ನ್ಯೂಜ್ ಡೆಸ್ಕ್:ಜಗನ್ಮಾತೆ ಶ್ರೀ ದುರ್ಗಾಪರಮೇಶ್ವರಿ ಲಿಂಗ ರೂಪದಲ್ಲಿ ಅವತರಿಸಿ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಿರುವ ಪುಣ್ಯ ಕ್ಷೇತ್ರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆಯಲ್ಲಿದೆ ಎತ್ತರದ ಪರ್ವತ ಶ್ರೇಣಿಗಳು ನಿತ್ಯಹರಿದ್ವರ್ಣ ಕಾಡುಗಳ ನಡುವೆ ಕುಬ್ಜಾ ನದಿಯ ತಟದಲ್ಲಿ ಕಮಲಶಿಲೆ ಎಂಬ ಸುಂದರವಾದ ಊರಿನ ಮಧ್ಯಭಾಗದಲ್ಲಿ ಪುರಾತನ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ಇದೆ.
ಇಲ್ಲಿನ ದೇವಾಲಯದ ವೈಶಿಷ್ಠತೆ ಏನು ಎಂದರೆ ಜಗನ್ಮಾತೆ ಶ್ರೀ ದುರ್ಗಾಮರಮೇಶ್ವರಿಯನ್ನು ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ ಲಿಂಗ ಸ್ವರೂಪಿ ಮಹಾಕಾಳಿ,ಸರಸ್ವತಿ ಮತ್ತು ಮಹಾಲಕ್ಷ್ಮಿ ದೇವಿಯ ಮೂರು ಶಕ್ತಿಗಳ ಸಂಗಮ ಎನ್ನುತ್ತಾರೆ.ಪ್ರಮುಖ ಶಕ್ತಿ ಆರಾಧನಾ ಕೇಂದ್ರಗಳಲ್ಲಿ ಒಂದಾಗಿರುವ ದೇವಾಲಯದಲ್ಲಿ ಲಿಂಗದ ರೂಪದ ಶಿಲೆ ಉದ್ಭವವಾಗಿದ್ದು ವಿಶೇಷ ಪೂಜೆಗಳು ಹಾಗು ಇಲ್ಲಿ ಪ್ರತಿನಿತ್ಯ ಚಂಡಿಕಾ ಹೋಮ ಹವನಗಳು ನಿತ್ಯ ನಿರಂತರವಾಗಿ ನಡೆಯುತ್ತಿರುತ್ತದೆ.ಈ ದೇವಾಲಯಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ಭೇಟಿ ಪುನೀತರಾಗುತ್ತಾರೆ.
ಕಮಲಶಿಲೆಯ ಇತಿಹಾಸ
ಲಿಂಗರೂಪಿ ದರ್ಶನದ ಸಂದರ್ಭದಲ್ಲಿ ಆಸ್ಥಾನದ ನರ್ತಕಿ ಪಿಂಗಳಾ ಎಂಬ ಸದ್ರೂಪಿ ಚಲುವೆ ಕೈಲಾಸ ಪರ್ವತದ ಮೇಲೆ ಶಿವ ಮತ್ತು ಪಾರ್ವತಿ ದೇವಿಯ ಮುಂದೆ ತನ್ನ ಅತ್ಯುತ್ತಮ ನೃತ್ಯವನ್ನು ಪ್ರದರ್ಶಿಸುತ್ತಿದ್ದಳು ಒಂದು ದಿನ ಪಿಂಗಳೆಯ ನೃತ್ಯವನ್ನು ಮತ್ತೊಮ್ಮೆ ಪ್ರದರ್ಶಿಸಲು ಹೇಳಿದಾಗ ಪಿಂಗಳೆ ನಿರಾಕರಿಸಿದ್ದರಿಂದ ಪಾರ್ವತಿಗೆ ತಡೆಯಲಾರದ ಕೋಪ ಬಂದು ಆಕ್ರೋಶ ಭರಿತರಾದ ಪಾರ್ವತಿದೇವಿ ನೀನು ನಿನ್ನ ಸೌಂದರ್ಯವನ್ನೆಲ್ಲಾ ಕಳೆದುಕೊಂಡು ಕುರೂಪಿ ಮಹಿಳೆಯಾಗು ಎಂದು