ಕೋಲಾರ:ಗೌಜು ಗದ್ದಲ ಕೋಲಾಹಲದ ನಡುವೆ ನಡೆದ ಕೋಲಾರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ (ಕೋಮುಲ್) ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಒಕ್ಕೂಟದ ಮತಕ್ಷೇತ್ರ ವಿಂಗಡಣೆ ಸರಿಯಾಗಿದೆ ಎಂಬುದಕ್ಕೆ ಅನುಮೋದನೆ ದೊರಕಿದೆ.
ಕೋಲಾರ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿಗೆ ಚುನಾವಣೆ ಕ್ಷೇತ್ರ ನಿಗದಿಪಡಿಸಲು ಹೈಕೋರ್ಟ್ ನೀಡಿದ ಸೂಚನೆಯಂತೆ, ಜಿಲ್ಲಾ ಹಾಲು ಒಕ್ಕೂಟದ ಆಡಳಿತಾಧಿಕಾರಿ ಅಸಿಸ್ಟಂಟ್ ಕಮೀಷನರ್ ಡಾ.ಮೈತ್ರಿ ಅಧ್ಯಕ್ಷತೆಯಲ್ಲಿ ಕೋಲಾರ ನಗರದ ಹೊರವಲಯದಲ್ಲಿರುವ ರತ್ನ ಕನ್ವೆನಷನ್ ಸೇಂಟರ್ ನಲ್ಲಿ ಸರ್ವ ಸದಸ್ಯರ ವಿಶೇಷ ಸಭೆಯನ್ನು ಗುರುವಾರ ಕರೆಯಲಾಗಿತ್ತು ಮೊದಲಿಗೆ ಮತ ಕ್ಷೇತ್ರ ವಿಂಗಡಣೆಗೆ ಅನುಮೋದನೆ ನೀಡುವಂತೆ ಸೂಚಿಸಲಾಯಿತು. ಈ ವಿಚಾರದ ಪರವಾಗಿದ್ದ ಪ್ರತಿನಿಧಿಗಳು ಕೈ ಎತ್ತುವ ಮೂಲಕ ಅನುಮೋದನೆಗೆ ಬೆಂಬಲ ಸೂಚಿಸಿದರು. ಆದರಂತೆ ಅನುಮೋದನೆ ಸಿಕ್ಕಿದೆ ಎಂದು ಆಡಳಿತಾಧಿಕಾರಿ ಘೋಷಿಸಿ ಸಭೆ ಮುಕ್ತಾಯಗೊಳಿಸಿದರು.
ರೊಚಿಗೆದ್ದ ಬಂಗಾರಪೇಟೆ ಶಾಸಕ
ಜಿಲ್ಲಾ ಹಾಲು ಒಕ್ಕೂಟದ ಮತಕ್ಷೇತ್ರ ವಿಂಗಡಣೆಯನ್ನು ಮೊದಲಿನಿಂದಲೂ ಪ್ರಭಲವಾಗಿ ವಿರೋಧಿಸುತ್ತಿದ್ದ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ,ಈ ವಿಚಾರವಾಗಿ ಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು ಇದಕ್ಕೆ ಹಾಲು ಒಕ್ಕೂಟದ ಮಾಜಿ ನಿರ್ದೇಶಕರಾದ ಡಿ.ವಿ.ಹರೀಶ್, ಕಾಡೇನಹಳ್ಳಿ ನಾಗರಾಜ್, ತೂಪಲ್ಲಿ ನಾರಾಯಣಸ್ವಾಮಿ ಸೇರಿದಂತೆ ಹಲವು ಪ್ರತಿನಿಧಿಗಳು ಬೆಂಬಲಿಸಿ ಒತ್ತಾಯಿಸಿದರು. ಇದಕ್ಕೆ ಆಡಳಿತಾಧಿಕಾರಿ ಅವಕಾಶ ನೀಡಲಿಲ್ಲ. ಇದಕ್ಕೆ ರೊಚ್ಚಿಗೆದ್ದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವೇದಿಕೆಯ ಮೇಲೆ ಹತ್ತಿ, ಮತ ಕ್ಷೇತ್ರ ವಿಂಡಗಣೆ ಯಾವ ಮಾನದಂಡಗಳ ಆಧಾರದ ಮೇಲೆ ಮಾಡಲಾಗಿದೆ. ಇದಕ್ಕೂ ಮೊದಲು ಗ್ರಾಮಗಳಿಗೆ ಭೇಟಿ ನೀಡಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರ ಗಮನಕ್ಕೆ ತಂದಿದೀರಾ ಎಂದು ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಅವರನ್ನು ತೀವ್ರವಾಗಿ ಪ್ರಶ್ನಿಸತೊಡಗಿದಾಗ ಸಭೆಯಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಶಾಸಕ ಎಸ್.