ದಶಕಗಳ ಹಳೆ-ಹೊಸ ತಲೆಮಾರಿನ
ಸೌಹಾರ್ದತೆಯ ಸಮ್ಮಿಲನಕ್ಕೆ ಸಾಕ್ಷಿಯಾಗುವ
ಯಲ್ದೂರು ಕಲ್ಯಾಣೋತ್ಸವ,ರಥೋತ್ಸವ
ಶ್ರೀನಿವಾಸಪುರ:ಶ್ರೀನಿವಾಸಪುರ ತಾಲೂಕು ಯಲ್ದೂರಿನ ಇತಿಹಾಸ ಪ್ರಸಿದ್ಧ ಕೋದಂಡರಾಮ ಸ್ವಾಮಿಯ ಕಲ್ಯಾಣೋತ್ಸವ ಹಾಗು ಬ್ರಹ್ಮರಥೋತ್ಸವ ಭಾರೀ ವಿಜೃಂಭಣೆಯಿಂದ ಜರುಗಿತು. ದೇವಾಲಯದ ಆವರಣದಲ್ಲಿ ನಡೆದ ಬ್ರಹ್ಮರಥೋತ್ಸವಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪುನಿತರಾದರು.
ತಾಲೂಕು ಯಲ್ದೂರಿನ ಶ್ರೀ ಕೋದಂಡರಾಮ ಸ್ವಾಮಿಯ ಬೃಹತ್ ದೇವಾಲಯ ಐತಿಹಾಸಿಕ ವೈಷ್ಣವ ಪುಣ್ಯಕ್ಷೇತ್ರ,ಇಲ್ಲಿ ಪರಿವಾರ ಸಮೇತ ಶ್ರೀಕೋದಂಡರಾಮಸ್ವಾಮಿಯನ್ನು ಬೃಗು ಮಹಿರ್ಷಿ ಪ್ರತಿಷ್ಠಾಪಿತ ಎನ್ನಲಾಗಿ ಚೋಳರ ಆಳ್ವಿಕೆ ಹಾಗು ವಿಜಯ ನಗರ ಸಾಮ್ರಾಜ್ಯದ ಕಾಲದಲ್ಲಿ ಪೂರ್ಣಗೊಂಡಿರುವ ದೇವಾಲಯದಲ್ಲಿ ವಿಶಾಲವಾದ ಪ್ರಾಂಗಣ ಅತ್ಯಾಕರ್ಷಕ ಮುಖ ಮಂಟಪ ಎತ್ತರದ ಗಾಳಿ ಗೋಪುರ ನೋಡಲು ವೈಶಿಷ್ಟಪೂರ್ಣವಾಗಿದೆ. ಕೋಲಾರ ಜಿಲ್ಲೆಯಲ್ಲಿಯೆ ಅತಿ ಪುರಾತನ ದೇವಾಲಯಗಳಲ್ಲಿ ಒಂದಾಗಿರುವ ಭವ್ಯವಾದ ದೇವಾಲಯದಲ್ಲಿ ಪ್ರತಿ ವರ್ಷ ಚೈತ್ರಮಾಸದ ಶ್ರೀ ರಾಮನವಮಿಯಂದು ಆರಂಭಗೊಂಡು ಸುಮಾರು ಒಂಬತ್ತು ದಿನಗಳ ಕಾಲ ವೈಭವೋಪೆತವಾಗಿ ನಡೆಯುವ ವಾರ್ಷಿಕ ಭ್ರಹ್ಮೋತ್ಸವಗಳು ವೈಖಾಸ ಆಗಮನ ಶಾಸ್ತ್ರದಂತೆ ನಡೆಯುತ್ತದೆ.
