಟಕ, ಆಂಧ್ರ ಪ್ರದೇಶದಲ್ಲಿ ತುಂಬಾ ಖ್ಯಾತಿಯ ಹಬ್ಬ. ಮಹಾರಾಷ್ಟ್ರದಲ್ಲಿ ಇದು ಗುಡಿಪಾಡ್ವ ಎಂದು ಮತ್ತು ಪಶ್ಚಿಮ ಬಂಗಾಳದಲ್ಲಿ ನೊಬೊ ಬೊರ್ಸೊ ಎಂದು ಕರೆಯುವರು.ತುಂಬಾ ಸಂಭ್ರಮ ಮತ್ತು ಉಲ್ಲಾಸದಿಂದ ಆಚರಿಸಲಾಗುವುದು. ಯುಗಾದಿ ಎನ್ನುವುದು ಸಂಸ್ಕೃತ ಪದದಿಂದ ಬಂದಿದೆ. ಇದರ ಅರ್ಥ ಯುಗ''ಎಂದರೆ ಕಾಲ ಅಥವಾ ವರ್ಷ ಮತ್ತು
ಆದಿ” ಎಂದರೆ ಆರಂಭ ಎನ್ನುವುದು. ಇದರಿಂದ ಯುಗಾದಿ ಹೊಸ ಆರಂಭ ಎನ್ನುವುದನ್ನು ನಮಗೆ ಸಾರಿ ಹೇಳುತ್ತದೆ. ಯುಗಾದಿ ಚೈತ್ರಾ ಶುಕ್ಲ ಪ್ರತಿಪಾದದಲ್ಲಿ ಆಚರಿಸಲಾಗುತ್ತದೆ. ಯುಗಾದಿಯ ಬಗ್ಗೆ ಒಂದು ಆದ್ಯಾತ್ಮಿಕವಾದ ಕಥೆಯು ಇದೆ. ಬ್ರಹ್ಮ ದೇವರು ಈ ದಿನವೇ ಭೂಮಿ ಮೇಲೆ ಜೀವಿಗಳನ್ನು ಸೃಷ್ಟಿಸಲು ಆರಂಭಿಸಿದರು. ಈ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ. ಈ ದಿನದಂದು ಬ್ರಹ್ಮ ದೇವರಿಗೆ ಗೌರವ ಸಲ್ಲಿಸುವ ಕಾರಣಕ್ಕಾಗಿ ಬ್ರಹ್ಮ ಪೂಜೆ ಕೂಡ ಮಾಡಲಾಗುತ್ತದೆ. ವಿಧಾನ ಈ ದಿನದಂದು ಸೂರ್ಯೋದಯದ ಮೊದಲು ಎದ್ದು ಸ್ನಾನ ಮಾಡಿದ ಬಳಿಕ ದೇವರ ಸ್ತೋತ್ರ ಜಪಿಸಬೇಕು. ಈ ಕ್ರಮವು ಅತೀ ಮುಖ್ಯವಾಗಿದೆ ಮತ್ತು ಇದು ಮನೆಯನ್ನು ಶುದ್ಧೀಕರಿಸುವುದು ಮತ್ತು ಸುತ್ತಲು ಧನಾತ್ಮಕ ಶಕ್ತಿಯನ್ನು ತುಂಬುವುದು. ಇದರ ಬಳಿಕ ಮನೆಯ ಪ್ರತಿಯೊಬ್ಬರು ಸ್ನಾನ ಮಾಡಿಕೊಳ್ಳಬೇಕು ಮತ್ತು ಇದನ್ನು ಪವಿತ್ರ ಸ್ನಾನ ಅಥವಾ “ತೈಲಅಭ್ಯಂಗನ ಸ್ನಾನಂ” ಎಂದು ಹೇಳಲಾಗುತ್ತದೆ. ಎಣ್ಣೆ ಹಚ್ಚಿಕೊಂಡು ಈ ದಿನ ಸ್ನಾನ ಮಾಡಿದರೆ, ತುಂಬಾ ಪವಿತ್ರ ಎಂದು ಹೇಳಲಾಗಿದೆ. ಈ ದಿನ ಮ್ನಎಯಲ್ಲಿನ ದೇವರ ಮೂರ್ತಿಗಳಿಗೂ ಅಭಿಷೇಕ ಮಾಡಿ ಶುದ್ಧೀಕರಿಸುತ್ತಾರೆ. ಮೂರ್ತಿಗಳನ್ನು ಸ್ವಚ್ಚಗೊಳಿಸಿ, ದೇವರ ಕೋಣೆ ಸ್ವಚ್ಛ ಮಾಡಿದ ಬಳಿಕ ಹೊಸ ಬಟ್ಟೆಗಳನ್ನು ಧರಿಸಿ, ಪ್ರಸಾದವನ್ನು ಇಟ್ಟು ಪೂಜೆ ಮಾಡಬೇಕು. ಪೂಜೆಗಾಗಿ ವಿಶೇಷವಾಗಿ ಬೇವು ಬೆಲ್ಲ ಅಥವಾ ಯುಗಾದಿ ಪಚಡಿಯನ್ನು ಇಡಬೇಕು.
ಮನೆಬಾಗಿಲಿಗೆ ಮಾವಿನ ಎಲೆ
ಜನರು ಬೆಳಗಿನ ಜಾವದಲ್ಲಿ ಸ್ನಾನ ಮಾಡಿ ಮನೆಗಳ ಪ್ರವೇಶದ್ವಾರವನ್ನು ಅಲಂಕರಿಸಲು ಮಾವಿನ ಎಲೆಗಳ ತೋರಣ ಕಟ್ಟುತ್ತಾರೆ ಭಗವಂತ ಮಾವಿನ ಹಣ್ಣನ್ನು ಇಷ್ಟಪಡುತ್ತಾರೆ ಎಂದು ನಂಬಲಾಗಿದೆ. ಇದರಿಂದ ದೇವರು ಅವರಿಗೆ ಸಮೃದ್ಧಿ ಮತ್ತು ಯೋಗಕ್ಷೇಮವನ್ನು ನೀಡುತ್ತಾನೆ ಎಂಬ ಪ್ರತಿತಿ ಹೊಸ ಮಾವಿನ ಎಲೆಗಳು ಬಾಗಿಲಿಗೆ ಉತ್ತಮ ಇಳುವರಿಯ ಸಂಕೇತವಾಗಿದೆ ಯುಗಾದಿಯಂದು ಜನರು ತಮ್ಮ ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಹಸುವಿನ ಸಗಣಿಯಿಂದ ಶುದ್ಧೀಕರಿಸುತ್ತಾರೆ. ಇದನ್ನು ಹಿಂದೂ ಪದ್ಧತಿಗಳ ಪ್ರಕಾರ ಶುಭವೆಂದು ಪರಿಗಣಿಸಲಾಗುತ್ತದೆ. ಮನೆಗಳ ಹೊರಗೆ ರಂಗೋಲಿಗಳನ್ನು ಹಾಕುವುದು ಯುಗಾದಿ ಹಬ್ಬದ ಪ್ರಮುಖ ಮತ್ತು ಮಹತ್ವದ ಚಟುವಟಿಕೆಗಳಲ್ಲಿ ಒಂದಾಗಿದೆ.
ಬೇವು ಬೆಲ್ಲ ಅಥವಾ ಯುಗಾದಿ ಪಚಡಿ
ಇದು ಒಂದು ರೀತಿಯ ಆಚರಣೆ ಆಗಿದೆ. ಬೇವು ಬೆಲ್ಲ ಅಥವಾ ಯುಗಾದಿ ಪಚಡಿ ಈ ವಿಶೇಷ ಪ್ರಸಾದವನ್ನು ಯುಗಾದಿ ಸಂದರ್ಭದಲ್ಲಿ ತಯಾರಿಸಲಾಗುತ್ತದೆ. ಇದು ಸಿಹಿಯಾಗಿ ಇರುವುದಿಲ್ಲ. ಬದಲಿಗೆ ಇದು ಸಿಹಿ ಮತ್ತು ಸ್ವಲ್ಪ ಕಹಿಯಾಗಿ ಇರುವುದು. ಯಾಕೆಂದರೆ ಇದನ್ನು ಆರು ವಿಭಿನ್ನ ಸಾಮಗ್ರಿಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಬೇವಿನ ಎಲೆಗಳು, ಬೆಲ್ಲ, ಮೆಣಸು, ಬಲಿಯದ ಮಾವಿನ ಹಣ್ಣು, ಉಪ್ಪು ಮತ್ತು ಹುಳಿ ಹಾಕಿಕೊಂಡು ತಯಾರಿಸಲಾಗುತ್ತದೆ. ಯುಗಾದಿ ಪ್ರಸಾದವು ಒಬ್ಬರ ಜೀವನದಲ್ಲಿ ತುಂಬಾ ಮಹತ್ವ ಪಡೆದುಕೊಂಡಿರುವುದು. ಇದು ಪ್ರತಿಯೊಬ್ಬರ ಜೀವನದಲ್ಲಿ ಬರುವ ಏಳು ಬೀಳುಗಳನ್ನು ಬಿಂಬಿಸುವುದು. ಯಾಕೆಂದರೆ ಈ ಪ್ರಸಾದದಲ್ಲಿ ಕಹಿ ಹಾಗೂ ಸಿಹಿ ಎರಡೂ ಇದೆ. ಇದರಿಂದ ಜೀವನದಲ್ಲಿ ಕೂಡ ಸಿಹಿ ಹಾಗೂ ಕಹಿ ಎರಡು ನಮಗೆ ಸಿಗುವುದು ಎಂದು ಹೇಳಲಾಗುತ್ತದೆ. ಮುಖ್ಯವಾಗಿ ಬೇವು ಎಂದರೆ ಕಹಿ ಮತ್ತು ಬೆಲ್ಲ ಎಂದರೆ ಸಿಹಿ ಎನ್ನುವುದು. ಈ ಪ್ರಸಾದದಲ್ಲಿ ಸಿಹಿ ಹಾಗೂ ಕಹಿ ಎರಡೂ ಇದೆ. ಈ ಪ್ರಸಾದವನ್ನು ತಿಂದ ಬಳಿಕ ಯುಗಾದಿ ದಿನವು ಆರಂಭ ಆಗುವುದು. ಬೇವು ಬೆಲ್ಲ ಅಥವಾ ಯುಗಾದಿ ಪಚಡಿ ಬೇವು-ಬೇವಿನ ಎಲೆಗಳು ಮತ್ತು ಹೂವುಗಳು ಕಹಿಯನ್ನು ಉಂಟು ಮಾಡುವುದು. ಇದು ಜೀವನದಲ್ಲಿನ ದುಃಖದ ಸಮಯವನ್ನು ಪ್ರತಿನಿಧಿಸುವುದು. ಬೆಲ್ಲ-ಇದು ಸಿಹಿ ನೀಡುವುದು ಮತ್ತು ಇದು ಜೀವನದಲ್ಲಿ ಬರುವಂತಹ ಪ್ರತಿಯೊಂದು ಸಂತೋಷ ಹಾಗೂ ಪ್ರೀತಿಯ ಕ್ಷಣವನ್ನು ಉಲ್ಲೇಖಿಸುವುದು. ಬಲಿಯದ ಮಾವಿನ ಹಣ್ಣುಗಳು-ಇದು ಪ್ರಸಾದಕ್ಕೆ ಒಂದು ರೀತಿಯ ಹುಳಿ ನೀಡುವುದು ಮತ್ತು ಜೀವನದಲ್ಲಿ ಬರುವಂತಹ ಪ್ರತಿಯೊಂದು ಅಚ್ಚರಿಯನ್ನು ಸ್ವೀಕರಿಸಬೇಕು ಎಂದು ಇದರ ಅರ್ಥವಾಗಿದೆ. ಮೆಣಸು-ಇದು ಪ್ರಸಾದಕ್ಕೆ ಖಾರ ನೀಡುವುದು ಮತ್ತು ಜೀವನದಲ್ಲಿ ಕ್ರೋಧ ಮತ್ತು ಸಿಡುಕಿನ ಕ್ಷಣವನ್ನು ಬಿಂಬಿಸುವುದು. ಉಪ್ಪು-ಇದು ರುಚಿಯನ್ನು ಬಿಂಬಿಸುವುದು ಮತ್ತು ರುಚಿ ಇಲ್ಲದೆ ಜೀವನವು ಇಲ್ಲ ಎಂದು ಇದು ಹೇಳುತ್ತದೆ. ಹುಣಸೆ ಹುಳಿ-ಜೀವನದಲ್ಲಿ ನಾವು ಕೆಲವೊಂದು ಸಂದರ್ಭದಲ್ಲಿ ತುಂಬಾ ತುಂಟತನ ಹೊಂದಿರುತ್ತೇವೆ ಮತ್ತು ವಿರಹ ಕೂಡ ಎದುರಿಸಬೇಕಾಗುತ್ತದೆ. ಇದೆರಡು ಇಲ್ಲದೆ ಇದ್ದರೆ ಆಗ ಜೀವನವು ತುಂಬಾ ಬೇಸರ ಮೂಡಿಸುವುದು ಎಂದು ಇದು ಬಿಂಬಿಸುವುದು. ಆಚರಣೆ ರಂಗೋಲಿ-ಯುಗಾದಿ ದಿನದಂದು ಪ್ರತಿಯೊಂದು ಮನೆಯಲ್ಲೂ ರಂಗೋಲಿ ಬಿಡಿಸುವುದು ಒಂದು ಆಚರಣೆ ಆಗಿದೆ. ಯುಗಾದಿಯಂದು ಬೆಳಗ್ಗೆ ಬೇಗನೆ ಎದ್ದು ಮನೆಯ ಅಂಗಳದ ಭಾಗವನ್ನು ಗುಡಿಸಿ, ನೀರು ಹಾಯಿಸಿ ಸ್ವಚ್ಛಗೊಳಿಸಿದ ಬಳಿಕ ಅಲ್ಲಿ ರಂಗೋಲಿ ಬಿಡಿಸುವರು. ರಂಗೋಲಿ ಬಿಡಿಸುವ ಮುಖ್ಯ ಉದ್ದೇಶವೆಂದರೆ ಮನೆಯೊಳಗೆ ಲಕ್ಷ್ಮೀ ದೇವಿಯನ್ನು, ಅದೇ ರೀತಿಯಾಗಿ ಮನೆಗೆ ಬರುವಂತಹ ಅತಿಥಿಗಳು ಹಾಗೂ ಪ್ರೀತಿ ಪಾತ್ರರನ್ನು ಆಹ್ವಾನಿಸುವುದು. ಇದು ಜನರ ನಡುವಿನ ಉತ್ತಮ ಬಾಂಧವ್ಯವನ್ನು ಸಾರುತ್ತದೆ.
