ಶ್ರೀನಿವಾಸಪುರ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಬದುಕು ಕಟ್ಟಿಕೊಳ್ಳಬೇಕು. ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡು ಬೆಳೆಯಬೇಕು ಎಂದು ಸಾಹಿತಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಹೇಳಿದರು.
ಪಟ್ಟಣದ ಜಗದ್ಗುರು ಭಾರತೀತೀರ್ಥ ಸಭಾ ಭವನದಲ್ಲಿ, ದೆಹಲಿಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ತಾಲ್ಲೂಕು ಘಟಕ ಹಾಗೂ ಸ್ವಾಮಿ ವಿವೇಕಾನಂದ ಚಾರಿಟಿಬಲ್ ಟ್ರಸ್ಟ್ ಸಂಯೂಕ್ತವಾಗಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಕೃತಿಕ ಏರು ಪೇರಿಗಳಿಂದಾಗಿ ಕೃಷಿಕ ಸಮುದಾಯ ಆರ್ಥಿಕ ಸಂಕಷ್ಟದಲ್ಲಿದೆ ಮಳೆ ಹಾಗೂ ಅಂತರ್ಜಲ ಕೊರತೆಯಿಂದಾಗಿ ಬೇಸಾಯ ನಷ್ಟದ ಕಸುಬಾಗಿ ಮಾರ್ಪಟ್ಟಿದೆ ಇಂಥ ಪರಿಸ್ಥಿತಿಯಲ್ಲಿ ರೈತಾಪಿ ಜನತೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಿದೆ ಜಿಲ್ಲೆಯ ನರಸಾಪುರ, ವೇಮಗಲ್ ಕೈಗಾರಿಕಾ ಪ್ರದೇಶಗಳು ನಿರ್ಮಾಣವಾಗಿದ್ದು ಅದರಂತೆ ಶ್ರೀನಿವಾಸಪುರದ ಹೊರವಲಯದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಅಲ್ಲಿ ಉದ್ಯಗಗಳನ್ನು ಪಡೆಯಬೇಕಾದರೆ ಕೌಶಲ್ಯದ ನೈಪುಣ್ಯ ಶಿಕ್ಷಣ ಪಡೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ದೆಹಲಿಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ತಾಲ್ಲೂಕು ಘಟಕ ಹಾಗೂ ಸ್ವಾಮಿ ವಿವೇಕಾನಂದ ಚಾರಿಟಿಬಲ್ ಟ್ರಸ್ಟ್ ಅಧ್ಯಕ್ಷ ಜಿ.ಎನ್.ಕುಬೇರಗೌಡ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗಣನೀಯ ಸಾಧನೆ ಮಾಡುವ ವಿದ್ಯಾರ್ಥಿಗಳು, ಮುಂದಿನ ತರಗತಿಗಳಲ್ಲಿ ಸಾಧನೆಯನ್ನು ಕಾಯ್ದುಕೊಂಡಲ್ಲಿ ಮುಂದಿನ ಐದು ವರ್ಷಗಳ ಕಾಲ ಶೈಕ್ಷಣಿಕ ನೆರವು ನೀಡಲಾಗುವುದು. ವಿದ್ಯೆ ಯಾರೂ ಕದಿಯಲಾರದ ಸಂಪತ್ತಾಗಿದ್ದು, ಅದನ್ನು ಶ್ರಮದ ಮೂಲಕ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ್ದ ತಾಲ್ಲೂಕಿನ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಆರ್ಥಿಕ ಹಾಗೂ ಶೈಕ್ಷಣಿಕ ಸಾಮಗ್ರಿ ನೆರವು ನೀಡಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ರವಿಕುಮಾರ್, ನಿವೃತ್ತ ಪ್ರಾಂಶುಪಾಲ ಅಬ್ದುಲ್ ವಾಜಿದ್, ಉಪನ್ಯಾಸಕ ಸತೀಶ್, ಸಮಾಜ ಸೇವಕಿ ಪ್ರೇಮಾವತಿ ನಾಗಾನಂದ ಕೆಂಪರಾಜ್, ನಿರುತ್ತ ಟ್ರಜರಿ ಅಧಿಕಾರಿ ಡಿ.ಆರ್.ಶ್ರೀನಿವಾಸ್, ಅರುಣ ಅಮರನಾಥ್, ಬೇಬಿ ನಾಜೀಮಾ ಅಬ್ದುಲ್ ವಾಜಿದ್, ಟಿ.ವಿ.ಶೃತಿ ರಾಘವೇಂದ್ರ, ನಂದಿನಿ ನಾಗರಾಜಗೌಡ, ಪ್ರಭಾವತಮ್ಮ ಚೌಡಪ್ಪ, ಮಂಜುಳ ಶ್ರೀನಾಥ್, ವಿ.ರೂಪಾ ಎನ್.ನಾಗರಾಜ್, ಶಕುಂತಲಮ್ಮ ವೆಂಕಟೇಶಪ್ಪ, ನಾಗಮಣಿ ಅಪ್ಪೂರು ಮಂಜುನಾಥ್, ರಿಯಾಜ್, ಪಿ.ಎ.ಶಿವಕುಮಾರ್ ಇದ್ದರು.