ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗು ಸಚಿವ ಕೆ.ಎಚ್. ಮುನಿಯಪ್ಪ ಬಣಗಳ ನಡುವಿನ ಜಗಳದ ಪರಿಣಾಮ ಕೋಲಾರ ಮೀಸಲು ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಚ್ಚರಿ ಅಭ್ಯರ್ಥಿ ಹೆಸರನ್ನು ಪ್ರಕಟಿಸಿದೆ. ಬೆಂಗಳೂರು ಪಾಲಿಕೆ ಮಾಜಿ ಮೇಯರ್ ವಿಜಯಕುಮಾರ್ ಪುತ್ರ ಹಾಗು ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ಗೌತಮ್ ಅವರನ್ನು ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ.
ಈ ಬಗ್ಗೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಬಿಡುಗಡೆ ಮಾಡಿರುವ ಪತ್ರದಲ್ಲಿ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸಲು ಕೆ.ವಿ. ಗೌತಮ್ ಅವರಿಗೆ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಒಪ್ಪಿಗೆ ಸೂಚಿಸಿದೆ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಇದರೊಂದಿಗೆ ರಾಜ್ಯದ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಿದ್ದಂತಾಗಿದೆ ಬಾಕಿ ಇದ್ದ ನಾಲ್ಕು ಕ್ಷೇತ್ರಗಳ ಪೈಕಿ ಬಳ್ಳಾರಿ, ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರಕ್ಕೆ ಶುಕ್ರವಾರ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು ಕೋಲಾರ ಕ್ಷೇತ್ರದ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.
ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣಗಳ ನಡುವಿನ ಹಟ ತಾರಕ್ಕೇರಿದ ಪರಿಣಾಮ ಎಡಗೈ ಸಮುದಾಯದ ಕೆ.ವಿ. ಗೌತಮ್ ಅಥವಾ ಎಲ್. ಹನುಮಂತಯ್ಯ ಅವರಿಗೆ ಟಿಕೆಟ್ ನೀಡುವ ಸೂತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಂದಿಟ್ಟಿದ್ದರು. ಆದರೆ, ಮುನಿಯಪ್ಪ ಅದಕ್ಕೂ ತಕರಾರು ತೆಗೆದ ಹಿನ್ನಲೆಯಲ್ಲಿ ಸಿಎಂ ಡಿಸಿಎಂ ಇಕ್ಕಟ್ಟಿಗೆ ಸಿಲುಕಿಸಿದ್ದು ಪರಿಹಾರಕ್ಕೆ ಅಭ್ಯರ್ಥಿ ಫೈನಲ್ ವಿಚಾರವನ್ನ ದೆಹಲಿ ಮುಖಂಡರ ಅಂಗಳಕ್ಕೆ ತಳ್ಳಿದ್ದರು ಇಂದು ಕಾಂಗ್ರೆಸ್ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಕೆ.ವಿ. ಗೌತಮ್ ಹೆಸರನ್ನು ಅಂತಿಮ ಗೊಳಿಸಿ ಸ್ಪರ್ದಿಸಲು ಅನುಮತಿ ನೀಡಿದೆ.
ಟ್ರಬಲ್ ಶೂಟರ್ ಶಿವಕುಮಾರ್ ಸೂತ್ರಕ್ಕೆ ಕಾರ್ಯಕರ್ತರು ಜೈ ಹೋ..
ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಬಣ ಜಗಳದಲ್ಲಿ ಬಳಲಿದ್ದ ಕೋಲಾರ ಕಾಂಗ್ರೆಸ್ ಕಾರ್ಯಕರ್ತರು ಟ್ರಬಲ್ ಶೂಟರ್ ಡಿಸಿಎಂ ಶಿವಕುಮಾರ್ ಇದಕ್ಕೆ ತಾರಕೀಕ ಅಂತ್ಯ ಹಾಡುತ್ತಾರೆ ಎಂಬ ವಿಶ್ವಾಸದಲ್ಲಿ ಇದ್ದರು,ಅದರಂತೆ ಅಚ್ಚರಿ ಅಭ್ಯರ್ಥಿ ಎನ್ನುವಂತೆ ಕೆ.ವಿ. ಗೌತಮ್ ಹೆಸರು ಪ್ರಕಟಣೆಯಾಗುತ್ತಿದ್ದಂತೆ ಕೋಲಾರ ಕಾಂಗ್ರೆಸ್ ಕಾರ್ಯಕರ್ತರು ಶಿವಕುಮಾರ್ ಸೂತ್ರಕ್ಕೆ ಜೈ ಹೋ.. ಹೇಳುತ್ತಿದ್ದಾರೆ.
ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿಗಳು ಕಣಕ್ಕೆ ಎಂದು vcsnewz ನಲ್ಲಿ ಮೊದಲ ಸುದ್ಧಿಯನ್ನು ಕಳೆದ ಎರಡು ದಿನಗಳ ಹಿಂದೆ ಪ್ರಕಟವಾಗಿದೆ.