- ತಾಲ್ಲೂಕುಗಳಲ್ಲಿರುವ ಮಿನಿ ವಿಧಾನಸೌಧ ಕಟ್ಟಡಗಳ ಮರುನಾಮಕರಣ
- ಇನ್ಮುಂದೆ ತಾಲ್ಲೂಕು ಆಡಳಿತ ಸೌಧ ಎಂದು ಹೆಸರು
- ಮಿನಿ ವಿಧಾನಸೌಧಗಳ ಹೆಸರು ಬದಲಾವಣೆ ಮಾಡಿ ಸುತ್ತೋಲೆ ಹೊರಡಿಸಿದ ಕಂದಾಯ ಇಲಾಖೆ
- ಸೆಪ್ಟೆಂಬರ್ ನಲ್ಲೇ ಈ ಬಗ್ಗೆ ಸುಳಿವು ಕೊಟ್ಟಿದ್ದ ಸಚಿವ ಆಶೋಕ್
ಬೆಂಗಳೂರು: ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಇರುವಂತ ಮಿನಿ ವಿಧಾನಸೌಧ(Mini Vidhansoudha) ಹೆಸರನ್ನು ಇನ್ನು ಮುಂದೆ ‘ತಾಲೂಕು ಆಡಳಿತ ಸೌಧ’ (Taluk administration building) ಎಂದು ನಾಮಾಂಕಿತಗೊಳಿಸಲು ಕಂದಾಯ ಇಲಾಖೆ ಸೂಚನೆ ನೀಡಿದೆ. ಈ ವಿಚಾರಕ್ಕೆ ಕಂದಾಯ ಇಲಾಖೆ ಆದೇಶ ಹೊರಡಿಸಿದ್ದು,ಹೆಸರು ಬದಲಾಯಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಸುತ್ತೋಲೆಯಲ್ಲಿ ಏನಿದೆ?
ರಾಜ್ಯದಲ್ಲಿರುವ ತಾಲೂಕು ಮಟ್ಟದಲ್ಲಿ ಕಂದಾಯ ಇಲಾಖೆಯನ್ನೊಳಗೊಂಡಂತೆ ಇತರೆ ಸರ್ಕಾರಿ ಕಚೇರಿಗಳು ಮಿನಿವಿಧಾನಸೌಧ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ರಾಜ್ಯದ ಎಲ್ಲಾ ತಾಲೂಕುಗಳಲ್ಲಿರುವ ಮಿನಿ ವಿಧಾನಸೌಧ ಎಂಬ ತಾಲೂಕು ಆಡಳಿತ ಕಚೇರಿಗಳನ್ನು ರಾಜ್ಯದ ಭಾಷಾನೀತಿಗೆ ಒಳಪಡುವಂತೆ ಹಾಗೂ ರಾಜ್ಯದ ಅಧಿಕೃತ ಭಾಷೆ ಕನ್ನಡವಾಗಿರುವುದರಿಂದ, ನಾಡು-ನುಡಿ ಸಂಸ್ಕೃತಿಗೆ ಪೂರಕವಾಗಿ ತಾಲೂಕು ಆಡಳಿತ ಸೌಧ ಎಂದು ಬದಲಿಸುವುದು ಸೂಕ್ತ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಡಿದ ಮನವಿ ಮೇರೆಗೆ ಮಿನಿ ಎಂದು ಬಳಸಿರುವ ಆಂಗ್ಲಭಾಷೆ ಪದ ಬಳಸಿರುವುದರಿಂದ ಅದನ್ನು ತಗೆದುಹಾಕಿ ‘ತಾಲೂಕು ಆಡಳಿತ ಸೌಧ’ ಎಂದು ನಾಮಕರಣ ಮಾಡಲಾಗಿದೆ.
ತಾಲೂಕು ಮಟ್ಟದ ಆಡಳಿತ ಕಟ್ಟಡಗಳಲ್ಲಿ ಯಾವುದೇ ಕಲಾಪಗಳನ್ನಾಗಲಿ, ಕಾಯ್ದೆ-ಕಾನೂನುಗಳನ್ನಾಗಲೀ ರೂಪಿಸುವ ಶಕ್ತಿಕೇಂದ್ರಗಳಲ್ಲದ ಕಾರಣ ‘ಮಿನಿ ವಿಧಾನಸೌಧ’ ಎಂಬುದರ ಬದಲಾಗಿ ‘ತಾಲೂಕು ಆಡಳಿತ ಸೌಧ’ ಎಂದು ಬದಲಿಸುವುದು ಅರ್ಥಪೂರ್ಣವಾಗಿರುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು, ಸಾರ್ವಜನಿಕರು ಮನವಿ ಸಲ್ಲಿಸಿದ್ದರು.
ಕಂದಾಯ ಸಚಿವ ಅಶೋಕ್ ಹೇಳಿದ್ದರು
ರಾಜ್ಯದಲ್ಲಿ ಮಿನಿ ವಿಧಾನಸೌಧ ಎಂಬ ಪದ ಬದಲಿಗೆ ತಾಲೂಕು ವಿಧಾನಸೌಧ ಎಂಬ ಹೆಸರನ್ನು ಇಡಲು ಕ್ರಮಕೈಗೊಳ್ಳುತ್ತೇನೆ ಎಂದು ಕಂದಾಯ ಸಚಿವ ಆರ್. ಅಶೋಕ್ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರದುರ್ಗದಲ್ಲಿ ಕಂದಾಯ ಇಲಾಖೆಯ ತಾಲೂಖು ಆಡಳಿತ ಕಛೇರಿ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಹೇಳಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ್ದ ಆರ್. ಅಶಕ್, ಮಿನಿ ಎಂಬುದು ಸರಿಯಿಲ್ಲ. ಮಿನಿ ಎಂಬುದು ಇಂಗ್ಲಿಷ್ ಪದ. ಮಿನಿ ಎಂದರೆ ಚಿಕ್ಕದು, ಅದನ್ನು ತೆಗೆದು ಹಾಕಿ ತಾಲೂಕುಸೌಧ ಎಂದು ನಾಮಕರಣ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದರು.