- ಹಿಂದೆ ಮಾವು ಮಾರುಕಟ್ಟೆ ಖಾಸಗಿಯಾಗಿ ನಡೆಯುತಿತ್ತು
- ಮೂರ್ನಾಲ್ಕು ಜನರ ನಿಯಂತ್ರದಲ್ಲಿ ಮಾವು ವ್ಯಾಪಾರ
- ರೈತ ಮುಖಂಡರ ಮಾವು ಬೆಳೆಗಾರರ ಹೋರಾಟ
- ಕೃಷಿ ಉತ್ಪನ್ನ ಮಾರುಕಟ್ಟೆ ಸೇರಿದ ಮಾವು ವಹಿವಾಟು
ಶ್ರೀನಿವಾಸಪುರ: ಪಟ್ಟಣದ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ಅವರೆಕಾಯಿ ವಹಿವಾಟನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸಬೇಕು ಇಲ್ಲದಿದ್ದರೆ ಜ.12ರಂದು ಅವರೇಕಾಯಿ ಸಮೇತ ತಾಲೂಕು ಕಚೇರಿಗೆ ಮುತ್ತಿಗೆ ಹಾಕುವುದಾಗಿ ರೈತಸಂಘ ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದೆ.
ಶ್ರೀನಿವಾಸಪುರದ ಪ್ರವಾಸಿ ಮಂದಿರದಲ್ಲಿ ನಡೆದಂತ ರೈತಸಂಘದ ಸಭೆಯಲ್ಲಿ ಮಾತನಾಡಿದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಕೃಷಿ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಪರವಾನಗಿ ಪಡೆದ ಮಂಡಿ ಮಾಲೀಕರು ನಿಯಮಗಳನ್ನು ಗಾಳಿಗೆ ತೂರಿ ಮಾಡಿ ಪ್ರತಿ ವರ್ಷ ಪಟ್ಟಣದಲ್ಲಿ ಅವರೇಕಾಯಿ ವಹಿವಾಟನ್ನು ನಡೆಸುವ ಮುಖಾಂತರ ವಾಹನ ಸಂಚಾರಕ್ಕೆ ಅಡಚಣೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವ ಆದಾಯಕ್ಕೆ ಕತ್ತರಿ ಹಾಕುತ್ತಿದ್ದಾರೆ ಎಂದು ಅವರೆಕಾಯಿ ಮಂಡಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿ ವರ್ಷ ಅವರೇಕಾಯಿ ಸಿಸನ್ ನಲ್ಲಿ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ಅವರೆ ಮಂಡಿ ದಲ್ಲಾಲರು ಹಿಟ್ಲರ್ ಧೋರಣೆಯನ್ನು ಪ್ರದರ್ಶಿಸುತ್ತಿದ್ದಾರೆ ಅತ್ತ ರೈತರಿಗೂ ಮೋಸಮಾಡುತ್ತ ಇತ್ತ ಸರ್ಕಾರಕ್ಕೂ ವಂಚಿಸುತ್ತಿದ್ದಾರೆ ಎಂದು ದೂರಿದರು.
ಬಹುತೇಕ ದಲ್ಲಾಲರು ಕೃಷಿ ಉತ್ಪನ್ನ ಮಾರುಕಟ್ಟೆ ಪರವಾನಗಿ ಪಡೆದಿಲ್ಲ
ಬಹುತೇಕ ಅವರೆ ಮಂಡಿ ದಲ್ಲಾಲರು ಕೃಷಿ ಉತ್ಪನ್ನ ಮಾರುಕಟ್ಟೆ ನಿಯಮಾವಳಿಗಳ ಅನ್ವಯ ಪರವಾನಗಿ ಪಡೆಯದೆ ಅಧಿಕಾರಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡು ಅವರೆಕಾಯಿ ವಹಿವಾಟನ್ನು ನಗರದಲ್ಲಿ ನಡೆಸುತ್ತಿದ್ದಾರೆ ಇಂತಹವರ ವಿರುದ್ದ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ಇದ್ದೂ ಇಲ್ಲದಂತಾಗಿದ್ದಾರೆ ಎಂದು ಕಿಡಿಕಾರಿದರು.
