ಶ್ರೀನಿವಾಸಪುರ:ಮಳೆಯಿಲ್ಲದೇ, ಬಿಸಿಲಿನ ಝಳಕ್ಕೆ ಕಂಗಾಲಾಗಿದ್ದ ಶ್ರೀನಿವಾಸಪುರದ ಜನರ ಮೊಗದಲ್ಲಿ ಇದೀಗ ಸಂತಸ ಮೂಡಿದೆ.37 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ಸೆಕೆಗೆ ಜನರು ಬಸವಳದಿದ್ದರು ಇದೀಗ, ಮಳೆಯಾಗಿರುವುದರಿಂದ ತಂಪಾದ ವಾತಾವರಣ ಮೂಡಿದೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಶ್ರೀನಿವಾಸಪುರ ಪಟ್ಟಣದಲ್ಲಿ ರಸ್ತೆಗಳು ಜಲಾವೃತಗೊಂಡು,ರಾಷ್ಟ್ರೀಯ ಹೆದ್ದಾರಿಯಲ್ಲಿನ ರೈಲ್ವೆ ಬ್ರೀಡ್ಜ್ ನೀರು ಆವರಿಸಿಕೊಂಡು ವಾಹನ ಸವಾರರು ಪರದಾಡುವಂತಾಯಿತು.
ಮಳೆ ಮತ್ತು ಜಲಾವೃತದಿಂದಾಗಿ ಪಟ್ಟಣದ ಅಂಬೇಡ್ಕರ್ ಪಾಳ್ಯ,ನಗರೇಶ್ವರ ದೇವಾಲಯದ ಆವರಣ ಮುಂಬಾಗ ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ರೈಲ್ವೆ ಸೇತುವೆ ಕೆಳಗಡೆ ಮತ್ತು ಇನ್ನಿತರೆಡೆ ಜನ ವ್ಯವಸ್ಥೆ ಅಸ್ಥವ್ಯಸ್ತ ಗೊಂಡು ಜನ ಪರದಾಡುವಂತಾಯಿತು.
ಪಟ್ಟಣದ ಬಹುತೇಕ ಚರಂಡಿಗಳು ಹೂಳು ತುಂಬಿಕೊಂಡಿದ್ದು ನೀರು ಹರಿಯಲು ಸಾಧ್ಯವಾಗದೆ ಚರಂಡಿಯ ಕೊಳಚೆ ನೀರು ರಸ್ತೆಗಳ ಮೇಲೆ ಹರಿಯಿತು.
ಆಜಾದ್ ರಸ್ತೆಯಲ್ಲಿರುವ ಮಾಂಸದ ಅಂಗಡಿಗಳ ತ್ಯಾಜ್ಯದ ನೀರು ಹರಿದು ಅಕ್ಬರ್ ರಸ್ತೆಯ ಕನ್ಸರ್ ವೇನ್ಸಿಯಲ್ಲಿನ ಮೊರಿ ಸೇರುತ್ತದೆ ತೀರಾ ಇತ್ತಿಚಿಗೆ ನಿರ್ಮಾಣ ಮಾಡಿರುವ ಅಕ್ಬರ್ ರಸ್ತೆ ಕನ್ಸರ್ ವೇನ್ಸಿಯಲ್ಲಿ ಮೊರಿ ತೀರಾ ಕಳಪೆ ಗುಣಮಟ್ಟದಾಗಿದೆ ಇಲ್ಲಿ ನೀರು ಸರಾಗವಾಗಿ ಹರಿಯುವುದಿಲ್ಲ ಮನೆಗಳಿಗೆ ವಾಪಸ್ಸು ನುಗ್ಗುತ್ತದೆ ಎಂದು ಕನ್ಸರವೇನ್ಸಿಯಲ್ಲಿನ ಎಂ.ಜಿ.ರಸ್ತೆ ಮನೆ ಮಾಲಿಕರು ಪುರಸಭೆ ಆಡಳಿತ ವೈಖರಿಯನ್ನು ದೂರುತ್ತಾರೆ.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯ
ಪಟ್ಟಣದ ಪ್ರಮುಖ ರಸ್ತೆಯಾದ ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿಯ ರೈಲ್ವೆ ಸೇತುವೆ ಕೆಳಗಡೆ ಸಣ್ಣ ಮಟ್ಟದ ಮಳೆಯಾದರು ನೀರು ತುಂಬಿ ಕೆರೆಯಾಗುತ್ತದೆ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತದೆ.
ರಾಜಾಜಿ ರಸ್ತೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಮೇಲೆ ಹರಿಯುವ ನೀರು ನೇರವಾಗಿ ಅಂಬೇಡ್ಕರ್ ಪಾಳ್ಯದ ಜನವಸತಿ ಪ್ರದೇಶದ ಮನೆಗಳಿಗೆ ನುಗ್ಗಿದ್ದು ಅಲ್ಲಿನ ಅಂಗನವಾಡಿ ಕೇಂದ್ರಕ್ಕೂ ಮಳೆ ನೀರು ನುಗ್ಗಿರುವ ಪರಿಣಾಮ ಕೇಂದ್ರದಲ್ಲಿದ್ದ ರೇಷನ್ ಎಲ್ಲಾ ನೀರಿನಲ್ಲಿ ಕೊಚ್ಚಿಹೋಗಿದೆ,ಅಂಗನವಾಡಿ ಕೇಂದ್ರದ ಸುತ್ತು ಮುತ್ತಲು ನೀರು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಮಕ್ಕಳು ಓಡಾಡಲು ಕಷ್ಟಕರವಾಗಿದ್ದು,ಇಲ್ಲಿನ ಜನತೆ ಅಷ್ಟ ಕಷ್ಟಗಳಿಗೆ ಈಡಾಗಿದ್ದಾರೆ.
ಚರಂಡಿ ಹೂಳು ತಗೆಯಬೇಕು ಒತ್ತಾಯ
ಶ್ರೀನಿವಾಸಪುರ ಪಟ್ಟಣದ ಚರಂಡಿಗಳಲ್ಲಿ ತುಂಬಿಕೊಂಡಿರುವಂತ ಹೂಳು ತಗೆದು ಚರಂಡಿ ನೀರು ಸರಗವಾಗಿ ಹರಿಯುವಂತಾಗಬೇಕು ಹಾಗೆ ಚರಂಡಿಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಕಟ್ಟಡಗಳನ್ನು ತೆರವು ಗೊಳಿಸುವ ಕಾರ್ಯವನ್ನು ಪುರಸಭೆ ತಕ್ಷಣ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.