ಕೈವಾರ(ಚಿಂತಾಮಣಿ):-ಮನುಷ್ಯ ಉಸಿರಾಟ ನಡಿಸಿದಂತೆ ಪ್ರತಿಕ್ಷಣ ಆತ್ಮಚಿಂತನೆಯನ್ನು ಮಾಡಿಕೊಳ್ಳುವ ಅಗತ್ಯ ಇದೆ ಎಂದು ತಿರುಪತಿ ತಿರುಮಲ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ ನ ವಿಶೇಷಾಧಿಕಾರಿ ಆನಂದತೀರ್ಥಚಾರ್ಯರು ಹೇಳಿದರು ಅವರು ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ಆಯೋಜಿಸಲಾಗಿದ್ದ ಇಂದಿನ ಸಮಾಜಕ್ಕೆ ಆತ್ಮಚಿಂತನೆಯ ಅವಶ್ಯಕತೆ ಎಂಬ ಚಿಂತನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾನವರಲ್ಲಿ ಚಿಂತನೆ ಬಹಳ ಅಗತ್ಯವಾಗಿದೆ. ಮಗು ಹಸಿವಾದಾಗ ತನ್ನ ತಾಯಿಯನ್ನು ಸ್ಮರಿಸುತ್ತಲೇ, ಚಿಂತಿಸುತ್ತದೆ. ತಾಯಿ ಕಂಡಕ್ಷಣ ಅದರ ಹಸಿವು ಮಾಯವಾಗುತ್ತದೆ. ಮಗುವಿಗೆ ಇಷ್ಟು ಚಿಂತನೆ ಇದೆ ಎಂದಾದ ಮೇಲೆ ಇನ್ನು ಜ್ಞಾನವನ್ನು ಪಡೆದ ಮಾನವರಿಗೆ ಇನ್ನೆಷ್ಟು ಚಿಂತನೆ ಇರಬೇಕು. ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರವಿದ್ದೇ ಇರುತ್ತದೆ. ನಶಿಸಿಹೋಗುವ ಶರೀರವನ್ನು ನಂಬದೆ, ಎಂದಿಗೂ ಶಾಶ್ವತವಾಗಿರುವ ಆತ್ಮದ ಚಿಂತನೆಯನ್ನು ಮಾಡಬೇಕು. ಮಹಾಭಾರತದ ಕೊನೆಯಲ್ಲಿ ಕುಂತಿಯು ಶ್ರೀಕೃಷ್ಣನನ್ನು ಕಂಡು ನನಗೆ ಯಾವಾಗಲೂ ಕಷ್ಟಗಳನ್ನೇ ನೀಡು ಏಕೆಂದರೆ ಕಷ್ಟವಿದ್ದಾಗ ಮಾತ್ರ ನಿನ್ನ ದರ್ಶನವಾಗುತ್ತದೆ. ಕಷ್ಟವಿದ್ದರೂ ಸರಿ ನಿನ್ನ ದರ್ಶನ ನನಗೆ ಮುಖ್ಯ ಎನ್ನುತ್ತಾಳೆ. ಈ ರೀತಿಯಾಗಿ ಭಕ್ತಿಯು ನಿರಂತರ ಇರಬೇಕು ಎಂದರು.

ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರು ಮಾತನಾಡಿ ಜನರಲ್ಲಿ ಸ್ವಾರ್ಥ ಹೆಚ್ಚಾದಂತೆಲ್ಲಾ ಸಮಾಜದ ಸ್ವಾಸ್ಥ್ಯ ಕೆಟ್ಟುಹೋಗುತ್ತದೆ. ಸಮಷ್ಟಿಯ ಸುಖವನ್ನು ಬಯಸುವವರಿಗಿಂತ ವ್ಯಕ್ತಿಗತವಾದ ಸುಖವನ್ನು ಬಯಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಆರೋಗ್ಯಕರವಾದ ಸಮಾಜದ ಲಕ್ಷಣವಲ್ಲ. ಬೇರೆಯವರು ಎಷ್ಟೇ ಕಷ್ಟಕೊಟ್ಟರೂ ತನ್ನ ಸ್ವರೂಪದಿಂದ ವಿಚಲಿತನಾಗಬಾರದೆಂಬ ಕ್ಷಮಾಗುಣ, ಸಹನೆಯ ಗುಣವನ್ನು ಭೂಮಿಯನ್ನು ಕಂಡು ಬೆಳೆಸಿಕೊಳ್ಳಬೇಕು. ಸೂರ್ಯನು ತನ್ನ ಕಿರಣಗಳಿಂದ ಸಮಯಕ್ಕೆ ಸರಿಯಾಗಿ ನೀರನ್ನು ಸಂಗ್ರಹಿಸಿ ಅದನ್ನು ಮಳೆಯಾಗಿ ಸುರಿಸುತ್ತಾನೆ. ಆದರೆ ಸೂರ್ಯನು ಎಲ್ಲಿಯೂ ಆಸಕ್ತನಾಗುವುದಿಲ್ಲ. ಹಾಗೆಯೇ ನಾವು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಗುರುವಿನ ಅನುಗ್ರಹವನ್ನು ಪಡೆಯುತ್ತಾ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.