ಪ್ರತಿದಿನ ನೂರಾರು ಟನ್ ಅವರೆಕಾಯಿ ತುಂಬಿಕೊಂಡು ಬರುವ ಟ್ರಾಕ್ಟರ್,ಟೆಂಪೋ ಮತ್ತಿತರ ವಾಹನಗಳಿಂದ ಅಧಿಕ ಟ್ರಾಫಿಕ್ ಜಾಮ್ ಉಂಟಾಗುತ್ತದೆ ಸಂಚಾರ ಅವ್ಯವಸ್ಥೆಯಾಗಿ ತುರ್ತು ಪರಿಸ್ಥಿತಿಯಲ್ಲಿ ಬರುವ ಆಂಬ್ಯುಲೆನ್ಸ್ ವಾಹನ ಸಂಚಾರಕ್ಕೂ ಅವರೆಕಾಯಿ ವ್ಯಾಪಾರಸ್ಥರಿಂದ ತೊಂದರೆಯಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ರೈತರ ಅಭಿವೃದ್ಧಿಗಾಗಿ ಹಾಗೂ ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇರುವ ಜಾಗವನ್ನು ಸದುಪಯೋಗಪಡಿಸಿಕೊಳ್ಳದೆ ಮಂಡಿ ಮಾಲೀಕರು ರೈತರಿಗೆ ವಂಚನೆ ಮಾಡಲು ನಗರದಲ್ಲಿ ವಹಿವಾಟು ನಡೆಸಿ ತೂಕ ಹಾಗೂ ಬೆಲೆಯಲ್ಲೂ ಮೋಸ ಮಾಡಿ ಕಾನೂನು ಬಾಹಿರ 10ರೂಪಾಯಿ ಮೀಟರ್ ಬಡ್ಡಿ ದಂಧೆಯಂತೆ ಕಮೀಷನ್ ಕೊಳ್ಳೆ ಹೊಡೆಯುತ್ತಿದ್ದಾರೆಂದು ಆರೋಪ ಮಾಡಿದರು.
ಇನ್ನೇನು ಕೆಲವೇ ತಿಂಗಳುಗಳಲ್ಲಿ ಮಾವು ಮಾರುಕಟ್ಟೆಗೆ ಬರುತ್ತಿದೆ ಈ ಹಿಂದೆ ಮಾವು ಮಾರುಕಟ್ಟೆ ಖಾಸಗಿ ಪ್ರದೇಸದಲ್ಲಿ ನಡೆಯುತಿತ್ತು ಆಗ ಮಾವು ಮಾರುಕಟ್ಟೆ ಮೂರ್ನಾಲ್ಕು ಜನ ದಲ್ಲಾಲರು ನಿರ್ವಹಿಸುತ್ತ ರೈತರನ್ನು ವಂಚಿಸುತ್ತಿದ್ದರು ನಂತರದಲ್ಲಿ ರೈತ ಹಾಗು ಮಾವು ಬೆಳೆಗಾರರ ಹೋರಾಟದ ಫಲ ಕೃಷಿ ಉತ್ಪನ್ನ ಮಾರುಕಟ್ಟೆ ಸೇರಿ ರೈತರಿಗೆ ಅನಕೂಲ ಆಯಿತು ಈಗ ಮತ್ತೆ ಅಂತಹುದೆ ಸನ್ನಿವೇಶ ಉದ್ಭವಿಸಲು ಸರ್ಕಾರಿ ಅಧಿಕಾರಿಗಳೆ ಕಾರಣವಾಗುತ್ತಿದ್ದಾರೆ.
ಜ.12ರ ಗುರುವಾರದಂದು ಅವರೆಕಾಯಿ ಸಮೇತ ತಾಲ್ಲೂಕು ಆಡಳಿತ ಕಚೇರಿ ಮುತ್ತಿಗೆ ಹಾಕುವ ನಿರ್ಧಾರವನ್ನು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಆಲವಾಟ ಶಿವ, ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಕೋಟೆ ಮಂಜುಳಮ್ಮ, ಶ್ರೀನಿವಾಸ್, ವೆಂಕಟ್, ಶೇಷಾದ್ರಿ, ಸಹದೇವಣ್ಣ, ಷೇಕ್ ಷಫೀಉಲ್ಲಾ, ವೆಂಕಟೇಶ್, ಯಾರಂಘಟ್ಟ ಗಿರೀಶ್, ಹೆಬ್ಬಣಿ ಆನಂದರೆಡ್ಡಿ, ಶ್ರೀಕಾಂತ್ ಮುಂತಾದವರು ಇದ್ದರು.