ಕೋಲಾರ: ಮಾಹಿತಿ ಹಕ್ಕು ಕಾರ್ಯಕರ್ತ ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ಸಕಾಲದಲ್ಲಿ ಮಾಹಿತಿ ನೀಡದ ಶ್ರೀನಿವಾಸಪುರ ತಾಲೂಕು ದಳಸನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಗೆ ರಾಜ್ಯ ಮಾಹಿತಿ ಹಕ್ಕು ಆಯೋಗ 10 ಸಾವಿರ ರೂ.ಗಳ ದಂಡ ವಿಧಿಸಿ ದಂದದ ಮೊತ್ತವನ್ನು ಅಧಿಕಾರಿ ವೇತನದಲ್ಲಿ ಕಡಿತಗೊಳಿಸುವಂತೆ ಆದೇಶಿಸಿದೆ.
ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ 14ನೇ ಹಣಕಾಸು ಯೋಜನೆಯಡಿಯಲ್ಲಿ ಬಿಡುಗಡೆಯಾಗಿರುವ ಅನುದಾನದ ಮಾಹಿತಿಯನ್ನು ನೀಡುವಂತೆ ಶ್ರೀನಿವಾಸಪುರದ ಮಾಹಿತಿ ಹಕ್ಕು ಕಾರ್ಯಕರ್ತ ಶಬ್ಬೀರ್ ಅಹ್ಮದ್ ದಿನಾಂಕ 08/11/2017 ರಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಕಲಂ 6(1)ರ ಅಡಿಯಲ್ಲಿ ಆರ್ಜಿ ಸಲ್ಲಿಸಿದ್ದರು.
ಪಿಡಿಒ ಈ ಅರ್ಜಿಯನ್ನು ನಿರ್ಲಕ್ಷಿಸಿದ್ದರು. ಈ ಕುರಿತು ಶಬ್ಬೀರ್ ಅಹಮ್ಮದ್ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.ಮೇಲ್ಮನವಿ ಪ್ರಾಧಿಕಾರದ ಆದೇಶವನ್ನು ದಳಸನೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಲಿಸಿರಲಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಪ್ರತಿವಾದಿಯು ಸತತವಾಗಿ ಆಯೋಗದ ವಿಚಾರಣೆಗಳಿಗೆ ಸೊಕ್ತವಾದ ಕಾರಣಗಳಿಲ್ಲದೆ ಗೈರು ಹಾಜರಾಗಿರುತ್ತಾರೆ.
ಅರ್ಜಿದಾರರಿಗೆ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 7(1)ರನ್ವಯ ನಿಗಧಿತ ಅವಧಿಯೊಳಗೆ ಮಾಹಿತಿ ನೀಡಿರುವುದಿಲ್ಲ. ಆಯೋಗದ ಆದೇಶ ದಿನಾಂಕ 24/11/2020 ಮತ್ತು ದಿನಾಂಕ 11/12/2020 ರ ಕಂಡಿಕೆ 9 ರಲ್ಲಿ ನಿರ್ದೇಶಿಸಿದಂತೆ, ಕಾರಣ ಕೇಳಿ ನೊಟೀಸ್ಗೆ ಯಾವುದೇ ಲಿಖಿತ ಸಮಜಾಯಿಷಿಯನ್ನು ನೀಡಿರುವುದಿಲ್ಲ ಮತ್ತು ಅರ್ಜಿದಾರರಿಗೆ ಮಾಹಿತಿ ನೀಡಿಲ್ಲವೆಂದು ಶ್ರೀನಿವಾಸಪುರ ತಾಲೂಕಿನ ದಳಸನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಸಂತೋಷ್ ರವರಿಗೆ ದಂಡ ವಿಧಿಸಿದೆ.
ಸಂತೋಷ್ ರವರಿಗೆ ವಿಧಿಸಿರುವ ದಂಡದ ಮೊತ್ತವನ್ನು 2021 ನೇ ಸಾಲಿನ ಫೆಬ್ರುವರಿ ತಿಂಗಳಿನಲ್ಲಿ ಕೊಡಲಾಗುವ ಸಂತೋಷ್ ಅವರ ವೇತನದಿಂದ ರೂ 10 ಸಾವಿರ ಕಡಿತಗೊಳಿಸಿ, ಸರ್ಕಾರದ ಲೆಕ್ಕ ಶೀರ್ಷಿಕೆ ಖಾತೆಗೆ ಜಮಾ ಮಾಡಿ, ಜಮಾ ಮಾಡಿದ ರಸೀದಿಯೊಂದಿಗೆ ಆಯೋಗಕ್ಕೆ ವರದಿ ಸಲ್ಲಿಸುವಂತೆ ಆಯೋಗವು ಕೋಲಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವರಿಗೆ ಮಾಹಿತಿ ಹಕ್ಕು ಅಧಿನಿಯಮ 2005 ರ ಕಲಂ 19(8)(ಎ) ಅನ್ವಯ ನಿರ್ದೇಶನ ನೀಡಿದೆ.