ಬೇವು-ಬೆಲ್ಲ
ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ. ಬೇವು – ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳಬೇಕಾದ ಶ್ಲೋಕ ಹೀಗಿದೆ:
ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ|
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| –
ಅದರರ್ಥ ಹೀಗಿದೆ – ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.
ಪಂಚಾಂಗ ಶ್ರವಣಂ ಅಥವಾ ಯುಗಾದಿ ಪಂಚಾಂಗ ಪೂಜೆ.
ಈ ಆಚರಣೆಯು ತುಂಬಾ ಸಣ್ಣ ಆಚರಣೆ ಆಗಿದ್ದು, ಹೆಚ್ಚಾಗಿ ಮನೆಗಳಲ್ಲಿ ಸೂರ್ಯಾಸ್ತದ ಬಳಿಕ ನಡೆಸುವರು. ಇದು ಪಂಚಾಂಗಕ್ಕೆ ಪೂಜೆ ಮಾಡುವುದು. ಇಲ್ಲಿ ಹೊಸದಾಗಿ ತಂದ ಪಂಚಾಂಗವನ್ನು ಇಟ್ಟು ಅದನ್ನು ಹೂಗಳಿಂದ ಶೃಂಗಾರ ಮಾಡಿ, ಕುಂಕುಮ, ಹಳದಿ ಮತ್ತು ಅಕ್ಷತೆ ಹಾಕಿ ಸಣ್ಣ ಪೂಜೆ ಮಾಡಲಾಗುತ್ತದೆ. ಕುಟುಂಬದ ಹಿರಿಯ ವ್ಯಕ್ತಿಯು ಈ ಪಂಚಾಂಗವನ್ನು ಓದುವ ಮೂಲಕ ಮುಂದಿನ ದಿನಗಳಲ್ಲಿನ ಭವಿಷ್ಯದ ಸ್ಥಿತಿಗತಿಗಳ ಬಗ್ಗೆ ಹೇಳುವರು. ಮನೆಯ ಇತರ ಸದಸ್ಯರು ಇದನ್ನು ಕೇಳುವರು ಮತ್ತು ಅದಕ್ಕೆ ಅನುಗುಣವಾಗಿ ತಮ್ಮ ಯೋಜನೆಗಳನ್ನು ಹಾಕಿಕೊಳ್ಳುವರು. ಯುಗಾದಿ ಅಥವಾ ಉಗಾದಿಯ ಪ್ರಾಮುಖ್ಯತೆ ವರ್ಷವು ಅಂತ್ಯವಾಗಲು ಬಂದಾಗ ನಾವು ಹೊಸ ವರ್ಷದ ಆಗಮನವನ್ನು ತುಂಬಾ ಸಂಭ್ರಮದಿಂದ ಆಚರಿಸುತ್ತೇವೆ. ಹಳೆ ವರ್ಷವನ್ನು ಧನಾತ್ಮಕವಾಗಿ ಬೀಳ್ಕೊಟ್ಟು, ದುಃಖಗಳನ್ನು ನಾವು ಮರೆತುಬಿಡುತ್ತೇವೆ. ಇಡೀ ವಿಶ್ವವು ಈ ದಿನವನ್ನು ಡಿಸೆಂಬರ್ 31ರಂದು ಆಚರಿಸುವುದು. ಆದರೆ ಹಿಂದೂ ಧರ್ಮದಲ್ಲಿ, ಅದರಲ್ಲೂ ಭಾರತೀಯರು ಯುಗಾದಿ ಮೂಲಕವಾಗಿ ಹೊಸ ವರ್ಷಾಚರಣೆ ಮಾಡುವರು. ಇಂದಿನ ಕೆಲ ಯುವ ಸಮುದಾಯ ಮಾತ್ರ ಡಿಸೆಂಬರ್ 31ರಂದೇ ಹೊಸ ವರ್ಷಾಚರಣೆ ಮಾಡುವರು. ನಮಗೆ ಹೊಸ ವರ್ಷಾಚರಣೆ ಎಂದರೆ ಅದು ಯುಗಾದಿ ಹಬ್ಬ. ಡಿಸೆಂಬರ್ 31ರಂದು ಹೊಸ ವರ್ಷಾಚರಣೆ ಆಚರಿಸುವ ಬದಲು ಯುಗಾದಿ ದಿನದಂದು ನಾವು ತುಂಬಾ ಸಂಭ್ರಮ ಹಾಗೂ ಉಲ್ಲಾಸದಿಂದ ಇದನ್ನು ಆಚರಿಸುವೆವು. ದೇಶದಲ್ಲಿ ಯುಗಾದಿ ದೇಶದಲ್ಲಿ ಯುಗಾದಿಯನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಿಂದ ಆಚರಿಸುವರು. ಆಚರಣೆಯ ವಿಧಿವಿಧಾನಗಳು ಬೇರೆ ಆದರೂ ಹೊಸ ವರ್ಷವನ್ನು ಸ್ವಾಗತಿಸುವುದು ಇದರ ಉದ್ದೇಶವಾಗಿದೆ. ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಇದನ್ನು ಮುಖ್ಯವಾಗಿ ಆಚರಿಸಲಾಗುವುದು. ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಇದು ತುಂಬಾ ಜನಪ್ರಿಯ ಹಬ್ಬವಾಗಿದೆ. ಮಹಾರಾಷ್ಟ್ರದಲ್ಲಿ ಇದನ್ನು ಗುಡಿಪಡ್ವಾ ಎಂದು ಆಚರಿಸಿದರೆ, ಇನ್ನು ಕೆಲವೊಂದು ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಆಚರಿಸುವರು. ಸಂಪೂರ್ಣ ಕುಟುಂಬದವರ ಜತೆಗೆ ಆಧ್ಯಾತ್ಮಿಕತೆ ಮತ್ತು ಸಂಭ್ರಮದಿಂದ ಹಬ್ಬಗಳನ್ನು ಆಚರಿಸುವುದು ಮಹತ್ವದ್ದಾಗಿದೆ. ಆದರೆ ಈ ಹಬ್ಬಗಳಿಗೆ ಅದರದ್ದೇ ಆಗಿರುವಂತಹ ಕೆಲವೊಂದು ಪ್ರಾಮುಖ್ಯತೆಗಳು ಕೂಡ ಇದೆ. ಬೇರೆಲ್ಲಾ ಹಬ್ಬಗಳಂತೆ ಯುಗಾದಿಗೆ ಕೂಡ ಒಂದು ಇತಿಹಾಸ ಮತ್ತು ಆಚರಣೆಗಳು ಇದೆ ಎಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ. ಭೂಮಿಯು ತನ್ನ ಪಥ ಬದಲಾಯಿಸುವುದು ಯುಗಾದಿ ದಿನದಂದು ಎಂದು ಹೇಳಲಾಗುತ್ತದೆ. ವಸಂತ ಕಾಲದ ಆಗಮನ ಭೂಮಿಯು ಯುಗಾದಿ ಸಮಯದಲ್ಲಿ ಯಾವ ರೀತಿಯಲ್ಲಿ ಪಥ ಬದಲಾಯಿಸುತ್ತದೆ ಎಂದರೆ ಉತ್ತರಾರ್ಧ ಗೋಲದಲ್ಲಿ ಅತಿಯಾದ ಬಿಸಿಲು ಸುಮಾರು 21 ದಿನಗಳ ಕಾಲ ಕಾಣಿಸಿಕೊಳ್ಳುವುದು ಮತ್ತು ಇದು ವಸಂತ ಕಾಲದ ಆಗಮನ ಕೂಡ ಆಗಿದೆ. ಈ ಋತುವನ್ನು ನಾವು ಹಸಿರಿನ ಋತು ಎಂದು ನಾವು ಕರೆಯಬಹುದು ಮತ್ತು ಇಲ್ಲಿ ಚಿಗುರೆಲೆಗಳು ಮತ್ತು ತಾಜಾ ಗಾಳಿಯು ಬರುವುದು. ಇಷ್ಟು ಮಾತ್ರವಲ್ಲದೆ ಹಣ್ಣುಗಳು ಕೂಡ ಹೆಚ್ಚಾಗಿ ಇದೇ ಸಮಯದಲ್ಲಿ ಹಣ್ಣಾಗುವುದು. ಈ 21 ದಿನಗಳು ಭೂಮಿಗೆ ಶಕ್ತಿ ನೀಡುವುದು ಮತ್ತು ಮುಂಬರುವ ವರ್ಷಕ್ಕೆ ಅದನ್ನು ತಯಾರುಗೊಳಿಸುವುದು. ಚೈತ್ರಾ ನವರಾತ್ರಿಯು ಯುಗಾದಿ ದಿನದಂದು ಆರಂಭವಾಗುವುದು. ಇದನ್ನು ಯುಗಾದಿಯ 9ನೇ ದಿನದಂದು ಆಚರಿಸಲಾಗುತ್ತದೆ ಮತ್ತು 10ನೇ ದಿನವನ್ನು ರಾಮನವಮಿಯಾಗಿ ಆಚರಿಸಲಾಗುವುದು. ಚೈತ್ರಾ ನವರಾತ್ರಿಯು ಉತ್ತರ ಭಾರತೀಯರು ಹೆಚ್ಚಾಗಿ ಆಚರಿಸುವರು.
ಯುಗಾದಿ ಎಂದು ಕರೆಯುವರು.
