ಬೆಂಗಳೂರು:ಪತ್ರಕರ್ತರು ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಾರೆ ಅವರು ವೃತ್ತಿಯಲ್ಲಿ ಸಕ್ರೀಯರಾಗಬೇಕಾದರೆ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ಹೇಳಿದರು.
ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮತ್ತು ಬಿಬಿಎಂಪಿ ಸಹಯೋಗದೊಂದಿಗೆ ಪತ್ರಕರ್ತರಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರು ಸಮಾಜ ಮತ್ತು ಸರ್ಕಾರದ ನಡುವಿನ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು ಅವರು ಶಿಸ್ತಿನ ಜೀವನವನ್ನು ಪಾಲಿಸಬೇಕಾಗುತ್ತದೆ. ಹಾಗಾಗಿ ನಿರಂತರ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದರು.
ಆರೋಗ್ಯದ ವಿಚಾರದಲ್ಲಿ ಯಾರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಆಗಿಂದಾಗ್ಗೆ ಆರೋಗ್ಯದ ಕುರಿತಾದ ತಪಾಸಣೆ ಮಾಡಿಸಿಕೊಂಡು ಜಾಗ್ರತೆ ವಹಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕೆಯುಡಬ್ಲ್ಯೂಜೆ ಪತ್ರಕರ್ತರ ಬಗ್ಗೆ ಕಾಳಜಿ ವಹಿಸಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕೆಯುಡಬ್ಲ್ಯೂಜೆ ಸದಸ್ಯರ ಕಾಳಜಿಯೂ ಸಹ ಪತ್ರಕರ್ತರ ಸಂಘಕ್ಕೆ ಮುಖ್ಯವಾಗಿ ಇರುವುದರಿಂದ ಸಂಘವು ಇಂತಹ ಕಾರ್ಯಚಟುವಟಿಕೆಗಳನ್ನು ಸತತವಾಗಿ ಹಮ್ಮಿಕೊಳ್ಳುತ್ತಿದೆ ಎಂದರು.
ಸಂಗದ ರಾಜ್ಯ ಖಜಾಂಚಿ ಎಂ.ವಾಸುದೇವ ಹೊಳ್ಳ ಸ್ವಾಗತಿಸಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿ.ಮುನಿರಾಜು, ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ಶರಣಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.ರಾಜ್ಯ ಸಮಿತಿ ಸದಸ್ಯರಾದ ಕೌಸಲ್ಯ ಫಳನಾಕರ್, ಕೆ. ಆರ್ .ದೇವರಾಜ್,ಮತ್ತು ನರೇಂದ್ರ ಪಾರೇಕಟ್, ಶಿವರಾಜ್ ಮುಂತಾದವರು ಇದ್ದರು.
