ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ಅನೇಕ ಸಂಕಷ್ಟಗಳನ್ನು ತಂದು ನಿಲ್ಲಿಸಿದೆ. ಅದರಲ್ಲೂ ಈ ಬಾರಿ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿಗಳಿಗೆ ಲಾಕ್ಡೌನ್ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಿದ್ದಾರೆ. ಸದ್ಯ ಈಗ ಚಿಕ್ಕಬಳ್ಳಾಪುರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಲಾಕ್ಡೌನ್ ಘೋಷಣೆಯಾಗುತ್ತಿದೆ.
ನ್ಯೂಜ್ ಡೆಸ್ಕ್:- ಜಿಲ್ಲೆಗೆ ಅನುಗುಣವಾಗುವಂತೆ ಕ್ರಮ ಕೈಗೊಳ್ಳಿ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಲಾಕ್ ಡೌನ್ ಸಂಬಂಧ ಸಂಪೂರ್ಣ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ವಹಿಸಿದ್ದಾರೆ.
ಕರ್ನಾಟಕದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಪ್ರಧಾನಿ, ಲಾಕ್ ಡೌನ್ ನಿರ್ಧಾರವನ್ನು ಜಿಲ್ಲಾಡಳಿತದ ಹೆಗಲಿಗೆ ವಹಿಸಿದ್ದಾರೆ. ಜಿಲ್ಲೆಯ ಸ್ಥಿತಿಗೆ ತಕ್ಕಂತೆ ನಿರ್ಧಾರ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.
ಜಿಲ್ಲಾಡಳಿತಕ್ಕೆ ಜಿಲ್ಲೆಯ ಪರಿಸ್ಥಿತಿ ಚೆನ್ನಾಗಿ ಗೊತ್ತಿರುತ್ತೆ. ಹೀಗಾಗಿ ಜಿಲ್ಲೆಗೆ ಅನುಗುಣವಾಗಿ ನೀವೇ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಮೋದಿ ಹೇಳಿದ್ದಾರೆ.
ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದರೆ ಇಡೀ ದೇಶ ಗೆದ್ದಂತೆ. ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ. ಈಗಾಗಲೇ ಹಲವು ಅಧಿಕಾರಿಗಳು ತಮ್ಮ ಆಪ್ತರನ್ನು ಕಳೆದುಕೊಂಡಿದ್ದಾರೆ ಎಂದರು.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಮೈಸೂರು, ಕೋಲಾರ, ಮಂಡ್ಯ, ತುಮಕೂರು, ಕೊಡಗು, ಉತ್ತರ ಕನ್ನಡ, ಹಾಸನ, ಬಳ್ಳಾರಿ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಧಾರವಾಡ, ದಕ್ಷಿಣ ಕನ್ನಡ, ರಾಯಚೂರು, ಕಲಬುರಗಿ ಮೊದಲಾದ ಜಿಲ್ಲೆಗಳ ಡಿಸಿಗಳ ಜೊತೆ ಪಿಎಂ ಇಂದು ಸಂವಾದ ನಡೆಸಿದರು.
ಜಿಲ್ಲೆಯ ಕಮಾಂಡರ್ನಂತೆ ಕೆಲಸ ಮಾಡಿ
ಕೊರೊನಾ ಎರಡನೇ ಅಲೆ ಕಂಟ್ರೋಲ್ ಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯದ 17 ಡಿಸಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮಾಡಿದ್ದಾರೆ. ಮೋದಿ ಡಿಸಿಗಳಿಗೆ ಕೊರೊನಾ ಹತೋಟಿಗೆ ತರುವ ಕುರಿತಾಗಿ ಕಿವಿಮಾತುಗಳನ್ನು ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಮಾಂಡರ್ ತರ ಕೆಲಸ ಮಾಡಬೇಕು. ಜನಪ್ರರಿನಿಧಿಗಳ ಜೊತೆ ಸಮನ್ವಯ ಮಾಡಿಕೊಳ್ಳಿ. ಎಲ್ಲಾ ಮೇಲ್ವಿಚಾರಣೆ ಡಿಸಿಗಳ ಜವಾಬ್ದಾರಿ. ನಿರ್ಧಾರಗಳು ಅವಶ್ಯಕತೆ ಗಳ ಬಗ್ಗೆ ಸರ್ಕಾರದ ಗಮನಕ್ಕೆ ತನ್ನಿ. ಜನಪ್ರತಿನಿಧಿಗಳ ಕಮಿಟಿ ಮಾಡಿ. ಗ್ರಾಮ ಮಟ್ಟದಿಂದ ಟಾಸ್ಕ್ ಫೋರ್ಸ್ ಮಾಡಿ. ಕೊರೊನಾ ಜಾಗೃತಿ, ವ್ಯಾಕ್ಸಿನೇಶನ್ ಸೇರಿದಂತೆ ಸಮಗ್ರ ಮಾಹಿತಿ ಜನರಿಗೆ ತಲುಪಬೇಕು. ಗಾಳಿಸುದ್ದಿಗೆ ಕಿವಿಗೊಡದೆ ಜನರ ಆರೋಗ್ಯದ ಕಡೆ ಗಮನ ಕೊಡಿ. ಅಗತ್ಯ ಬಿದ್ದಲ್ಲಿ ಕಾರ್ ಅಂಬುಲೆನ್ಸ್ ರೆಡಿಮಾಡಿಕೊಳ್ಳಿ. ಅಂಬುಲೆನ್ಸ್ ಕೊರತೆ ಆಗದಂತೆ ಜಾಗ್ರತೆ ವಹಿಸಿ.