ಯುಗ ಎಂದರೆ ವರ್ಷ ಮತ್ತು ಆದಿ ಎಂದರೆ ಆರಂಭ. ಭೂ ಮೇಲಿನ ಜೀವಿಗಳನ್ನು ಬ್ರಹ್ಮ ದೇವರು ಈ ದಿನದಂದು ಸೃಷ್ಟಿಸಿದರು ಎಂದು ಹೇಳಲಾಗುತ್ತದೆ. ಇದರ ಮೂಲಕ ಅವರು ವರ್ಷ, ತಿಂಗಳು ಮತ್ತು ದಿನಗಳನ್ನು ಸೃಷ್ಟಿಸಿದರು ಎಂದು ಪುರಾಣಗಳು ಹೇಳುತ್ತವೆ. ಯುಗಾದಿ ಹಬ್ಬವನ್ನು ಆಚರಿಸಿಕೊಳ್ಳುವುದು ಹೇಗೆ? ಯುಗಾದಿ ಹಬ್ಬದಂದು ಜನರು ದೇವರಿಗೆ ಪ್ರಾರ್ಥನೆ ಸಲ್ಲಿಸುವರು. ಅದರಲ್ಲೂ ತೆಲುಗಿನವರು ಬ್ರಹ್ಮ ಮತ್ತು ವಿಷ್ಣು ದೇವರನ್ನು ದಿನದಂದು ಪೂಜಿಸುವರು. ಯುಗಾದಿ ದಿನವು ತುಂಬಾ ವಿಶೇಷವಾಗಿರುವ ಕಾರಣದಿಂದಾಗಿ ಮಹಿಳೆಯರು ಬೇಗನೆ ಎದ್ದು, ಸ್ನಾನ ಮಾಡಿ ಮನೆಯ ಮುಂಭಾಗದಲ್ಲಿ ರಂಗೋಲಿ ರಚಿಸುವರು. ಈ ರಂಗೋಲಿಯ ಬಣ್ಣಗಳು ಮನೆಯೊಳಗಡೆ ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂದು ನಂಬಲಾಗಿದೆ. ಈ ದಿನದಂದು ಹೆಚ್ಚಾಗಿ ಎಣ್ಣೆಸ್ನಾನ ಮಾಡಲಾಗುತ್ತದೆ. ಪ್ರತಿಯೊಬ್ಬರು ಎಣ್ಣೆ ಸ್ನಾನ ಮಾಡಿದ ಬಳಿಕ ಮನೆಯಲ್ಲಿ ಪೂಜೆ ಮಾಡುವರು. ಪೂಜೆ ಬಳಿಕ ಬೇವು ಬೆಲ್ಲ ಹಾಕಿರುವಂತಹ ಪ್ರಸಾದವನ್ನು ಹಂಚಲಾಗುತ್ತದೆ. ಯುಗಾದಿಯಂದು ಮನೆಯ ಹಿರಿಯರು ಅಥವಾ ಅರ್ಚಕರು ಪಂಚಾಂಗವನ್ನು ಓದುವರು. ಇದರ ಪ್ರಕಾರವಾಗಿ ಮನೆಯ ಇತರ ಸದಸ್ಯರು ಇದನ್ನು ಮುಂದಿನ ವರ್ಷಕ್ಕೆ ತಮಗೆ ಅನುಕೂಲಕರವೇ ಎಂದು ನೋಡುವರು. ಇದನ್ನು ಪಂಚಾಂಗ ಶ್ರವಣಂ ಎಂದು ಕರೆಯಲಾಗುತ್ತದೆ.
ಹಳೇ ಮೈಸೂರು ಪ್ರಾಂತ್ಯದ ಯುಗಾದಿ ವಿಶೇಷ ಅಡುಗೆ
ಒಬ್ಬಟ್ಟು ಅಥವಾ ಹೋಳಿಗೆ. ತೆಂಗಿನಕಾಯಿ ಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಕಡಲೆ ಅಥವಾ ತೊಗರೀ ಬೇಳೆಯ ಹೂರಣದಲ್ಲಿ ಮಾಡುವರು.ಇದನ್ನೇ ಮರಾಠಿಯಲ್ಲಿ ಪೂರಣ ಪೋಳಿ ಎಂದು ಕರೆವರು.
ಮಾವಿನ ಮರ ಹೊಸ ಚಿಗರಿನೊಂದಿಗೆ ಸಣ್ಣಗಾತ್ರದಲ್ಲಿ ಬಿಟ್ಟಿರುವ ಮಾವಿನಕಾಯಿಯಿಂದ ಉಪ್ಪಿನಕಾಯಿಯನ್ನು ಮಾಡುವರು.
ಯುಗಾದಿ 2022 ಸಮಯ
ಸೌರಮಾನ ಯುಗಾದಿ
ಕರ್ನಾಟಕದ ಕರಾವಳಿಯಲ್ಲಿ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ ನಮ್ಮ ಚಾಂದ್ರಮಾನ ಯುಗಾದಿ ಆದ 15 ದಿನಗಳ ನಂತರ ಸೌರಮಾನ ಯುಗಾದಿ ಅಚರಣೆ ಇರುತ್ತದೆ.