ವಿದ್ವಾంಸರಾದ ಡಾ||ಎನ್.ಕೆ.ರಾಮಶೇಷನ್ ರವರು ಮಾತನಾಡಿ ಅಧುನಿಕ ತಂತ್ರಜ್ಞಾನಗಳಿ0ದ ಪುರಾತನವಾದ ಸಹಜವಾದ ಜ್ಞಾನಶಕ್ತಿಯನ್ನು ಮರೆಯುತ್ತಿದ್ದೇವೆ. ಬದುಕಿರುವಷ್ಟು ಕಾಲ ಯಾರಿಗೂ ತೊಂದರೆ ಕೊಡದೆ ಬದುಕುತ್ತೇನೆಂಬ ಪ್ರತಿಜ್ಞೆಯನ್ನು ಮಾಡಬೇಕು. ಪ್ರತಿಯೊಬ್ಬರ ಜೀವನದಲ್ಲಿಯೂ ಗುರುವಿನ ಪಾತ್ರ ಪ್ರಮುಖವಾದುದು ಎಂದರು.
ಕಾರ್ಯಕ್ರಮಕ್ಕೂ ಮೊದಲು ಶ್ರೀ ಯೋಗಿನಾರೇಯಣ ತಾತಯ್ಯನವರ ಮಠದ ಮೂಲ ವಿಗ್ರಹಕ್ಕೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ತಾತಯ್ಯನವರ ಉತ್ಸವ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಸಭಾಂಗಣಕ್ಕೆ ಕರೆತರಲಾಯಿತು. ವೇದಿಕೆಯಲ್ಲಿ ಪ್ರತಿಷ್ಠಾಪಿಸಿ ಪೂಜೆಯನ್ನು ಸಲ್ಲಿಸಿ ಮಂಗಳಾರತಿಯನ್ನು ಬೆಳಗಲಾಯಿತು. ಹಿರಿಯ ಅಧ್ಯಾತ್ಮ ಚಿಂತಕರಾದ ಡಾ||ಬಾಬುಕೃಷ್ಣಮೂರ್ತಿರವರು ಉಪನ್ಯಾಸವನ್ನು ನೀಡಿದರು. ವೇದಿಕೆಯಲ್ಲಿದ್ದ ಎಲ್ಲಾ ವಿದ್ವಾಂಸರನ್ನು ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರು ಶಾಲು ಹೊದಿಸಿ, ಫಲತಾಂಬೂಲ ನೀಡಿ ಗೌರವಿಸಿದರು.
ಕಾರ್ಯಕ್ರಮದ ಅಂಗವಾಗಿ ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್ ರವರು ಪ್ರಾರ್ಥನೆಯನ್ನು ನೆರವೇರಿಸಿದರು. ಕೈವಾರ ಮಠ ಟ್ರಸ್ಟ್ನ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ, ಸದಸ್ಯರುಗಳಾದ ಬಾಗೇಪಲ್ಲಿ ಕೆ.ನರಸಿಂಹಪ್ಪ, ಗಣೇಶ್ ಚಂದ್ರಪ್ಪ, ಕೆ.ಎಂ.ತ್ಯಾಗರಾಜ್ ಹಾಗೂ ಭಕ್ತಾಧಿಗಳು ಭಾಗವಹಿಸಿದ್ದರು.
ವರದಿ: ತಳಗವಾರ ಆನಂದ್