ಪಿಂಗಳೆಗೆ ಶಾಪ ನೀಡಿದಾಗ ಪಿಂಗಳಾ ಕುರೂಪಿಯಾಗಿ ಭೂಲೋಕದಲ್ಲಿ ಜನ್ಮ ತಾಳುತ್ತಾಳೆ ಇಲ್ಲಿ ಬದುಕಲು ಸಾಧ್ಯವಾಗದೇ,ತನ್ನ ತಪ್ಪನ್ನು ಅರಿತು ಕರುಣೆ ತೋರುವಂತೆ ಪಾರ್ವತಿಯನ್ನು ಅಲಾಪಿಸುತ್ತಾಳೆ ಆಗ ಪಾರ್ವತಿದೇವಿ ಪ್ರಸನ್ನಳಾಗಿ ಖಾರರಾತಾಸುರನ ದುಷ್ಕೃತ್ಯಗಳನ್ನು ಕೊನೆಗಾಣಿಸಲು ಭೂಲೋಕಕ್ಕೆ ಬರುತ್ತೇನೆ. ಆಗ ಸಹ್ಯಾದ್ರಿ ವನದಲ್ಲಿ ಲಿಂಗ ರೂಪದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಲಿಂಗವು ಕಮಲಶಿಲೆಯ ರೂಪದಲ್ಲಿರುತ್ತದೆ,ಆ ಸಂದರ್ಭದಲ್ಲಿ ನಿನ್ನನ್ನು ಶಾಪದಿಂದ ವಿಮುಕ್ತಗೊಳಿಸತ್ತೇನೆಂದು ಅಭಯ ನೀಡುತ್ತಾಳೆ.ಅದರಂತೆ ದೇವಾಲಯದ ಮೂಲ ತ್ರೇತಾಯುಗದಾಗಿದ್ದು, ಶ್ರೀ ಕಮಲಶಿಲೆ ಕ್ಷೇತ್ರದ ಮಹಿಮೆಯನ್ನು ಸ್ಕಂದ ಪುರಾಣದಲ್ಲಿ ಹೇಳಿದ್ದು ಪಾರ್ವತಿ ದೇವಿ ಸಹ್ಯಾದ್ರಿ ಅರಣ್ಯದಲ್ಲಿ ಋಷಿ ರೈಕ್ವಾನ ಆಶ್ರಮದ ಮುಂದೆ ಕಮಲಶಿಲೆ ಎಂಬ ಲಿಂಗದ ರೂಪದಲ್ಲಿ ಅವತರಿಸಿ ಭೂಲೋಕದಲ್ಲಿ ಕಿರುಕುಳ ನೀಡುತ್ತಿದ್ದ ರಾಕ್ಷಸ ಖರರಾತಾಸುರನನ್ನು ಸಂಹರಿಸಿದರು ಎಂಬುದು ಈ ದೇವಾಲಯದ ಐತಿಹ್ಯ ಹೇಳುತ್ತದೆ.
ಕುಬ್ಜಳ ಶಾಪ ವಿಮೋಚನೆ
ಪಾರ್ವತಿ ದೇವಿಯು ಪಿಂಗಳಾಳನ್ನು ಸುಪಾರ್ಶ್ವ ಗುಹೆಯ ಬಳಿ ಇರುವಂತೆ ಸೂಚಿಸಿ ಮೋಕ್ಷ ಸಿಗುವವರಿಗೂ ಧ್ಯಾನದಲ್ಲಿ ಇರುವಂತೆ ಹೇಳುತ್ತಾಳೆ. ದೇವಿಯ ಆದೇಶದಂತೆ ಪಿಂಗಳಾ ಮಾಡಿದಾಗ ಸಂತುಷ್ಟಳಾದ ದೇವಿ ಲಿಂಗ ರೂಪದಲ್ಲಿ ದರ್ಶನ ನೀಡಿ ಕುಬ್ಜಳಾಗಿ, ವಿಕಾರವಾಗಿದ್ದ ಪಿಂಗಳಾಳನ್ನು ಕುರಿತು ನೀನು ಮಥುರಾಗೆ ಹೋಗಿ ಶ್ರೀಕೃಷ್ಣನ ಪವಿತ್ರ ಭೂಮಿ ಮತ್ತು ಭಗವಂತನ ಚಿನ್ನದ ಪಾದವನ್ನು ಸ್ವರ್ಶಿಸಿದರೆ ಶಾಪದಿಂದ ಮುಕ್ತಳಾಗುವೆ ಮತ್ತೆ ಪುನಃ ನಿನ್ನ ಸೌಂದರ್ಯವನ್ನು ಪಡೆದುಕೊಳ್ಳುತ್ತೀಯಾ ಎಂದು ಹೇಳಿದಾಗ ಅದರಂತೆ ಪಿಂಗಳಾ ನಡೆದುಕೊಂಡಿದ್ದು ನಂತರದಲ್ಲಿ ಪಾರ್ವತಿ ಮಾತೆ ನೀನು ಈ ಸ್ಥಳದಲ್ಲಿ ಕುಬ್ಜ ನದಿಯಾಗಿ ಹರಿಯಬೇಕು ಎಂದಾಗ ಅದಕ್ಕೆ ಪಿಂಗಳಾ ಸಂತಸಗೊಂಡು ಪ್ರತೀ ಶ್ರಾವಣದಲ್ಲಿ ನದಿಯಾಗಿ ಉಕ್ಕಿ ಹರಿದು ನಿಮ್ಮ ಪಾದಗಳನ್ನು ತೊಳೆದು ಹೋಗುತ್ತೇನೆಂದು ಹೇಳುತ್ತಾಳೆ. ಅದರಂತೆ ಅಂದಿನಿಂದ ಇಂದಿನವರೆಗೂ ಕಮಲಶಿಲೆಯಲ್ಲಿ ಪ್ರತೀ ಶ್ರಾವಣದಂದು ಕುಬ್ಜಾ ನದಿ ಉಕ್ಕಿ ಹರಿದು ಗರ್ಭಗುಡಿ ಪ್ರವೇಶಿಸಿ ತಾಯಿ ದುರ್ಗೆಯ ಪಾದಗಳಿಗೆ ಪ್ರಣಾಮಗಳನ್ನು ಅರ್ಪಿಸಿ ಆಕೆಯ ಮುಡಿಯಲ್ಲಿರುವ ಪುಷ್ವವನ್ನು ಪ್ರಸಾದ ರೂಪದಲ್ಲಿ ತೆಗೆದುಕೊಂಡು ಹೋಗುತ್ತಾಳೆ. ಜಗನ್ಮಾತೆ ಪಾರ್ವತಿ ದೇವಿ ಲಿಂಗ ರೂಪದಲ್ಲಿ ಕಾಣಿಸಿಕೊಂಡ ಸ್ಥಳವೇ ರೈಕ್ವಾ ಋಷಿ ಆಶ್ರಮದ ಮುಂಭಾಗದ ಕುಬ್ಜಾ ಮತ್ತು ನಾಗ ತೀರ್ಥ ನದಿಗಳು ಸಂಧಿಸುವ ಸ್ಥಳ ಎಂದು ಹೇಳಲಾಗುತ್ತದೆ.
ಕಮಲಶಿಲೆ ದೇವಾಲಯದ ಪ್ರಾಮುಖ್ಯತೆ
ಈ ದೇವಾಲಯವನ್ನು ದುರ್ಗಾಪರಮೇಶ್ವರಿ ದೇವಿಯ ಹೆಸರಿನಲ್ಲಿ ಸ್ಥಾಪಿಸಲಾಗಿದೆ. ಇದನ್ನು ಮುಸ್ಲಿಂ ವಾಸ್ತುಶಿಲ್ಪಿ ಬಪ್ಪ ನಿರ್ಮಿಸಿದ ಎಂಬ ಕಾರಣಕ್ಕೆ ಬಪ್ಪನಾಡು ಎಂದು ಕರೆಯುತ್ತಾರೆ.ಇಲ್ಲಿ ಕೇವಲ ಹಿಂದೂ ಭಕ್ತರಲ್ಲದೆ,ಮುಸ್ಲಿಂ ಧರ್ಮದ ಭಕ್ತರು ಕೂಡ ದೇವರ ದರ್ಶನ ಮಾಡುತ್ತಾರೆ ಮತ್ತು ದೇವಾಲಯದ ಉತ್ಸವಗಳಲ್ಲಿ ಭಾಗವಹಿಸುತ್ತಾರೆ.
ಇತ್ತಿಚಿಗೆ ನಿರ್ಮಾಣವಾದ ರಾಜಗೋಪುರ
ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನ ನಿರ್ಮಾಣವಾಗಿತ್ತಾದರು ಮುಂಭಾಗದಲ್ಲಿ ಶಿಲಾಮಯ ರಾಜಗೋಪುರ ಇತ್ತಿಚಿಗೆ ನಿರ್ಮಾಣ ಮಾಡಲಾಗಿದ್ದು ಇದೆ ವರ್ಷ ಎ.24 ರಂದು ವಿವಿಧ ವೈದಿಕ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮ ಕುಂಭಾಭಿಷೇಕ ಕಾರ್ಯವನ್ನು ಶೃಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ತತ್ಕರಕಮಲ ಸಂಜಾತ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳಿಂದ ನೇರವೇರಿಸುವ ಮೂಲಕ ರಾಜಗೋಪುರವನ್ನು ಲೋಕಾರ್ಪಣೆ ಮಾಡಲಾಗಿದೆ.