ಎನ್.ನಾರಾಯಣಸ್ವಾಮಿ ಪ್ರಶ್ನಗೆ ಉತ್ತರಿಸದ ಹಾಲು ಒಕ್ಕೂಟದ ಅಧಿಕಾರಿಗಳ ಮೇಲೆ ಕೂಗಾಡುತ್ತ ಏರಿ ಹೋದರು ಇದೆ ಸಂದರ್ಭ ಬಳಿಸಿಕೊಂಡ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಬೆನ್ನಲೇ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಸಹ ವೇದಿಕೆಗೆ ತೆರಳಿ ವಿಷಯ ಅಂಗಿಕರಿಸಿದ ಮೇಲೆ ಯಾರೂ ಪ್ರಶ್ನೆ ಮಾಡಬಾರದು ಎಂದಾಗ ಸಭೆಯಲ್ಲಿ ಕೋಲಾಹಲವೆ ಸೃಷ್ಟಿಯಾಯಿತು ಆಗ ಪೊಲೀಸರು ಇಬ್ಬರೂ ಶಾಸಕರನ್ನು ವೇದಿಕೆಯಿಂದ ಕೆಳಗಿಳಿಸಿ, ಪರಿಸ್ಥಿತಿ ತಿಳಿಗೊಳಿಸಿದರು.
ಅಧಿಕಾರಿಗಳನ್ನು ಎಳೆದಾಡಿದ ಆರೋಪ
ಕೂಗಾಟ ಗದ್ದಲದ ನಡುವೆ ಹಾಲು ಒಕ್ಕೂಟದ ಎಂಡಿ ತಮ್ಮ ಕೊಠಡಿಗೆ ತೆರಳುವ ಸಂದರ್ಭದಲ್ಲಿ ಒಕ್ಕೂಟದ ಮಾಜಿ ನಿರ್ದೇಶಕರೊಬ್ಬರು ಸೇರಿದಂತೆ ಕೆಲವರು ಅಧಿಕಾರಿಯನ್ನು ತಳ್ಳಾಡಿ ಎಳೆದಾಡಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
13 ಚುನಾಯಿತ, 5ಸರ್ಕಾರಿ ಪ್ರತಿನಿಧಿಗಳು
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆಯಾದ ಹಿನ್ನಲೆಯಲ್ಲಿ ಹಾಲು ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನ ಹೆಚ್ಚಿಸಿಕೊಳ್ಳುವ ಸಂಬಂದ ಮತ ಕ್ಷೇತ್ರ ವಿಂಗಡಿಸಲು ಹೈಕೋರ್ಟ್ ಸೂಚಿಸಿತ್ತು. ಅದರಂತೆ ಒಟ್ಟು 18 ನಿರ್ದೇಶಕರ ಸ್ಥಾನಗಳನ್ನು ನಿಗದಿಪಡಿಸಿದ್ದು, ಆ ಪೈಕಿ 13 ಚುನಾಯಿತ ನಿರ್ದೇಶಕರು, ಸರ್ಕಾರದ ನಾಮಿನಿ, ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ಪ್ರತಿನಿಧಿ, ಪಶು ಸಂಗೋಪನೆ ಇಲಾಖೆ, ಸಹಕಾರ ಸಂಘಗಳ ನಿಬಂಧಕ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾ ಮಂಡಳಿದ ತಲಾ ಒಬ್ಬ ನಿರ್ದೇಶಕರ ಸ್ಥಾನ ನಿಗದಿಪಡಿಸಲಾಗಿದೆ. ಸಭೆಯ ಅನುಮೋದನೆಯ ವರದಿಯನ್ನು ಹೈಕೋರ್ಟಿಗೆ ಸಲ್ಲಿಸಿ, ಮುಂದಿನ ಆದೇಶದ ನಂತರ ಚುನಾವಣೆಗೆ ಒಕ್ಕೂಟ ಕ್ರಮವಹಿಸಲಿದೆ.
