ನ್ಯೂಜ್ ಡೆಸ್ಕ್:ಕರ್ನಾಟಕದ ಹೆಮ್ಮೆಯ HMT ಸಂಸ್ಥೆಗೆ ಪುನರ್ ವೈಭವ ತರುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರದ ಭಾರೀ ಕೈಗಾರಿಕೆಗಳ ಸಚಿವ ಎಚ್ ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ ಇದಕ್ಕೆ ಪೂರಕ ಎನ್ನುವಂತೆ ಅವರು ಬೆಂಗಳೂರಿನಲ್ಲಿ ಹಿಂದೂಸ್ತಾನ್ ಮೆಷಿನ್ ಅಂಡ್ ಟೂಲ್ಸ್ (HMT) ನ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅನಾರೋಗ್ಯದ ಪರಿಸ್ಥಿತಿಯಲ್ಲಿರುವ ಸಾರ್ವಜನಿಕ ವಲಯದ ಉದ್ಯಮವಾದ HMTಯನ್ನು ಪುನಶ್ಚೇತನಗೊಳಿಸಲು ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಎಚ್ಎಂಟಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೊಹ್ಲಿ ಸಂಸ್ಥೆಯ ಹಣಕಾಸಿನ ಬಿಕ್ಕಟ್ಟು,ಎದುರಿಸುತ್ತಿರುವ ಮೊಕದ್ದಮೆಗಳು,ವಿವಿಧ ರಿತಿಯ ಸಮಸ್ಯೆಗಳು ಮತ್ತು ಒಟ್ಟಾರೆ ನಷ್ಟ ಸೇರಿದಂತೆ ವಿವರಿಸಿದ್ದಾರೆ ಎನ್ನಲಾಗಿದ್ದು ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವ ಅಗತ್ಯತೆಯನ್ನು ಅವರು ವಿವರಿಸಿದ್ದಾರೆ.
ಒಂದು ಕಾಲದಲ್ಲಿ ಘನ ವೈಭವದಲ್ಲಿದ್ದ HMT ಪ್ರಸ್ತುತ ಈಗಿನ ಪರಿಸ್ಥಿತಿಯಲ್ಲಿ ಗಮನಾರ್ಹವಾದ ಸವಾಲುಗಳನ್ನು ಎದುರಿಸುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ ಎಚ್ ಡಿ ಕುಮಾರಸ್ವಾಮಿ ಸಂಸ್ಥೆಯನ್ನು ಬಲಪಡಿಸಲು ಮತ್ತು ಆರ್ಥಿಕವಾಗಿ ಶಕ್ತಿ ತುಂಬಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಎಚ್ಎಂಟಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ಕೊಹ್ಲಿ ಅವರಿಗೆ ಸೂಚಿಸಿದ್ದಾರೆ. ಎಚ್ಎಂಟಿ ರಕ್ಷಣಾ ಇಲಾಖೆ ಮತ್ತು ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಉಪಕರಣಗಳನ್ನು ಉತ್ಪಾದಿಸುತ್ತಿದ್ದು ಹಾಗು ದೇಶಾದ್ಯಂತ ಉತ್ಪಾದನಾ ಘಟಕಗಳನ್ನು ಹೊಂದಿದೆ ಎಂದು ಕುಮಾರಸ್ವಾಮಿ ಹೇಳಿದರು ಕಂಪನಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ್ ಭಾರತ್ (ಸ್ವಾವಲಂಬಿ ಭಾರತ) ಪರಿಕಲ್ಪನೆಯಡಿಯಲ್ಲಿ HMTಗೆ ಪುನರುಜ್ಜೀವ ನೀಡಲಾಗುವುದು ಎಂದು ಸಚಿವರು ಹೇಳಿದರು. ಈ ಸಂದರ್ಭದಲ್ಲಿ HMTಯ ಅಧಿಕಾರಿಗಳು ಹಾಗು ಕೋಲಾರ ಸಂಸದ ಶ್ರೀ ಮಲ್ಲೇಶ್ ಬಾಬು ಇದ್ದರು.