ವಿಶೇಷ ಸಲಾಂ ಪೂಜೆ
ಪ್ರತಿದಿನ ಸಂಜೆ, ಭಕ್ತರು ‘ಸಲಾಂ ಪೂಜೆ’ ಎಂದು ಕರೆಯಲ್ಪಡುವ ವಿಶೇಷ ಆರತಿ ಪೂಜೆಯನ್ನು ಮಾಡಲಾಗುತ್ತದೆ ಪೂಜೆಯು ಮುಖ್ಯವಾಗಿ ಮೈಸೂರು ಆಡಳಿತಗಾರರ ಗೌರವಾರತವಾಗಿ ಮಾಡಲಾಗುತ್ತದೆ ಎನ್ನುತ್ತಾರೆ.
ಗುಹಾಂತರ ದೇವಾಲಯ
ಕಮಲಶಿಲೆಯಲ್ಲಿ ದುರ್ಗಾದೇವಿಯ ದರ್ಶನ ಮಾಡಿದರವರು ಅಲ್ಲೇ ಸ್ವಲ್ಪ ದೂರದಲ್ಲೇ ಇರುವ ಆದಿ ಗುಹಾಂತರ ದೇವಾಲಯಕ್ಕೆ ಭೇಟಿ ನೀಡುವುದು ವಾಡಿಕೆ. ಇದು ನಾಗದೇವತೆಗಳ ಪವಿತ್ರ ಸ್ಥಳ. ಈ ಆದಿ ಗುಹಾಲಯದ ನಾಗದೇವತೆಗಳಿಗೆ ಸ್ಥಳೀಯ ಬಳೆಗಾರರು ಪ್ರತಿನಿತ್ಯ ಬಂದು ಪೂಜೆ ಮಾಡುತ್ತಾರೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗೋ ಕಿರಿದಾದ ಹಾದಿ ನೇರವಾಗಿ ಕಾಶಿಗೆ ಹೋಗುತ್ತದೆ ಎಂಬ ನಂಬಿಕೆ ಇದೆ ಈ ನಾಗದೇವತೆಗಳ ಗುಹೆಯನ್ನು ಪ್ರವೇಶಿಸುತ್ತಿದ್ದಂತೆ ಸಾವಿರಾರು ಬಾವಲಿಗಳು ನೇತಾಡುತ್ತಿರುವುದನ್ನು ಕಾಣ ಸಿಗುತ್ತದೆ ನೋಡಬಹುದು. ಈ ಬಾವಲಿಗಳು ಕೂಡ ಇಲ್ಲಿಗೆ ಭೇಟಿ ನೀಡುವ ಭಕ್ತಾಧಿಗಳಿಗೆ ಯಾವುದೇ ಹಾನಿಯನ್ನು ಮಾಡಿಲ್ಲ.
ಪೂಜೆ ಮತ್ತು ಸೇವೆ
ಶ್ರೀ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಿಗೆ ಇಲ್ಲಿ ವಿಜಯಾಗಮಕ್ಕೆ ಅನುಗುಣವಾಗಿ ಪೂಜೆ ಮಾಡಲಾಗುತ್ತದೆ. ಈ ವಿಧಾನದಲ್ಲಿ, ಪೂಜೆಯನ್ನು ದಿನಕ್ಕೆ 5 ಬಾರಿ ಮಾಡಲಾಗುತ್ತದೆ.
