ಕೋಲಾರ ನನ್ನ ಜನ್ಮ ಭೂಮಿ, ಕಾಯಕ ಭೂಮಿ, ಕರ್ಮ ಭೂಮಿ ಇದರ ಋಣ ನನ್ನ ಮೇಲಿದೆ. ಈ ಋಣ ತೀರಿಸುವುಕ್ಕಾಗಿ ನಾನು ನನಗೆ ಸಿಕ್ಕ ಅವಕಾಶಗಳೆಲ್ಲವನ್ನೂ ಬಳಸಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾರ್ಮಿಕವಾಗಿ ನುಡಿದರು.
ಕೋಲಾರ:ನನ್ನ ಬೇರುಗಳು ಕೋಲಾರದ ಮಣ್ಣಿನಲ್ಲಿದೆ ಈ ಮಣ್ಣಿನ ಋಣ ತೀರಿಸುವ ಪ್ರಯತ್ನದಲ್ಲಿ ಇದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಭಾವನಾತ್ಮಕವಾಗಿ ಹೇಳಿದರು.
ಅವರು ಭಾನುವಾರ ಸಂಜೆ ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಅವರಣದಲ್ಲಿ ನಡೆದ ಸಮಾರಂಭದಲ್ಲಿ ಕೋಲಾರ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಸರ್ಕಾರದಿಂದ 25 ಲಕ್ಷ ರೂ ಅನುದಾನ ಒದಗಿಸಿದಕ್ಕಾಗಿ ಪತ್ರಕರ್ತರ ಸಂಘ ಮತ್ತು ನಾಗರಿಕ ಸಂಘಟನೆಗಳಿಂದ ಆಯೋಜಿಸಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ನನ್ನ ಹುಟ್ಟು, ಬಾಲ್ಯ ಎಲ್ಲಾ ಕೋಲಾರ ಮಣ್ಣಿನಲ್ಲಿ ಬೆರೆತಿದೆ. ನನ್ನ ಪತ್ರಿಕಾ ವೃತ್ತಿ ಬದುಕನ್ನು ಮಾತ್ರವಲ್ಲ, ನನ್ನ ವ್ಯಕ್ತಿತ್ವವನ್ನು ರೂಪಿಸಿದ್ದೂ ಕೋಲಾರದ ಬೀದಿಗಳು ನನಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಬೆಳೆದಿದ್ದೇನೆ ಇದಕ್ಕೆ ಕಾರಣ ನನ್ನ ಬೇರುಗಳು ಕೋಲಾರದ ಮಣ್ಣಿನಲ್ಲಿರುವುದೆ ಕಾರಣ ಎಂದರು.
ಕಾರ್ಮಿಕ ಚಳವಳಿ, ದಲಿತ ಚಳವಳಿ, ಅಹಿಂದ ಹೋರಾಟ, ಪ್ರಗತಿಪರ ಚಳವಳಿಗಳ ನೆಲ ಕೋಲಾರ. ಈ ಎಲ್ಲಾ ಹೋರಾಟಳ ಹಾಗು ಚಳವಳಿಗಳಿಗೆ ಸಾಕ್ಷಿಯಾಗಿ ನಾನು ಇಲ್ಲಿ ಬೆಳೆದಿದ್ದೇನೆ. 40 ವರ್ಷಗಳಲ್ಲಿ ಕೋಲಾರದ ಬದುಕು ಮತ್ತು ಬದಲಾವಣೆಗಳನ್ನು ನಾನು ಹತ್ತಿರದಿಂದ ಕಂಡಿರುವೆ ಕೋಲಾರದ ಜನರ ಹೃದಯ, ಪ್ರೀತಿ, ವಿಶ್ವಾಸ ಮಾತ್ರ 40 ವರ್ಷಗಳಿಂದ ಹಾಗೇ ಇದೆ. ಕೋಲಾರದ ಮಣ್ಣಿನ ಜೊತೆಗೆ ನನಗೆ ಭಾವನಾತ್ಮಕ ಸಂಬಂದ ಇದೆ. ಇವತ್ತು ನಾನು ಸ್ವೀಕರಿಸಿದ ಅಭಿನಂದನೆ, ಗೌರವ ಎಲ್ಲವನ್ನೂ ಕೋಲಾರ ಜನರ ಹೃದಯಕ್ಕೆ, ಈ ಮಣ್ಣಿಗೆ ಅರ್ಪಿಸುತ್ತೇನೆ.
ನಾನು ಮುಖ್ಯಮಂತ್ರಿಗಳ ಸಲಹೆಗಾರನಾಗಿ, ಕ್ಯಾಬಿನೆಟ್ ದರ್ಜೆ ಪಡೆದು ಕೋಲಾರ ಪ್ರವೇಶಿಸಿದಾಗ ನನಗೆ ಮೊದಲು ನೆನಪಾಗಿದ್ದು ನಾನು ಓದಿದ ಶಾಲೆ, ನನ್ನನ್ನು ತಿದ್ದಿದ ಗುರುಗಳು ಮತ್ತು ನನಗೆ ಮೊದಲ ಸಂಬಳ ಕೊಟ್ಟ ನನ್ನ ಕೋಲಾರ ಪತ್ರಿಕೆ. ಹೀಗಾಗಿ ನಾನು ಓದಿದ ಶಾಲೆಗೆ ಮೊದಲು ಋಣ ತೀರಿಸುವ ಪ್ರಯತ್ನಕ್ಕೆ ಮುಂದಾದೆ. ಹೀಗೇ ಇಲ್ಲಿನ ಪತ್ರಿಕಾ ಸಮೂಹಕ್ಕೆ ಅನುದಾನವನ್ನು ಒದಗಿಸುವ ಸೌಭಾಗ್ಯ ಕೂಡ ನನಗೆ ಒದಗಿ ಬಂತು. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರಕ್ಕಾಗಿ ನಾನು ಕೇಳಿದ್ದೆಲ್ಲವನ್ನೂ ಒದಗಿಸಿತ್ತ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಗೆಳೆಯರು ರೂಪಿಸಿದ ವ್ಯಕ್ತಿತ್ವ ನನ್ನದು
ಮಾಸಿದ ಬಟ್ಟೆಯಲ್ಲಿ ನನ್ನ ಜೊತೆಗೆ ಓಡಾಡದ, ಆಡಿದ, ಒಡನಾಡಿದ ಗೆಳೆಯರು ಕೋಲಾರದಲ್ಲಿದ್ದಾರೆ. ಒಂದೇ ತಟ್ಟೆಯಲ್ಲಿ ತುತ್ತು ಹಂಚಿಕೊಂಡು ಊಟ ಮಾಡಿದ ಗೆಳೆಯರು ಇವರೆಲ್ಲರೂ ನನ್ನ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಎಲ್ಲರಿಗೂ ನಾನು ಎದೆಯಾಳದಿಂದ ಅಭಿನಂದಿಸುತ್ತೇನೆ.
“ನಾವು ಖುಷಿಯಲ್ಲಿದ್ದಾಗ ಚಪ್ಪಾಳೆ ತಟ್ಟಲು ಹತ್ತು ಬೆರಳುಗಳಿರುತ್ತವೆ. ಕಣ್ಣೀರು ಬಂದಾಗ ಒರೆಸಲು ಬರುವುದು ಒಂದೇ ಬೆರಳು” ಎನ್ನುವ ಕೊಪ್ಪಳ ಗವಿ ಮಠದ ಶ್ರೀಗಳ ಮಾತನ್ನು ಉಲ್ಲೇಖಿಸಿ, ಪತ್ರಕರ್ತರ ಕುಟುಂಬಗಳ ಕಣ್ಣೀರು ಒರೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದಾರೆ. ನಾವೆಲ್ಲಾ ಅವರ ನೆರಳಲ್ಲಿ ನಾವಿದ್ದೀವಿ ಎಂದು ಸ್ಮರಿಸಿದರು.
ತಮ್ಮ ವ್ಯಕ್ತಿತ್ವವನ್ನು ರೂಪಿಸಲು ಸಹಕರಿಸಿದ ಕೋಲಾರದ ಎಲ್ಲಾ ಹಿರಿಯ ಪತ್ರಕರ್ತರು ಮತ್ತು ತಮ್ಮ ಶಿಕ್ಷಕರುಗಳ ಹೆಸರಿಡಿದು ಸ್ಮರಿಸಿ ಎಲ್ಲರಿಗೂ ಧನ್ಯತೆ ಅರ್ಪಿಸಿದರು.ಇದೇ ಸಂದರ್ಭದಲ್ಲಿ ಅವರ ಪತ್ನಿ ಮೀರಾ ಪ್ರಭಾಕರ್ ಅವರನ್ನೂ ಸಭೆಯಲ್ಲಿ ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಟ ಸಾಧು ಕೋಕಿಲಾ, ವಸತಿ ಸಚಿವ ಜಮೀರ್ ಅಹ್ಮದ್ ಅವರ ಮಾಧ್ಯಮ ಸಲಹೆಗಾರ ಲಕ್ಷ್ಮೀನಾರಾಯಣ್, ಅಕಾಡೆಮಿ ಸದಸ್ಯರಾದ ಪತ್ರಕರ್ತ ಚಿದಾನಂದ ಪಟೇಲ್, ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಿನಾಥ್ ಕಾರ್ಯದರ್ಶಿ ಚಂದ್ರಶೇಖರ್,ಖಜಾಂಜಿ ಸುರೇಶ್ ಕುಮಾರ್,ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್,ತಾಲೂಕು ಪತ್ರಕರ್ತರ ಸಂಘಗಳ ಪದಾಧಿಕಾರಿಗಳ ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.