ಸೌರಮಾನ ಯುಗಾದಿ ಆಚರಣೆ ವಿಶೇಷತೆ ಖಣಿ ಇಡುವುದು. ಬಾಳೆ ಎಲೆ, ತಟ್ಟೆಯಲಿ ಅಕ್ಕಿ ಹಾಕಿ ಅದರ ಮೇಲೆ ತೆಂಗಿನಕಾಯಿ, ಸೌತೇಕಾಯಿ, ರವಿಕೆ ಕಣ, ಹೊಸ ಬಟ್ಟೆ, ಚಿನ್ನ, ಬತ್ತದ ತೆನೆ, ಹಣ್ಣು, ದೇವರ ಪ್ರತಿಮೆ ಅದರ ಮುಂದೆ ಒಂದು ಕನ್ನಡಿ ಇತ್ತು, ಆ ಕನ್ನಡಿಯಲಿ ದೇವರ ಪ್ರತಿಮೆ ಹಾಗೂ ತಟ್ಟೆಯಲಿ ಇಟ್ಟಂತಹ ವಸ್ತುಗಳನ್ನು ಕಾಣುವ ಹಾಗೆ ಇಡುತ್ತಾರೆ. ವನ್ನು ಇಟ್ಟು ದೇವರ ಮುಂದೆ ಹಿಂದಿನ ರಾತ್ರಿ ಮಲಗುವ ಮುನ್ನ ಇಡುತ್ತಾರೆ. ಯುಗಾದಿ ಹಬ್ಬದಂದು ಬೆಳಿಗ್ಗೆ ಬೇಗ ಎದ್ದು ದೇವರ ದೀಪ ಹಚ್ಚಿ ಖಣಿಯಲ್ಲಿನ ಕನ್ನಡಿಯಲಿ ದೇವ ದರ್ಶನ ಪಡೆಯುವುದು ಅಂದಿನ ವಿಶೇಷ. ನಂತರ ಸ್ನಾನ, ಹೋಳಿಗೆ ಚಿತ್ರಾನ್ನದೂಟ, ದೇಗುಲಕ್ಕೆ ಹಾಗೂ ಹಿರಿಯರ ಭೇಟಿ, ಪಂಚಾಂಗ ಶ್ರವಣ ಇರುತ್ತದೆ.
ಯುಗಾದಿಯೊಂದಿಗೆ ಕೆಲವರು ವಸಂತ ನವರಾತ್ರಿ ಅಥಾವ ಚೈತ್ರ ನವರಾತ್ರಿ ಆಚರಿಸುತ್ತಾರೆ.
ಶುಕ್ಲ ಪ್ರತಿಪಚೈತ್ರ ಅಂದರೆ ಶಾರ್ದಿಯಾ ನವರಾತ್ರಿಯಂದು ದೇವಿಯು ಪ್ರತೀ ಬಾರಿ ವಿವಿಧ ವಾಹನಗಳಲ್ಲಿ ಭೂಮಿಗೆ ಬರುತ್ತಾಳೆ ಎನ್ನುವ ನಂಬಿಕೆಯಿದೆ. ಈ ಬಾರಿ ಚೈತ್ರ ಎಂದರೆ ವಸಂತ ನವರಾತ್ರಿ 2022ನೇ ಸಾಲಿನ ಚೈತ್ರ ನವರಾತ್ರಿ ಏಪ್ರಿಲ್ 2 ರಿಂದ ಏಪ್ರಿಲ್ 7ರವರೆಗೆ ಇರಲಿದೆ. ಈ 9 ದಿನಗಳಲ್ಲಿ, ಜನರು ದುರ್ಗಾ ದೇವಿಯ ಎಲ್ಲಾ ಒಂಬತ್ತು ಅವತಾರಗಳನ್ನು ಪೂಜಿಸುತ್ತಾರೆ, ದೇವಿ ಆರಾಧನೆಯನ್ನು ಭಾರತದಾದ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ಭಾರತದಲ್ಲಿ ಒಂದು ವರ್ಷದಲ್ಲಿ ವಿಭಿನ್ನ ಸಂದರ್ಭಗಳಲ್ಲಿ ನವರಾತ್ರಿ ಆಚರಿಸಲಾಗುತ್ತದೆ. ಚೈತ್ರ ನವರಾತ್ರಿ – ಮಾಘ ಗುಪ್ತ ನವರಾತ್ರಿ, ಶರದ್ ನವರಾತ್ರಿ ಮತ್ತು ಆಷಾಢ ಗುಪ್ತ ನವರಾತ್ರಿ. ಆದರೆ, ಚೈತ್ರ ನವರಾತ್ರಿ ಮತ್ತು ಶರದ್ ನವರಾತ್ರಿ ಮಾತ್ರ ಮುಖ್ಯ.