ಪ್ರಾತಃ ಕಾಲ (ಬೆಳಿಗ್ಗೆ)6 ಗಂಟೆಗೆ,ಮುಂಜಾನೆ (ಬೆಳಿಗ್ಗೆ)8.30 ಕ್ಕೆ,ಮಧ್ಯಾಹ್ನ ಕಲಾ ಮಧ್ಯಾಹ್ನ 12.30 ಕ್ಕೆ,ಸಂದ್ಯಾ ಕಲಾ (ಸಂಜೆ)5.30 ಕ್ಕೆಮತ್ತು ರಾತ್ರಿ ಕಾಲ (ರಾತ್ರಿ)8 ಗಂಟೆಗೆ ನಡೆಸಲಾಗುತ್ತದೆ.ರಾತ್ರಿ ನಡೆಯುವ ಆರತಿ ವಿಶೇಷವಾಗಿದ್ದು ನೋಡಲು ಆನಂದಮಯವಾಗಿರುತ್ತದೆ. ಇದರೊಂದಿಗೆ ಇಲ್ಲಿ ತ್ರಿಕಾಲ ಬಲಿಯನ್ನು ಕೂಡ ನೆರವೇರಿಸಲಾಗುತ್ತದೆ. ತ್ರಿಕಾಲ ಬಲಿಯೆಂದರೆ ಪ್ರಾಣಿಬಲಿ ಅಲ್ಲ, ಬದಲಾಗಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿಯಲ್ಲಿ ಒಳಗಿನ ಚತುರ್ಭುಜದ ಸುತ್ತಲೂ ಇರುವ ದೇವಿಯ ಅಷ್ಟ-ದಿಕ್ಪಾಲಕರಿಗೆ ಅನ್ನವನ್ನು ಅರ್ಪಿಸುವ ವಿಧಾನವಾಗಿದೆ.
ಕ್ಷೇತ್ರದಲ್ಲಿ ಭರ್ಜರಿ ಸಾತ್ವಿಕ ಭೋಜನ
ಕಮಲಶಿಲೆ ದೇವಳದಲ್ಲೊಮ್ಮೆ ಊಟ ಮಾಡುವುದೆ ಆನಂದ ಹಾಗು ಕಮಲಶಿಲೆ ದೇವಸ್ಥಾನದಲ್ಲಿ ಊಟ ಬಡಿಸುವುವರದು ಮತ್ತೊಂದು ವಿಶೇಷ ದೇವಸ್ಥಾನದ ಊಟದಲ್ಲಿ ಅತ್ಯಂತ ನೆಮ್ಮದಿ, ಸಂತೃಪ್ತಿಯ ಊಟ ಬಡಿಸುವ ದೇವಸ್ಥಾನವೊಂದು ಕರ್ನಾಟಕದಲ್ಲೇ ಇದೆ ಅನ್ನುವುದು ಮಹತ್ವವಾದ ವಿಚಾರ ನೀವೊಮ್ಮೆ ಕಲಮಲಶಿಲೆ ದೇವಸ್ಥಾನದಲ್ಲಿ ಊಟ ಮಾಡಿದಿರೆಂದರೆ ಆ ಊಟವನ್ನ ಜೀವನದಲ್ಲಿ ಯಾವತ್ತಿಗೂ ಮರೆಯುವುದು ಸಾಧ್ಯವಿಲ್ಲ. ಅಲ್ಲಿ ಬಡಿಸುವ ಪ್ರತೀ ಅಗುಳು ಅನ್ನದಲ್ಲೂ ಪ್ರೀತಿ ಅಕ್ಕರೆ ಆಪ್ಯಾಯತೆ ಇರುತ್ತದೆ ಕಮಲಶಿಲೆ ಶ್ರೀ ಬಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸ್ವರ ಸಚ್ಚಿದಾನಂದ ಚಾತ್ರರನ್ನು ಒಳಗೊಂಡತೆ ಆ ದೇವಳಕ್ಕೆ ಸಂಬಂದಿಸಿದವರ ಕಾಳಜಿಯಿದೆ.
ಊಟದ ವಿಚಾರ ಎಂಥಾ ಅದ್ಭುತ ಅಂತೀರಿ ಯಾವ ಮದುವೆ ಸಮಾರಂಭದಲ್ಲೂ ಇರದಷ್ಟು ಭಕ್ಷ್ಯಗಳು, ಕನಿಷ್ಠ ಮೂರು ಸಿಹಿ ತಿಂಡಿ,ಕೊನೆಗೆ ಮೊಸರಿನಲ್ಲಿ ಊಟ, ಕುಡಿಯಲಿಕ್ಕೆ ಲೋಟದಲ್ಲಿ ಮಜ್ಜಿಗೆ, ತಣ್ಣಗಾಗಲು ಕೋಲ್ಡ್ ನೀರು.. ಬಿಸಿ ನೀರು ಬೇಕಾ ತಗೊಳ್ಳಿ. ಬಡಿಸುವವರು ಎರೆಡೆರಡು ಸಾರಿ ವಿಚಾರಿಸಿ ಮಾತೃ ಸ್ವರೂಪಿಯಾಗಿ ಊಣಬಡಿಸುತ್ತಾರೆ ದೇವಸ್ಥಾನದ ಧರ್ಮದರ್ಶಿ ಸಚ್ಚಿದಾನಂದ ಚಾತ್ರರೇ ಖುದ್ದಾಗಿ ಬಂದು ಸಾವಕಾಶವಾಗಿ ಊಟ ಮಾಡಿ ಎಂದು ಅತ್ಯಂತ ವಿನಮ್ರತೆಯಿಂದ ವಿನಂತಿಸಿಕೊಳ್ಳುತ್ತಾರೆ.ಅತ್ಯಂತ ಕಾರಣೀಕ ಕ್ಷೇತ್ರವಾದ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ಕ್ಷೇತ್ರ ಕೇವಲ ಒಂದು ದೇವಸ್ಥಾನವಾಗಿ ಅಲ್ಲದೆ ಅಲ್ಲಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಬರುವಂತಹ ಭಕ್ತರನ್ನು ನಡೆಸಿಕೊಳ್ಳುವ ಗೌರವಿಸುವ ವಿಚಾರದಲ್ಲಿ ವಿಶೇಷ.
