- 4ನೇ ಬಾರಿ ಬಜೆಟ್ ಮಂಡನೆ ಮಾಡಿದ ನಿರ್ಮಲಾ ಸೀತಾರಾಮನ್
- 1 ಗಂಟೆ 33 ನಿಮಿಷಗಳ ಕಾಲಾವಧಿಯಲ್ಲಿ ಬಜೆಟ್ ಮಂಡನೆ
- ಕೊರೊನಾ ನಂತರದ ಆರ್ಥಿಕತೆ ವೃದ್ಧಿಗೆ ಆದ್ಯತೆ
- ಶಿಕ್ಷಣ, ಉದ್ಯೋಗ ಕ್ಷೇತ್ರದ ಉತ್ತೇಜನಕ್ಕೆ ಹಲವಾರು ಮಹತ್ವದ ಘೋಷಣೆ
- 60 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ
- ಪಿಎಂ ಗತಿಶಕ್ತಿ ಯೋಜನೆಯಡಿ ಭಾರತ ರೈಲುಗಳ ಅಭಿವೃದ್ಧಿ
ನ್ಯೂಜ್ ಡೆಸ್ಕ್: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ 2022-23 ಸಾಲಿನ ಕೇಂದ್ರ ಬಜೆಟಲ್ಲಿ ಶಿಕ್ಷಣ, ಉದ್ಯೋಗ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಉತ್ತೇಜನಕ್ಕಾಗಿ ಹಲವಾರು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಬಜೆಟ್ ಘೋಷಣೆಯಲ್ಲಿ ಕೇಂದ್ರ ವಿತ್ತ ಸಚಿವರು 60 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ಕೊಟ್ಟಿದ್ದಾರೆ.
ಸ್ವಾವಲಂಬಿ ಭಾರತ ಯೋಜನೆಯಡಿ 16 ಲಕ್ಷ ಉದ್ಯೋಗಗಳನ್ನು ನೀಡಲಾಗುವುದು.
ಇದೇ ಸಮಯದಲ್ಲಿ 60 ಲಕ್ಷ ಉದ್ಯೋಗಗಳನ್ನು ಮೇಕ್ ಇನ್ ಇಂಡಿಯಾ ಅಡಿ ಸೃಷ್ಟಿಸಲಾಗುವುದು.
ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹೊಸದಾಗಿ ಪ್ರಾರಂಭಿಸಲಾಗುವುದು ಹಾಗೂ ಇದರಿಂದ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಾವಕಾಶ ಹೆಚ್ಚಿಸಬಹುದಾಗಿದೆ ಎಂದಿರುತ್ತಾರೆ.
ರಾಷ್ಟ್ರೀಯ ಕೌಶಲ್ಯ ಅರ್ಹತಾ ಕಾರ್ಯಕ್ರಮಗಳು ಕೈಗಾರಿಕೆಗಳ ಅಗತ್ಯಗಳಿಗೆ ಅನುಗುಣವಾಗಿರಲಿದ್ದು
ರಾಜ್ಯ ಸರಕಾರದ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಅಗತ್ಯಕ್ಕೆ ಅನುಗುಣವಾಗಿ ಮೇಲ್ದರ್ಜೆಗೆ ಏರಿಸಲಾಗುವುದು.
ಸಾಂಕ್ರಾಮಿಕ ರೋಗದಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಶಾಲಾ ಮಕ್ಕಳ ಎರಡು ವರ್ಷಗಳ ಶಾಲಾ ಶಿಕ್ಷಣವು ವ್ಯರ್ಥವಾಗಿದೆ.
ಒನ್ ಕ್ಲಾಸ್, ಒನ್ ಟಿವಿ ಘೋಷಣೆ
ಡಿಟಿಎಚ್ ಪ್ಲಾಟ್ಫಾರ್ಮ್ನಲ್ಲಿ ಪ್ರಧಾನ ಮಂತ್ರಿ ಇ-ವಿದ್ಯಾ ಯೋಜನೆಯಡಿ ಒಂದು ಚಾನೆಲ್ ಒಂದು ವರ್ಗದ ಯೋಜನೆಯನ್ನು 12 ರಿಂದ 200 ಟಿವಿ ಚಾನೆಲ್ ಯೋಜನೆಗೆ ಹೆಚ್ಚಿಸಲಾಗುತ್ತದೆ.