ಖಾಸಗಿ ಆಂಬುಲೆನ್ಸ್ ಕಾಯ್ದಿರಿಸಿ. ಕೊರೊನಾ ಮುಕ್ತ ಗ್ರಾಮ ನಿಮ್ಮ ಮೊದಲ ಆದ್ಯತೆಯಾಗಿರಲಿ. ಪಂಚಾಯತಿ ಸದಸ್ಯನಿಂದ ಸಂಸದರ ತನಕ ಕೊರೊನಾ ವಿರುದ್ಧ ಹೋರಾಟಕ್ಕೆ ಶ್ರಮಿಸಬೇಕು. ಜವಾಬ್ದಾರಿ ಹಂಚುವ, ಹಾಗು ಪ್ರಗತಿ ಪರಿಶೀಲನೆ ಮಾಡುವ ಜವಾಬ್ದಾರಿ ಜಿಲ್ಲಾಧಿಕಾರಿಗಳದು.ಕಂಟೈನ್ಮೆಂಟ್ ಝೋನ್ ಹೆಚ್ಚು ಹೆಚ್ವು ಮಾಡಿ. ಅಲ್ಲಿಯೇ ಕೊರೊನಾ ಹತ್ತಿಕ್ಕಬೇಕು. ಇತರಡೆ ವ್ಯಾಪಿಸದಂತೆ ತಡೆಯಬೇಕು. ವ್ಯಾಪಕವಾಗಿ ಟೆಸ್ಟ್ ಗಳನ್ನು ಮಾಡಿಸಿ, ಕೊರೊನಾ ಚೈನ್ ಕಟ್ ಮಾಡಿ.ಪ್ರಾಥಮಿಕ ಸಂಪರ್ಕ ಜೊತೆ ರಾಪಿಡ್ ಟೆಸ್ಟ್ ಗೂ ಗಮನ ನೀಡಿ. ಜನರಲ್ಲಿ ಜಾಗೃತಿ ಮೂಡಿಸಿ. ಫ್ರಂಟ್ ಲೈನ್ ವಾರಿಯರ್ ಗಳಾದ ಡಾಕ್ಟರ್, ಪೋಲೀಸ್ ಮತ್ತು ಮಾಧ್ಯಮದವರ ಜೊತೆ ಸಮನ್ವಯತೆ ಇರಲಿ. ಅವರು ಯಾವುದೇ ಕಾರಣಕ್ಕೆ ಧೈರ್ಯ ಕುಂದದಂತೆ ನೋಡಿಕೊಳ್ಳಿ.