ಕಮಲಶಿಲೆಯನ್ನು ತಲುಪುವ ಮಾರ್ಗ
ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ತಲುಪಲು ಇರುವ ಮಾರ್ಗಗಳು ವಿಮಾನದ ಮೂಲಕ ಹೋಗುವುದಾದರೆ ಹತ್ತಿರದ ವಿಮಾನ ನಿಲ್ದಾಣ ಮಂಗಳೂರಿನಿಂದ 125 ಕಿಮೀ ಹಾಗು ಶಿವಮೊಗ್ಗದಿಂದ 120 ಕಿ.ಮೀ
ರೈಲುಮಾರ್ಗದಲ್ಲಿ ಹೋಗುವುದಾದರೆ ಕುಂದಾಪುರದಿಂದ 35 ಕಿಮೀ ಇವುಗಳನ್ನು ಹೊರತುಪಡಿಸಿ ರಸ್ತೆ ಮಾರ್ಗದ ಮೂಲಕ ಕೂಡ ಕಮಲಶಿಲೆಯನ್ನು ತಲುಪಬಹುದಾಗಿದ್ದು ಬೆಂಗಳೂರಿನಿಂದ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಹೋಗುವಂತವರು ಶಿವಮೊಗ್ಗ ಮೂಲಕ ತೆರಳಿ ಸಿದ್ದಾಪುರದಲ್ಲಿ ಇಳಿಸು ಅಲ್ಲಿಂದ 7-8 ಕೀ.ಮಿ ದೂರದ ಕಮಲಶಿಲೆ ತಲುಪಬಹುದು.
ಕಮಲಶಿಲೆಯಲ್ಲಿ ಇರುವ ವಸತಿ ಸೌಕರ್ಯಗಳು.
ಕಮಲಶಿಲೆ ಸಣ್ಣ ಊರು ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತದ ಒಟ್ಟು 4 ಅತಿಥಿ ಗೃಹಗಳಿದ್ದು ಅತಿಥಿಗೃಹಗಳಲ್ಲಿ ಒಟ್ಟು 74 ಕೊಠಡಿಗಳಿದ್ದು, ಅವುಗಳಲ್ಲಿ 24 ಎ/ಸಿ ಕೊಠಡಿಗಳು ಮತ್ತು 50 ನಾನ್ ಎ/ಸಿ ಕೊಠಡಿಗಳಾಗಿವೆ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಎಲ್ಲಾ ಕೊಠಡಿಗಳಲ್ಲಿ ಒಂದು ಹಾಸಿಗೆ, ಡ್ರೆಸ್ಸಿಂಗ್ ಟೇಬಲ್, 2 ಕುರ್ಚಿಗಳ ಜೊತೆಗೆ ಹೊಂದಿಕೊಂಡಂತೆ ಶೌಚಾಲಯ ಮತ್ತು ಸ್ನಾನದ ಕೋಣೆಗಳು,24 ಗಂಟೆಗಳ ನೀರು ಸರಬರಾಜು ಮತ್ತು ವಿದ್ಯುತ್/ಜನರೇಟರ್ ಸೌಲಭ್ಯವಿದೆ. ಪ್ರತಿಯೊಂದು ಕೊಠಡಿಯಲ್ಲಿ 3 ರಿಂದ 4 ಜನರು ತಂಗಲು ಅವಕಾಶ ಇರುತ್ತದೆ.