ಒಂದರಿಂದ ಹನ್ನೆರಡನೇ ತರಗತಿಯ ಮಕ್ಕಳಿಗೆ ಆಯಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಸೌಲಭ್ಯ ಒದಗಿಸಲಾಗುವುದು.
ಡಿಜಿಟಲ್ ವಿಶ್ವವಿದ್ಯಾನಿಲಯ ಸ್ಥಾಪಿಸಲಾಗುವುದು. ಇದರಿಂದ ಡಿಜಿಟಲ್ ಉಪಕರಣಗಳನ್ನು ಉತ್ತಮವಾಗಿ ಬಳಸಬಹುದು.
ಟಿವಿ,ಇಂಟರ್ನೆಟ್, ರೇಡಿಯೋ ಮತ್ತು ಇತರ ಡಿಜಿಟಲ್ ಮಾಧ್ಯಮಗಳ ಮೂಲಕ ಎಲ್ಲಾ ಭಾರತೀಯ ಭಾಷೆಗಳಲ್ಲಿ ಗುಣಮಟ್ಟದ ಬೋಧನಾ ಸಾಮಗ್ರಿಗಳು ಲಭ್ಯವಾಗುವಂತೆ ಮಾಡಲಾಗುವುದು. ಇದರಿಂದ ಶಿಕ್ಷಕರು ಇ-ವಿಷಯವನ್ನು ಪಡೆಯಬಹುದು.
ದಕ್ಷಿಣ ಭಾರತದ ನದಿಗಳ ಜೋಡಣೆಗೆ ಆದ್ಯತೆ
ಬಜೆಟ್ ಭಾಷಣದಲ್ಲಿ ಸಚಿವರು ಕಾವೇರಿ-ಪೆನ್ನಾರ್ ಸೇರಿದಂತೆ ದೇಶದ 5 ನದಿಗಳ ಜೋಡಣೆಗೆ ಅನುಮೋದನೆ ನೀಡಲಾಗಿದೆ ಎಂದರು. ಇದಕ್ಕಾಗಿ ಬಜೆಟ್ನಲ್ಲಿ 44 ಸಾವಿರ ಕೋಟಿ ಹಣ ಮೀಸಲಿಡಲಾಗಿದೆ ಎಂದು ಘೋಷಿಸಿದರು.
ಕಾವೇರಿ-ಪೆನ್ನಾರ್, ಗೋದಾವರಿ-ಕೃಷ್ಣ, ಕೃಷ್ಣ-ಪೆನ್ನಾರ್, ನರ್ಮದಾ-ಗೋವಾವರಿ ನದಿಗಳ ಜೋಡಣೆಗೆ ಒಪ್ಪಿಗೆ ನೀಡಲಾಗಿದೆ ಎಂದು ಸಚಿವೆ ತಿಳಿಸಿದರು.
2014-15 ಸಾಲಿನ ಬಜೆಟ್ನಲ್ಲಿ ಅರುಣ್ ಜೇಟ್ಲಿ ನದಿ ಜೋಡಣೆ ಕುರಿತು ವಿವರವಾದ ವರದಿ ರೂಪಿಸಲು 100 ಕೋಟಿ ರೂ. ಮಂಜೂರು ಮಾಡಿದ್ದರು ಬಳಿಕ ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಅಂದಿನ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ರಾಜ್ಯಗಳು ಒಪ್ಪಿದಲ್ಲಿ 10 ವರ್ಷಗಳಲ್ಲಿ ದೇಶದ ಎಲ್ಲಾ ನದಿಗಳನ್ನು ಜೋಡಿಣೆ ಮಾಡಲಾಗುತ್ತದೆ ಎಂದು ಹೇಳಿದ್ದರು.