ಚೈತ್ರ ಶುದ್ದ ಚತುರ್ದಶಿಯಂದು ಸಂಜೆ ನಡೆಯುವ ಶ್ರೀ ಸೀತಾರಾಮರ ಕಲ್ಯಾಣ ನೋಡಲೆರಡು ಕಣ್ಣುಗಳು ಸಾಲದು ನಾಗಪೆಡೆಯ ವಿಶೇಷ ಆಸನದ ಮೇಲೆ ಹೂವಿನ ಮಂಟಪದಲ್ಲಿ ಲಕ್ಷ್ಮಣ ಸಮೇತ ಜ್ಞಾನದ ಸಂಕೇತವಾಗಿ ಶ್ರೀಕೋದಂಡರಾಮ ಹಾಗು ಭಕ್ತಿಯ ಸಂಕೇತವಾಗಿ ಸೀತಾ ಮಾತೆಯನ್ನು ಕೂರಿಸಿ ದೇವಾಲಯದ ವಂಶ ಪಾರಂಪರ್ಯ ಅರ್ಚಕರು ಕಲ್ಯಾಣೋತ್ಸವ ನಡೆಸುತ್ತಾರೆ ಇಂದಿನ ಪೀಳಿಗೆಗೆ ಮದುವೆ ಎಂಬ ಪವಿತ್ರ ಬಂಧನವನ್ನು ಬೊಧಿಸುವ ಪರಮ ಪವಿತ್ರವಾದ ಕಲ್ಯಾಣವೈಭೊಗ ವರ್ಣಾತೀತ ಕಲ್ಯಾಣೋತ್ಸವಕ್ಕೆ ಆಗಮಿಸಿ ನೋಡಿ ಕಣ್ ತುಂಬಿಕೊಂಡಾಗಲೆ ತಿಳಿಯುತ್ತದೆ.
ಮದ್ಯರಾತ್ರಿ ಕಲ್ಯಾಣೋತ್ಸವದ ನಂತರ ನಡೆಯುವಂತ ಗರುಡೋತ್ಸವ ಅದ್ಭುತವಾಗಿರುತ್ತದೆ.
ದಿಬ್ಬಣದಲ್ಲಿ ಬರುವ ಕಲ್ಯಾಣೋತ್ಸವ ಸಾಮಾಗ್ರಿಗಳು
ಶ್ರೀ ಕೋದಂಡರಾಮ-ಸೀತಾ ಮಾತೆಯ ಕಲ್ಯಾಣೋತ್ಸವ ಪ್ರಾರಂಭ ಆಗುವುದಕ್ಕೂ ಮುಂಚಿತವಾಗಿ ವಧು ಸೀತಾಮಾತೆಯನ್ನು ಕಲ್ಯಾಣ ಮಂಟಪಕ್ಕೆ ಕರೆತರುವ ಗ್ರಾಮದ ಶಾನುಭೋಗ ಕುಟುಂಬದವರು,ಪಟೇಲರ ವಂಶಂಸ್ಥರು ಸೇರಿದಂತೆ ಗ್ರಾಮದಲ್ಲಿನ ಹಿರಿಯರು, ಪ್ರಮುಖರು,ಜನಪ್ರತಿನಿಧಿಗಳು ಎಲ್ಲಾ ಸಮಾಜದವರು ಪಲ್ಲಕ್ಕಿ ಸಮೇತರಾಗಿ ಆಗಮಿಸುತ್ತಾರೆ ಅವರ ಸಮ್ಮುಖದಲ್ಲಿ ವಧು ಸೀತಮ್ಮನ ತವರು ಮನೆಯವರು ಊರಿನವರ ಸಮ್ಮುಖದಲ್ಲಿ ಕಲ್ಯಾಣೋತ್ಸವ ಹಾಗು ಗರುಡೋತ್ಸವದ ವಂಶಪಾರಂಪರ್ಯ ಸೇವಾಕರ್ತ ಶ್ರೀನಿವಾಸಪುರದ ಸ್ವಾತಂತ್ರ್ಯ ಹೋರಾಟಗಾರ ವೆಂಕಟಪ್ಪಶೆಟ್ಟಿ ಕುಟುಂಬದವರು ತಮ್ಮ ಸ್ವಗೃಹದ ಬಳಿ ಹಸಿರು ಚಪ್ಪರಕ್ಕೆ ಸಂಪ್ರದಾಯದಂತೆ ಪೂಜೆ ಶಾಸ್ತ್ರ ಮಾಡಿ ಕಲ್ಯಾಣೋತ್ಸವ ಸಾಮಾಗ್ರಿಗಳು ಪಲ್ಲಕ್ಕಿಯಲ್ಲಿಟ್ಟು ಅಲ್ಲಿಂದ ಕಳಸ ಹೊತ್ತು ಸೇವಾಕರ್ತ ಕುಟುಂದ ಸುಹಾಸಿನಿಯರು ತಾಳ-ಮೇಳ ಮಂಗಳ ವಾದ್ಯಗಳ ಸಮೇತ ಪಲ್ಲಕ್ಕಿಯ ಜೊತೆಯಲ್ಲಿ ದಿಬ್ಬಣವಾಗಿ ಸೀತಾ-ರಾಮರ ಕಲ್ಯಾಣ ನಡೆಯುವ ಶ್ರೀ ಕೋದಂಡರಾಮ ದೇವಾಲಯಕ್ಕೆ ತೆರಳುವುದು ಜಾನಪದ ಸೊಗಡಿನ ಶೈಲಿಯಂತೆ ಇರುತ್ತದೆ.
ವೈಭೋಗವದ ಗರುಡೋತ್ಸವ
ಗರುಡೋತ್ಸವ ವೈಭೋಗ ನೋಡಲೆ ಆನಂದ ಆಗಲವಾದ ಎದೆ ತಿದ್ದಿ ತೀಡಿರುವಂತ ಕಣ್ಣುಗಳು ಶ್ವೇತ ವಸ್ರಧಾರಿಯಾಗಿ ಮೊಣಕಾಲಿನ ಮೇಲೆ ಕುಳಿತ ಬಂಗಿಯಲ್ಲಿ ಭವ್ಯವಾದ ಗರುಡಮೂರ್ತಿಯನ್ನು ನೋಡುವುದು ವರ್ಣಿಸಲಾಗದ ವೈಭೋಗ, ಗರಡಮೂರ್ತಿಯ ಚಾಚಿದ ಎರಡು ಕೈಗಳ ಮೇಲೆ ಕಲ್ಯಾಣ ಶ್ರೀ ಸೀತಾರಾಮರನ್ನು ಕೂರಿಸಿ ವಿಶೇಷವಾಗಿ ಹೂವಿನ ಅಲಂಕಾರದ ಪಲ್ಲಕ್ಕಿಯನ್ನು ಗ್ರಾಮದ ಜನತೆ ಕೈಗಳಲ್ಲಿ ಹೊತ್ತು ಸಾಗುತ್ತಾರೆ. ಪಲ್ಲಕ್ಕಿಯನ್ನು ದೇವಾಲಯದ ಗಾಳಿ ಗೋಪುರದ ಮೂಲಕ ಹೊರಗೆ ತರುವಂತ ಸಂದರ್ಭದಲ್ಲಿ ಆಕಾಶದಲ್ಲಿ ಗರುಡ ದರ್ಶನ ನೀಡುವುದು ಇಲ್ಲಿನ ವಿಶೇಷ ನಂತರ ಪಲ್ಲಕ್ಕಿ ಉತ್ಸವವನ್ನು ಯಲ್ದೂರಿನ ನೂರಾರು ಯುವಕರು ಬುಜಗಳ ಮೇಲೆ ಭಕ್ತಿ ಪರವಶರಾಗಿ ಹೊತ್ತು ಊರಿನಲ್ಲಿ ಮೆರವಣಿಗೆ ಮಾಡುವಂತ ಗರುಡೋತ್ಸವ ಅಮೋಘ ಎನ್ನಬಹುದು.
ಬಂಧು-ಸ್ನೇಹಿತರ ಸೌಹಾರ್ದತೆಯ ಸಮ್ಮಿಲನ ಹಗಲು ರಥೋತ್ಸವ
ಚೈತ್ರ ಹುಣ್ಣುಮೆಯಂದು ಹಗಲು ನಡೆಯುವ ಅದ್ದೂರಿ ಬ್ರಹ್ಮರಥೋತ್ಸಕ್ಕೆ ಜನ ಸಾಗರವೆ ಸೇರುತ್ತದೆ.ರಥದ ಮೇಲೆ ಕೂತ ಶ್ರೀ ಕೋದಂಡರಾಮ ಊರಿನ ಜನರ ಸಮಸ್ಯೆ ಆಲಿಸುತ್ತಾನೆ ಅನ್ನೋ ನಂಬಿಕೆ ಜನರದ್ದು.ಬಿರು ಬಿಸಲ ನಡುವೆ ಸೇರುವ ಜನಜಾತ್ರೆಯಿಂದ ಯಲ್ದೂರಿನ ರಸ್ತೆಗಳು ಕಿಕ್ಕಿರಿದು ತುಂಬಿ ಹೋಗಿರುತ್ತದೆ.
ಯಲ್ದೂರು ರಥೋತ್ಸವದ ಮತ್ತೊಂದು ವಿಶೇಷ ಏನೆಂದರೆ ಬಂಧು-ಸ್ನೇಹಿತರ ಸೌಹಾರ್ದತೆ ಸಮ್ಮಿಲನ ಎನ್ನಬಹುದು.
ಯಲ್ದೂರು ಸೇರಿದಂತೆ ಅದಕ್ಕೆ ಹೊಂದಿಕೊಂಡಿರುವ ಗ್ರಾಮಗಳವರು ಸ್ಥಳೀಯವಾಗಿ ಹುಟ್ಟಿ ಬೆಳೆದು ಬದುಕು ಕಟ್ಟಿಕೊಳ್ಳಲು ಬೆಂಗಳೂರು ಸೇರಿದಂತೆ ಹೋರಗಡೆ ಹೊಗಿ ಜೀವನ ಮಾಡುತ್ತಿರುವರು,3-4ತಲಮಾರುಗಳು ಕಳೆದರು ಹಾಗೆ ಮದುವೆಯಾಗಿ ಅತ್ತೆ ಮನೆಗೆ ಹೋದ ಹೆಣ್ಣುಮಕ್ಕಳು ಹೊಸ ಪೀಳಿಗೆಯವರು ಸೇರಿದಂತೆ 2-3 ತಲೆಮಾರಿನ ಹಳೆಯ ಪೀಳಿಗೆಯವರು ಅಜ್ಜಿ ಮನೆ ಮುತ್ತಜ್ಜಿ ಮನೆಯ ನೆನಪಿನಲ್ಲಿ ಶ್ರೀ ಕೋದಂಡರಾಮನ ಮೇಲಿನ ವಿಶೇಷ ಭಕ್ತಿ ಆಪ್ಯಾಯತೆ ಹಾಗೆ ಅಕ್ಕರೆಯ ಹುರುಪಿನೊಂದಿಗೆ ಕಲ್ಯಾಣೊತ್ಸವ ಹಾಗು ರಥೋತ್ಸವಕ್ಕೆ ಸಡಗರದಿಂದ ಯಲ್ದೂರಿಗೆ ಆಗಮಿಸಿ ಬಂಧುಗಳು ಮತ್ತು ಸ್ನೇಹಿತರೊಂದಿಗೆ ಸಂಭ್ರಮಿಸುತ್ತಾರೆ.ಇಲ್ಲಿನ ಕಲ್ಯಾಣೊತ್ಸವ ಹಾಗು ರಥೋತ್ಸವ ಊರಿನ ಹೊಸ-ಹಳೆ ತಲೆಮಾರಿನವರನ್ನು ಒಗ್ಗೂಡಿಸುವ ಸೌಹಾರ್ದತೆಯ ಸಮ್ಮಿಲನ ಎನ್ನುವಂತ ವಾತವರಣ ಇರುತ್ತದೆ.