ಅನುಮೊದನೆಗೆ ಮೂರನೇ ಎರಡಷ್ಟು ಮತ
ಹೈಕೋರ್ಟ್ ಆದೇಶದಂತೆ ಕ್ಷೇತ್ರ ವಿಂಗಡಣೆ ಅನುಮೋದನೆಗೆ ಕೈಎತ್ತುವ ಮೂಲಕ ಮತಕ್ಕೆ ಹಾಕಿದ್ದು ಪರವಾಗಿ ಮೂರನೇ ಎರಡರಷ್ಟು ಮತಗಳು ಪರವಾಗಿ ಬಿದ್ದಿವೆ ಎಂದು ಆಡಳಿತಾಧಿಕಾರಿ ಡಾ.ಮೈತ್ರಿ ಪ್ರಕಟಿಸಿದರು.
ಬಂಗಾರಪೇಟೆ ಶಾಸಕರ ಪ್ರಯತ್ನಕ್ಕೆ ಹಿನ್ನಡೆ
ಒಕ್ಕೂಟದ ಮತ ಕ್ಷೇತ್ರಗಳ ವಿಂಗಡಣೆಯನ್ನು ವಿರೋಧಿಸುತ್ತಿದ್ದ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಕೆಲ ಮಾಜಿ ನಿರ್ದೇಶಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಮತ್ತು ಮಾಲೂರು ಶಾಸಕ ಹಾಗು ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ನಂಜೇಗೌಡ ಇಬ್ಬರ ನಡುವೆ ವೈಯುಕ್ತಿಕ ಪ್ರತಿಷ್ಟೆಯಾಗಿತ್ತು ಇಂತಹ ಸಂದರ್ಭದಲ್ಲಿ ಸಭೆಯಲ್ಲಿ ಕಲಂ ೧೨(೫)ಗೆ ಅನುಮೋದನೆ ದೊರೆತಿದ್ದು, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ತಂಡಕ್ಕೆ ಹಿನ್ನಡೆಯಾಗಿದೆ.

ಸಭೆಯಲ್ಲಿ ಶ್ರೀನಿವಾಸಪುರದ ಸಹಕಾರಿಗಳು
ಕೋಲಾರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ಸಭೆಯಲ್ಲಿ ಶ್ರೀನಿವಾಸಪುರ ತಾಲೂಕಿನ ಪ್ರಮುಖ ಸಹಕಾರಿ ಧುರೀಣರು ಪಾಲ್ಗೊಂಡಿದ್ದರು ಇವರಲ್ಲಿ ಪ್ರಮುಖರು ಹಾಲು ಒಕ್ಕೂಟದ ಮಾಜಿ ನಿರ್ದೇಶಕರಾದ ದ್ವಾರಸಂದ್ರ ಮುನಿವೆಂಕಟಪ್ಪ,ಹನುಮೇಶ್,ಪಾಳ್ಯಂ ಬೈರಾರೆಡ್ಡಿ,ಕಲ್ಲೂರು ಮಂಜು,ಪಿಎಲ್.ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಆಶೋಕ್,ನಾಗದೇನಹಳ್ಳಿ ಸೀತಾರಾಮರೆಡ್ಡಿ,ಕೇತಗಾನಹಳ್ಳಿ ನಾಗರಾಜ್ ಸೇರಿದಂತೆ ಹಲವು ಸಹಕಾರಿ ಧುರೀಣರು ಪಾಲ್ಗೋಂಡಿದ್ದರು