ಏನಿದು ಜೋಡಣೆ;
ಒಂದು ನದಿ ಪಾತ್ರದಲ್ಲಿರುವ ಹೆಚ್ಚಿರುವ ನೀರನ್ನು ಕೊರತೆ ಇರುವ ಇನ್ನೊಂದು ನದಿ ಪಾತ್ರಕ್ಕೆ ಪೂರೈಸುವುದು ನದಿ ಜೋಡಣೆಯ ಹಿಂದಿನ ಪ್ರಮುಖ ಉದ್ದೇಶವಾಗಿರುತ್ತದೆ ನದಿ ಜೋಡಣೆ ವಿಚಾರ ಭಾರತಕ್ಕೆ ಹೊಸದಲ್ಲ 1838 ರಲ್ಲಿ ಬ್ರಿಟಿಷರ ಆಡಳಿತದಲ್ಲಿ ಖ್ಯಾತ ಸಿವಿಲ್ ಇಂಜಿನಿಯರ್ ಸರ್. ಎ. ಅರ್ಥರ್ ಕಾಟನ್ ದಕ್ಷಿಣ ಭಾರತದ ನದಿಗಳನ್ನು ಜೋಡಿಸುವ ಪ್ರಸ್ತಾಪ ಮುಂದಿಟ್ಟಿದ್ದರು. ನಂತರದಲ್ಲಿ ಈ ಬಗ್ಗೆ ಕರ್ನಾಟಕದ ಸರ್. ಎಂ. ವಿಶ್ವೇಶ್ವರಯ್ಯನವರು ಚಿಂತನೆ ನಡೆಸಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ 1972ರಲ್ಲಿ ಡಾ. ಕೆ. ಎಲ್. ರಾವ್ ರವರು ಗಂಗಾ ಮತ್ತು ಕಾವೇರಿ ನದಿ ಜೋಡಣೆ ಮಾಡುವ ಪ್ರಸ್ತಾಪ ಮುಂದಿಟ್ಟಿದ್ದರು.
ಪಿಎಂ ಗತಿಶಕ್ತಿ ಯೋಜನೆಯಡಿ ಭಾರತ್ ರೈಲುಗಳ ಅಭಿವೃದ್ಧಿ
ಬಜೆಟ್ ಭಾಷಣದಲ್ಲಿ ರೈಲ್ವೆ ವಲಯದಲ್ಲಿ ಪಿಎಂ ಗತಿಶಕ್ತಿ ಯೋಜನೆಯಡಿ ಹಾಕಿಕೊಂಡಿರುವ ಕಾರ್ಯಕ್ರಮಗಳ ವಿವರಗಳನ್ನು ಸಚಿವರು ನೀಡಿದರು. ನಿರ್ಮಲಾ ಸೀತಾರಾಮನ್ ಮುಂದಿನ ಮೂರು ವರ್ಷಗಳಲ್ಲಿ 400 ಆಧುನಿಕ ವಂದೇ ಭಾರತ್ ರೈಲುಗಳನ್ನು ಅಭಿವೃದ್ಧಿಗೊಳಿಸಿ ತಯಾರು ಮಾಡಲಾಗುತ್ತದೆ ಎಂದರು.
ಒನ್ ಸ್ಟೇಷನ್ ಒನ್ ಪ್ರಾಡಕ್ಟ್’ ಮಾದರಿಯನ್ನು ಜಾರಿಗೆ ತರಲಾಗುತ್ತದೆ. ಈ ಮೂಲಕ ಸ್ಥಳೀಯ ವ್ಯಾಪಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು. ಮುಂದಿ ಮೂರು ವರ್ಷಗಳಲ್ಲಿ 100 ಕಾರ್ಗೋ ಟರ್ಮನಿಲ್ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.
ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ‘ಪಿಎಂಗತಿಶಕ್ತಿ’ ಬಹು ಮಾದರಿ ಸಂಪರ್ಕಕ್ಕಾಗಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ಗೆ 2021 ಅಕ್ಟೋಬರ್ 13 ರಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಚಾಲನೆ ನೀಡಿದ್ದರು.
ಪಿಎಂ ಗತಿಶಕ್ತಿ’ ಯೋಜನೆಯು ಹಿಂದಿನ ಸಮಸ್ಯೆಗಳನ್ನು ಪ್ರಮುಖ ಮೂಲಸೌಕರ್ಯಗಳ ವ್ಯವಸ್ಥೆಯಲ್ಲಿನ ದೋಷಗಳನ್ನು ಸಮಗ್ರ ಯೋಜನೆ ಮೂಲಕ ಪರಿಹರಿಸಲಿದೆ. ಪ್ರತ್ಯೇಕವಾಗಿ ಯೋಜನೆ, ವಿನ್ಯಾಸ ಮಾಡುವುದರ ಬದಲಾಗಿ, ಯೋಜನೆಗಳನ್ನು ಸಮಾನ ದೃಷ್ಟಿಯೊಂದಿಗೆ ವಿನ್ಯಾಸ ಮಾಡಿ ಅನುಷ್ಠಾನಗೊಳಿಸಲಾಗುತ್ತದೆ. ಸಮಗ್ರತೆ, ಆದ್ಯತೆ, ಅತ್ಯಂತ ಪ್ರಶಸ್ತವಾಗಿಸುವುದು, ಸಮನ್ವಯತೆ, ವಿಶ್ಲೇಷಣಾತ್ಮಕತೆ, ಕ್ರಿಯಾತ್ಮಕತೆ ಎಂಬ ಆರು ಪ್ರಮುಖ ಅಂಶಗಳನ್ನು ಈ ಪಿಎಂ ಗತಿಶಕ್ತಿ ಯೋಜನೆ ಒಳಗೊಂಡಿದೆ.