ಜಿಲ್ಲೆಯ ಪ್ರತಿಯೊಂದು ಜೀವವೂ ಮುಖ್ಯ. ಅದಕ್ಕಾಗಿ ಎಲ್ಲಾ ವಿಭಾಗಳಲ್ಲೂ ಯಾವುದು ವಿಫಲವಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ.ಜವಾಬ್ದಾರಿ ನಿಮ್ಮ ಮೇಲಿದೆ. ಆಕ್ಸಿಜನ್ ಬಳಕೆ ಸರಿಯಾಗಿ ಆಗಲಿ. ಅವಶ್ಯಕತೆಗೆ ಸರಿಯಾಗಿ ಆಮ್ಲಜನಕ ಸರಬರಾಜು ಆಗಲು ವ್ಯವಸ್ಥೆ ಮಾಡಿಕೊಳ್ಳಿ. ಸುತ್ತಮುತ್ತಲಿನ ಜಿಲ್ಲೆ, ರಾಜ್ಯದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರಿ. ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡೋದು ನಿಮ್ಮ ಜವಾಬ್ದಾರಿ.ವಹಿಸಿಕೊಂಡಿದ್ದನ್ನು ಸಾಧಿಸಿ ತೋರಿಸಿ. ಕೊರೊನಾ ಹತೋಟಿಗೆ ಬರುವವರೆಗೆ ವಿಶ್ರಾಂತಿ ಮಾಡಬೇಡಿ. ಕೊರೊನಾ ಜೊತೆ ಯುದ್ಧ ಘೋಷಣೆ ಮಾಡಿಯಾಗಿದೆ. ಇದು ವಿಶ್ರಾಂತಿ ಕಾಲ ಅಲ್ಲ. ಜನರ ಆರೋಗ್ಯ ಮುಖ್ಯ. ಕಾಳಜಿಯಿಂದ ಕೆಲಸ ಮಾಡಿ. ವಿರಮಿಸದೆ ಜವಾಬ್ದಾರಿ ನಿರ್ವಹಿಸಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿರುತ್ತಾರೆ.
ಚಿಕ್ಕಬಳ್ಳಾಪುರ ಲಾಕ್
ಚಿಕ್ಕಬಳ್ಳಾಪುರದಲ್ಲಿ ಮೇ 20 ರಿಂದ 23 ರವರೆಗೆ ಕಂಪ್ಲೀಟ್ ಲಾಕ್ಡೌನ್ ವಿಧಿಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಶಾಪ್, ಆಸ್ಪತ್ರೆಗೆ ಮಾತ್ರ ವಿನಾಯಿತಿ ನೀಡಲಾಗಿದ್ದು ಹಾಲಿನ ಬೂತ್ಗಳಿಗೆ ಬೆಳಗ್ಗೆ 6 ರಿಂದ 10ಗಂಟೆವರೆಗೂ ಮಾತ್ರ ಅವಕಾಶ ನೀಡಲಾಗಿದೆ. ಅಂತರ್ ಜಿಲ್ಲೆ, ಅಂತರ್ ರಾಜ್ಯ ಜಿಲ್ಲೆಯ ಪ್ರಯಾಣ ಸಂಪೂರ್ಣ ಬಂದ್ ಮಾಡಲಾಗಿದ್ದು ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಕೋಲಾರ ಜಿಲ್ಲೆಯಲ್ಲೂ ಹೆಚ್ಚಿದೆ
ಕೋಲಾರ ಜಿಲ್ಲೆಯ ಕೆ.ಜಿ.ಎಫ್,ಮಾಲೂರು ಹಾಗು ಕೊಲಾರ ತಾಲೂಕುಗಳಲ್ಲಿ ಕೊರೋನಾ ಹೆಚ್ಚಿದ್ದು ಅದರ ನಿಯಂತ್ರಣಕ್ಕೆ ಪ್ರಧಾನಮಂತ್ರಿಗಳ ಆಶಯದಂತೆ ಜಿಲ್ಲಾಧಿಕಾರಿಗಳಿಗೆ ಸಹಕಾರ ನೀಡುವುದಾಗಿ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ್ ಲಿಂಬಾವಳಿ ತಿಳಿಸಿದರು ಪ್ರಧಾನಿಗಳ ಆನ್ಲೈನ್ ಸಭೆ ಬಳಿಕ ಮಾತನಾಡಿದ ಅವರು ಕೊರೋನಾ ನಿಯಂತ್ರಣಕ್ಕೆ ಸಾರ್ವಜನಿಕರು ಸಹ ಸಹಕರಿಸುವಂತೆ ಕೋರಿದರು.ಸಭೆಯಲ್ಲಿ ಜಿಲ್ಲಾಧಿಕಾರಿ.ಡಾ.ಆರ್.ಸೆಲವಮಣಿ,ಜಿಲ್ಲಾಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾಗರಾಜ್,ಕೊಲಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಾರ್ತೀಕ್ ರೆಡ್ಡಿ,ಕೆ.ಜಿ.ಎಫ್ ಪೋಲಿಸ್ ವರಿಷ್ಠಾಧಿಕಾರಿ ಇಕ್ಕಿಲಿಯಾ ಕರುಣಾಕರ್,ಹೆಚ್ಚುವರಿ ಜಿಲ್ಲಾಧಿಕಾರಿ ಪುಷ್ಪಲತಾ, ಕೋಲಾರ ತಹಶೀಲ್ದಾರ್ ಶೋಬಿತ ಮುಂತಾದವರು ಇದ್ದರು.