ನ್ಯೂಜ್ ಡೆಸ್ಕ್:ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಹಾಗು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ರಾಜಕೀಯದಲ್ಲಿ ತಮ್ಮ ಛಾಪು ಮೂಡಿಸುವತ್ತ ಮುನ್ನುಗ್ಗುತ್ತಿದ್ದು ಇತ್ತೀಚೆಗೆ ಅವರು ಸನಾತನ ಧರ್ಮ ರಕ್ಷಣೆಗಾಗಿ ವಿಶೇಷ ಸೇನೆ ರಚನೆಗೆ ಮುಂದಾಗಿರುವುದು ನಾನಾ ಚರ್ಚೆಗಳಿಗೆ ಕಾರಣವಾಗುತ್ತಿದೆ. ಅವರು ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು ಜನಸೇನಾ ವತಿಯಿಂದ ಸನಾತನ ಧರ್ಮದ ಸಂರಕ್ಷಣೆಗಾಗಿ “ನರಸಿಂಹ ವಾರಾಹಿ ಗಣಂ” (NVG) ಎಂಬ ಸಂಘಟನೆ ಮಾಡಲು ನಿರ್ಧರಿಸಿದ್ದಾರೆ ಇದು ಸನಾತನ ಧರ್ಮವನ್ನು ಕಾಪಾಡಲು ತನ್ನಿಂದಾದಷ್ಟು ಪ್ರಯತ್ನಿಸುತ್ತದೆ. ಬಿಜೆಪಿಯ ಬಜರಂಗದಳದಂತೆಯೇ.. ಜನಸೇನೆಗೂ ಈ “ನರಸಿಂಹ ವಾರಾಹಿ ಗಣಂ” ಇರಬಹುದೆಂದು ನಿರೀಕ್ಷೆ ಮಾಡಬಹುದಾಗಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಪವನ್ ಕಲ್ಯಾಣ್ ಹಿಂದೂ ಧರ್ಮ ಮತ್ತು ಸನಾತನ ಧರ್ಮದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದು ತಿರುಪತಿಯಲ್ಲಿನ ಸಭೆಯಲ್ಲಿ ವಾರಾಹಿ ಘೋಷಣೆ ಮಾಡಿದ್ದರು. ಹಿಂದೂ ಧರ್ಮವನ್ನು ಸೆಕ್ಯುಲರಿಸಂ ಎಂದು ಅವಹೇಳನ ಮಾಡುವ ಬಗ್ಗೆ ತೀವ್ರವಾಗಿ ವಿರೋಧಿಸುವ ಅವರು ಹಿಂದೂ ಧರ್ಮವನ್ನು ಯಾಕೆ ಟಾರ್ಗೆಟ್ ಮಾಡುತ್ತಾರೆ ಎಂದು ಪ್ರಶ್ನಿಸುತ್ತಾರೆ.ಎಲ್ಲಾ ಧರ್ಮಗಳ ಬಗ್ಗೆ ಸಮಾನತೆ ಇರುವ ಕುರಿತಾಗಿ ಹೇಳುವ ಅವರು ತಿರುಪತಿ ಲಡ್ಡು ಕಲಬೆರಕೆ ಹಗರಣ ಬೆಳಕಿಗೆ ಬಂದಾಗಿನಿಂದ ಪವನ್ ಸನಾತನ ಧರ್ಮದ ಸಂಪೂರ್ಣ ರಕ್ಷಕನಾಗಿ ಬದಲಾಗಿದ್ದಾರೆ. “ನರಸಿಂಹ ವಾರಾಹಿ ಗಣಂ” ರಚನೆಯ ಉದ್ದೇಶವನ್ನು ಪವನ್ ಇನ್ನೂ ಪ್ರಕಟಿಸಿಲ್ಲ. ಗಣ ರಚನೆಯ ನಂತರ ಈ ವಿಚಾರ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿಬರುತ್ತಿದೆ. ಪವನ್ ಕಲ್ಯಾಣ್ ಈಗಾಗಲೇ ಉತ್ತರದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ತಮಿಳುನಾಡಿನಲ್ಲಿಯೂ ಜನರು ಪವನ್ ಕಲ್ಯಾಣ್ ಬಗ್ಗೆ ಮಾತನಾಡುತ್ತಿದ್ದಾರೆ.
“ನರಸಿಂಹ ವಾರಾಹಿ ಗಣಂ” ಯಾವುದೆ ರೀತಿಯಲ್ಲೂ ಅಧಿಕೃತವಾಗಿ ಘೋಷಣೆಯಾಗಿಲ್ಲ ಆಗಲೆ ಪವನ್ ಕಲ್ಯಾಣ್ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ವಿವಿಧ ರೀತಿಯಲ್ಲಿ ಪೋಸ್ಟ್ ಗಳನ್ನು ಹಂಚಿಕೊಂಡಿದ್ದಾರೆ.
ಆಂಧ್ರಪ್ರದೇಶದ ರಾಜಮಂಡ್ರಿಯಿಂದ ಸುಮಾರು 75 ಕಿಮೀ ದೂರದಲ್ಲಿನ ಪ್ರಸಿದ್ದ ಯಾತ್ರ ಸ್ಥಳ ದ್ವಾರಕಾ ತಿರುಮಲ ಮಂಡಲದ ಐಎಸ್ ಜಗನ್ನಾಥಪುರದಲ್ಲಿ ಶುಕ್ರವಾರ ಉಚಿತ ಎಲ್ಪಿಜಿ ಸಿಲಿಂಡರ್ ಯೋಜನೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು “ನರಸಿಂಹ ವಾರಾಹಿ ಗಣಂ” ಕುರಿತಾಗಿ ಪ್ರಸ್ತಾಪಿಸಿದ್ದಾರೆ ಅವರು ಇದಕ್ಕೂ ಮುನ್ನ ಅಲ್ಲಿನ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಸುದರ್ಶನ ನರಸಿಂಹ ಧನ್ವಂತರಿ ಗರುಡ ಆಂಜನೇಯ ಅನಂತ ಹೋಮದಲ್ಲಿ ಪಾಲ್ಗೊಂಡಿದ್ದರು.