ಮತ್ತಷ್ಟು ಪ್ರಮುಖ ಅಂಶಗಳು
MSME (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಈ ವಲಯವನ್ನು ಉತ್ತೇಜಿಸಲು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಆಶಾದಾಯಕ ಮಾತು ಹೇಳಿದ್ದು ಬ್ಯಾಟರಿಗಳ ಅಭಿವೃದ್ಧಿ ಮತ್ತು ಮಾರ್ಪಾಡುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಐಟಿ ರಿಟರ್ನ್ಸ್ ಸಲ್ಲಿಕೆಗೆ ಅನುಕೂಲ ಮಾಡಿಕೊಡಲಾಗಿದ್ದು ಆದಾಯ ತೆರಿಗೆ ಪಾವತಿಯಲ್ಲಿ ತಿದ್ದುಪಡಿಗಳನ್ನು ನವೀಕರಿಸುವ ಸೌಲಭ್ಯವನ್ನು ಎರಡು ವರ್ಷಗಳಿಗೆ ಹೆಚ್ಚಿಸಲಾಗಿದೆ. ರಿಟರ್ನ್ಸ್ ಸಲ್ಲಿಸಿದ ನಂತರ ಎರಡು ವರ್ಷಗಳಲ್ಲಿ ತಿದ್ದುಪಡಿಗಳನ್ನು ಮಾಡಬಹುದಾಗಿದ್ದು, ತೆರಿಗೆ ಸ್ಲ್ಯಾಬ್ಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಕರೋನಾ ಟ್ರಿಟ್
ಕರೋನಾ ಮಹಾಮಾರಿ ಕಳೆದ ಎರಡು ವರ್ಷಗಳಿಂದ ಎಲ್ಲಾ ಕ್ಷೇತ್ರಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ದೇಶದ ಆರ್ಥಿಕತೆ ಪತನಗೊಂಡಿದೆ. ವಿಶೇಷವಾಗಿ ಆರೋಗ್ಯ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರಿದ್ದು. ಅನೇಕ ಜನರು ಕರೋನಾದಿಂದ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಬಳಲುತ್ತಿದ್ದಾರೆ. ವೈರಸ್ ಭೀತಿಯಿಂದ ಮನೆಯಲ್ಲೇ ಉಳಿದುಕೊಂಡು ಭಯಭೀತರಾಗಿದ್ದರು. ಎಲ್ಲಾ ವಯಸ್ಸಿನ ಜನರು ಈ ಸಾಂಕ್ರಾಮಿಕ ರೋಗದಿಂದ ಉಂಟಾಗುವ ಮಾನಸಿಕ ಸಮಸ್ಯೆಗಳನ್ನು ಅನುಭವಿಸಿದ್ದಾರೆ.
ಮಾನಸಿಕ ಖಾಯಿಲೆಗೆ ಮದ್ದು ಎಂಬಂತೆ ಕೇಂದ್ರ ಸರ್ಕಾರ ಇತ್ತೀಚಿನ ಬಜೆಟ್ ನಲ್ಲಿ ಹೊಸ ಯೋಜನೆ ಜಾರಿಗೆ ತಂದಿದೆ. `ರಾಷ್ಟ್ರೀಯ ದೂರಸಂಪರ್ಕ ಮಾನಸಿಕ ಆರೋಗ್ಯ ಕಾರ್ಯಕ್ರಮ’ ಆರಂಭಿಸಿದೆ. ಈ ಯೋಜನೆಯ ಭಾಗವಾಗಿ ಮಾನಸಿಕ ಆರೋಗ್ಯಕ್ಕೆ ಸಮಾಲೋಚನೆ ಮತ್ತು ಚಿಕಿತ್ಸೆಯನ್ನು ನೀಡಲಾಗುತ್ತದೆ.
ಬಜೆಟ್ ವಿಶೇಷ ಬರಹ:ಚ.ಶ್ರೀನಿವಾಸಮೂರ್ತಿ