ಚೈತ್ರ ನವರಾತ್ರಿಯು ಪ್ರತಿ ವರ್ಷ ಚೈತ್ರ ದ ತಿಥಿಯಿಂದ ಆರಂಭವಾಗಿ ನವಮಿ ತಿಥಿಯವರೆಗೆ ನಡೆಯುತ್ತದೆ. ಈ ವರ್ಷ, ಚೈತ್ರ ನವರಾತ್ರಿಯು ಏಪ್ರಿಲ್ 2 ಪ್ರಾರಂಭವಾಗಿ ಏಪ್ರಿಲ್ 7ರಂದು ಕೊನೆಗೊಳ್ಳಲಿದೆ. ದುರ್ಗಾ ದೇವಿಯ ಅನುಗ್ರಹ ಪಡೆಯಲು ಬಯಸುವವರು, ಈ 9 ದಿನಗಳಲ್ಲಿ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳು ಕೆಲಸಗಳು ಯಾವುವು ಎಂದರೆ ಚೈತ್ರ ನವರಾತ್ರಿ ಸಮಯದಲ್ಲಿ ಮಾಡಬೇಕಾದ ಸಂಗತಿಗಳು
- 9 ದಿನಗಳವರೆಗೆ ಉಪವಾಸ ಮಾಡಲು ಪ್ರಯತ್ನಿಸಿ. ಉಪವಾಸವು ದೇಹವನ್ನು ಶುದ್ಧಗೊಳಿಸುತ್ತದೆ.
- ಉಪವಾಸವಿಲ್ಲದಿದ್ದರೂ ನಿಮ್ಮ ಮನೆಯಲ್ಲಿ ಸಾತ್ವಿಕ ಆಹಾರವನ್ನು ತಯಾರಿಸಿ.
- 9 ದಿನಗಳ ಕಾಲ ಪ್ರತಿದಿನ ದುರ್ಗಾ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ.
- ಪ್ರತಿದಿನ ದುರ್ಗಾ ದೇವಿಗೆ ಶುದ್ಧ ನೀರನ್ನು ಅರ್ಪಿಸಿ.
- ಅಖಂಡ ದೀಪವನ್ನು 9 ದಿನಗಳವರೆಗೆ ಬೆಳಗಿಸಬೇಕು.
- ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದುರ್ಗಾ ಚಾಲೀಸವನ್ನು ಓದುವುದು.
ಚೈತ್ರ ನವರಾತ್ರಿ ಸಮಯದಲ್ಲಿ ಮಾಡಬಾರದ ಸಂಗತಿಗಳು - ಇತರರ ಬಗ್ಗೆ ಕೆಟ್ಟದಾಗಿ ಯೋಚಿಸಬೇಡಿ ಮತ್ತು ನಿಮ್ಮ ಹೃದಯವನ್ನು ಸ್ವಚ್ಛವಾಗಿಟ್ಟುಕೊಳ್ಳಿ.
- ಇತರರಿಗೆ ಸಹಾಯ ಮಾಡಿ – ಇದು ಯಾವಾಗಲೂ ಭಕ್ತಿಯ ಅತ್ಯುತ್ತಮ ರೂಪವಾಗಿದೆ.
- ಚೈತ್ರ ನವರಾತ್ರಿಯಲ್ಲಿ 9 ದಿನಗಳ ಕಾಲ ಲೈಂಗಿಕ ಕ್ರಿಯೆಯನ್ನು ತಪ್ಪಿಸಿ.
- ಮಾಂಸ ಮತ್ತು ಮದ್ಯವನ್ನು ಸಂಪೂರ್ಣವಾಗಿ ತ್ಯಜಿಸಬೇಕು.
- ಚೈತ್ರ ನವರಾತ್ರಿಯ ಒಂಬತ್ತು ದಿನಗಳಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ತಿನ್ನಬೇಡಿ.
- ನೀವು ಉಪವಾಸ ಮಾಡುತ್ತಿದ್ದರೆ ಸೂರ್ಯಾಸ್ತದ ಮೊದಲು ಸಂಪೂರ್ಣ ಭೋಜನವನ್ನು ಸೇವಿಸಬೇಡಿ.
- ಕಹಿ ಆಹಾರವನ್ನು ತಪ್ಪಿಸಿ. * ಗಡ್ಡ ಅಥವಾ ಉಗುರುಗಳನ್ನು ಟ್ರಿಮ್ ಮಾಡುವುದು ಮತ್ತು ಕೂದಲು ಕತ್ತರಿಸುವುದಕ್ಕೆ ಮುಂದಿನ 9 ದಿನಗಳವರೆಗೆ ಸ್ವಯಂ ನಿರ್ಭಂದ ಹೇರಿಕೊಳ್ಳಿ
ವಿಶೇಷ ಲೇಖನ ಚ.ಶ್ರೀನಿವಾಸಮೂರ್ತಿ